ಮಂಗಳೂರನ್ನು ಬೆಚ್ಚಿಬೀಳಿಸಿದ ಹೈವೇ ದರೋಡೆ ಪ್ರಕರಣದ ಆರೋಪಿಗಳನ್ನು ಹೆಡೆಮುರಿ ಕಟ್ಟುವಲ್ಲಿ ಮಂಗಳೂರಿನ ಪೊಲೀಸರು ಯಶಸ್ವಿಯಾಗಿದ್ದಾರೆ. ಕೇರಳ ರಾಜ್ಯದ ತಲಶ್ಶೇರಿ ಮಂಬರಮ್, ಪತಿರಿಯಾಡ್ ಗ್ರಾಮದ ಕಾಯಲೋಡೆ ನಿವಾಸಿ ನಾರಾಯಣ ಸ್ವಾಮಿ ಎಂಬವರ ಪುತ್ರ ನಿಮಿಲ್ ಆರ್ ಕೆ , ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ಹಕ್ಕತ್ತೂರು-ತೊಬ್ಬೊಟ್ಟು ನಿವಾಸಿ ಅಬ್ಬಾಸ್ ಎಂಬವರ ಪುತ್ರ ಇರ್ಷಾದ್ ಹಾಗೂ ಮಡಿಕೇರಿ ಮಾರ್ಕೆಟ್ ಸ್ಟುಡಿಯೋ ಬಳಿ ನಿವಾಸಿ ದಿವಂಗತ ಭಾಷಾ ಎಂಬವರ ಪುತ್ರ ಮುಸ್ತಾಫ ಬಂಧಿತ ಆರೋಪಿಯಾಗಿದ್ದಾರೆ. ಜೂನ್ 29 ರಂದು ಬೈಕಂಪಾಡಿ ದ್ವಾರ ಹೋಟೆಲ್ ಸಮೀಪ ಘಟನೆ ನಡೆದಿತ್ತು.
ಮಹಾರಾಷ್ಟ್ರದಿಂದ ಕೇರಳದ ಪಯ್ಯನ್ನೂರಿಗೆ ಕುಟುಂಬ ಸಹಿತವಾಗಿ ಕಾರಿನಲ್ಲಿ ಜೂನ್ 29 ರಂದು ಬೆಳಗ್ಗಿನ ಜಾವ ಸುಮಾರು 2.45 ರ ವೇಳೆಗೆ ಪ್ರಯಾಣಿಸುತ್ತಿದ್ದ ವಿಕಾಸ್ ಸುಬ್ಬರಾವ್ ಧನವಡೆ ಅವರ ಕುಟುಂಬವನ್ನು ಮಂಗಳೂರಿನ ಬೈಕಂಪಾಡಿ ಸಮೀಪ ಎರಡು ಇನ್ನೋವಾ ಹಾಗೂ ಒಂದು ಸ್ವಿಫ್ಟ್ ಕಾರಿನಲ್ಲಿ ಬಂದ 6-7 ಜನ ಮುಸುಕುಧಾರಿಗಳು ಅವರ ಕಾರನ್ನು ಅಡ್ಡಗಟ್ಟಿ, ತಲವಾರು ತೋರಿಸಿ ಬೆದರಿಸಿ, ಸುಬ್ಬರಾವ್ ಅವರ ಮೇಲೆ ಹಲ್ಲೆ ನಡೆಸಿ ಗಾಯಪಡಿಸಿ, ಪತ್ನಿ ಹಾಗೂ ಮಗನನ್ನು ಬಲವಂತವಾಗಿ ಅಪಹರಿಸಿ ಕೆಲ ಕಿಲೋಮೀಟರ್ ದೂರದಲ್ಲಿ ಬಿಟ್ಟು, ದೂರುದಾರರ ಕಾರು, ಕಾರಿನೊಳಗೆ ಬ್ಯಾಗಿನಲ್ಲಿರಿಸಿದ್ದ ಸುಮಾರು 20 ಲಕ್ಷ ರೂಪಾಯಿ ಮೌಲ್ಯದ 180 ಗ್ರಾಂ ಚಿನ್ನಾಭರಣಗಳು, 10 ಸಾವಿರ ರೂಪಾಯಿ ಮೌಲ್ಯದ ಎರಡು ಮೊಬೈಲ್ ಪೋನ್ ಗಳು ಹಾಗೂ 3 ಲಕ್ಷ ರೂಪಾಯಿ ಮೌಲ್ಯದ ಕಾರು ಸೇರಿದಂತೆ ಒಟ್ಟು 23.10 ಲಕ್ಷ ರೂಪಾಯಿ ದರೋಡೆ ಮಾಡಿಕೊಂಡು ಪರಾರಿಯಾಗಿದ್ದರು. ಈ ಬಗ್ಗೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆ ನಡೆಸಿದ ಪೊಲೀಸರು ಜೂನ್ 30 ರಂದು ಬೆಳಿಗ್ಗೆ 11.30 ಗಂಟೆಗೆ ದರೋಡೆಕೋರರು ಚಲಾಯಿಸಿಕೊಂಡು ಹೋಗಿದ್ದ ಸುಬ್ಬರಾವ್ ಅವರ ಮಾರುತಿ ಡಿಝೈರ್ ಕಾರು ನಂಬರ್ ಪ್ಲೇಟ್ ಇಲ್ಲದೇ ಇರುವ ಸ್ಥಿತಿಯಲ್ಲಿ ಬಂಟ್ವಾಳ ತಾಲೂಕು ಪಚ್ಚಿನಡ್ಕ ಎಂಬಲ್ಲಿ ಗುಡ್ಡ ಪ್ರದೇಶದಲ್ಲಿ ಆರೋಪಿಗಳು ಬಿಟ್ಟು ಹೋಗಿದ್ದನ್ನು ಪತ್ತೆ ಹಚ್ಚಿದ ಪೊಲೀಸರು ಅದನ್ನು ವಶಪಡಿಸಿಕೊಂಡಿದ್ದರು.

ತನಿಖೆ ಮುಂದುವರಿಸಿದ ಪೊಲೀಸರು ಜುಲೈ 2 ರಂದು ಪ್ರಕರಣದ ಆರೋಪಿ ನಿಮಿಲ್ ಆರ್.ಕೆ ಎಂಬಾತನನ್ನು ಪಣಂಬೂರು ಠಾಣಾ ಇನ್ಸ್ ಪೆಕ್ಟರ್ ಸಲೀಂ ಅಬ್ಬಾಸ್ ಅವರ ನೇತೃತ್ವದ ಪೊಲೀಸರು ಕೇರಳ ರಾಜ್ಯದ ಕಣ್ಣೂರು ಜಿಲ್ಲೆಯ ಚಾಲ ಎಂಬಲ್ಲಿರುವ ಅಸ್ಟರ್ ಎಂಐಎಂಎಸ್ ಆಸ್ಪತ್ರೆಯ ಹತ್ತಿರ ವಶಕ್ಕೆ ಪಡೆದಿದ್ದಾರೆ. ಪಣಂಬೂರು ಠಾಣಾ ಪಿಎಸ್ಸೈ ಜ್ಞಾನ ಶೇಖರ ಅವರ ನೇತೃತ್ವದ ಪೊಲೀಸರು ಜುಲೈ 2 ರಂದು ಸಂಜೆ ಆರೋಪಿತರಿಗೆ ಕೃತ್ಯ ಎಸಗಲು ಸಹಕರಿಸಿ ಆಶ್ರಯ ನೀಡಿದ ಇರ್ಷಾದ್ ಎಂಬಾತನ್ನು ಕೊಡಗು ಜಿಲ್ಲೆಯ ಪೊನ್ನಂಪೇಟೆಯಲ್ಲಿ ವಶಕ್ಕೆ ಪಡೆದಿರುತ್ತಾರೆ. ಅದೇ ರೀತಿಯಲ್ಲಿ ಕೃತ್ಯಕ್ಕೆ ಸಹಕರಿಸಿ ಪ್ರಮುಖ ಆರೋಪಿತರಿಗೆ ಕಾರನ್ನು ಒದಗಿಸಿಕೊಟ್ಟು ಆಶ್ರಯ ನೀಡಿದ ಇನ್ನೊರ್ವ ಆರೋಪಿ ಮುಸ್ತಾಫ ಎಂಬಾತನ್ನು ಜುಲೈ 2 ರಂದು ರಾತ್ರಿ ಮಡಿಕೇರಿ ತಾಲೂಕು ಮೂರ್ನಾಡು ಜಂಕ್ಷನ್ನಿನಲ್ಲಿರುವ ಲಯನ್ಸ್ ಕ್ಲಬ್ ಬಳಿಯ ಬಸ್ಸು ನಿಲ್ದಾಣದಲ್ಲಿ ವಶಕ್ಕೆ ಪಡೆದಿದ್ದಾರೆ.
ಪ್ರಾಥಮಿಕ ವಿಚಾರಣೆಯಿಂದ ಕೃತ್ಯದಲ್ಲಿ ಒಟ್ಟು 14 ಆರೋಪಿಗಳು ನೇರವಾಗಿ ಭಾಗಿಯಾಗಿದ್ದು ಇಬ್ಬರು ಆರೋಪಿಗಳು ಕೃತ್ಯಕ್ಕೆ ಸಹಕರಿಸಿ ಆರೋಪಿತರಿಗೆ ಆಶ್ರಯ ನೀಡಿದ ಬಗ್ಗೆ ಕಂಡು ಬಂದಿರುತ್ತದೆ. ಪ್ರಕರಣದಲ್ಲಿ ಭಾಗಿಯಾದ ಒಟ್ಟು 16 ಆರೋಪಿಗಳ ಪೈಕಿ 3 ಆರೋಪಿಗಳನ್ನು ದಸ್ತಗಿರಿ ಮಾಡಿ ಜುಲೈ 3 ರಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಹೆಚ್ಚಿನ ವಿಚಾರಣೆಗಾಗಿ ಎಲ್ಲಾ 3 ಮಂದಿ ಆರೋಪಿಗಳನ್ನು ಹತ್ತು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆದುಕೊಂಡಿದ್ದಾರೆ.
ಆರೋಪಿತರು ದರೋಡೆ ಮಾಡಿಕೊಂಡು ಹೋದ ಮಾರುತಿ ಡಿಝೈರ್ ಕಾರು ಹಾಗೂ ಆರೋಪಿತರು ಕೃತ್ಯಕ್ಕೆ ಬಳಸಿದ 4 ಕಾರುಗಳ ಪೈಕಿ 1 ಇನ್ನೋವಾ ಕ್ರಿಸ್ಟಾ ಕಾರನ್ನು ಸ್ವಾಧೀಪಡಿಸಿಕೊಂಡಿದ್ದು, ಆರೋಪಿತರು ಬಳಸಿದ ಉಳಿದ 3 ಕಾರುಗಳು ಮತ್ತು ದರೋಡೆ ಮಾಡಿ ತೆಗೆದುಕೊಂಡು ಹೋದ 180 ಗ್ರಾಂ ಚಿನ್ನಾಭರಣ ಹಾಗೂ 2 ಮೊಬೈಲ್ ಪೋನುಗಳು ಪತ್ತೆಗೆ ಬಾಕಿ ಇರುತ್ತದೆ. ಆರೋಪಿಗಳೆಲ್ಲರೂ ಮಡಿಕೇರಿ ಜಿಲ್ಲೆ ಮತ್ತು ಕೇರಳ ರಾಜ್ಯದವರೆಂಬುದು ಪ್ರಾಥಮಿಕ ತನಿಖೆ ಸಮಯ ತಿಳಿದು ಬಂದಿದೆ. ಪ್ರಕರಣದಲ್ಲಿ ಉಳಿದ ಆರೋಪಿಗಳ ಮತ್ತು ಸೊತ್ತು ಪತ್ತೆ ಕಾರ್ಯ ಮುಂದುವರಿದಿದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ಮಾಹಿತಿ ನೀಡಿದ್ದಾರೆ.
ಆರೋಪಿಗಳ ಪತ್ತೆ ಕಾರ್ಯದಲ್ಲಿ ಉತ್ತರ ವಿಭಾಗದ ಎಸಿಪಿ ಶ್ರೀಕಾಂತ ಕೆ. ಮತ್ತು ಮಂಗಳೂರು ನಗರದ ಸಿಸಿಬಿ ಘಟಕದ ಎಸಿಪಿ ಮನೋಜ್ ಕುಮಾರ್ ನಾಯ್ಕ್ ಅವರ ನೇತೃತ್ವದಲ್ಲಿ ಪಣಂಬೂರು ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಸಲೀಂ ಅಬ್ಬಾಸ್ ಮತ್ತವರ ತಂಡ ಭಾಗವಹಿಸಿದ್ದರು.
