ಮಂಗಳೂರು: ಸಿಸಿಬಿ ಪೊಲೀಸರ ಕಾರ್ಯಾಚರಣೆ: ತಲೆಮರೆಸಿಕೊಂಡಿದ್ದ ಕೊಲೆಯತ್ನ ಪ್ರಕರಣದ ಆರೋಪಿಯ ಬಂಧನ.

ಕರಾವಳಿ

ಮಂಗಳೂರು ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2015 ರಲ್ಲಿ ನಡೆದ ಕೊಲೆಯತ್ನ ಪ್ರಕರಣದಲ್ಲಿ ನೇರ ಭಾಗಿಯಾಗಿ ಬಂಧನವಾಗದೆ ಸುಮಾರು 11 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿಯೋರ್ವನನ್ನು ಬಂಧಿಸುವಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಯಶಸ್ವಿಯಾಗಿರುತ್ತಾರೆ. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ನಿವಾಸಿ ಚುಂಕಿ ಆಕಾಶಭವನ @ ಸಂತೋಷ್ ಎಸ್ ಬಂಧಿತ ಆರೋಪಿ.

ಈತನು 2015ರಲ್ಲಿ ಮಂಗಳೂರು ನಗರದ ಆಕಾಶಭವನದಲ್ಲಿ ನಡೆದ ಮದುವೆಯ ಮದುರಂಗಿ ಶಾಸ್ತ್ರದ ಸಂದರ್ಭದಲ್ಲಿ ಅಶೋಕ ಕುಮಾರ ಕೊಟ್ಟಾರಿ ಹಾಗೂ ಆರೋಪಿ ಜಗ್ಗು ಎಂಬುವರ ನಡುವೆ ಮಾತಿನ ಚಕಮಕಿ ನಡೆದ ವಿಚಾರದಲ್ಲಿ ಪ್ರಮುಖ ಆರೋಪಿಯಾದ ಚುಂಕಿ ಆಕಾಶಭವನ @ ಸಂತೋಷನು ಇತರ ಆರೋಪಿಗಳಾದ ರಂಜಿತ್, ಧನು, ಧೂಮ, ಸ್ವೀಟಿ @ ನರೇಶ್ ಮತ್ತು ಜಗ್ಗು ರವರ ಜೊತೆ ಸೇರಿಕೊಂಡು ಅಶೋಕ ಕುಮಾರ ಕೊಟ್ಟಾರಿ ರವರಿಗೆ ತಲವಾರಿನಿಂದ ಕಡಿದು ಮಾರಣಾಂತಿಕ ಹಲ್ಲೆ ನಡೆಸಿ ಗಂಭೀರ ಗಾಯವುಂಟು ಮಾಡಿ ಕೊಲೆಯತ್ನ ನಡೆಸಿದ್ದು, ಈ ಬಗ್ಗೆ ಕಾವೂರು ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ 135/2015 ರಂತೆ ಕೊಲೆಯತ್ನ ಪ್ರಕರಣ ದಾಖಲಾಗಿತ್ತು.

ಈ ಪ್ರಕರಣದಲ್ಲಿ ಪ್ರಮುಖ ಆರೋಪಿ ಚುಂಕಿ ಆಕಾಶಭವನ ಎಂಬಾತನು ಪ್ರಕರಣ ದಾಖಲಾದ ದಿನದಿಂದ ಪೊಲೀಸರಿಗೆ ಸಿಗದೆ ಸುಮಾರು 11 ವರ್ಷಗಳಿಂದ ತಲೆಮರೆಸಿಕೊಂಡಿದ್ದು, ಮಾನ್ಯ ನ್ಯಾಯಾಲಯವು ಆತನ ವಿರುದ್ಧ ವಾರಂಟ್ ಹೊರಡಿಸಿತ್ತು.

ಈತನ ಬಗ್ಗೆ ಯಾವುದೇ ಸುಳಿವು ಇಲ್ಲದೆ ಬಹಳ ಸಮಯದಿಂದ ಮಾಹಿತಿ ಸಂಗ್ರಹಿಸುತ್ತಿದ್ದ ಸಿಸಿಬಿ ಪೊಲೀಸರಿಗೆ ಈತನು ಶಿವಮೊಗ್ಗದಲ್ಲಿ ಇದ್ದಾನೆಂದು ಖಚಿತ ಮಾಹಿತಿ ಲಭ್ಯವಾದ ಹಿನ್ನಲೆಯಲ್ಲಿ ದಿನಾಂಕ 29-07-2026 ರಂದು ಈತನನ್ನು ಹಾವೇರಿ ಜಿಲ್ಲೆಯ ಚಿಕ್ಕೆರೂರು ಎಂಬಲ್ಲಿ ವಶಕ್ಕೆ ಪಡೆದ ಸಿಸಿಬಿ ಪೊಲೀಸರು ಈತನನ್ನು ಮುಂದಿನ ಕ್ರಮಕ್ಕಾಗಿ ಕಾವೂರು ಪೊಲೀಸ್ ಠಾಣೆಗೆ ಹಸ್ತಾಂತರಿಸಿರುತ್ತಾರೆ. ಆರೋಪಿ ಪತ್ತೆ ಕಾರ್ಯದಲ್ಲಿ ಸಿಸಿಬಿ ಘಟಕದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿದ್ದರು.