ಪುತ್ತೂರು: ಅಕ್ರಮ ಗೋಸಾಗಾಟ ಪ್ರಕರಣದ ಆರೋಪಿ ಶಿವಪ್ರಸಾದ್ ಎಂಬಾತನ ಮನೆ, ಕೊಟ್ಟಿಗೆ ಜಪ್ತಿ

ಕರಾವಳಿ

ಇತ್ತೀಚೆಗೆ ಪಿಕಪ್ ವಾಹನವೊಂದರಲ್ಲಿ ಕೇರಳದ ಕಡೆಗೆ ಜಾನುವಾರುಗಳನ್ನು ಅಕ್ರಮ ಸಾಗಾಟ ಮಾಡುತ್ತಿರುವ ಬಗ್ಗೆ ಪುತ್ತೂರು ಗ್ರಾಮಾಂತರ ಪೊಲೀಸರು ಪುತ್ತೂರು ಬಲ್ನಾಡು ಗ್ರಾಮದ ಬಿಳಿಯೂರುಕಟ್ಟೆ ಎಂಬಲ್ಲಿ, KA-19-AF-8558 ನೊಂದಣಿಯ ಪಿಕಪ್ ವಾಹನವನ್ನು ಬೆನ್ನಟ್ಟಿ ತಡೆದು ನಿಲ್ಲಿಸಿದ ಸಂದರ್ಭದಲ್ಲಿ ವಾಹನದ ಚಾಲಕ ಹಾಗೂ ವಾಹನದಲ್ಲಿದ್ದ ಮತ್ತೋರ್ವ ವ್ಯಕ್ತಿ ವಾಹನದಿಂದ ಜಿಗಿದು ಪರಾರಿಯಾಗಿದ್ದರು.

ಯಾವುದೇ ದಾಖಲೆ ಪತ್ರಗಳಿಲ್ಲದೆ ಜಾನುವಾರುಗಳನ್ನು ಅಕ್ರಮವಾಗಿ ಸಾಗಿಸಿ, ಮಾಂಸ ಮಾಡಿ ಮಾರಾಟ ಮಾಡುವ ಉದ್ದೇಶದಿಂದ ಕೇರಳದ ಕಡೆಗೆ ಸಾಗಾಟ ಮಾಡುತ್ತಿರುವುದು ದೃಢಪಟ್ಟಿದ್ದು, ಈ ಬಗ್ಗೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ.ಕ್ರ ನಂಬ್ರ 125/2026, ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದರು.

ಇದೀಗ ಪ್ರಕರಣಕ್ಕೆ ಸಂಬಂಧಿಸಿ ತನ್ನ ಮನೆಯಲ್ಲಿದ್ದ ಜಾನುವಾರುಗಳನ್ನು ಅಗತ್ಯ ದಾಖಲೆಪತ್ರಗಳನ್ನು ಪಡೆಯದೇ ಅಕ್ರಮವಾಗಿ ಮಾರಾಟ ಮಾಡಿದ ಹಿನ್ನೆಲೆಯಲ್ಲಿ ಆರೋಪಿತ ಶಿವಪ್ರಸಾದ್ ಎಂಬಾತನ ಮನೆ, ಕೊಟ್ಟಿಗೆ ಪರಿಸರವನ್ನು ನಿಯಮಾನುಸಾರ ಕ್ರಮಕೈಗೊಂಡು ಪುತ್ತೂರು ಗ್ರಾಮಾಂತರ ಪೊಲೀಸರು ದಿನಾಂಕ: 08.10.2026 ಜಪ್ತಿ ಮಾಡಿರುತ್ತಾರೆ.