ಮಂಗಳೂರು: ಸಿಸಿಬಿ ಪೊಲೀಸರ ಭರ್ಜರಿ ಕಾರ್ಯಾಚರಣೆ: ವಂಚನೆ ಪ್ರಕರಣದ ಕುಖ್ಯಾತ ಆರೋಪಿ ಸ್ಯಾಮ್ ಪೀಟರ್ ಬಂಧನ.

ಕರಾವಳಿ

ಮಂಗಳೂರು ನಗರ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ, ರಾಷ್ಟ್ರೀಯ ಅಪರಾಧ ತನಿಖಾ ದಳದ (NCIB) ನಿರ್ದೇಶಕ/ಅಧಿಕಾರಿ ಎಂದು ಸುಳ್ಳು ಪರಿಚಯ ಮಾಡಿಕೊಂಡು ಸುಲಿಗೆ ಹಾಗೂ ವಂಚನೆ ನಡೆಸುತ್ತಿದ್ದ ಪ್ರಕರಣದಲ್ಲಿ ಬಂಧಿತರಾಗಿ, ಬಳಿಕ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ಸುಮಾರು ಮೂರು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕುಖ್ಯಾತ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.

ಸ್ಯಾಮ್ ಪೀಟರ್ @ ಡ್ಯಾನಿ ತಾರಕನ್ @ ಆಂಟನಿ, ಮರಿಯಾ ಕಾಟೇಜ್, ಕವನಾಡು, ಕೊಲ್ಲಂ, ಆಲಪ್ಪಿ, ಕೋಯಿಲಾಡ್, ಅಲಪ್ಪಿ ರೋಡ್, ಕೇರಳ. ಪ್ರಸ್ತುತ ವಿಳಾಸ: Chanakayapuri, Lucknow, Manas Nagar, Sarojini Nagar, Lucknow, Uttar Pradesh

ಆರೋಪಿ ಶ್ಯಾಮ್ ಪೀಟರ್ ಅಲಿಯಾಸ್ ಟಿ. ಸ್ಯಾಮ್ ಪೀಟರ್/ರಾಹುಲ್ ಪೀಟರ್ ತನ್ನದೇ ಗ್ಯಾಂಗ್ ರಚಿಸಿಕೊಂಡು, ರಾಷ್ಟ್ರೀಯ ತನಿಖಾ ಸಂಸ್ಥೆಗಳ ಅಧಿಕಾರಿಗಳಂತೆ ನಟಿಸಿ, ಹಣಕಾಸು ವಿವಾದಗಳು, ಬ್ಯಾಂಕ್ ವಂಚನೆಗಳು ಹಾಗೂ ತೆರಿಗೆ ವಂಚನೆ ಪ್ರಕರಣಗಳಲ್ಲಿ ಸಿಲುಕಿರುವ ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡು, ತಾನು ಅಧಿಕಾರ ಹೊಂದಿರುವ ಅಧಿಕಾರಿಯೆಂದು ನಂಬಿಸಿ ಹಣ ಪಡೆದು ವಂಚನೆ ಹಾಗೂ ಸುಲಿಗೆ ನಡೆಸುತ್ತಿದ್ದ. ಈ ಸಂಬಂಧ ಮಂಗಳೂರು ಕದ್ರಿ ಪೊಲೀಸರು ದಿನಾಂಕ 16-08-2019 ರಂದು ಪಂಪ್ ವೆಲ್ ನಲ್ಲಿರುವ ಲಾಡ್ಜ್ ಗೆ ದಾಳಿ ನಡೆಸಿ, ಶ್ಯಾಮ್ ಪೀಟರ್ ಸೇರಿದಂತೆ ಆತನ ಗ್ಯಾಂಗ್ ಅನ್ನು ಬಂಧಿಸಿದ್ದರು. ನಂತರ ಆರೋಪಿಯು ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡಿದ್ದು, ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯಕ್ಕೆ ಹಾಜರಾಗದೆ ಮೂರು ವರ್ಷಗಳಿಂದ ತಲೆಮರೆಸಿಕೊಂಡಿದ್ದ. ಆರೋಪಿಯು ತನ್ನ ನಿಜವಾದ ಗುರುತನ್ನು ಮರೆಮಾಚುವ ಉದ್ದೇಶದಿಂದ ವಿವಿಧ ಸ್ಥಳಗಳಲ್ಲಿ ವಿವಿಧ ಹೆಸರುಗಳನ್ನು ಬಳಸಿಕೊಂಡು ವಾಸಿಸುತ್ತಿದ್ದನೆಂದು ತಿಳಿದುಬಂದಿದೆ.

ಆರೋಪಿಯು ಒಂದು ಸ್ಥಳದಲ್ಲಿ ಅಪರಾಧ ಎಸಗಿ, ಮತ್ತೊಂದು ಸ್ಥಳಕ್ಕೆ ತೆರಳಿ ತನ್ನ ಹೆಸರನ್ನು ಬದಲಾಯಿಸಿಕೊಂಡು ವಾಸಿಸುವ ಪ್ರವೃತ್ತಿಯನ್ನು ಹೊಂದಿರುತ್ತಾನೆ. ಆರೋಪಿ ಸ್ಯಾಮ್ ಪೀಟರ್ ಒಬ್ಬ ಕುಖ್ಯಾತ ವಂಚಕನಾಗಿದ್ದು, ‘ರಾಹುಲ್ ಪೀಟರ್’ ಎಂಬ ಅಲಿಯಾಸ್ ಹೆಸರಿನಲ್ಲಿ ಆತನ ವಿರುದ್ಧ 2001ರಿಂದ ಇಂಟರ್ಪೋಲ್ ರೆಡ್ ಕಾರ್ನರ್ ನೋಟಿಸ್ ಜಾರಿಯಾಗಿದ್ದುದಾಗಿ ತಿಳಿದುಬಂದಿದೆ.

ಆರೋಪಿಯ ವಿರುದ್ಧ ಮಂಗಳೂರು ನಗರದ ಪೂರ್ವ ಪೊಲೀಸ್ ಠಾಣೆ, ಉಳ್ಳಾಲ ಪೊಲೀಸ್ ಠಾಣೆ, ಕೊಣಾಜೆ ಪೊಲೀಸ್ ಠಾಣೆ, ಚಿಕ್ಕಬಳ್ಳಾಪುರ, ಬೆಂಗಳೂರು, ಉಡುಪಿ ನಗರ ಹಾಗೂ ಕುಶಾಲನಗರ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಮತ್ತು ಬಿಹಾರ, ತಮಿಳುನಾಡು, ಮಹಾರಾಷ್ಟ್ರ, ಉತ್ತರ ಪ್ರದೇಶ, ಛತ್ತೀಸ್ಗಢ, ಜಾರ್ಖಂಡ್ ಹಾಗೂ ಮಧ್ಯಪ್ರದೇಶ ರಾಜ್ಯಗಳಲ್ಲಿ ಮೋಸ, ವಂಚನೆ ಸೇರಿದಂತೆ ಸುಮಾರು 17 ಪ್ರಕರಣಗಳು ದಾಖಲಾಗಿರುವುದು ತಿಳಿದುಬಂದಿದೆ.

ಪ್ರಸ್ತುತ ಆರೋಪಿಯ ವಿರುದ್ಧ ಮಂಗಳೂರು ಉಳ್ಳಾಲ ಪೊಲೀಸ್ ಠಾಣೆ ಪ್ರಕರಣದಲ್ಲಿ 17 ಬಾರಿ ವಾರೆಂಟ್ ಹೊರಡಿಸಿರುತ್ತದೆ. ಮತ್ತು ಮಂಗಳೂರು ಪೂರ್ವ ಠಾಣೆ ಪ್ರಕರಣದಲ್ಲಿ 14 ಬಾರಿ ವಾರೆಂಟ್ ಹೊರಡಿಸಿ ಬಳಿಕ ಪ್ರೊಕ್ಲೊಮೇಷನ್(ಉದ್ಘೋಷಣೆ) ಆಗಿರುತ್ತದೆ. ಬಂಧಿತ ಆರೋಪಿಯನ್ನು ಮುಂದಿನ ಕಾನೂನು ಕ್ರಮಕ್ಕಾಗಿ ಮಂಗಳೂರು ಪೂರ್ವ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ. ಆರೋಪಿಯ ಪತ್ತೆ ಮತ್ತು ಬಂಧನ ಕಾರ್ಯಾಚರಣೆಯಲ್ಲಿ ಮಂಗಳೂರು ನಗರ ಸಿಸಿಬಿ ಘಟಕದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.