ಬಿಎಂಐ (ಬೊಜ್ಜು) ಪ್ರಮಾಣ ಹೆಚ್ಚಿದೆ ಎಂಬ ಕಾರಣಕ್ಕೆ ಒಂದು ಕೇಂದ್ರದಿಂದ ಮತ್ತೊಂದು ಕೇಂದ್ರಕ್ಕೆ ಪೊಲೀಸ್ ಸಿಬ್ಬಂದಿಗಳ ವರ್ಗಾವಣೆ

ರಾಜ್ಯ

ಬೊಜ್ಜು ಕರಗಿಸಲು ಪೊಲೀಸರಿಗೆ ಟಾಸ್ಕ್

ಬಿಎಂಐ (ಬಾಡಿ ಮಾಸ್ ಇಂಡೆಕ್ಸ್) ಪ್ರಮಾಣ ಶೇಕಡಾ 29 ಕ್ಕಿಂತ ಹೆಚ್ಚಿದೆ ಎಂಬ ಕಾರಣಕ್ಕೆ ಒಂದು ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದವರನ್ನು ಮತ್ತೊಂದು ಕೇಂದ್ರಕ್ಕೆ ವರ್ಗಾವಣೆ ಮಾಡಲಾಗಿದೆ. ಕಲಬುರಗಿ ಪೊಲೀಸ್ ತರಬೇತಿ ಮಹಾವಿದ್ಯಾಲಯ, ಮೈಸೂರಿನ ಕರ್ನಾಟಕ ಪೊಲೀಸ್ ಅಕಾಡೆಮಿ, ಕಡೂರು, ಐಮಂಗಲ, ಖಾನಾಪುರ, ಮೈಸೂರು, ಬೆಂಗಳೂರು, ಧಾರವಾಡ, ಥಣಿಸಂದ್ರ, ಯಲಹಂಕ, ಹಾಸನದ ಪೊಲೀಸ್ ತರಬೇತಿ ಶಾಲೆಗಳ ಪ್ರಾಂಶುಪಾಲರು, ತರಬೇತಿ ಅಧಿಕಾರಿಗಳು ಹಾಗೂ ಇತರ ಪೊಲೀಸ್ ಸಿಬ್ಬಂದಿಯನ್ನು ಪರಸ್ಪರ ವರ್ಗಾವಣೆ ಮಾಡಲಾಗಿದೆ.

ಪೊಲೀಸ್ ತರಬೇತಿ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಲೋಕ್ ಕುಮಾರ್ ಅಧ್ಯಕ್ಷತೆಯಲ್ಲಿ ಏಪ್ರಿಲ್ 30 ರಂದು ನಡೆದ ಸಭೆಯ ನಿರ್ಧಾರದಂತೆ ಮೇ 2 ರಂದು ಸಿಬ್ಬಂದಿ ಎತ್ತಂಗಡಿಗೆ ಲಿಖಿತ ನಿರ್ದೇಶನ ನೀಡಲಾಗಿದೆ. ನಿಯೋಜಿಸಿದ ಮತ್ತೊಂದು ತರಬೇತಿ ಕೇಂದ್ರದಲ್ಲಿ ತಕ್ಷಣಕ್ಕೆ ಕರ್ತವ್ಯಕ್ಕೆ ಹಾಜರಾಗಲು ಸೂಚಿಸಲಾಗಿದೆ. ದೇಹದ ತೂಕ ಹಾಗೂ ಸ್ಥೂಲಕಾಯ ಕಡಿಮೆ ಮಾಡಿಕೊಂಡ ಪ್ರಮಾಣಪತ್ರ ಒದಗಿಸಿದ ನಂತರ ಮರಳಿ ಮೂಲ ಸ್ಥಳಕ್ಕೆ ಹಾಜರಾಗಲು ಈ ಸಿಬ್ಬಂದಿಗೆ ಅವಕಾಶ ಕಲ್ಪಿಸಲಾಗಿದೆ.

‘ಬಿಎಂಐ ಪ್ರಮಾಣ ತಗ್ಗಿಸುವುದು ಆರೋಗ್ಯಕ್ಕೆ ಒಳ್ಳೆಯದೇ ಆದರೂ ಡಿಢೀರ್ ಇಳಿಕೆ ಮಾಡುವುದು ಜೀವಕ್ಕೆ ಅಪಾಯ. ಸ್ಥೂಲಕಾಯ ಅನ್ನುವುದು ಜೀವನಶೈಲಿಯ ಬದಲಾವಣೆ. ಆಹಾರ ಸೇವನೆಯ ಹವ್ಯಾಸದಿಂದಷ್ಟೇ ಬರುವುದಿಲ್ಲ. ಅನುವಂಶಿಕವಾಗಿಯೂ ಬರುತ್ತದೆ. ಸದಾ ಕೆಲಸದ ಒತ್ತಡ, ಸಮಯಕ್ಕೆ ಸರಿಯಾಗಿ ನಿದ್ದೆ ಮಾಡದ, ಆಹಾರ ಸೇವಿಸದ ಪೊಲೀಸರಲ್ಲಿ ಬಿಎಂಐ ಪ್ರಮಾಣ ಏರಿಳಿತ ಸಹಜವಾಗಿರುತ್ತದೆ. ಇಂತಹ ವಿಷಯಗಳಲ್ಲಿ ಮಾರ್ಗದರ್ಶನ ನೀಡಲು ವೈದ್ಯರನ್ನು ನೇಮಕ ಮಾಡಬೇಕು. ಅವರ ಸೂಚನೆಯಂತೆ ಕಡಿಮೆ ಮಾಡಿಕೊಳ್ಳಲು ಸಹಕಾರ ನೀಡಬೇಕು. ಅದು ಬಿಟ್ಟು ಡಿಢೀರ್ ವರ್ಗಾವಣೆ ಶಿಕ್ಷೆ ನೀಡಿದರೆ ಓದುವ ಮಕ್ಕಳು, ಸಂಸಾರ ಬಿಟ್ಟು ಹೇಗೆ ದೂರದ ಊರಿಗೆ ಹೋಗಬೇಕು.

‘ಪೊಲೀಸ್ ನಿಯಮಗಳು ಎಲ್ಲಾ ಪೊಲೀಸರಿಗೂ ಅನ್ವಯವಾಗಬೇಕು. ಆದರೆ, ತರಬೇತಿ ಕೇಂದ್ರಗಳ ಅಧಿಕಾರಿಗಳು, ಸಿಬ್ಬಂದಿಗಷ್ಟೇ ಇಂತಹ ನಿಯಮ ಜಾರಿ ಏಕೆ? ಶೇಕಡಾ 70 ಕ್ಕಿಂತ ಹೆಚ್ಚು ಪೊಲೀಸರಲ್ಲಿ ಬಿಐಎಂ ಪ್ರಮಾಣ 30 ಕ್ಕಿಂತ ಹೆಚ್ಚಿದೆ. ಐಪಿಎಸ್ ಅಧಿಕಾರಿಗಳೂ ಇದ್ದಾರೆ. ಚುನಾವಣಾ ಕೆಲಸದಲ್ಲಿರುವಾಗಲೇ ಇಂತಹ ಸೂಚನೆ ಬೇಸರ ತರಿಸಿದೆ’ ಎನ್ನುತ್ತಾರೆ ಪೊಲೀಸ್ ಸಿಬ್ಬಂದಿಗಳು.