ಡಿಚ್ಚಿ ಹೊಡೆಯುತ್ತಿದೆ ರಾಹುಲ್ ಪಟ್ಟಿ?, ರೀಸರ್ಚ್ ಟೀಮಿನಿಂದ ಸಿಕ್ಕ ಫೀಡ್ ಬ್ಯಾಕ್; ಸೋನಿಯಾ ಸಿಗ್ನಲ್ ಏನು; ವಿಜಯೇಂದ್ರ ಟೀಮಿನ ಚಿಂತೆ

ರಾಜ್ಯ

✍️. ಆರ್.ಟಿ.ವಿಠ್ಠಲಮೂರ್ತಿ

ಕಳೆದ ವಾರ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರು ವೆಬ್ ಎಕ್ಸ್ ಮೀಟಿಂಗು ನಡೆಸಿದ್ದಾರೆ. ಈ ಮೀಟಿಂಗಿನಲ್ಲಿ ಪಾಲ್ಗೊಂಡ ಎಲ್ಲ ರಾಜ್ಯಗಳ ಪಕ್ಷಾಧ್ಯಕ್ಷರು, ಪದಾಧಿಕಾರಿಗಳು ಮತ್ತಿತರ ಪ್ರಮುಖರ ಜತೆ ಚರ್ಚಿಸಿದ ಅವರು ಕಾಂಗ್ರೆಸ್ ವಿರುದ್ದ ಹೋರಾಡಲು ಸೂಚನೆ ನೀಡಿದ್ದಾರೆ. ಕಾಂಗ್ರೆಸ್ ಪಕ್ಷದವರು ಬಿಜೆಪಿ ಸರ್ಕಾರದ ವಿರುದ್ದ ಹೋರಾಡುವ ಹೆಸರಿನಲ್ಲಿ ಸಂಸತ್ತಿಗೆ, ನಮ್ಮ ಪಕ್ಷದ ಕಚೇರಿಗೆ ಮುತ್ತಿಗೆ ಹಾಕುತ್ತಾರೆ. ಇಂತಹ ಸಂದರ್ಭದಲ್ಲಿ ನಾವೂ ಸುಮ್ಮನಿರಬಾರದು. ಹೀಗಾಗಿ ಎಲ್ಲ ರಾಜ್ಯಗಳಲ್ಲಿ ಕಾಂಗ್ರೆಸ್ ಕಚೇರಿಗಳಿಗೆ‌ ನಾವೂ ಮುತ್ತಿಗೆ ಹಾಕಬೇಕು. ಆ ಮೂಲಕ ಅವರಿಗೆ ಎಚ್ಚರಿಕೆಯ ಸಂದೇಶ ರವಾನಿಸಬೇಕು ಎಂಬುದು ನಿತಿನ್ ನಬಿನ್ ಸೂಚನೆ.

ಹೀಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಸೂಚನೆ ನೀಡಿದ ಮೇಲೆ ಸುಮ್ಮನಿರಲು ಸಾಧ್ಯವೇ? ಹೀಗಾಗಿ ರಾಜ್ಯ ಬಿಜೆಪಿಯ ಪ್ರಮುಖರೂ ಒಂದು ವೆಬ್ ಎಕ್ಸ್ ಮೀಟಿಂಗು (ವಿಡಿಯೋ ಮೀಟಿಂಗು) ನಡೆಸಿ ಪಕ್ಷದ ಪದಾಧಿಕಾರಿಗಳು, ಮತ್ತಿತರ ಪ್ರಮುಖರಿಗೆ: ‘ಬುಧವಾರ ಕೆಪಿಸಿಸಿ ಕಚೇರಿಗೆ ಮುತ್ತಿಗೆ ಹಾಕುವ ಕಾರ್ಯಕ್ರಮ ಇದೆ. ಹೀಗಾಗಿ ಇಂತಿಷ್ಟು ಹೊತ್ತಿಗೆ ನಾವೆಲ್ಲ ಬೆಂಗಳೂರಿನ ಕಂಟೋನ್ಮೆಂಟ್ ರೈಲ್ವೇ ಸ್ಟೇಷನ್ನಿನಲ್ಲಿ ಸೇರಬೇಕು. ಅಂದ ಹಾಗೆ ಈ ಮುತ್ತಿಗೆ ಕಾರ್ಯಕ್ರಮ ದೊಡ್ಡ ಮಟ್ಟದಲ್ಲಿ ನಡೆಯಬೇಕಾಗಿರುವುದರಿಂದ ಮಿನಿಮಮ್ ಐದು ಸಾವಿರ ಕಾರ್ಯಕರ್ತರು ಸೇರಬೇಕು. ಆದರೆ ನಾವು ಅಲ್ಲಿ ಸೇರುವ ವಿಷಯ ಯಾರಿಗೂ ಗೊತ್ತಾಗಬಾರದು. ಇದು ಫುಲ್ಲು ಸೀಕ್ರೆಟ್ ಆಗಿರಬೇಕು’ಅಂತ ರಣವೀಳ್ಯ ನೀಡಿದ್ದಾರೆ.

ಸರಿ, ಅದರ ಪ್ರಕಾರ ಕಂಟೋನ್ಮೆಂಟ್ ರೈಲ್ವೇ ಸ್ಟೇಷನ್ನಿಗೆ ಕೆಲ ಕಾರ್ಯಕರ್ತರು ಹೋಗಿದ್ದಾರೆ. ಹೋಗಿ ನೋಡಿದರೆ ಅಲ್ಲಿ ಕಂಡ ದೃಶ್ಯ ಅವರಿಗೆ ಅಚ್ಚರಿ ಮೂಡಿಸಿದೆ. ಯಾಕೆಂದರೆ ಫುಲ್ಲು ಸೀಕ್ರೆಟ್ ಕಾರ್ಯಕ್ರಮ ಅಂತ ಪಕ್ಷದ ನಾಯಕರು ಹೇಳಿದ್ದರೆ, ಕಂಟೋನ್ಮೆಂಟ್ ರೈಲ್ವೇ ಸ್ಟೇಷನ್ನಿನಲ್ಲಿ ಅದಾಗಲೇ ಪೋಲೀಸರ ದಂಡೇ ನೆರೆದಿದೆ. ಅರ್ಥಾತ್,ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕುವ ಕಾರ್ಯಕ್ರಮದ ವಿವರ ಬಿಜೆಪಿ ಕಾರ್ಯಕರ್ತರಿಗಿಂತ ಮುಂಚೆ ಪೋಲೀಸರಿಗೆ ತಲುಪಿದೆ. ಹೋಗಲಿ ಎಂದರೆ ಈ ಕಾರ್ಯಕ್ಕೆ ಸಾವಿರಾರು ಜನರು ಬರುವುದಿರಲಿ, ನೂರು ಪ್ಲಸ್ ಜನ ಬಂದಿದ್ದಾರೆ. ಹೀಗಾಗಿ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಲು ಬಂದ ಇಂತಹ ಬಹುತೇಕ ಕಾರ್ಯಕರ್ತರು ಅಲ್ಲೇ ಆರೆಸ್ಟ್ ಆಗಿದ್ದಾರೆ. ಉಳಿದಂತೆ ಒಂದಷ್ಟು ಮಂದಿ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಿದ್ದಾರಾದರೂ ಒಟ್ಟಾರೆ ಕಾರ್ಯಕ್ರಮ ಲೆಕ್ಕಾಚಾರದಂತೆ ಯಶಸ್ವಿ ಆಗದೆ ಇರುವುದು ರಾಜ್ಯ ಬಿಜೆಪಿಯ ಹಲವರ ಅಸಮಾಧಾನಕ್ಕೆ ಕಾರಣವಾಗಿದೆ. ಅಷ್ಟೇ ಅಲ್ಲ,ಪಕ್ಷದ ವರಿಷ್ಟರಿಗೆ ಪತ್ರ ಬರೆದು ದೂರು ಕೊಡುವಂತೆ ಮಾಡಿದೆ.

ಡಿಚ್ಚಿ ಹೊಡೆಯುತ್ತಿದೆ ಪಟ್ಟಿ
ಈ ಮಧ್ಯೆ ಒಂದಿಲ್ಲೊಂದು ಕಾರಣದಿಂದ ವಿಳಂಬವಾಗುತ್ತಿರುವ ರಾಜ್ಯ ಸಚಿವ ಸಂಪುಟ ವಿಸ್ತರಣೆ ಕಾರ್ಯ ಬುಧವಾರ ಇಲ್ಲವೇ ಗುರುವಾರ ನಡೆಯಲಿದೆ. ಅಂದ ಹಾಗೆ ಕಳೆದ ವಾರ ಸಂಪುಟ ವಿಸ್ತರಣೆಯ ಮಾತುಕತೆಗೆ ಅಂತ ದಿಲ್ಲಿಗೆ ಹೋಗಿದ್ದ ರಾಜ್ಯ ಕಾಂಗ್ರೆಸ್ ನಾಯಕರು ನಿರಾಸೆಯಿಂದ ಹಿಂತಿರುಗಿದ್ದರು. ಕಾಕ್ರೋಚ್ ಪಾರ್ಟಿಯ ಹೋರಾಟದಲ್ಲಿ ರಾಹುಲ್ ಗಾಂಧಿ ಮತ್ತಿತರ ನಾಯಕರು ಭಾಗವಹಿಸಿದ್ದೇ ಇದಕ್ಕೆ ಕಾರಣ.

ಆದರೆ ಈ ಬಾರಿ ರಾಜ್ಯದ ನಾಯಕರಿಗೆ ನಿರಾಸೆಯಾಗುವ ಲಕ್ಷಣ ಕಡಿಮೆ. ಆದರೆ ಮೂಲಗಳ ಪ್ರಕಾರ, ನೂತನ ಸಚಿವರ ಆಯ್ಕೆಯ ವಿಷಯದಲ್ಲಿ ರಾಹುಲ್ ಗಾಂಧಿ ಟಫ್ ಆಗಿದ್ದಾರೆ. ಇದಕ್ಕೆ ತಮ್ಮ ರೀಸರ್ಚ್ ಟೀಮಿನಿಂದ ಅವರಿಗೆ ಸಿಕ್ಕ ಫೀಡ್ ಬ್ಯಾಕೇ ಮುಖ್ಯ ಕಾರಣ.

ಮಾಜಿ ಐಎಎಸ್ ಅಧಿಕಾರಿ, ಹಾಲಿ ಸಂಸದ ಶಶಿಕಾಂತ್ ಸೆಂಥಿಲ್ ಮತ್ತಿತರರಿರುವ ಈ ಟೀಮು: ‘ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸಂಪುಟಕ್ಕೆ ಸೇರಬೇಕಾದವರು ಯಾರು? ಹೊರಗಿರಬೇಕಾದವರು ಯಾರು? ಈ ಹಿಂದೆ ಮಂತ್ರಿಗಳಾಗಿದ್ದವರಲ್ಲಿ ಜನ ಸಂಪರ್ಕ ಕಳೆದುಕೊಂಡವರು ಯಾರು?ಸರ್ಕಾರಕ್ಕೆ ಹೊರೆಯಾಗುವವರು ಯಾರು? ಎಂಬ ಬಗ್ಗೆ ಪಕ್ಕಾ ಇನ್ ಫರ್ಮೇಶನ್ನು ನೀಡಿದೆ. ಇದೇ ರೀತಿ ಕರ್ನಾಟಕದ ಜಿಲ್ಲೆ, ಜಾತಿ, ಪ್ರಾದೇಶಿಕತೆಗಳನ್ನು ಗಮನದಲ್ಲಿಟ್ಟುಕೊಂಡು ಪಕ್ಷ ಮತ್ತು ಸರ್ಕಾರಕ್ಕೆ ಶಕ್ತಿ ತುಂಬಬಲ್ಲ ಹದಿನಾಲ್ಕು ಮಂದಿಯ ಹೆಸರನ್ನು ಸೂಚಿಸಿ ಒಂದು ಪಟ್ಟಿ ರೆಡಿ ಮಾಡಿದೆ. ಅದು ಕೊಟ್ಟ ಈ ಪಟ್ಟಿಗೆ ಗ್ರೀನ್ ಸಿಗ್ನಲ್ ಸಿಗುವುದು ಬಹುತೇಕ ನಿಶ್ಚಿತ ಎಂಬುದು ದಿಲ್ಲಿ ಮೂಲಗಳ ಮಾತು.

ಇನ್ನು ಈ ಪಟ್ಟಿಯಲ್ಲಿರುವ ಹೆಸರುಗಳ ಬಗ್ಗೆ ರಾಹುಲ್ ಗಾಂಧಿ ಅವರು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರ ಜತೆ ಚರ್ಚಿಸಿದ್ದು, ಪಟ್ಟಿಯಲ್ಲಿರುವ ಹೆಸರುಗಳ ಬಗ್ಗೆ ಖರ್ಗೆಯವರೂ ಸಹಮತ ವ್ಯಕ್ತಪಡಿಸಿದ್ದಾರೆ. ಆದರೆ ಈ ಪಟ್ಟಿಯಲ್ಲಿರುವ ಹೆಸರುಗಳ ಜತೆ ಸಂಪುಟಕ್ಕೆ ಸೇರಬೇಕಾದ ಹಲ ಹಿರಿಯ ನಾಯಕರ ಹೆಸರುಗಳನ್ನು ಸೂಚಿಸಿರುವ ಅವರು: ‘ಸಂಪುಟದಲ್ಲಿ ಯುವಕರ ಜತೆ ಹಿರಿಯರೂ ಇರಬೇಕು. ಇಲ್ಲದಿದ್ದರೆ ಸರ್ಕಾರವನ್ನು ತೂಗಿಸಿಕೊಂಡು ಹೋಗುವುದು ಕಷ್ಟ’ ಎಂದು ಹೇಳಿದ್ದಾರೆ.

ಮೂಲಗಳ ಪ್ರಕಾರ, ಸಚಿವ ಸಂಪುಟಕ್ಕೆ ರಾಹುಲ್ ಗಾಂಧಿ ಸೂಚಿಸುವ ಹೆಸರುಗಳ ಜತೆ ಹಿರಿಯ ನಾಯಕರಾದ ಟಿ.ಬಿ.ಜಯಚಂದ್ರ, ಹೆಚ್.ಕೆ.ಪಾಟೀಲ್, ಹೆಚ್.ಸಿ. ಮಹದೇವಪ್ಪ ಅವರಂತಹ ಪ್ರಮುಖರು ಸೇರಬೇಕು ಅಂತ ಖರ್ಗೆ ಬಯಸಿದ್ದಾರೆ. ಆದರೆ ಡಿಕೆ, ಬಿಕೆ, ಸಿದ್ದು ಜತೆ ರಾಹುಲ್ ಗಾಂಧಿ ಮತ್ತು ಖರ್ಗೆಯವರು ನಡೆಸುವ ಸಭೆ ಒಂದಷ್ಟು ಟಫ್ ಆಗುವ ಸಾಧ್ಯತೆಯೂ ಜಾಸ್ತಿ. ಯಾಕೆಂದರೆ ಮಂತ್ರಿ ಮಂಡಲಕ್ಕೆ ಸೇರಬೇಕಾದವರು ಯಾರು ಎಂಬ ವಿಷಯದಲ್ಲಿ ಡಿಕೆ, ಸಿದ್ದು ಪಟ್ಟಿಯೂ ಇದೆಯಲ್ಲ? ಹೀಗಾಗಿ ಈ ಬಾರಿ ವಿಸ್ತರಣೆಗೆ ಸಂಬಂಧಿಸಿದ ‌ಚರ್ಚೆ ಟಫ್ ಆಗಿರಲಿದೆ ಎಂಬುದು ಮೂಲಗಳ ಮಾತು.

ಸೋನಿಯಾ ಸಿಗ್ನಲ್ ಏನು.?
ಇನ್ನು ದಿಲ್ಲಿಯಿಂದ ತೇಲಿ ಬಂದಿರುವ ಒಂದು ವರ್ತಮಾನ ಕುತೂಹಲ ಮೂಡಿಸುವಂತಿದೆ. ಅದರ ಪ್ರಕಾರ, ರಾಹುಲ್ ಗಾಂಧಿಯವರ ಜತೆ ಮಾತನಾಡಿರುವ ಶ್ರೀ ಮತಿ ಸೋನಿಯಾಗಾಂಧಿ ಅವರು: ‘ಸಿಎಂ ಡಿ.ಕೆ.ಶಿವಕುಮಾರ್ ಅವರ ಕೈಗೆ ಮತ್ತಷ್ಟು ಬಲ ತುಂಬಬೇಕು’ ಅಂತ ಹೇಳಿದ್ದಾರಂತೆ.

ಕಾರಣ? ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆಯ ಪ್ರೊಸೆಸ್ಸು ಮಗಿದು ಡಿಕೆ ಶಕೆ ಆರಂಭವಾಯಿತಲ್ಲ? ಇದಾದ ನಂತರ ಸುರ್ಜೇವಾಲಾ ಮತ್ತು ಕೆ.ಸಿ.ವೇಣುಗೋಪಾಲ್ ಜೋಡಿ ಒಂದು ಹವಾ ಕ್ರಿಯೆಟ್ ಮಾಡಿತ್ತಂತೆ.
ಅದೆಂದರೆ, ಕರ್ನಾಟಕದಲ್ಲಿ ಸರ್ಕಾರದ ಪ್ರಮುಖ ನಿರ್ಧಾರಗಳಿಗೆ ಸಂಬಂಧಿಸಿದಂತೆ ಹೈಕಮಾಂಡ್ ಕಾಲ ಕಾಲಕ್ಕೆ ಸೂಚನೆ ಕೊಡುತ್ತದೆ. ಹೀಗಾಗಿ ಯಾವುದೇ ಪ್ರಮುಖ ನಿರ್ಣಯಗಳು ರಾಜ್ಯ ಮಟ್ಟದಲ್ಲಿ ಆಗಬಾರದು’ಅಂತ ಸಿಗ್ನಲ್ಲು ನೀಡಿದ್ದು. ಆದರೆ ದಿನ ಕಳೆದಂತೆ ಅವರು ನೀಡಿದ ಸಿಗ್ನಲ್ಲಿನ ಪಾಲನೆ ಎಷ್ಟು ಟಫ್ ಎಂಬುದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಗೊತ್ತಾಗಿದೆ. ಅಷ್ಟೇ ಅಲ್ಲ, ಇದರ ವಿವರ ಸೋನಿಯಾಗಾಂಧಿ ಅವರ ಕಿವಿಗೂ ಬಿದ್ದಿದೆ. ಹೀಗಾಗಿ ಕಿರಿಕಿರಿ ಮಾಡಿಕೊಂಡ ಅವರು ಇತ್ತೀಚೆಗೆ ರಾಹುಲ್ ಗಾಂಧಿಯವರ ಜತೆ ಮಾತನಾಡಿ: ‘ಮುಖ್ಯಮಂತ್ರಿ ಎಂದರೆ ಸರ್ಕಾರದ ನಾಯಕ. ಹೀಗಿರುವಾಗ ಅವರ ಕೈಗೆ ಹೆಚ್ಚಿನ ಬಲ ತುಂಬುವ ಕೆಲಸ ಆಗಬೇಕು. ಪ್ರತಿಯೊಂದಕ್ಕೂ ಅವರು ದಿಲ್ಲಿಯ ಕಡೆ ತಿರುಗಿ ನೋಡಬಾರದು’ ಎಂದಿದ್ದಾರಂತೆ.

ಪರಿಣಾಮ? ದಿನ ಕಳೆದಂತೆ ಸಿಎಂ ಡಿ.ಕೆ.ಶಿವಕುಮಾರ್ ಅವರ ಕೈಗೆ ಬಲ ಬರುತ್ತಿದೆ. ಇನ್ನು ರಾಜ್ಯದಲ್ಲಿ ತಮಗೆ ಪರ್ಯಾಯ ಶಕ್ತಿ ಕೇಂದ್ರವಾಗಬಲ್ಲವರನ್ನು ಅವರು ವಿಶ್ವಾಸಕ್ಕೆ ತೆಗೆದುಕೊಂಡಿರುವುದರಿಂದ ಆಡಳಿತದಲ್ಲಿ ತಮ್ಮ ಛಾಪು ಮೂಡಿಸುವ ಲಕ್ಷಣಗಳು ಕಾಣಿಸಿಕೊಂಡಿವೆ.

ವಿಜಯೇಂದ್ರ ಟೀಮಿನ ಚಿಂತೆ
ಈ ಮಧ್ಯೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಬೆಂಬಲಿಗರಲ್ಲಿ ಒಂದು ಚಿಂತೆ ಶುರುವಾಗಿದೆ. ಅಂದ ಹಾಗೆ ಅವರ ಚಿಂತೆಗೆ ಪಕ್ಷದ ಲಿಂಗಾಯತ ನಾಯಕರೇ ಕಾರಣ. ಯಾಕೆಂದರೆ ವಿಜಯೇಂದ್ರ ಹಟಾವೋ ಹೋರಾಟಕ್ಕೆ ಪಕ್ಷದ ಭಿನ್ನಮತೀಯ ನಾಯಕರು ಬಲ ತುಂಬುತ್ತಲೇ ನಡೆದಿದ್ದಾರಲ್ಲ? ಆದರೆ ಮುಖ್ಯಮಂತ್ರಿಗಳಾದವರೂ ಸೇರಿದಂತೆ‌ ಪ್ರಮುಖ ಲಿಂಗಾಯತ ನಾಯಕರು ವಿಜಯೇಂದ್ರ ಅವರ ಪರವಾಗಿ ಧ್ವನಿ ಎತ್ತುತ್ತಿಲ್ಲ. ಹಾಗಂತ ಅವರು ವಿಜಯೇಂದ್ರ ಅವರ ವಿರುದ್ಧ ಧ್ವನಿಯೂ ಎತ್ತುತ್ತಿಲ್ಲ ನಿಜ. ಆದರೆ ಇವತ್ತಿನ ಸಂದರ್ಭದಲ್ಲಿ ವಿಜಯೇಂದ್ರ ಅವರ ವಿರುದ್ಧ ಹೋರಾಡುತ್ತಿರುವವರಿಗೆ ಒಂದು ಶಾಕ್ ಕೂಡಾ ಕೊಡಲು ಅವರು ಮುಂದಾಗುತ್ತಿಲ್ಲ ಎಂದರೆ ಆಳದಲ್ಲಿ ಅವರೂ ವಿಜಯೇಂದ್ರ ಪದಚ್ಯುತಿಯನ್ನು ಬಯಸುತ್ತಿದ್ದಾರೆ ಅಂತಲೇ ಅರ್ಥ ಎಂಬುದು ಅವರ ಬೆಂಬಲಿಗರ ಚಿಂತೆ.

ಅಂದ ಹಾಗೆ ಈ ಬೆಂಬಲಿಗರಿಗೆ ದಕ್ಕಿರುವ ವರ್ತಮಾನದ ಪ್ರಕಾರ, ಇಂತಹ ಬಹುತೇಕ ಲಿಂಗಾಯತ ನಾಯಕರು ಈಗ ಮಾಜಿ ಸಚಿವ ಮುರುಗೇಶ್ ನಿರಾಣಿ ಅವರ ಪರವಾಗಿ ವರಿಷ್ಟರಿಗೆ ಸಂದೇಶ ರವಾನಿಸುತ್ತಿದ್ದಾರೆ. ಪರಿಣಾಮ? ಕಳೆದ ಕೆಲ ದಿನಗಳಿಂದ ವಿಜಯೇಂದ್ರ ಅವರೂ ದೊಡ್ಡ ಮಟ್ಟದಲ್ಲಿ ಪಕ್ಷ ಸಂಘಟನೆಯ ಕೆಲಸಗಳ ಬಗ್ಗೆ ಉತ್ಸಾಹ ತೋರಿಸುತ್ತಿಲ್ಲ
ಯಾಕೆಂದರೆ ನಾಯಕತ್ವ ಬದಲಿಸಿ ಅಂತ ಕೂಗುತ್ತಿರುವವರ ಬಾಯಿಗೆ ವರಿಷ್ಟರು ಇದುವರೆಗೆ ಬೀಗ ಹಾಕಿಲ್ಲ. ಬೀಗ ಹಾಕುವುದಿರಲಿ, ಬದಲಿಗೆ ದಿಲ್ಲಿ ಲೆವೆಲ್ಲಿನಲ್ಲಿ ತಮ್ಮ ವಿರೋಧಿಗಳ ಹಾವಳಿ ಹೆಚ್ಚಾಗುತ್ತಿದ್ದರೂ ಅದಕ್ಕೆ ಬ್ರೇಕ್ ಹಾಕುವ ಕೆಲಸ ಮಾಡುತ್ತಿಲ್ಲ ಎಂಬುದು ಅವರ ನೋವು.

ಅಂದ ಹಾಗೆ ಕೆಲ ದಿನಗಳ ಹಿಂದೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸಭೆಯೊಂದರಲ್ಲಿ ಪಕ್ಷದ ನೂತನ ಅಧ್ಯಕ್ಷರಾದ ನಿತಿನ್ ನಬಿನ್ ಅವರನ್ನು’:ಇವರು ನಮ್ಮ ನಾಯಕರು. ಪಕ್ಷದ ಬೆಳವಣಿಗೆಗೆ ಅವರು ಕೊಡುವ ಸಲಹೆಗಳನ್ನು ನಾನು ವಿನೀತನಾಗಿ ಸ್ವೀಕರಿಸುತ್ತೇನೆ’ ಎಂದಿದ್ದರು. ಹಾಗೆ ನೋಡಿದರೆ ನಿತಿನ್ ನಬಿನ್ ಅವರು ಮೋದಿಯವರಿಗಿಂತ ಸುಮಾರು ಮೂವತ್ತು ವರ್ಷ ಚಿಕ್ಕವರು.
ಅರ್ಥಾತ್, ವಯಸ್ಸಿನಲ್ಲಿ ಚಿಕ್ಕವರಾದರೂ ಅವರು ಕುಳಿತಿರುವ ಜಾಗಕ್ಕೆ ಪ್ರಧಾನಿ ಮೋದಿ ತುಂಬು ಗೌರವ ನೀಡಿದರು.

ಆದರೆ ಕರ್ನಾಟಕದ ಹಲ ಲಿಂಗಾಯತ ನಾಯಕರು ತಾವೇ ಖುದ್ದಾಗಿ: ‘ವಿಜಯೇಂದ್ರ ಚಿಕ್ಕವರು. ಹೀಗಾಗಿ ಅವರನ್ನು ಹಿರಿಯರು ಒಪ್ಪುವುದಿಲ್ಲ ‘ಅಂತ ಹೇಳಿಕೊಂಡು ತಿರುಗುತ್ತಿದ್ದಾರೆ ಎಂಬುದು ವಿಜಯೇಂದ್ರ ಬೆಂಬಲಿಗರ ನೋವು. ಹಾಗಂತಲೇ ಅವರು: ‘ಕರ್ನಾಟಕದಲ್ಲಿ ಲಿಂಗಾಯತ ಮತದಾರರು ಪಕ್ಷಕ್ಕೆ ಬಲ ತುಂಬಿದರು. ಆದರೆ ಈಗ ಲಿಂಗಾಯತ ನಾಯಕರೇ ಅದರ ನಿಶ್ಯಕ್ತಿಗೆ ಕಾರಣರಾಗುತ್ತಿದ್ದಾರೆ’ ಎಂದು ಹೇಳತೊಡಗಿದ್ದಾರೆ.

ಲಾಸ್ಟ್ ಸಿಪ್
ಈ ಮಧ್ಯೆ ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರಿಗೆ ರಾಜ್ಯ ಬಿಜೆಪಿಯ ನಾಯಕರ ಬಗ್ಗೆ ಅಸಮಾಧಾನ ಶುರುವಾಗಿದೆ.
ಕಾರಣ? ಕೆಪಿಎಸ್ಸಿ ಹಗರಣಗಳ ಬಗ್ಗೆ ರಾಜ್ಯದ ನಾಯಕರು ದೊಡ್ಡ ಮಟ್ಟದ ಹೋರಾಟ ನಡೆಸದೆ ಇರುವುದು.
ಜನ ಇವತ್ತು ಯಾವ ವಿಷಯದ ಬಗ್ಗೆ ಆಕ್ರೋಶಗೊಂಡಿದ್ದಾರೋ? ಅದಕ್ಕೆ ಧ್ವನಿ ನೀಡುವುದು ಪ್ರತಿಪಕ್ಷದ ಕೆಲಸ. ಆದರೆ ರಾಜ್ಯ ಬಿಜೆಪಿ ಅದನ್ನು ಮಾಡುತ್ತಿಲ್ಲ ಅಂತ ಕುಪಿತರಾದ ಅಮಿತ್ ಶಾ ಮೊನ್ನೆ ಇಬ್ಬರು ನಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಎಂಬುದು ಬಿಜೆಪಿ ವಲಯಗಳ ಲೇಟೆಸ್ಟು ಸುದ್ದಿ.