ಸಿಜೆಪಿ ಜೊತೆ ಮಾತುಕತೆಗೆ ಮುಂದಾದ ಕೇಂದ್ರ ಸರಕಾರ; ಸಚಿವ ಜೆ.ಪಿ. ನಡ್ಡಾ ಜೊತೆ ಮಾತುಕತೆ

ರಾಷ್ಟ್ರೀಯ

ದೇಶದಲ್ಲಿ ನಡೆಯುತ್ತಿರುವ ಪರೀಕ್ಷಾ ಅಕ್ರಮಗಳನ್ನು ಪ್ರಶ್ನಿಸಿ ಕಾಕ್ರೋಜ್​ ಜನತಾ ಪಾರ್ಟಿಯ ನೇತೃತ್ವದಲ್ಲಿ ದೆಹಲಿಯಲ್ಲಿ ಇಂದು ಸಂಸತ್ ಚಲೋ ಎಂಬ ಪ್ರತಿಭಟನಾ ರ‍್ಯಾಲಿ ನಡೆಯುತ್ತಿದೆ. ಈ ಪ್ರತಿಭಟನೆಗೆ ದೆಹಲಿ ಪೊಲೀಸರ ಅನುಮತಿ ಇರದ ಕಾರಣ ಕೆಲ ಕಡೆಗಳಲ್ಲಿ ಲಾಠಿ ಚಾರ್ಜ್​ ಕೂಡ ಆಗಿದೆ ಎಂದು ವರದಿಯಾಗಿದೆ.

ಇದರ ನಡುವೆ ಪ್ರತಿಭಟನೆಯ ತೀವ್ರತೆಯನ್ನು ಅರಿತ ಕೇಂದ್ರ ಸರ್ಕಾರವು ಸಿಜೆಪಿಯೊಂದಿಗೆ ಮಾತುಕತೆಗೆ ಮುಂದಾಗಿದ್ದು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಜೆ.ಪಿ. ನಡ್ಡಾ ಅವರೊಂದಿಗೆ ಕಾಕ್ರೋಚ್ ಜನತಾ ಪಕ್ಷದ ಪ್ರತಿನಿಧಿಗಳು ಮಾತುಕತೆ ನಡೆಸಲಿದ್ದಾರೆ ಎಂದು ಸಿಜೆಪಿ ವಕ್ತಾರ ಸೌರವ್ ದಾಸ್ ಹೇಳಿದ್ದಾರೆ.

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಹಲವು ದಿನಗಳಿಂದ ಸಿಜೆಪಿ ಪ್ರತಿಭಟನೆ ಮಾಡುತ್ತಿದೆ. ಈ ಹಿನ್ನಲೆಯಲ್ಲಿ ಇಂದು‘ಸಂಸತ್ ಚಲೊ’ ಪ್ರತಿಭಟನೆ ಹಮ್ಮಿಕೊಂಡಿತ್ತು. ಸರ್ಕಾರವು ನಮ್ಮೊಂದಿಗೆ ಮಾತುಕತೆಗೆ ಮುಂದಾಗಿದೆ. ನಾನು ಮತ್ತು ಅಶುತೋಷ್ ರಾಂಕಾ, ಜೆ.ಪಿ. ನಡ್ಡಾ ಅವರನ್ನು ಭೇಟಿ ಮಾಡಲಿದ್ದೇವೆ. ನಮ್ಮ ಬೇಡಿಕೆಗಳು ಸ್ಪಷ್ಟವಾಗಿದ್ದು, ಯುವ ಜನರ ಬೆಂಬಲ ನಮಗಿದೆ ಎಂದು ಸೌರವ್ ದಾಸ್ ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ