ಅಮೆರಿಕದ ಮಧ್ಯಂತರ ಚುನಾವಣೆಯ ಆರಂಭಿಕ ಫಲಿತಾಂಶ: ಡೆಮಾಕ್ರಟಿಕ್ ಪಕ್ಷ ಮುನ್ನಡೆ; ಟ್ರಂಪ್ ಗೆ ದೊಡ್ಡ ರಾಜಕೀಯ ಹಿನ್ನಡೆ

ಅಂತಾರಾಷ್ಟ್ರೀಯ

ಅಮೆರಿಕದ ಮಧ್ಯಂತರ ಚುನಾವಣೆಯ ಆರಂಭಿಕ ಫಲಿತಾಂಶಗಳಲ್ಲಿ ಡೆಮಾಕ್ರಟಿಕ್ ಪಕ್ಷ ನಿನ್ನೆ ಮಂಗಳವಾರ ಸೆನೆಟ್‌ನ ಒಂದು ಸ್ಥಾನವನ್ನು ರಿಪಬ್ಲಿಕನ್ ಪಕ್ಷದಿಂದ ತನ್ನ ತೆಕ್ಕೆಗೆ ಪಡೆದುಕೊಂಡಿದೆ. ಈ ಬೆಳವಣಿಗೆ ಯುಎಸ್ ಕಾಂಗ್ರೆಸ್ ನ ಎರಡೂ ಸದನಗಳ ಮೇಲೆ ನಿಯಂತ್ರಣ ಸಾಧಿಸುವ ಡೆಮಾಕ್ರಟಿಕ್ ಪಕ್ಷದ ಪ್ರಯತ್ನಕ್ಕೆ ಮತ್ತಷ್ಟು ಬಲ ನೀಡಿದೆ. ಇದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ದೊಡ್ಡ ರಾಜಕೀಯ ಹಿನ್ನಡೆಯಾಗುವ ಸಾಧ್ಯತೆಯಿದೆ.

ಉತ್ತರ ಕೆರೊಲಿನಾದಲ್ಲಿ ಡೆಮಾಕ್ರಟಿಕ್ ಪಕ್ಷದ ಜನಪ್ರಿಯ ಮಾಜಿ ಗವರ್ನರ್ ರಾಯ್ ಕೂಪರ್, ಸೆನೆಟ್ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಬೆಂಬಲದೊಂದಿಗೆ ಕಣಕ್ಕಿಳಿದಿದ್ದ ಅಭ್ಯರ್ಥಿಯನ್ನು ಸೋಲಿಸಿದ್ದಾರೆ. ಇದೇ ವೇಳೆ ಜಾರ್ಜಿಯಾದಲ್ಲಿ ಡೆಮಾಕ್ರಟಿಕ್ ಪಕ್ಷದ ಯುವ ನಾಯಕ ಜಾನ್ ಒಸಾಫ್ ಅವರು ಸೆನೆಟ್‌ಗೆ ಮರು ಆಯ್ಕೆಯಾಗಿದ್ದಾರೆ ಎಂದು ಮಾಧ್ಯಮಗಳ ಚುನಾವಣಾ ಫಲಿತಾಂಶದ ಅಂದಾಜುಗಳು ತಿಳಿಸಿವೆ. ಆರಂಭಿಕ ಗೆಲುವು ಕಾಂಗ್ರೆಸ್‌ನ ಎರಡೂ ಸದನಗಳನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳುವ ಡೆಮಾಕ್ರಟಿಕ್ ಪಕ್ಷದ ನಿರೀಕ್ಷೆಯನ್ನು ಹೆಚ್ಚಿಸಿವೆ.

ಡೊನಾಲ್ಡ್ ಟ್ರಂಪ್ ಅಧಿಕಾರಕ್ಕೆ ಬಂದ ಎರಡು ವರ್ಷಗಳ ಆಡಳಿತದ ಏರಿಳಿತಗಳು ಹಾಗೂ ವಿಭಜಕ ನೀತಿಗಳ ಕುರಿತು ಜನರು ನೀಡುತ್ತಿರುವ ತೀರ್ಪು ಎಂದೇ ಈ ಚುನಾವಣೆಯನ್ನು ಪರಿಗಣಿಸಲಾಗಿದೆ. ಜೀವನ ನಿರ್ವಹಣಾ ವೆಚ್ಚ ಏರಿಕೆ, ಡೊನಾಲ್ಡ್ ಟ್ರಂಪ್ ಅವರ ವ್ಯಾಪಾರ ಸಂಘರ್ಷಗಳು ಹಾಗೂ ಇರಾನ್ ವಿರುದ್ಧ ಅವರು ಆರಂಭಿಸಿದ ಯುದ್ಧದ ಕುರಿತು ಜನರಲ್ಲಿ ಆಕ್ರೋಶ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಅಮೆರಿಕದ ಇತಿಹಾಸದಲ್ಲೇ ಅತ್ಯಂತ ಜನಪ್ರಿಯತೆ ಕಳೆದುಕೊಂಡ ಅಧ್ಯಕ್ಷರಲ್ಲಿ ಟ್ರಂಪ್ ಒಬ್ಬರು ಎಂದು ಸಮೀಕ್ಷೆಗಳು ತಿಳಿಸಿವೆ. ಡೆಮಾಕ್ರಟಿಕ್ ಪಕ್ಷದ ಹೌಸ್ ನಾಯಕ ಹಕೀಮ್ ಜೆಫ್ರೀಸ್, ದೇಶವು ನಾಟಕೀಯ ಬದಲಾವಣೆಯ ಹೊಸ್ತಿಲಲ್ಲಿದೆ ಎಂದು ಹೇಳಿದ್ದಾರೆ. ತಮ್ಮ ಪಕ್ಷ ಮತ್ತೆ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನಲ್ಲಿ ಬಹುಮತ ಗಳಿಸಲಿದೆ ಎಂಬ ವಿಶ್ವಾಸವನ್ನೂ ವ್ಯಕ್ತಪಡಿಸಿದ್ದಾರೆ.

ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಚುನಾವಣೆಯಲ್ಲಿಯೂ ರಿಪಬ್ಲಿಕನ್ ಪಕ್ಷದ ದುರ್ಬಲತೆ ಫ್ಲೋರಿಡಾದ ಫಲಿತಾಂಶಗಳಲ್ಲಿ ಗೋಚರಿಸಿದೆ. ಟ್ರಂಪ್ ಅವರ ಪಕ್ಷಕ್ಕೆ ಅನುಕೂಲವಾಗುವಂತೆ ಮರುವಿಂಗಡಣೆ ಮಾಡಲಾಗಿದ್ದ ಹಲವು ಕ್ಷೇತ್ರಗಳಲ್ಲಿ ಡೆಮಾಕ್ರಟಿಕ್ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ಚುನಾವಣಾ ಫಲಿತಾಂಶದ ಅಂದಾಜುಗಳು ತಿಳಿಸಿವೆ. ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನಲ್ಲಿ ಡೆಮಾಕ್ರಟಿಕ್ ಪಕ್ಷ ರಿಪಬ್ಲಿಕನ್ ಪಕ್ಷವನ್ನು ಸೋಲಿಸಿ ಬಹುಮತ ಪಡೆಯಲಿದೆ ಎಂದು ವ್ಯಾಪಕವಾಗಿ ನಿರೀಕ್ಷಿಸಲಾಗಿದೆ. ಆದರೆ, ರಿಪಬ್ಲಿಕನ್ ಪಕ್ಷ ಅಲ್ಪ ಬಹುಮತ ಹೊಂದಿರುವ ಸೆನೆಟ್‌ನಲ್ಲಿನ ಸ್ಪರ್ಧೆ ತೀವ್ರ ಪೈಪೋಟಿಯಿಂದ ಕೂಡಿರಲಿದೆ ಎಂದು ಅಂದಾಜಿಸಲಾಗಿದೆ.

ಒಟ್ಟು 435 ಹೌಸ್ ಸ್ಥಾನಗಳು, ಸೆನೆಟ್‌ನ 100 ಸ್ಥಾನಗಳ ಪೈಕಿ 35 ಸ್ಥಾನಗಳು ಹಾಗೂ 36 ಗವರ್ನರ್ ಹುದ್ದೆಗಳಿಗೆ ಚುನಾವಣೆ ನಡೆದಿದೆ. ಕಾಂಗ್ರೆಸ್‌ನ ಎರಡೂ ಸದನಗಳ ಮೇಲೆ ನಿಯಂತ್ರಣ ಸಾಧಿಸಲು ಡೆಮಾಕ್ರಟಿಕ್ ಪಕ್ಷ ಹೌಸ್‌ನಲ್ಲಿ ಕನಿಷ್ಠ ಮೂರು ಸ್ಥಾನಗಳನ್ನು ಹೆಚ್ಚುವರಿಯಾಗಿ ಗೆಲ್ಲಬೇಕಿತ್ತು. ಸೆನೆಟ್‌ನಲ್ಲಿ ನಾಲ್ಕು ಸ್ಥಾನಗಳ ನಿವ್ವಳ ಹೆಚ್ಚಳದ ಅಗತ್ಯವಿತ್ತು. ಟ್ರಂಪ್ ಆಡಳಿತದ ಮೇಲೆ ಪರಿಣಾಮ
ಈ ಚುನಾವಣಾ ಫಲಿತಾಂಶ ಡೊನಾಲ್ಡ್ ಟ್ರಂಪ್ ಅವರ ರಾಜಕೀಯ ಭವಿಷ್ಯದ ಮೇಲೆ ಗಂಭೀರ ಪರಿಣಾಮ ಬೀರಬಹುದು.