ಅಧಿಕಾರಿಗಳು ಚಾಪೆ ಕೆಳಗೆ ನುಸುಳಿದರೆ, ದಂಧೆಕೋರರು ರಂಗೋಲಿ ಕೆಳಗೆ ನುಸುಳುತ್ತಾರೆ ಎನ್ನುವುದು ಹಳೆ ಗಾದೆ. ಆದರೆ, ಮಂಗಳೂರಿನ ಮಟ್ಟಿಗೆ ಆ ಗಾದೆಯೇ ಉಲ್ಟಾ. ದಂಧೆಕೋರರಿಗೆ ಅದೇ ವರದಾನ.!
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಖಡಕ್ ಪೊಲೀಸ್ ಆಫೀಸರ್ಸ್ ಎಂಟ್ರಿಯ ನಂತರ ಇಲ್ಲಿನ ಕ್ಲಬ್, ಮಸಾಜ್ ಎಲ್ಲವೂ ಬಾಗಿಲು ಹಾಕಿಕೊಂಡಿರುವುದೇನೂ ನಿಜ. ಆದರೆ ಅಕ್ರಮ ಮರಳುಗಾರಿಕೆಗೆ ಮಾತ್ರ ಸಂಪೂರ್ಣ ಬ್ರೇಕ್ ಬಿದ್ದಿಲ್ಲ ಅನ್ನುವುದು ಅಷ್ಟೇ ನಿಜ. ನಿನ್ನೆಯಷ್ಟೇ ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಗಂಜಿಮಠದ ಮಳಲಿಯ ಮೊಗರು ಗ್ರಾಮದಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಮರಳು ದಾಸ್ತಾನಿಗೆ ಪೊಲೀಸ್ ಇಲಾಖೆ ಹಾಗೂ ಗಣಿ ಇಲಾಖೆ ಜಂಟಿಯಾಗಿ ರೈಡ್ ನಡೆಸಿ, ಅಕ್ರಮ ದಂಧೆಕೋರರು ಮೇಲೆ ಕೇಸ್ ಜಡಿದಿದೆ. ಜಿಲ್ಲೆಯಲ್ಲಿ ಪವರ್ ಫುಲ್ ಖಾಕಿಗಳಿದ್ದರೂ ಮರಳು ಕಳ್ಳರ ಆಟಾಟೋಪಕ್ಕೆ ಅಂಕುಶ ಬಿದ್ದಿಲ್ಲ ಅನ್ನುವುದಕ್ಕೆ ಇದೇ ಸಾಕ್ಷಿ.
ನೈಸರ್ಗಿಕ ಸಂಪತ್ತು ಕಾಪಾಡುವ ಜವಾಬ್ದಾರಿ ಕಂದಾಯ, ಲೋಕೋಪಯೋಗಿ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗಳಿಗೆ ಸಂಬಂಧಿಸಿದೆ ಎನ್ನುತ್ತಾರೆ. ಕಾರ್ಯಾಚರಣೆ ನಡೆಸುವ ವಿಷಯದಲ್ಲಿ ಪೊಲೀಸ್ ಇಲಾಖೆ ಮಾತ್ರ ಮುಂಚೂಣಿಯಲ್ಲಿದೆ. ಅದೇ
ಕಾರಣಕ್ಕೆ ಮರಳು ದಂಧೆ ನಿಯಂತ್ರಣಕ್ಕೆ ಬರುತ್ತಿಲ್ಲ ಎನ್ನುವ ದೂರುಗಳು ಕೇಳಿಬರುತ್ತಿವೆ. ಫಲ್ಗುಣಿ ನದಿಯನ್ನು ಈ ಹಿಂದೆ ಮುಂಡಾಮೋಚಿದ ಕೆಲವೊಂದು ಮರಳು ಕಳ್ಳರು ತಮ್ಮ ಪ್ರಭಾವ ಬಳಸಿ ಕೆಲವೊಂದು ಕಡೆ ದಾಂಗುಡಿ ಇಟ್ಟಿದ್ದಾರಂತೆ. ರಾಜಕಾರಣದ ವಿಚಾರದಲ್ಲಿ ಮರಳು ಕಳ್ಳರು ಬಾಯಿ ಬಾಯಿ. ಕೆಲವೊಂದು ಕಡೆ ಪೊಲೀಸರ ಕಣ್ಣಿಗೆ ಮಣ್ಣೆರಚಿ ತಮ್ಮ ಕಳ್ಳತನ ದಂಧೆಯನ್ನು ನಾಜೂಕಾಗಿ ನಿರ್ವಹಿಸುತ್ತಿದ್ದಾರೆ ಅನ್ನುವ ಕೂಗುಗಳು ಕೇಳಿ ಬರುತ್ತಿದೆ.
ಗಂಜಿಮಠ ಮೊಗರು ಗ್ರಾಮದ ಮಳಲಿ ಸಂಕೇಶ ಎಂಬಲ್ಲಿ ಅನ್ವಿತ್ ಮತ್ತು ರಾಜೇಂದ್ರ ಮೆಂಡಾ ಎಂಬವರು ಗುರುಪುರ ಫಲ್ಗುಣಿ ನದಿಯಿಂದ ಅಕ್ರಮವಾಗಿ ಮರಳನ್ನು ಕಳ್ಳತನ ಮಾಡಿ ದಾಸ್ತಾನು ಇರಿಸಿದ್ದು ಮೇಲಾಧಿಕಾರಿಗಳ ಸೂಚನೆ ಮೇರೆಗೆ ಬಜಪೆ ಪೊಲೀಸರು ದಾಳಿ ನಡೆಸಿ 127 ಲೋಡ್ ಮರಳನ್ನು ವಶಪಡಿಸಿಕೊಂಡಿದ್ದಾರೆ. ಆದರೆ ಈ ಮರಳು ಕಳ್ಳತನ ಪ್ರಕರಣದಲ್ಲಿ ಇವರಿಬ್ಬರೇ ಆರೋಪಿಗಳಲ್ಲ. ಇದರ ಹಿಂದೆ ಬಹಳ ಖತರ್ನಾಕ್ ಗ್ಯಾಂಗ್ ಇದೆ. ಸಂಘಟನೆಯ ಕೆಲವು ನಾಯಕರು ಹಾಗೂ ಈ ಹಿಂದೆ ಮರಳು ಮಾಪಿಯಾದಲ್ಲಿ ಸಿಕ್ಕಿಬಿದ್ದ ಕೆಲವು ಬಿಳಿ ಕಾಲರ್ ಗಳು ಈ ಕಳ್ಳತನದ ರೂವಾರಿ.
ಮಳಲಿ ಮರಳು ಕಳ್ಳರ ಜಾಲದ ಹಿಂದೆ ಬೃಹತ್ ಮಾಫಿಯಾಗಳು ಕಾರ್ಯಾಚರಿಸುತ್ತಿದ್ದರೂ, ತಮ್ಮ ಪ್ರಭಾವ ಹಾಗೂ ಕಳ್ಳದಾರಿಯ ಮೂಲಕ ಮರಳನ್ನು ಲೂಟಿಗೈಯುತ್ತಿದ್ದಾರೆ. ಒಂದು ರಾಜಕೀಯ ಪಕ್ಷಗಳ ಪುಡಿ ಮುಖಂಡರು ಕೂಡ ಇಂತಹ ದಂಧೆಯಲ್ಲಿ ನಿರತರಾಗಿರುವ ಅನುಮಾನ ಇದೆ. ಒಂದೆಡೆ ಪೊಲೀಸ್ ಕಮೀಷನರ್ ಅಕ್ರಮ ದಂಧೆಯನ್ನು ಮಟ್ಟ ಹಾಕಿದ್ದೇವೆ ಅಂದರೆ ಮಳಲಿಯ ಮರಳು ಕಳ್ಳರು ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಕಾರ್ಯಾಚರಣೆ ನಡೆಸುವ ಮೂಲಕ ಪೊಲೀಸ್ ಇಲಾಖೆಗೆ ಸವಾಲೆಸೆದಿದ್ದಾರೆ. ಮಾನ್ಯ ಮಂಗಳೂರು ನಗರದ ಖಡಕ್ಕ್ ಅಧಿಕಾರಿ ಪೊಲೀಸ್ ಕಮೀಷನರ್ ಸಾಹೇಬ್ರು ಈ ಮರಳು ಮಾಫಿಯಾದ ಜಾತಕ ಬಯಲಿಗೆಳೆದು, ಅಕ್ರಮ ದಂಧೆಕೋರರನ್ನು ಜಿಲ್ಲೆಯಿಂದಲೇ ಗಡಿಪಾರು ಮಾಡುವ ಕೆಲಸ ಮಾಡಬೇಕಾಗಿದೆ.
