ಏಪ್ರಿಲ್‌ 19 ರಿಂದ ಜೂನ್‌ ಒಂದರ ತನಕ ಲೋಕಸಭೆ ಹಾಗೂ ನಾಲ್ಕು ರಾಜ್ಯಗಳ ವಿಧಾನಸಭೆ ಚುನಾವಣೋತ್ತರ ಸಮೀಕ್ಷೆ ನಡೆಸುವುದು, ಪ್ರಕಟಿಸುವುದಕ್ಕೆ ನಿರ್ಬಂಧ: ಆಯೋಗ

ರಾಷ್ಟ್ರೀಯ

ಏಪ್ರಿಲ್‌ 19 ರಿಂದ ಜೂನ್‌ ಒಂದರ ವರೆಗೆ ಲೋಕಸಭೆ ಹಾಗೂ ನಾಲ್ಕು ರಾಜ್ಯಗಳ ವಿಧಾನಸಭೆ ಚುನಾವಣೆ ವೇಳೆ ಚುನಾವಣೋತ್ತರ ಸಮೀಕ್ಷೆ ನಡೆಸುವುದು ಅಥವಾ ಪ್ರಕಟಿಸುವುದಕ್ಕೆ ಚುನಾವಣಾ ಆಯೋಗ ನಿರ್ಬಂಧ ಹೇರಿದೆ. ಈ ಸಂಬಂಧ ಗುರುವಾರ ಪ್ರಕಟಣೆ ಹೊರಡಿಸಿರುವ ಆಯೋಗ, ಅಭಿಪ್ರಾಯ ಸಂಗ್ರಹ ಅಥವಾ ಚುನಾವಣಾ ಸಮೀಕ್ಷೆಯ ಫಲಿತಾಂಶವೂ ಸೇರಿದಂತೆ ಚುನಾವಣೆಗೆ ಸಂಬಂಧಿಸಿದ ಯಾವುದೇ ವಿಚಾರವನ್ನು, ನಿಗದಿಯಂತೆ ಚುನಾವಣೆ ಮುಗಿಯುವವರೆಗೆ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಪ್ರಸಾರ ಮಾಡುವುದನ್ನು ಜನಪ್ರತಿನಿಧಿಗಳ ಕಾಯ್ದೆ ಅನುಸಾರ ನಿರ್ಬಂಧಿಸಲಾಗಿದೆ ಎಂದು ಸ್ಪಷ್ಟಪಡಿಸಿದೆ.

ದೇಶದಾದ್ಯಂತ ಲೋಕಸಭೆ ಚುನಾವಣೆ ನಡೆಯುವ ಹೊತ್ತಿನಲ್ಲೇ ಆಂಧ್ರಪ್ರದೇಶ, ಅರುಣಾಚಲ ಪ್ರದೇಶ, ಒಡಿಶಾ ಹಾಗೂ ಸಿಕ್ಕಿಂ ವಿಧಾನಸಭೆಗಳಿಗೂ ಚುನಾವಣೆ ನಿಗದಿಯಾಗಿದೆ. 12 ರಾಜ್ಯಗಳ 25 ವಿಧಾನಸಭೆ ಕ್ಷೇತ್ರಗಳಿಗೂ ಇದೇ ವೇಳೆ ಉಪಚುನಾವಣೆ ನಡೆಯಲಿದೆ. ಏಪ್ರಿಲ್‌ 19, ಏಪ್ರಿಲ್‌ 26, ಮೇ 7, ಮೇ 13, ಮೇ 20, ಮೇ 25 ಹಾಗೂ ಜೂನ್‌ 1ರಂದು ಒಟ್ಟು 7 ಹಂತಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ. ಸಿಕ್ಕಿಂ, ಅರುಣಾಚಲದಲ್ಲಿ ಜೂನ್‌ 2ರಂದು ಹಾಗೂ ಆಂಧ್ರ, ಒಡಿಶಾದಲ್ಲಿ ಜೂನ್‌ 4ರಂದು ಮತ ಎಣಿಕೆ ನಡೆಯಲಿದೆ.