ಆರೋಗ್ಯ ಕ್ಷೇತ್ರ ಸುಧಾರಣೆ ಎಂಬ ನೆಪದಲ್ಲಿ ಖಾಸಗೀಕರಣದ ಪರ ವಾದಿಸುವ ಕಾಂಗ್ರೇಸ್ ಪಕ್ಷದ ಹತಾಶೆಯುತ ಹೇಳಿಕೆ: ಡಿವೈಎಫ್ಐ

ಕರಾವಳಿ

ಬೆಳ್ತಂಗಡಿ, ಬಂಟ್ವಾಳ ದ ತಾಲೂಕು ಆಸ್ಪತ್ರೆ, ಮೂಡಬಿದ್ರೆ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ವಿಟ್ಲ ಸಮುದಾಯ ಆಸ್ಪತ್ರೆಯನ್ನು ಖಾಸಗೀ ಸಂಸ್ಥೆಗಳೊಂದಿಗೆ ಕರಾರು ಒಪ್ಪಂದ ಮಾಡಿರುವ ಆರೋಗ್ಯ ಇಲಾಖೆಯ ನಡೆಯನ್ನು ವಿರೋಧಿಸಿದ್ದು ಮತ್ತು ಈ ಒಪ್ಪಂದ ರದ್ದುಗೊಳಿಸಲು ಡಿವೈಎಫ್ಐ ಮತ್ತು ಎಡಪಕ್ಷಗಳು ಮಾಡಿರುವ ಆಗ್ರಹಗಳಿಗೆ ಜನ ಕಿವಿಕೊಡಬಾರದಂತೆ, ಸಂಘಟನೆ ಸುಳ್ಳು ಪ್ರಚಾರ, ಜನರಲ್ಲಿ ಗೊಂದಲ ಸೃಷ್ಟಿಸುತ್ತಿವೆ ಎಂದು ದ.ಕ ಜಿಲ್ಲಾ ಕಾಂಗ್ರೇಸ್ ಪಕ್ಷ ಆರೋಪಿಸಿರುವ ಹೇಳಿಕೆಯು ಹತಾಶೆಯಿಂದ ಕೂಡಿದೆ. ಆರೋಗ್ಯ ಕ್ಷೇತ್ರದ ಸುಧಾರಣೆ ಎಂಬ ನೆಪದಲ್ಲಿ ಕಾಂಗ್ರೇಸ್ ಪಕ್ಷವು ಸರಕಾರಿ ಆಸ್ಪತ್ರೆಗಳ ಕಡೆಗಣಿಸಿ ಖಾಸಗೀ ವೈದ್ಯಕೀಯ ಕಾಲೇಜುಗಳ, ಖಾಸಗೀಕರಣದ ಪರ ವಹಿಸುವಂತಹ ನಡೆ ಇದಾಗಿದೆ ಎಂದು ಡಿವೈಎಫ್ಐ ಆಪಾದಿಸಿದೆ.

ರಾಜ್ಯದ ಸಾರ್ವಜನಿಕ ಆರೋಗ್ಯ ವ್ಯವಸ್ಥೆ ತಳಮಟ್ಟದಿಂದ ಮತ್ತಷ್ಟು ಬಲಪಡಿಸುವ ಹಾಗೂ ಗ್ರಾಮೀಣ ಭಾಗದ ಜನರಿಗೆ ತಜ್ಞ ವೈದ್ಯಕೀಯ ಸೇವೆಗಳನ್ನು ಮನೆ ಬಾಗಿಲಿಗೆ ತಲುಪಿಸಲು ರಾಜ್ಯ ಸರಕಾರ ಕೈಗೊಂಡಿರುವ ಮಹತ್ವದ ನಿರ್ಧಾರ ಎಂದು ಕಾಂಗ್ರೇಸ್ ಪಕ್ಷದ ಅಧ್ಯಕ್ಷರು ವಾದಿಸಿದ್ದಾರೆ ಅದು ಹೇಗೆ ಎಂದು ಜನರಿಗೆ ವಿವರಿಸಬೇಕು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರಕಾರದ ವೈದ್ಯಕೀಯ ಅಧಿನಿಯಮ ಹೇಳುವಂತೆಯೂ ಜನಸಂಖ್ಯೆಗೆ ಅನುಗುಣವಾಗಿ ಇರಬೇಕಾದ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆಸ್ಪತ್ರೆಗಳನ್ನು ಇನ್ನೂ ಸ್ಥಾಪಿಸಲು ಸಾಧ್ಯವಾಗಿಲ್ಲ. ತಾಲೂಕಿಗೊಂದು 100 ಹಾಸಿಗೆಗಳ ಸರಕಾರಿ ತಾಲೂಕು ಆಸ್ಪತ್ರೆ ಇರಬೇಕೆಂದಿದ್ದರೂ ಇವತ್ತಿಗೂ ಉಳ್ಳಾಲ, ಮುಲ್ಕಿ, ಮೂಡಬಿದ್ರೆ, ಕಡಬ ತಾಲೂಕಿನಲ್ಲಿ ಅಂತಹ ಆಸ್ಪತ್ರೆಗಳೇ ನಿರ್ಮಾಣಗೊಳಿಸಲು ಸಾಧ್ಯವಾಗಿಲ್ಲ. ಇರುವಂತಹ ಯಾವ ಆರೋಗ್ಯ ಕೇಂದ್ರಗಳಲ್ಲೂ ವೈದ್ಯರಿದ್ದರೆ ಔಷಧಿಗಳಿಲ್ಲ, ಔಷಧವಿದ್ದರೆ ವೈದ್ಯರೇ ಇರೋದಿಲ್ಲ ಅನ್ನುವಂತಹ ಪರಿಸ್ಥಿತಿ ಜಿಲ್ಲೆಯ ಬಹುತೇಕ ಎಲ್ಲಾ ಸರಕಾರಿ ಆಸ್ಪತ್ರೆಗಳಲ್ಲಿದೆ. ಈಗಿರುವಾಗ ತಳಮಟ್ಟದಿಂದ ಮತ್ತಷ್ಟು ಬಲಪಡಿಸಿ ವೈದ್ಯಕೀಯ ಸೇವೆ ಪ್ರತೀ ಮನೆ ಬಾಗಿಲಿಗೆ ಹೇಗೆ ತಲುಪಿಸುವಿರಿ ಎಂದು ಕಾಂಗ್ರೇಸ್ ಪಕ್ಷದ ಅಧ್ಯಕ್ಷರು ಜಿಲ್ಲೆಯ ಜನರಿಗೆ ಉತ್ತರಿಸಬೇಕು. ಅದೇ ರೀತಿ ಜಿಲ್ಲೆಯಲ್ಲಿ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ, ಜಯದೇವ ಹೃದ್ರೋಗ ಆಸ್ಪತ್ರೆಯ ಸ್ಥಾಪನೆಗೆ ನಾವು ಇಟ್ಟಿರುವ ಬೇಡಿಕೆ ಕುರಿತು ಕಾಂಗ್ರೇಸ್ ಪಕ್ಷದ ನಿಲುವುಗಳನ್ನೇಂಬುದನ್ನು ಬಹಿರಂಗಪಡಿಸಬೇಕು.

ಈ ಹಿಂದೆ ಆರೋಗ್ಯ ಸಚಿವರು ಜಿಲ್ಲಾ ಉಸ್ತುವಾರಿ ಮಂತ್ರಿಗಳಾದ ದಿನೇಶ್ ಗುಂಡುರಾವ್ ಅವರು ರಾಜ್ಯದ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ, ತಾಲೂಕು ಆಸ್ಪತ್ರೆಗಳಲ್ಲಿ ಖಾಲಿ ಇರುವ ತಜ್ಞ ವೈದ್ಯರು, ನರ್ಸ್, ಫಾರ್ಮಸಿಸ್ಟ್ ಹುದ್ದೆಗಳ ಭರ್ತಿ ಮತ್ತು ರಾಜ್ಯಾದ್ಯಂತ ಹೊಸದಾಗಿ ಪ್ರಾಥಮಿಕ, ಸಮುದಾಯ ಆರೋಗ್ಯ ಕೇಂದ್ರಗಳನ್ನು ಎಲ್ಲೆಲ್ಲಿ ಸ್ಥಾಪಿಸಬೇಕೆಂಬುದರ ಕುರಿತು ರಾಷ್ಟ್ರೀಯ ಆರೋಗ್ಯ ನೀತಿ ಮಾನದಂಡಗಳ ಅನ್ವಯ ವೈಜ್ಞಾನಿಕವಾಗಿ ಅಧ್ಯಯನ ನಡೆಸಿ ಕ್ರಮಕೈಗೊಳ್ಳಲಾಗುವುದೆಂದು ಹೇಳಿಕೊಂಡವರು ದಕ್ಷಿಣ ಕನ್ನಡ ಜಿಲ್ಲೆಯ ಸರಕಾರಿ ಆಸ್ಪತ್ರೆಯನ್ನು ತರಾತುರಿಯಲ್ಲಿ ಖಾಸಗೀ ಆಸ್ಪತ್ರೆಗೆ ಕರಾರು ಒಪ್ಪಂದ ಮಾಡಿಕೊಡುವುದರ ಹಿಂದಿನ ಮರ್ಮವೇನು?. ಈ ರೀತಿ ಒಪ್ಪಂದ ಮಾಡಿಕೊಡುವುದರ ಹಿಂದೆ ಜಿಲ್ಲೆಯ ಕಾಂಗ್ರೇಸ್ ಪಕ್ಷದ ಪ್ರಭಾವಿಗಳ ಹಿತಾಸಕ್ತಿ ಅಡಗಿದೆ ಎಂಬ ಅನುಮಾನ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ. ಆ ಕಾರಣಕ್ಕೆ ಪದೇ ಪದೇ ಖಾಸಗೀ ಆಸ್ಪತ್ರೆಗಳ ಪರ ವಹಿಸುವ ಹೇಳಿಕೆಗಳನ್ನು ಬೇರೆ ಬೇರೆ ಮೂಲಗಳಿಂದ ಹರಿಯಬಿಡಲಾಗುತ್ತಿದೆ. ಈ ಎಲ್ಲಾ ಬೆಳವಣೆಗೆಗಳು ಕಾಂಗ್ರೇಸ್ ಪಕ್ಷದ ಹತಾಶತೆಯನ್ನು ತೋರಿಸುತ್ತದೆ ಎಂದು ಡಿವೈಎಫ್ಐ ಟೀಕಿಸಿದೆ.

ದ. ಕ ಜಿಲ್ಲೆಯ ಸರಕಾರಿ ಆಸ್ಪತ್ರೆಗಳನ್ನು ಖಾಸಗೀ ಆಸ್ಪತ್ರೆಗಳೊಂದಿಗೆ ಮಾಡಿರುವ ಕರಾರು ಒಪ್ಪಂದವನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ. ಆ ಒಪ್ಪಂದ ರದ್ದುಗೊಳ್ಳಲೇ ಬೇಕು ಅಲ್ಲದೇ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ, ಜಯದೇವ ಹೃದ್ರೋಗ ಆಸ್ಪತ್ರೆಯ ಸ್ಥಾಪನೆಗೆ ಕ್ರಮವಹಿಸಬೇಕು. ಸರಕಾರಿ ಮೆಡಿಕಲ್ ಕಾಲೇಜು ಸಹಿತ ಜನಸಂಖ್ಯೆಗೆ ಅನುಗುಣವಾಗಿ ಇರಬೇಕಾದ ಸರಕಾರಿ ಆಸ್ಪತ್ರೆಗಳನ್ನು ಸ್ಥಾಪಿಸಲು ಮುಂದಾಗುವವರೆಗೂ ಡಿವೈಎಫ್ಐ ಮತ್ತು ಎಡಪಕ್ಷಗಳ ಹೋರಾಟ ಮುಂದುವರೆಯಲಿದೆ ಎಂದು ಡಿವೈಎಫ್ಐ ದ.ಕ ಜಿಲ್ಲಾ ಸಮಿತಿ ಕಾರ್ಯದರ್ಶಿ ಸಂತೋಷ್ ಬಜಾಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.