ಕುಡುಪು ಗ್ರಾಮದ 10.8 ಎಕರೆ ಜಮೀನಿನ ಟಿ.ಡಿ.ಆರ್ ಒಪ್ಪಂದ ರದ್ದುಗೊಳಿಸಲು ಆಗ್ರಹಿಸಿ, ರಾಜ್ಯ ಸರಕಾರ ಹಗರಣದ ಸಂಪೂರ್ಣ ತನಿಖೆ ನಡೆಸುವಂತೆ ಒತ್ತಾಯಿಸಿ ಸಿಪಿಐಎಂ ದ.ಕ ಜಿಲ್ಲಾಧಿಕಾರಿಗೆ ಮನವಿ

ಕರಾವಳಿ

ಮಂಗಳೂರು ತಾಲೂಕಿನ ಕುಡುಪು ಗ್ರಾಮದ ಸರ್ವೆ ನಂಬ್ರ 57/ಪಿರಲ್ಲಿರುವ 10.8 ಎಕರೆ ಜಮೀನು ಟಿ.ಡಿ.ಆರ್ ಅಡಿ ಖರೀದಿಸುವ ಮಂಗಳೂರು ಪಾಲಿಕೆಯ ಒಪ್ಪಂದ ರದ್ದುಗೊಳಿಸಲು ಆಗ್ರಹಿಸಿ, ರಾಜ್ಯ ಸರಕಾರ ಹಗರಣದ ಸಂಪೂರ್ಣ ತನಿಖೆ ನಡೆಸುವಂತೆ ಒತ್ತಾಯಿಸಿ ಸಿಪಿಐಎಂ ಮಂಗಳೂರು ನಗರ ದಕ್ಷಿಣ ಸಮಿತಿ ವತಿಯಿಂದ ಜಿಲ್ಲಾಧಿಕಾರಿಗೆ ಮನವಿ

ದಿನಾಂಕ 23-03-2024 ರಂದು ಮಂಗಳೂರಿನ ರಿಯಲ್ ಎಸ್ಟೇಟ್ ವ್ಯವಹಾರಸ್ಧ ಹಾಗೂ ಬಿಲ್ಡರ್ ಆಗಿರುವ ಗಿರಿಧರ್ ಶೆಟ್ಟಿ ಎಂಬವರ ದೂರಿನ ಆಧಾರದಲ್ಲಿ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡ) ಆಯುಕ್ತರಾದ ಮನ್ಸೂರ್ ಅಲಿ ಎಂಬವರನ್ನು 25 ಲಕ್ಷ ರೂಪಾಯಿ ಲಂಚದ ಬೇಡಿಕೆ ಇಟ್ಟಿದ್ದಾರೆ ಎಂಬ ಆರೋಪದ ಮೇರೆಗೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಬಂಧಿಸಿರುವ ಘಟನೆ ನಡೆದಿದೆ.

ಮೂಡ ಆಯುಕ್ತರಾದ ಮನ್ಸೂರ್ ಅಲಿರವರ ಬಂಧನಕ್ಕೆ ಕಾರಣವಾದ ಮಂಗಳೂರು ತಾಲೂಕಿನ ಕುಡುಪು ಗ್ರಾಮದ ಸರ್ವೆ ನಂಬ್ರ 57/ಪಿ ರಲ್ಲಿನ ಒಟ್ಟು 10.8 ಎಕರೆ ಜಮೀನನ್ನು ಮಹಾನಗರ ಪಾಲಿಕೆಗೆ ವರ್ಗಾವಣೆ ಮಾಡಿರುವ ಜಮೀನಿನ ಮೌಲ್ಯದ ಬದಲಾಗಿ ಅದರ ಮೌಲ್ಯವನ್ನು ಟಿಡಿಆರ್ ಸರ್ಟಿಫಿಕೇಟ್ ಮೂಲಕ ನೀಡಲು ಮಹಾನಗರ ಪಾಲಿಕೆ ಒಪ್ಪಿಕೊಂಡಿದ್ದು ಅದರಂತೆ ಟಿಡಿಆರ್ ಸರ್ಟಿಫಿಕೆಟನ್ನು ನೀಡಲು ಮುಡ ಆಯುಕ್ತರಿಗೆ ನಿರ್ದೇಶಿಸಿ ಅದರ ಕಡತವನ್ನು ವರ್ಗಾವಣೆ ಮಾಡಿದ್ದಾಗಿಯೂ ಆ ಕಡತವು ಫೆಬ್ರವರಿ 2024ರಿಂದ ಮುಡ ಆಯುಕ್ತರ ಕಛೇರಿಯಲ್ಲಿ ಇರುವುದಾಗಿಯೂ ಈ ಕಡತಕ್ಕೆ ಸಹಿ ಮಾಡಲು ಮುಡ ಆಯುಕ್ತರಾದ ಮನ್ಸೂರ್ ಅಲಿರವರು 25 ಲಕ್ಷ ರೂಪಾಯಿ ಲಂಚದ ಬೇಡಿಕೆ ಇಟ್ಟಿದ್ದಾರೆ ಎಂಬ ವಿಚಾರವು ಪತ್ರಿಕೆಯಲ್ಲಿ ವರದಿಯಾಗಿತ್ತು.

ಟಿಡಿಆರ್ ಅನ್ನು ರಿಯಲ್ ಎಸ್ಟೇಟ್ ಉದ್ಯಮಿಗಳು ದುರುಪಯೋಗ ಪಡಿಸಿಕೊಳ್ಳುವ ಬಗ್ಗೆ ಈ ಹಿಂದೆಯೇ ಹಲವಾರು ದೂರುಗಳು ಕೇಳಿ ಬಂದಿತ್ತು. ಸರ್ಕಾರದ ಯೋಜನೆಗಳು ವಿಳಂಬವಾಗಬಾರದೆಂಬ ಕಾರಣಕ್ಕೆ ಮತ್ತು ಯೋಜನೆಗಳಿಗೆ ಅಗತ್ಯವಾದ ಸಣ್ಣಪುಟ್ಟ ಜಮೀನುಗಳನ್ನು ಸ್ವಾಧೀನ ಪಡಿಸಿಕೊಳ್ಳುವಾಗ ಭೂಮಾಲಿಕರಿಗೆ ತೊಂದರೆಯಾಗಬಾರದೆನ್ನುವ ಕಾರಣಗಳಿಂದ ಟಿ.ಡಿ.ಆರ್ ನೀಡಿ ಭೂಸ್ವಾಧೀನ ನಡೆಸುತ್ತವೆ. ಸಂತ್ರಸ್ತರು ಭೂಮಿಯನ್ನು ಅಭಿವೃಧಿ ಪಡಿಸುವ ಸಮಯ ಅನುಕೂಲ ಒದಗಿಸಿ ಕೊಡುವ ಸಲುವಾಗಿ ಅವರಿಗೆ ಟಿಡಿಆರ್ ನೀಡಿ, ಅವರಿಂದ ಸ್ವಾಧೀನ ಪಡಿಸಿಕೊಂಡ ಜಮೀನಿನ ಮೌಲ್ಯಕ್ಕೆ ನಷ್ಟವಾಗದಂತೆ ನ್ಯಾಯವನ್ನು ಒದಗಿಸಿಕೊಡಲು ಆ ಮೂಲಕ ಪ್ರಯತ್ನಿಸಲಾಗುತ್ತದೆ.

ಆದರೆ ಕುಡುಪು ಗ್ರಾಮದ ಸರ್ವೆ ನಂಬ್ರ 57/ಪಿರಲ್ಲಿರುವ 10.8 ಎಕರೆ ವಿಸ್ತೀರ್ಣದ ಜಮೀನಿನ ಮಂಗಳೂರು ಮಹಾನಗರ ಪಾಲಿಕೆ ಸ್ವಾಧೀನ ಪಡಿಸಿಕೊಂಡು ಆ ಭೂಮಿಯ ಹಣದ ಮೌಲ್ಯದ ಬದಲಾಗಿ ಭೂಮಾಲಿಕರಿಗೆ ಟಿಡಿಆರ್ ಸರ್ಟಿಫಿಕೇಟ್ ಕೊಡಲು ಮಾಡಿಕೊಂಡ ಒಪ್ಪಂದ ಮತ್ತು ನಿರ್ಧಾರಗಳು ಟಿಡಿಆರ್ ನಿಯಮಾವಳಿಯ ಮೂಲ ಉದ್ದೇಶಕ್ಕೆ ವಿರುದ್ದವಾಗಿರುತ್ತದೆ ಮತ್ತು ಇದು ಮಂಗಳೂರು ಮಹಾನಗರ ಪಾಲಿಕೆಯ ಕಾನೂನುಬಾಹಿರ ನಡೆಯಾಗಿರುತ್ತದೆ. ಸದ್ರಿ ಭೂಮಿಯ ಟಿಡಿಆರ್‌ಗಾಗಿ ಮತ್ತು ಆ ಕಡತದ ವಿಲೇವಾರಿಗಾಗಿ ಮುಡ ಆಯುಕ್ತರನ್ನು ವಿನಂತಿಸಿರುವ ವ್ಯಕ್ತಿ ಗಿರಿಧರ ಶೆಟ್ಟಿ ಎಂಬವರಾಗಿದ್ದು ಇವರು ಮಂಗಳೂರಿನಲ್ಲಿ ಭೂ ವ್ಯವಹಾರವನ್ನು ವೃತ್ತಿಪರವಾಗಿ ನಡೆಸುವ ವ್ಯಕ್ತಿಯಾಗಿರುತ್ತಾರೆ.
ಟಿಡಿಆರ್ ನಿಯಮದಲ್ಲಿ ಮೂಲ ಮಾಲಕನ ಬದಲಿಗೆ ಮಧ್ಯವರ್ತಿ, ಜಮೀನಿನ ಎಗ್ರಿಮೆಂಟ್ ಹೋಲ್ಡರ್‌ನೊಂದಿಗೆ ವ್ಯವಹಾರ ಕುದುರಿಸಲು ಅವಕಾಶವಿರುವುದಿಲ್ಲ. ನಿಯಮಗಳು ಇದನ್ನು ಒಪ್ಪುವುದಿಲ್ಲ.
ನಮಗೆ ತಿಳಿದು ಬಂದಿರುವ ವಿಚಾರವೇನೆಂದರೆ ಗಿರಿಧರ್ ಶೆಟ್ಟಿ ಮೂಲ ಮಾಲೀಕರೋಂದಿಗೆ 7 ಕೋಟಿ ರೂಪಾಯಿ ಮೌಲ್ಯಕ್ಕೆ ಜಮೀನು ಖರೀದಿಸುವ ಕುರಿತು ಮಾತುಕತೆ ನಡೆಸಿ 1 ಕೋಟಿ ರೂಪಾಯಿ ಮುಂಗಡ ನೀಡಿ ಎಗ್ರಿಮೆಂಟ್ ಮಾಡಿಕೊಂಡಿರುತ್ತಾರೆ. ಈಗ ಮಂಗಳೂರು ನಗರ ಪಾಲಿಕೆ ಗಿರಿಧರ್ ಶೆಟ್ಟಿಗೆ ನೀಡಲು ಒಪ್ಪಿಕೊಂಡಿರುವ ಟಿಡಿಆರ್‌ನ ಮಾರುಕಟ್ಟೆ ಮೌಲ್ಯ ಸುಮಾರು 50 ಕೋಟಿ ಎನ್ನಲಾಗಿದೆ. ಈ ಟಿಡಿಆರ್‌ನನ್ನು ರಾಜಕೀಯ ವ್ಯಕಿಗಳು, ಪ್ರಭಾವಿ ಬಿಲ್ಡರ್ ಗಳು ಮಾಡಿಕೊಂಡಿರುವ ಬೇನಾಮಿ ಹೂಡಿಕೆಯ ಕಟ್ಟಡಗಳಿಗೆ ಬಳಸಲು ಯೋಜನೆ ಹಾಕಿಕೊಂಡಿದ್ದಾರೆ ಎಂಬ ಚರ್ಚೆಗಳು ನಗರದಲ್ಲಿ ನಡೆಯುತ್ತಿದೆ. ಗಿರಿಧರ್ ಶೆಟ್ಟಿಗೆ ಬಹಳಷ್ಟು ಪ್ರಭಾವಿ ರಾಜಕಾರಣಿಗಳು ಹಾಗೂ ಜನಪ್ರತಿನಿಧಿಗಳ ಒಡನಾಟ ಇದೆ.

ಇವರು ಖರೀದಿಸಲು ಒಪ್ಪಂದ ಮಾಡಿಕೊಂಡಿರುವ ಸದರಿ ಜಮೀನಿನಲ್ಲಿ ಅಂತಹ ರಾಜಕೀಯ ನಾಯಕರುಗಳ ಹೂಡಿಕೆ ಇರುವ ಸಾಧ್ಯತೆಗಳಿವೆ. ಈ ಎಲ್ಲಾ ಪ್ರಭಾವಗಳು ಮೇಲ್ಕಂಡ 10.8 ಜಮೀನನ್ನು ಟಿಡಿಆರ್ ಮೌಲ್ಯದಲ್ಲಿ ವ್ಯವಹಾರ ನಡೆಸಲು ಬಳಕೆಯಾಗಿರುವುದು ಕಂಡುಬರುತ್ತದೆ. ಸದರಿ ಕಡುಪು ಗ್ರಾಮದ 57/ಪಿ ಸರ್ವೆ ನಂಬರಿನ 10.8 ನಂಬರಿನ ಜಮೀನು ಈಗ ನಿಗದಿ ಪಡಿಸಿರುವ ಟಿ.ಡಿ.ಆರ್ ಅಡಿ ಖರೀದಿಸಿದಲ್ಲಿ ನಗರ ಪಾಲಿಕೆಗೆ ಸುಮಾರು ನೂರು ಕೋಟಿ ರೂಪಾಯಿ ಮೌಲ್ಯದಷ್ಟು ನಷ್ಟ ಸಂಭವಿಸುವ ಸಾಧ್ಯತೆ ಇದೆ. ಹಲವು ಬಹುಮಹಡಿ ಕಟ್ಟಡಗಳ ಅನಧಿಕೃತ ನಿರ್ಮಾಣಗಳು ಸಕ್ರಮ ಗೊಳ್ಳಲೂ ಇದು ದುರ್ಬಳಕೆ ಆಗಲಿದೆ.

ಮೇಲಿನ ಪ್ರಕರಣದಲ್ಲಿ ಒಟ್ಟು ಟಿಡಿಆರ್ ಬಗ್ಗೆ ಕೈಗೊಂಡ ನಿರ್ಣಯವೇ ಕಾನೂನು ಬಾಹಿರ ಆಗಿರುತ್ತದೆ. ಸದರಿ ಕಾನೂನು ಬಾಹಿರ ಕಡತಕ್ಕೆ ಸಹಿ ಮಾಡಲು ಹಣದ ಬೇಡಿಕೆ ಇಟ್ಟಿದ್ದರೆ ಅಂತಹ ಅಧಿಕಾರಿಗಳಿಗೆ ಶಿಕ್ಷೆಯಾಗಬೇಕಾಗುತ್ತದೆ.
ಸಾಮಾನ್ಯವಾಗಿ ಕಡತಕ್ಕೆ ಸಹಿ ಮಾಡಲು ವಿಳಂಬ ಮಾಡಿದ, ಹಣದ ಬೇಡಿಕೆ ಇಟ್ಟ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ಕಛೇರಿಗೆ ದೂರು ನೀಡಿದಾಗ ಸದರಿ ಇಲಾಖೆಯ ಸಂಬಂಧಪಟ್ಟ ಅಧಿಕಾರಿಗಳು ಒತ್ತಡಕ್ಕೆ ಒಳಗಾಗಿ ತನ್ನ ಮೇಲಿನ ಆರೋಪದ ಕಾರಣಕ್ಕೆ ಬೆದರಿ ನಿಯಮಗಳಿಗೆ ವಿರುದ್ಧವಾದ ಅಂಶವನ್ನು ಪರಿಗಣಿಸದೆ ಕಡತಕ್ಕೆ ಸಹಿ ಹಾಕುವ ಸಂಭವವಿರುತ್ತದೆ. ಅದಲ್ಲದೆ ಲೋಕಾಯುಕ್ತ ಹಣದ ಬೇಡಿಕೆ ಇಟ್ಟ ಆರೋಪದಲ್ಲಿ ಅಧಿಕಾರಿಯನ್ನು ಬಂಧನಕ್ಕೊಳಪಡಿಸಿದ ಸಂದರ್ಭ ಸದ್ರಿ ಕಡತವು ಆ ಕಾರಣಕ್ಕೆ ಸುಲಭವಾಗಿ ದೂರುದಾರರ ಪರವಾಗಿ ಮಂಜೂರುಗೊಳ್ಳುವ ಸಾಧ್ಯತೆ ಇರುತ್ತದೆ.
ರಾಜಕೀಯವಾಗಿ ಪ್ರಭಾವಿ ವ್ಯಕ್ತಿಯಾದ ಗಿರಿಧರ್ ಶೆಟ್ಟಿಯೂ ಕೂಡ ತಮ್ಮ ಕಾನೂನುಬಾಹಿರ ಕಡತಕ್ಕೆ ಸುಲಭವಾಗಿ ಸಹಿ ಮಾಡಿಕೊಳ್ಳಲು ಲೋಕಾಯುಕ್ತ ಇಲಾಖೆಯನ್ನು ಬಳಸಿಕೊಂಡಿರುವ ಬಗ್ಗೆ ಕೂಡಾ ಸಾರ್ವಜನಿಕ ವಲಯದಲ್ಲಿ ಸಂಶಯವನ್ನು ವ್ಯಕ್ತಪಡಿಸುತ್ತಿದ್ದಾರೆ. ಸದ್ರಿ ಪ್ರಕರಣದಲ್ಲಿ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಕ್ಕೆ ಒಳಗಾಗಿ ಲೋಕಾಯುಕ್ತ ಪೊಲೀಸರಿಂದ ಬಂಧನಕ್ಕೆ ಒಳಗಾದ ಮುಡಾ ಆಯುಕ್ತ ಮನ್ಸೂರ್ ಅಲಿ ಪರವಾಗಿ ದೂರುದಾರ ಗಿರಿಧರ್ ಶೆಟ್ಟಿಯಿಂದ ಲಂಚದ ಹಣ ಪಡೆಯಲು ಬಂದು ಬಂಧಿತನಾದ ಬ್ರೋಕರ್ ಸಲೀಂ ತನ್ನ ಪರವಾದ ವ್ಯಕ್ತಿ, ತನ್ನ ಪರವಾಗಿ ಸಲೀಂ ಆಯುಕ್ತರೊಂದಿಗೆ ವ್ಯವಹಾರ ಕುದುರಿಸಲು ನಿಯೋಜನೆಗೊಂಡಿದ್ದ ಎಂದು ಖುದ್ದು ಗಿರಿಧರ್ ಶೆಟ್ಟಿ ಮಾಧ್ಯಮಗಳಿಗೆ ಹೇಳಿಕೆ ನೀಡಿರುವುದು ಈ ಪ್ರಕರಣದಲ್ಲಿ ನಿಯಮಗಳ ಉಲಂಘನೆ ನಡೆದಿರುವುದು, ಫೈಲ್ ಕ್ಲಿಯರೆನ್ಸ್ ಗೆ ಅಡ್ಡ ದಾರಿ ಹಿಡಿದಿರುವುದಕ್ಕೆ ಸಾಕ್ಷಿ.

ಸದರಿ ಮಂಗಳೂರು ಮಹಾನಗರ ಪಾಲಿಕೆ ಕುಡುಪು ಗ್ರಾಮದ ಸರ್ವೆ ನಂಬ್ರ 57/ಪಿರಲ್ಲಿರುವ 10.8 ಎಕರೆ ಜಾಗಕ್ಕೆ ಟಿಡಿಆರ್ ನೀಡಲು ಮಹಾನಗರ ಪಾಲಿಕೆಯ ನಿರ್ಣಯವೆ ಕಾನೂನು ಬಾಹಿರವಾಗಿರುವುದರಿಂದ ಮಂಗಳೂರು ನಗರಾಭಿವೃದ್ದಿ ಪ್ರಾಧಿಕಾರ ಯಾವುದೇ ಕಾರಣಕ್ಕೂ ಸದ್ರಿ ಟಿ.ಡಿ.ಆರ್ ನೀಡಿಕೆ ಕಡತಕ್ಕೆ ಸಹಿ ಹಾಕದಂತೆ ತಾವುಗಳು ತಡೆಯಬೇಕು, ಬದಲಿಗೆ ಈ ಕಡತದಲ್ಲಿರುವ ಕಾನೂನು, ನಿಯಮಗಳ ಉಲ್ಲಂಘನೆ, ರಿಯಲ್ ಎಸ್ಟೇಟ್ ಲಾಭಿಗಳ ಹಿತಾಸಕ್ತಿ, ನಗರ ಪಾಲಿಕೆಗೆ ಆಗುವ ನಷ್ಟಗಳನ್ನು ಪರಿಗಣಿಸಿ ಮಂಗಳೂರು ನಗರ ಪಾಲಿಕೆ ನಡೆಸಿರುವ ಖರೀದಿ ಒಪ್ಪಂದವನ್ನು ರದ್ದುಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ತಮ್ಮಲ್ಲಿ ಆಗ್ರಹಿಸುತ್ತೇವೆ. ಹಾಗೂ ಈ ಪ್ರಕರಣದಲ್ಲಿ ಹಲವು ನಿಗೂಢ ಅಂಶಗಳೂ, ಟಿ.ಡಿ.ಆರ್ ದುರ್ಬಳಕೆಗಾಗಿ ನಡೆಯುತ್ತಿರುವ ಷಡ್ಯಂತ್ರಗಳನ್ನು ಬಯಲುಗೊಳಿಸಲು, ಭವಿಷ್ಯದಲ್ಲಿ ಇಂತಹ ಅವ್ಯವಹಾರಗಳು ನಡೆಯದಂತೆ ತಡೆಯಲು ಈ ಪ್ರಕರಣವನ್ನು ರಾಜ್ಯ ಸರಕಾರ ತನ್ನ ಯಾವುದಾದರು ವಿಶ್ವಾಸಾರ್ಹ ತನಿಖಾ ಏಜನ್ಸಿ ಮೂಲಕ ಸಮಗ್ರ ತನಿಖೆ ನಡೆಸುವಂತೆ ತಾವು ಶಿಫಾರಸ್ಸು ಮಾಡಬೇಕು ಎಂದು ಜಿಲ್ಲಾಧಿಕಾರಿಗಳಿಗೆ ನೀಡಿದ ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಸಿಪಿಐಎಂ ಜಿಲ್ಲಾ ಸಮಿತಿ ವತಿಯಿಂದ ಚುನಾವಣಾ ತಹಶೀಲ್ದಾರ್ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.ನಿಯೋಗದಲ್ಲಿ ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಸುನೀಲ್ ಕುಮಾರ್ ಬಜಾಲ್ , ಮಂಗಳೂರು ನಗರ ದಕ್ಷಿಣ ಸಮಿತಿ ಕಾರ್ಯದರ್ಶಿ ಸಂತೋಷ್ ಬಜಾಲ್, ನಗರ ಸಮಿತಿ ಸದಸ್ಯರಾದ ಭಾರತೀ ಬೋಳಾರ, ಅಸುಂತ ಡಿಸೋಜ, ಮುಸ್ತಫ ಕಲ್ಲಕಟ್ಟೆ, ಯೋಗಿತಾ ಉಳ್ಳಾಲ, ಸೈಫರ್ ಆಲಿ ಮುಂತಾದವರು ಉಪಸ್ಥಿತರಿದ್ದರು.