ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ನೂತನ ಅಧ್ಯಕ್ಷರಾಗಿ ಇತ್ತೀಚೆಗಷ್ಟೇ ನೇಮಕಗೊಂಡಿದ್ದ ಉಮರ್ ಯು ಹೆಚ್ ಅವರು ಇಂದು ಮಂಗಳೂರಿನ ತಾಲೂಕು ಪಂಚಾಯಿತಿ ಕಟ್ಟಡದಲ್ಲಿರುವ ಅಕಾಡೆಮಿಯ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು. ಅಧಿಕಾರ ಸ್ವೀಕರಿಸಿದ ಬಳಿಕ ಮಾತನಾಡಿದ ಅವರು, “ಬ್ಯಾರಿ ಸಮುದಾಯದ ಬಹುವರ್ಷಗಳ ಕನಸಾಗಿರುವ ಬ್ಯಾರಿ ಭವನ ನಿರ್ಮಾಣವನ್ನು ನನ್ನ ಅವಧಿಯಲ್ಲಿ ನನಸಾಗಿಸುತ್ತೇನೆ” ಎಂದು ಉಮರ್ ಯು.ಹೆಚ್. ತಿಳಿಸಿದ್ದಾರೆ.
“ಬ್ಯಾರಿ ಭವನಕ್ಕೆ ಜಾಗ ಇದ್ದು 6 ಕೋಟಿ ರೂ. ಹಣವೂ ಇದೆ. ಭವನ ನಿರ್ಮಾಣದ ಜೊತೆಗೆ ಕೊಂಕಣಿ, ತುಳು ಅಕಾಡೆಮಿಯಲ್ಲಿ ಇರುವಂತೆ ವಸ್ತು ಸಂಗ್ರಹಾಲಯ ರೂಪಿಸಲೂ ಆದ್ಯತೆ ನೀಡಲಾಗುವುದು. ಪುಸ್ತಕ ಭಂಡಾರ, ಸುಸಜ್ಜಿತ ಗ್ರಂಥಾಲಯದ ನಿರ್ಮಾಣದ ಕನಸೂ ಇದೆ. ಅಕಾಡೆಮಿ ಸದಸ್ಯರ ಜೊತೆ ಚರ್ಚಿಸಿ ಇದನ್ನು ಅನುಷ್ಠಾನಗೊಳಿಸಲಾಗುವುದು” ಎಂದು ತಿಳಿಸಿದರು.
ಉಳಿದ ಅಕಾಡೆಮಿ ಜೊತೆ ಸಮನ್ವಯ ಸಾಧಿಸುವ ಜೊತೆಗೆ ತುಳುನಾಡಿನ ಬಹುತ್ವ ಸಹಬಾಳ್ವೆ ಗಟ್ಟಿಗೊಳಿಸುವ ದಿಸೆಯಲ್ಲಿ ಕೆಲಸ ಆಗಬೇಕಾಗಿದೆ. ಸಾಂಸ್ಕೃತಿಕ ಕಾರ್ಯಕ್ರಮ, ಇತರ ಕಾರ್ಯಕ್ರಮಗಳ ಖರ್ಚು ಕಡಿತಗೊಳಿಸಿ ಸಂಶೋಧನೆಗೆ ಹೆಚ್ಚು ಒತ್ತು ನೀಡುವ ಉದ್ದೇಶ ಇದೆ ಎಂದು ಉಮರ್ ಯು ಹೆಚ್ ಹೇಳಿದರು. ಮಂಗಳೂರು ತಾಲೂಕು ಪಂಚಾಯತ್ ಕಟ್ಟಡದಲ್ಲಿರುವ ಬ್ಯಾರಿ ಅಕಾಡೆಮಿಯ ಕಚೇರಿಯಲ್ಲಿ ಅಕಾಡೆಮಿಯ ರಿಜಿಸ್ಟ್ರಾರ್ ರಾಜೇಶ್ . ಜಿ ಅವರು ಅಧಿಕಾರ ಹಸ್ತಾಂತರಿಸಿ ಶುಭ ಹಾರೈಸಿದರು.
ಈ ಸಂದರ್ಭ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ರಹೀಂ ಉಚ್ಚಿಲ್, ನ್ಯಾಯವಾದಿ ಮುಹಮ್ಮದ್ ಹನೀಫ್, ತುಳು ಅಕಾಡೆಮಿಯ ಅಧ್ಯಕ್ಷರಾದ ತಾರಾನಾಥ್ ಗಟ್ಟಿ, ಕೊಂಕಣಿ ಅಕಾಡೆಮಿ ಅಧ್ಯಕ್ಷ ಸ್ಟ್ಯಾನಿ ಅಲ್ವಾರಿಸ್ ಉಪಸ್ಥಿತರಿದ್ದರು
