ಗಂಜಿಮಠ: ಬಜಪೆ ಠಾಣಾ ವ್ಯಾಪ್ತಿಯ ಮೊಗರು ಗ್ರಾಮದ ಮಳಲಿ ಸಂಕೇಶ ಎಂಬಲ್ಲಿ ಅನ್ವಿತ್ ಮತ್ತು ರಾಜೇಂದ್ರ ಮೆಂಡಾ ಎಂಬವರು ಗುರುಪುರ ಪಲ್ಗುಣಿ ನದಿಯಿಂದ ಅಕ್ರಮವಾಗಿ ಮರಳನ್ನು ಕಳ್ಳತನ ಮಾಡಿ ದಾಸ್ತಾನು ಮಾಡಿರುವ ಬಗ್ಗೆ ಖಚಿತ ಮಾಹಿತಿ ದೊರೆತ ಮೇರೆಗೆ, ಹಿರಿಯ ಪೊಲೀಸ್ ಅಧಿಕಾರಿಗಳ ಆದೇಶ ಪಡೆದು ದಿನಾಂಕ: 15-06-2026 ರಂದು ಬಜಪೆ ಪೊಲೀಸ್ ಠಾಣೆಯ ನಿರೀಕ್ಷಕರಾದ ಬಾಲಕೃಷ್ಣ H.N ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಭೂ ವಿಜ್ಞಾನಿ ಪವನ್ ಹಾಗೂ ಸಿಬ್ಬಂದಿಗಳು ಜಂಟಿ ಕಾರ್ಯಾಚರಣೆ ನಡೆಸಿ, ಮೊಗರು ಗ್ರಾಮದ ಮಳಲಿ ಸಂಕೇಶ ಎಂಬಲ್ಲಿ ಅನ್ವಿತ್ ಮತ್ತು ರಾಜೇಂದ್ರ ಮೆಂಡಾ ಎಂಬವರು ಅಕ್ರಮವಾಗಿ ಫಲ್ಗುಣಿ ನದಿಯಿಂದ ಕಳ್ಳತನಗೈದು ವಿವಿಧ ಸ್ಥಳಗಳಲ್ಲಿ ದಾಸ್ತಾನು ಇರಿಸಿರುವ ಅಕ್ರಮ ಮರಳುಗಾರಿಕೆಗೆ ಧಾಳಿ ನಡೆಸಿ, ವಿವಿಧ ಸ್ಥಳಗಳಲ್ಲಿ ಸಂಗ್ರಹಿಸಿರುವ ಒಟ್ಟು 127 ಲೋಡ್ ಅಕ್ರಮ ಮರಳು ದಾಸ್ತಾನು ಪತ್ತೆಹಚ್ಚಿರುತ್ತಾರೆ.
ಕಳ್ಳತನ ಮಾಡಿ ಅಕ್ರಮವಾಗಿ ವಿವಿಧ ಕಡೆಗಳಲ್ಲಿ ದಾಸ್ತಾನು ಮಾಡಿರುವ 127 ಲೋಡ್ ಮರಳಿನ ಅಂದಾಜು ಮೊತ್ತ 6,35,000 ಸಾವಿರ ರೂಪಾಯಿ ಎಂದು ಅಂದಾಜಿಸಲಾಗಿದೆ. ಧಾಳಿ ವೇಳೆ ಪತ್ತೆಯಾದ 127 ಲಾರಿ ಲೋಡ್ ಅಕ್ರಮ ದಾಸ್ತಾನು ಮರಳನ್ನು ಸರಕಾರಕ್ಕೆ ಅಮಾನತ್ತುಪಡಿಸಿಕೊಂಡು, ಬಜಪೆ ಪೊಲೀಸ್ ಠಾಣೆಯಲ್ಲಿ ಅ.ಕ್ರ. ಸಂ: 103/2026 ಕಲಂ 303(2) ಜೊತೆಗೆ 3(5) BNS ರಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿರುತ್ತಾರೆ.
ಪ್ರಕರಣದ ಆರೋಪಿ ಮೊಗರು ಗ್ರಾಮದ ಅನ್ವಿತ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗಾಗಿ ದಸ್ತಗಿರಿ ಮಾಡಲಾಗಿದ್ದು, ಈ ಅಕ್ರಮ ಮರಳು ಕಳ್ಳತನ ಪ್ರಕರಣದಲ್ಲಿರುವ ಇನ್ನುಳಿದ ಆರೋಪಿಗಳ ಪತ್ತೆಗಾಗಿ ವಿಶೇಷ ಪೊಲೀಸ್ ತಂಡವನ್ನು ರಚಿಸಲಾಗಿದೆ. ಈ ಮರಳು ಮಾಫಿಯಾದ ಹಿಂದೆ ಬೃಹತ್ ಜಾಲವೊಂದು ಕಾರ್ಯಾಚರಿಸುತ್ತಿದ್ದು, ಪೊಲೀಸ್ ಅಧಿಕಾರಗಳಿಗೂ ಚಳ್ಳೆಹಣ್ಣು ತಿನ್ನಿಸಿ, ಕಾರ್ಯಾಚರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
