ಟಿ.ಡಿ.ಆರ್ ಹಗರಣದಲ್ಲಿ ನಗರದ ಬಿಜೆಪಿ ಶಾಸಕರು ಶಾಸಕರು ಹಾಗೂ ವಿನಾಯಕಾ ಬಾಳಿಗಾ ಕೊಲೆಯ ಸೂತ್ರಧಾರರ ನೆರಳು. ಮನವಿಯಲ್ಲಿ ಆರೋಪ
ನಿಯೋಗದಲ್ಲಿ ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಕೆ ಯಾದವ ಶೆಟ್ಟಿ, ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಮುನೀರ್ ಕಾಟಿಪಳ್ಳ, ಸುನೀಲ್ ಕುಮಾರ್ ಬಜಾಲ್, ವಸಂತ ಆಚಾರಿ, ಜೆ ಬಾಲಕೃಷ್ಣಶೆಟ್ಟಿ, ನಗರ ದಕ್ಷಿಣ ಕಾರ್ಯದರ್ಶಿ ಸಂತೋಷ್ ಬಜಾಲ್ ಮುಂತಾದವರು ಉಪಸ್ಥಿತರಿದ್ದರು.
ರಿಗೆ
ಶ್ರೀ, ದಿನೇಶ್ ಗುಂಡೂರಾವ್
ಉಸ್ತುವಾರಿ ಸಚಿವರು
ದಕ್ಷಿಣ ಕನ್ನಡ ಜಿಲ್ಲೆ
ರಿಂದ
ಸಂತೋಷ್ ಬಜಾಲ್
ಕಾರ್ಯದರ್ಶಿ
ಸಿಪಿಐಎಂ ಮಂಗಳೂರು ನಗರ ದಕ್ಷಿಣ ಸಮಿತಿ
ಮಾನ್ಯರೇ,
ವಿಷಯ: ಕುಡುಪು ಗ್ರಾಮದ ಸರ್ವೆ ನಂಬ್ರ 57/ಪಿರಲ್ಲಿರುವ 10.8 ಎಕರೆ ಜಮೀನು ಟಿ.ಡಿ.ಆರ್ ಅಡಿ ಖರೀದಿಸುವ ಮಂಗಳೂರು ಪಾಲಿಕೆಯ ಒಪ್ಪಂದ ರದ್ದುಗೊಳಿಸಲು, ಹಗರಣದ ಸಮಗ್ರ ತನಿಖೆಗೆ ಅದೇಶಿಸಲು ಕೋರಿ
ಕಳೆದ 23-03-2024ರಂದು ಮಂಗಳೂರಿನ ರಿಯಲ್ ಎಸ್ಟೇಟ್ ವ್ಯವಹಾರಸ್ಧ ಹಾಗೂ ಬಿಲ್ಡರ್ ಆಗಿರುವ ಗಿರಿಧರ್ ಶೆಟ್ಟಿ ಎಂಬವರ ದೂರಿನ ಆಧಾರದಲ್ಲಿ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡ) ಆಯುಕ್ತರಾದ ಮನ್ಸೂರ್ ಅಲಿ ಇವರನ್ನು ೨೫ ಲಕ್ಷ ರೂಪಾಯಿ ಲಂಚದ ಬೇಡಿಕೆ ಇಟ್ಟಿದ್ದಾರೆ ಎಂಬ ಆರೋಪದ ಮೇರೆಗೆ ಬಂಧಿಸಿರುವ ಬಗ್ಗೆ ಮಾಧ್ಯಮದವರ ಮುಖಾಂತರ ತಿಳಿದು ಬಂದಿರುತ್ತದೆ.
ಸದರಿ ಮುಡ ಆಯುಕ್ತರಾದ ಮನ್ಸೂರ್ ಅಲಿರವರ ಬಂಧನವು ಕುಡುಪು ಗ್ರಾಮದ ಸರ್ವೆ ನಂಬ್ರ 57/ಪಿ ರಲ್ಲಿನ ಒಟ್ಟು 10.8 ಎಕರೆ ಜಮೀನನ್ನು ಮಹಾನಗರ ಪಾಲಿಕೆಗೆ ವರ್ಗಾವಣೆ ಮಾಡಿರುವ ಜಮೀನಿನ ಮೌಲ್ಯದ ಬದಲಾಗಿ ಅದರ ಮೌಲ್ಯವನ್ನು ಟಿಡಿಆರ್ ಸರ್ಟಿಫಿಕೇಟ್ ಮೂಲಕ ನೀಡಲು ಮಹಾನಗರ ಪಾಲಿಕೆ ಒಪ್ಪಿಕೊಂಡಿದ್ದು ಅದರಂತೆ ಟಿಡಿಆರ್ ಸರ್ಟಿಫಿಕೆಟನ್ನು ನೀಡಲು ಮುಡ ಆಯುಕ್ತರಿಗೆ ನಿರ್ದೇಶಿಸಿ ಅದರ ಕಡತವನ್ನು ವರ್ಗಾವಣೆ ಮಾಡಿದ್ದಾಗಿಯೂ ಆ ಕಡತವು ಫೆಬ್ರವರಿ 2024ರಿಂದ ಮುಡ ಆಯುಕ್ತರ ಕಛೇರಿಯಲ್ಲಿ ಇರುವುದಾಗಿಯೂ ಸದರಿ ಕಡತಕ್ಕೆ ಸಹಿ ಮಾಡಲು ಮುಡ ಆಯುಕ್ತರಾದ ಮನ್ಸೂರ್ ಅಲಿರವರು 25 ಲಕ್ಷ ರೂಪಾಯಿ ಲಂಚದ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಿ ಲೋಕಾಯುಕ್ತಕ್ಕೆ ದೂರು ದಾಖಲಿಸಿದ್ದರು ವರದಿಯಾಗಿರುತ್ತದೆ. ಆ ನಂತರ ಕೇಳಿಬಂದ ಮಾಹಿತಿ ಪ್ರಕಾರ, ಸದ್ರಿ ಟಿಡಿಆರ್ ಫೈಲ್ ನಲ್ಲಿ ನಿಯಮಗಳ ಉಲ್ಲಂಘನೆ ಇರುವುದರಿಂದ ಆಯುಕ್ತ ಮನ್ಸೂರ್ ಅಲಿ ಮೇಲ್ಕಂಡ ಫೈಲ್ ಅನ್ನು ಸರಾಕಾರಕ್ಕೆ ಹಿಂತಿರುಗಿಸಲು ಬಯಸಿದ್ದರು ಎನ್ನಲಾಗಿದೆ.
ಟಿಡಿಆರ್ ವಿಚಾರವಾಗಿ ಮಂಗಳೂರಿನಲ್ಲಿ ಈಗಾಗಲೇ ಭೂ ವ್ಯವಹಾರ ಮಾಡುವ ವ್ಯಕ್ತಿಗಳು ದುರುಪಯೋಗ ಪಡಿಸಿಕೊಳ್ಳುವ ಬಗ್ಗೆ ಹಲವು ದೂರುಗಳು ಕೇಳಿ ಬಂದಿವೆ. ಸಾಮಾನ್ಯವಾಗಿ ಸ್ಧಳೀಯ ಸರ್ಕಾರಿ ಸಂಸ್ಥೆಗಳು ಸಾರ್ವಜನಿಕರಿಗೆ ಅತಿ ಅವಶ್ಯಕವಾಗಿ ಮಾಡಬೇಕಾಗಿರುವ ಕೆಲಸ ರಸ್ತೆ, ಚರಂಡಿ ಮುಂತಾದ ಮೂಲಭೂತ ಸೌಕರ್ಯಗಳಿಗೆ ಸಂಬಂಧಪಟ್ಟ ಯೋಜನೆಗಳನ್ನು ಕಾರ್ಯಗತಗೊಳಿಸುವಾಗ ಸರ್ಕಾರದ ಯೋಜನೆಗಳು ವಿಳಂಬವಾಗಬಾರದೆಂಬ ಕಾರಣಕ್ಕೆ ಮತ್ತು ಯೋಜನೆಗಳಿಗೆ ಅಗತ್ಯವಾದ ಸಣ್ಣಪುಟ್ಟ ಜಮೀನುಗಳನ್ನು ಸ್ವಾಧೀನ ಪಡಿಸಿಕೊಳ್ಳುವಾಗ ಭೂಮಾಲಿಕರಿಗೆ ತೊಂದರೆಯಾಗಬಾರದೆನ್ನುವ ಕಾರಣಗಳಿಂದ ಟಿ.ಡಿ.ಆರ್ ನೀಡಿ ಭೂಸ್ವಾಧೀನ ನಡೆಸುತ್ತವೆ. ಸಂತ್ರಸ್ತರು ಭೂಮಿಯನ್ನು ಅಭಿವೃಧಿ ಪಡಿಸುವ ಸಮಯ ಅನುಕೂಲ ಒದಗಿಸಿ ಕೊಡುವ ಸಲುವಾಗಿ ಅವರಿಗೆ ಟಿಡಿಆರ್ ನೀಡಿ, ಅವರಿಂದ ಸ್ವಾಧೀನ ಪಡಿಸಿಕೊಂಡ ಜಮೀನಿನ ಮೌಲ್ಯಕ್ಕೆ ನಷ್ಟವಾಗದಂತೆ ನ್ಯಾಯವನ್ನು ಒದಗಿಸಿಕೊಡಲು ಆ ಮೂಲಕ ಪ್ರಯತ್ನಿಸಲಾಗುತ್ತದೆ.

ಆದರೆ ಕುಡುಪು ಗ್ರಾಮದ ಸರ್ವೆ ನಂಬ್ರ 57/ಪಿರಲ್ಲಿರುವ 10.8 ಎಕರೆ ವಿಸ್ತೀರ್ಣದ ಜಮೀನಿನ ಮಂಗಳೂರು ಮಹಾನಗರ ಪಾಲಿಕೆ ಸ್ವಾಧೀನ ಪಡಿಸಿಕೊಂಡು ಆ ಭೂಮಿಯ ಹಣದ ಮೌಲ್ಯದ ಬದಲಾಗಿ ಭೂಮಾಲಿಕರಿಗೆ ಟಿಡಿಆರ್ ಸರ್ಟಿಫಿಕೇಟ್ ಕೊಡಲು ಮಾಡಿಕೊಂಡ ಒಪ್ಪಂದ ಮತ್ತು ನಿರ್ಧಾರಗಳು ಟಿಡಿಆರ್ ನಿಯಮಾವಳಿಯ ಮೂಲ ಉದ್ದೇಶಕ್ಕೆ ವಿರುದ್ದವಾಗಿರುತ್ತದೆ ಮತ್ತು ಇದು ಮಂಗಳೂರು ಮಹಾನಗರ ಪಾಲಿಕೆಯ ಕಾನೂನುಬಾಹಿರ ನಡೆಯಾಗಿರುತ್ತದೆ.
ಮೇಲಿನ ಪ್ರಕರಣದಲ್ಲಿ ಕಂಡುಬರುವ ಇನ್ನೊಂದು ಪ್ರಮುಖ ವಿಚಾರವೇನೆಂದರೆ ಸದ್ರಿ ಭೂಮಿಯ ಟಿಡಿಆರ್ಗಾಗಿ ಮತ್ತು ಆ ಕಡತದ ವಿಲೇವಾರಿಗಾಗಿ ಮುಡ ಆಯುಕ್ತರನ್ನು ವಿನಂತಿಸಿರುವ ವ್ಯಕ್ತಿ ಗಿರಿಧರ ಶೆಟ್ಟಿ ಎಂಬವರಾಗಿದ್ದು ಈತನು ಮಂಗಳೂರಿನಲ್ಲಿ ಭೂ ವ್ಯವಹಾರವನ್ನು ವೃತ್ತಿಪರವಾಗಿ ನಡೆಸುವ ವ್ಯಕ್ತಿಯಾಗಿರುತ್ತಾರೆ.
ಸದರಿ ಗಿರಿಧರ್ ಶೆಟ್ಟಿ “ಈ ಮೇಲ್ಕಂಡ ಜಮೀನಿನ ಮೂಲ ಮಾಲಿಕರಿಂದ ಭೂ ವ್ಯವಹಾರ ಬಗ್ಗೆ ಒಪ್ಪಂದ ಮಾಡಿಕೊಂಡಿರುತ್ತೇನೆ. ಸದ್ರಿ ಭೂಮಿಯ ಟಿಡಿಆರ್ ಅನ್ನು ತನ್ನ ಪರವಾಗಿ ನೀಡಬೇಕು” ಎಂದು ಬೇಡಿಕೆ ಇಟ್ಟಿರುವುದು ನಿಯಮಬದ್ಧವಾಗಿರುವುದಿಲ್ಲ. ಟಿಡಿಆರ್ ನಿಯಮದಲ್ಲಿ ಮೂಲ ಮಾಲಕನ ಬದಲಿಗೆ ಮಧ್ಯವರ್ತಿ, ಜಮೀನಿನ ಎಗ್ರಿಮೆಂಟ್ ಹೋಲ್ಡರ್ನೊಂದಿಗೆ ವ್ಯವಹಾರ ಕುದುರಿಸಲು ಅವಕಾಶವಿರುವುದಿಲ್ಲ. ನಿಯಮಗಳು ಇದನ್ನು ಒಪ್ಪುವುದಿಲ್ಲ.
ನಮಗೆ ತಿಳಿದು ಬಂದಿರುವ ವಿಚಾರವೇನೆಂದರೆ ಗಿರಿಧರ್ ಶೆಟ್ಟಿ ಮೂಲ ಮಾಲೀಕರೋಂದಿಗೆ 7 ಕೋಟಿ ರೂಪಾಯಿ ಮೌಲ್ಯಕ್ಕೆ ಜಮೀನು ಖರೀದಿಸುವ ಕುರಿತು ಮಾತುಕತೆ ನಡೆಸಿ 1 ಕೋಟಿ ರೂಪಾಯಿ ಮುಂಗಡ ನೀಡಿ ಎಗ್ರಿಮೆಂಟ್ ಮಾಡಿಕೊಂಡಿರುತ್ತಾರೆ. ಈಗ ಮಂಗಳೂರು ನಗರ ಪಾಲಿಕೆ ಗಿರಿಧರ್ ಶೆಟ್ಟಿಗೆ ನೀಡಲು ಒಪ್ಪಿಕೊಂಡಿರುವ ಟಿಡಿಆರ್ನ ಮಾರುಕಟ್ಟೆ ಮೌಲ್ಯ ಸುಮಾರು 50 ಕೋಟಿ ಎನ್ನಲಾಗಿದೆ. ಈ ಟಿಡಿಆರ್ನನ್ನು ರಾಜಕೀಯ ವ್ಯಕಿಗಳು, ಪ್ರಭಾವಿ ಬಿಲ್ಡರ್ ಗಳು ಮಾಡಿಕೊಂಡಿರುವ ಬೇನಾಮಿ ಹೂಡಿಕೆಯ ಕಟ್ಟಡಗಳಿಗೆ ಬಳಸಲು ಯೋಜನೆ ಹಾಕಿಕೊಂಡಿದ್ದಾರೆ ಎಂಬ ಚರ್ಚೆಗಳು ನಗರದಲ್ಲಿ ನಡೆಯುತ್ತಿದೆ. ಗಿರಿಧರ್ ಶೆಟ್ಟಿಗೆ ಬಹಳಷ್ಟು ಪ್ರಭಾವಿ ರಾಜಕಾರಣಿಗಳು ಹಾಗೂ ಜನಪ್ರತಿನಿಧಿಗಳ ಒಡನಾಟ ಇದೆ, ಸ್ಥಳೀಯ ಬಿಜೆಪಿ ಶಾಸಕರಾದ ವೇದವ್ಯಾಸ ಕಾಮತರು ದೂರುದಾರ ರಿಯಲ್ ಎಸ್ಟೇಟ್ ಉದ್ಯಮಿ ಗಿರಿಧರ್ ಶೆಟ್ಟಿಯ ಅತ್ಯಾಪ್ತರು ಎಂಬುದು ಮಂಗಳೂರಿನಲ್ಲಿ ಎಲ್ಲರಿಗೂ ತಿಳಿದಿರುವ ವಿಚಾರ. ಸದ್ರಿ ಟಿ.ಡಿ.ಆರ್ ಫೈಲ್ ಗೆ ಸಹಿ ಹಾಕುವ ಸಂಬಂಧ ಶಾಸಕ ವೇದವ್ಯಾಸ ಕಾಮತ್ ಮುಡಾ ಆಯುಕ್ತ ಮನ್ಸೂರ್ ಅಲಿಯವರನ್ನು ನಗರದ ಸರ್ಕ್ಯೂಟ್ ಹೌಸಿಗೆ ಕರೆಸಿ “ಈ ಫೈಲ್ ನನಗೆ ನೇರವಾಗಿ ಸಂಬಂಧಿಸಿದ್ದು , ತಕರಾರು ಎತ್ತದೆ ಸಹಿ ಹಾಕಬೇಕು” ಎಂದು ಒತ್ತಡ, ಬೆದರಿಕೆ ಹಾಕಿದ್ದರು ಎಂಬುದಾಗಿ ಬಹಳಷ್ಟು ಚರ್ಚೆಯಾಗುತ್ತಿದೆ. (ಈ ಕುರಿತು ಭೇಟಿಯ ಸಮಯದ ಸರ್ಕ್ಯೂಟ್ ಹೌಸ್ ನ ಸಿ ಸಿ ಕೆಮೆರಾ ಫೂಟೇಜ್ ಪರಿಶೀಲಿಸುವುದು) ಜೊತೆಗೆ, RTI ಕಾರ್ಯಕರ್ತ ವಿನಾಯಕ ಬಾಳಿಗಾ ಕೊಲೆಯ ಸೂತ್ರಧಾರರು ಎಂದು ಆರೋಪ ಹೊತ್ತಿರುವ ಅತ್ಯಂತ ಪ್ರಭಾವಿ ಕ್ರಿಮಿನಲ್ ಗುಂಪುಗಳ ಒಡನಾಟವೂ ದೂರುದಾರರಿಗೆ ಇರುವುದು ಈ ಪ್ರಕರಣದಲ್ಲಿ ಸಾಮಾನ್ಯ ದೃಷ್ಟಿಗೆ ಮೀರಿದ ಹಗರಣ ನಡೆದಿರುವ ಸಾಧ್ಯತೆಯನ್ನು ಪುಷ್ಟೀಕರಿಸುತ್ತದೆ.
ಇವರು ಖರೀದಿಸಲು ಒಪ್ಪಂದ ಮಾಡಿಕೊಂಡಿರುವ ಸದರಿ ಜಮೀನಿನಲ್ಲಿ ಅಂತಹ ರಾಜಕೀಯ ನಾಯಕರುಗಳ, ತೋಳ್ಬಲದ ಪ್ರಭಾವಿ ಗುಂಪುಗಳ ಹೂಡಿಕೆ ಇರುವ ಸಾಧ್ಯತೆಗಳಿವೆ. ಈ ಎಲ್ಲಾ ಪ್ರಭಾವಗಳು ಮೇಲ್ಕಂಡ 10.8 ಜಮೀನನ್ನು ಟಿಡಿಆರ್ ಮೌಲ್ಯದಲ್ಲಿ ವ್ಯವಹಾರ ನಡೆಸಲು ಬಳಕೆಯಾಗಿರುವುದು ಕಂಡುಬರುತ್ತದೆ. ಸದರಿ ಕಡುಪು ಗ್ರಾಮದ 57/ಪಿ ಸರ್ವೆ ನಂಬರಿನ 10.8 ನಂಬರಿನ ಜಮೀನು ಈಗ ನಿಗದಿ ಪಡಿಸಿರುವ ಟಿ.ಡಿ.ಆರ್ ಅಡಿ ಖರೀದಿಸಿದಲ್ಲಿ ನಗರ ಪಾಲಿಕೆಗೆ ಸುಮಾರು ನೂರು ಕೋಟಿ ರೂಪಾಯಿ ಮೌಲ್ಯದಷ್ಟು ನಷ್ಟ ಸಂಭವಿಸುವ ಸಾಧ್ಯತೆ ಇದೆ. ಹಲವು ಬಹುಮಹಡಿ ಕಟ್ಟಡಗಳ ಅನಧಿಕೃತ ನಿರ್ಮಾಣಗಳು ಸಕ್ರಮ ಗೊಳ್ಳಲೂ ಇದು ದುರ್ಬಳಕೆ ಆಗಲಿದೆ.
ಮೇಲಿನ ಪ್ರಕರಣದಲ್ಲಿ ಒಟ್ಟು ಟಿಡಿಆರ್ ಬಗ್ಗೆ ಕೈಗೊಂಡ ನಿರ್ಣಯವೇ ಕಾನೂನು ಬಾಹಿರ ಆಗಿರುತ್ತದೆ.
ರಾಜಕೀಯವಾಗಿ ಪ್ರಭಾವಿ ವ್ಯಕ್ತಿಯಾದ ಗಿರಿಧರ್ ಶೆಟ್ಟಿಯೂ ಕೂಡ ತಮ್ಮ ಕಾನೂನುಬಾಹಿರ ಕಡತಕ್ಕೆ ಸುಲಭವಾಗಿ ಸಹಿ ಮಾಡಿಕೊಳ್ಳಲು ಲೋಕಾಯುಕ್ತ ಇಲಾಖೆಯನ್ನು ಬಳಸಿಕೊಂಡಿರುವ ಬಗ್ಗೆ ಕೂಡಾ ಸಾರ್ವಜನಿಕ ವಲಯದಲ್ಲಿ ಸಂಶಯವನ್ನು ವ್ಯಕ್ತಪಡಿಸುತ್ತಿದ್ದಾರೆ. ಸದ್ರಿ ಪ್ರಕರಣದಲ್ಲಿ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಕ್ಕೆ ಒಳಗಾಗಿ ಲೋಕಾಯುಕ್ತ ಪೊಲೀಸರಿಂದ ಬಂಧನಕ್ಕೆ ಒಳಗಾದ ಮುಡಾ ಆಯುಕ್ತ ಮನ್ಸೂರ್ ಅಲಿ ಪರವಾಗಿ ದೂರುದಾರ ಗಿರಿಧರ್ ಶೆಟ್ಟಿಯಿಂದ ಲಂಚದ ಹಣ ಪಡೆಯಲು ಬಂದು ಬಂಧಿತನಾದ ಬ್ರೋಕರ್ ಸಲೀಂ “ತನ್ನ ಪರವಾದ ವ್ಯಕ್ತಿ, ತನ್ನ ಪರವಾಗಿ ಸಲೀಂ ಆಯುಕ್ತರೊಂದಿಗೆ ವ್ಯವಹಾರ ಕುದುರಿಸಲು ನಿಯೋಜನೆಗೊಂಡಿದ್ದ” ಎಂದು ಖುದ್ದು ಗಿರಿಧರ್ ಶೆಟ್ಟಿ ಮಾಧ್ಯಮಗಳಿಗೆ ಹೇಳಿಕೆ ನೀಡಿರುವುದು ಈ ಪ್ರಕರಣದಲ್ಲಿ ನಿಯಮಗಳ ಉಲಂಘನೆ ನಡೆದಿರುವುದು, ಫೈಲ್ ಕ್ಲಿಯರೆನ್ಸ್ ಗೆ ಅಡ್ಡ ದಾರಿ ಹಿಡಿದಿರುವುದಕ್ಕೆ ಸಾಕ್ಷಿ.
ಸದರಿ ಮಂಗಳೂರು ಮಹಾನಗರ ಪಾಲಿಕೆ ಕುಡುಪು ಗ್ರಾಮದ ಸರ್ವೆ ನಂಬ್ರ 57/ಪಿರಲ್ಲಿರುವ 10.8 ಎಕರೆ ಜಾಗಕ್ಕೆ ಟಿಡಿಆರ್ ನೀಡಲು ಮಹಾನಗರ ಪಾಲಿಕೆಯ ನಿರ್ಣಯವೆ ಕಾನೂನು ಬಾಹಿರವಾಗಿರುವುದರಿಂದ ಮಂಗಳೂರು ನಗರಾಭಿವೃದ್ದಿ ಪ್ರಾಧಿಕಾರ ಯಾವುದೇ ಕಾರಣಕ್ಕೂ ಸದ್ರಿ ಟಿ.ಡಿ.ಆರ್ ನೀಡಿಕೆ ಕಡತಕ್ಕೆ ಸಹಿ ಹಾಕದಂತೆ ತಾವುಗಳು ತಡೆಯಬೇಕು, ಬದಲಿಗೆ ಈ ಕಡತದಲ್ಲಿರುವ ಕಾನೂನು, ನಿಯಮಗಳ ಉಲ್ಲಂಘನೆ, ರಿಯಲ್ ಎಸ್ಟೇಟ್ ಲಾಭಿಗಳ ಹಿತಾಸಕ್ತಿ, ನಗರ ಪಾಲಿಕೆಗೆ ಆಗುವ ನಷ್ಟಗಳನ್ನು ಪರಿಗಣಿಸಿ ಮಂಗಳೂರು ನಗರ ಪಾಲಿಕೆ ನಡೆಸಿರುವ ಖರೀದಿ ಒಪ್ಪಂದವನ್ನು ರದ್ದುಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ತಮ್ಮಲ್ಲಿ ಆಗ್ರಹಿಸುತ್ತೇವೆ. ಹಾಗೂ ಈ ಪ್ರಕರಣದಲ್ಲಿ ಹಲವು ನಿಗೂಢ ಅಂಶಗಳೂ, ಟಿ.ಡಿ.ಆರ್ ದುರ್ಬಳಕೆಗಾಗಿ ನಡೆಯುತ್ತಿರುವ ಷಡ್ಯಂತ್ರಗಳನ್ನು ಬಯಲುಗೊಳಿಸಲು, ಭವಿಷ್ಯದಲ್ಲಿ ಇಂತಹ ಅವ್ಯವಹಾರಗಳು ನಡೆಯದಂತೆ ತಡೆಯಲು ಈ ಪ್ರಕರಣವನ್ನು ರಾಜ್ಯ ಸರಕಾರ ತನ್ನ ಯಾವುದಾದರು ವಿಶ್ವಾಸಾರ್ಹ ತನಿಖಾ ಏಜನ್ಸಿ ಮೂಲಕ ಸಮಗ್ರ ತನಿಖೆ ನಡೆಸುವಂತೆ ತಾವು ಕ್ರಮ ವಹಿಸಬೇಕು ಎಂದು ಮನವಿ ಮಾಡುತ್ತಿದ್ದೇವೆ.
