ಸರಕಾರದ ದುಡ್ಡು ಸುನೀಲಣ್ಣನ ಜಾತ್ರೆ; ಪರಶುರಾಮ ಥೀಂ ಪಾರ್ಕ್ ವಿವಾದ; ಪೂರ್ತಿ ವಿವರ ಬಿಚ್ಚಿಟ್ಟ ಎಂ.ಜಿ ಹೆಗ್ಡೆ!

ಕರಾವಳಿ

ಕಾರ್ಕಳದ ಪರಶುರಾಮ ಥೀಂ ಪಾರ್ಕ್ ಇದೀಗ ವಿವಾದದ ಕೇಂದ್ರ ಬಿಂದುವಾಗಿದೆ. ನಿರ್ಮಾಣ ಹಂತದಲ್ಲಿದ್ದ ಪರಶುರಾಮನ ಪ್ರತಿಮೆಯನ್ನು ಕಾರ್ಕಳ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರಕರಣ ಈಗ ನ್ಯಾಯಾಲಯದ ಅಂಗಳದಲ್ಲಿದ್ದು, ಇನ್ನೊಂದೆಡೆಯಲ್ಲಿ ಪರಶುರಾಮ ಪ್ರತಿಮೆ ನಿರ್ಮಾಣದಲ್ಲಿ ಕಳಪೆಯಾಗಿದೆ ಎಂದು ಕಾರ್ಕಳ ಪೊಲೀಸರು ಬೆಂಗಳೂರಿನ ಕ್ರಿಶ್ ಆರ್ಟ್ ವರ್ಕ್ ನಲ್ಲಿ ನಿರ್ಮಾಣ ಹಂತದಲ್ಲಿದ್ದ ಪರಶುರಾಮನ ಮೂರ್ತಿಯನ್ನು ವಶಕ್ಕೆ ಪಡೆದಿದ್ದಾರೆ.

ಈ ಇಡೀ ಪ್ರಕರಣದ ಬಗ್ಗೆ ಜನ್ಮ ಜಾಲಾಡಿದ್ದಾರೆ ಮಂಗಳೂರಿನ ಸಾಮಾಜಿಕ ಕಾರ್ಯಕರ್ತರಾದ ಎಂ.ಜಿ ಹೆಗಡೆಯವರು. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬರೆದಿದ್ದಾರೆ.

ಮನೆ ಕಟ್ಟಿದ್ದು ಯಾರೋ… ಗೃಹ ಪ್ರವೇಶ ಮಾಡಿದ್ದು ಇನ್ನಾರೋ…ಇದು ಕಾರ್ಕಳ ಶಾಸಕ ಸುನಿಲ್ ಕುಮಾರ್ ರ ಪರಶುರಾಮ ಮೂರ್ತಿ ಪ್ರಕರಣದ ಸಂಪೂರ್ಣ ವಿವರ.

ಈ ಪಾರ್ಕ್ ಮಾಡಲು ಡಿ ಪಿ ಆರ್ ಮಾಡಿ ಯೋಜನೆಗೆ ಅನುಮತಿ ಪಡೆದದ್ದು
ಕರ್ನಾಟಕ ರಾಜ್ಯ ಸರ್ಕಾರದ ಪ್ರವಾಸೋದ್ಯಮ ಇಲಾಖೆ. ಆ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಪ್ರವಾಸೋದ್ಯಮ ಇಲಾಖೆಯು ನಿರ್ಮಿತಿ ಕೇಂದ್ರಕ್ಕೆ ವಹಿಸಿಕೊಡುತ್ತದೆ.
ನಿರ್ಮಿತಿ ಕೇಂದ್ರವೂ ಉಡುಪಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿರುವ ನೋಂದಾಯಿತ ಒಂದು ಸಂಸ್ಥೆ.
ಈ ಕೆಲಸ ವಹಿಸಿಕೊಂಡದ್ದು ಪ್ರವಾಸೋದ್ಯಮ ಇಲಾಖೆಯಿಂದ ಒಟ್ಟು14.42 ಕೋಟಿ ರೂಪಾಯಿ ಮೊತ್ತಕ್ಕೆ.
ಈ ವರೆಗೆ ನಿರ್ಮಿತಿ ಕೇಂದ್ರ ಯೋಜನೆಗೆ ಖರ್ಚು ಮಾಡಿದ ಹಣ 6.72 ಕೋಟಿ ರೂಪಾಯಿ. ( ಒಟ್ಟು ಯೋಜನೆಗೆ ಮೂರ್ತಿಗೆ 2.25 ಕೋಟಿ ಮಾತ್ರ)
ಇನ್ನೂ 3.83 ಕೋಟಿ ರೂಪಾಯಿ ಹಣ ನಿರ್ಮಿತಿ ಕೇಂದ್ರಕ್ಕೆ ಬರಲು ಬಾಕಿಯಿದೆ.
ಈ ನಿರ್ಮಿತಿ ಕೇಂದ್ರದವರು ಕೃಷ್ಣ ನಾಯಕ್ ರಿಗೆ ಮೂರ್ತಿ ಮಾಡಲು ಗುತ್ತಿಗೆ ಕೊಟ್ಟದ್ದು
(ಇದು ಸೃಜನಾತ್ಮಕ ಕಲಾ ಪ್ರಕಾರವಾದ್ದರಿಂದ ಟೆಂಡರ್ ಕರೆಯದೇ ಕೆಲಸ ಕೊಡುವ ಅಧಿಕಾರ ಅವರಿಗಿರುವುದರಿಂದ ನೇರವಾಗಿ ಕೆಲವರನ್ನು ಸಂಪರ್ಕಿಸಿ ರೇಟ್ ಕೇಳಿ, ಕಡಿಮೆ ದರ ಹೇಳಿದ ನಾಯಕ್ ಅವರಿಗೆ ಗುತ್ತಿಗೆ ನೀಡಿದ್ದಾರೆ.)
ಪರಶುರಾಮ ಥೀಂ ಪಾರ್ಕ್ ಉದ್ಘಾಟನೆ ಮಾಡಿದ್ದು ಕನ್ನಡ ಸಂಸ್ಕೃತಿ ಇಲಾಖೆ. ಅರೇ ಇದೇನಿದು ಏಕಾಏಕಿ ಕನ್ನಡ ಸಂಸ್ಕೃತಿ ಇಲಾಖೆ ಎಲ್ಲಿಂದ ಬಂತು ಅನ್ನುವ ಪ್ರಶ್ನೆ. ಈ ಕನ್ನಡ ಸಂಸ್ಕೃತಿ ಇಲಾಖೆಯ ಮಂತ್ರಿಗಳಾಗಿದ್ದವರೇ ಶಾಸಕ ಸುನಿಲ್ ಕುಮಾರ್ ಕಾರ್ಕಳ !!!

ಪೈಬರ್ – ಕಂಚು ಗಲಾಟೆ.

ಅಸಲಿಗೆ ನಿರ್ಮಿತಿ ಕೇಂದ್ರದವರು ಯೋಜನೆಯ ಕಾಮಗಾರಿ ಮುಗಿದಿದೆಯೆಂದು work complition certificate ಕೊಟ್ಟಿರಲೇ ಇಲ್ಲ.ಕಂಚಿನ ಪ್ರತಿಮೆ ಮೊದಲು ಮಾಡಿದಾಗ ಅದರ ಅಳತೆ ತೂಕದ ಸಮಸ್ಯೆಯಿಂದಾಗಿ ಅಲ್ಲಿಡಲು ಸಾಧ್ಯವಿಲ್ಲ ಎಂದು ವರದಿ ಸಲ್ಲಿಸಲಾಗಿತ್ತು.
ಅದು ಇತ್ಯರ್ಥವಾಗದೇ ಕೆಲಸ ಪೂರ್ಣವಾಗಿದೆ ಎಂದು ನಿರ್ಮಿತಿ ಕೇಂದ್ರ ಸರ್ಟಿಫಿಕೇಟ್ ಕೊಟ್ಟಿರಲಿಲ್ಲ. ಈ ನಡುವೆ ಶಿಲ್ಪಿಗೆ ಫೈಬರ್ ಮೂರ್ತಿ ಮಾಡಲು ಹೇಳಲಾಯಿತು. ಇದಕ್ಕೆ 50 ಲಕ್ಷ ರೂಪಾಯಿ ಖರ್ಚಾಗಿದೆ. ಈ ಹಣವನ್ನು ಯಾರು ಯಾರಿಗೆ ಕೊಟ್ಟರು ಅನ್ನುವ ಮಾಹಿತಿಯಿಲ್ಲ.
ನಂತರ ನಡೆದ ಗೊಂದಲ ಹೋರಾಟದಿಂದ ಮೂರ್ತಿ ಅನಾಥವಾಯಿತು. ನಂತರ ಲೋಹದ ಮೂರ್ತಿ ತಯಾರಿದಯೆಂದೂ ಅಲ್ಲಿ ಸ್ಥಾಪಿಸಲು ರಕ್ಷಣೆ ಕೋರಿ ಶಿಲ್ಪಿ ಹೈಕೋರ್ಟ್ ಗೆ ಹೋಗುತ್ತಾರೆ. ಪರಸ್ಥಿತಿ ಸರಿಯಿಲ್ಲವೆಂದೂ ಪೋಲಿಸರು,ಜಿಲ್ಲಾಧಿಕಾರಿಗಳು ಈ ಬಗ್ಗೆ ದಿನ ದೂಡುತ್ತಾರೆ. ಅಂದರೆ ಆಗಲೇ ಇದು ಸಾರ್ವಜನಿಕರಲ್ಲಿ ಗೊಂದಲ ಪ್ರತಿಭಟನೆ ಆಗುತ್ತಿರುತ್ತದೆ.

ಇಲ್ಲಿ ಬರುವ ಪ್ರಶ್ನೆಗಳು ನಿರ್ಮಿತಿ ಕೇಂದ್ರದವರು ಕೆಲಸ ಪೂರ್ತಿಯಾಗಿಲ್ಲ ಎಂದು ಹೇಳಿದ್ದರೂ ಸುನಿಲ್ ರವರು ಮಂತ್ರಿಯಾಗಿದ್ದ ಕನ್ನಡ ಸಂಸ್ಕೃತಿ ಇಲಾಖೆ ಉದ್ಘಾಟನೆ ಮಾಡಿಸಿದ್ದು ಯಾಕೆ?
ಇನ್ನು ಉದ್ಘಾಟನಾ ಕಾರ್ಯಕ್ರಮಕ್ಕೆ ಬರೋಬ್ಬರಿ 2.5 ಕೋಟಿ ರೂಪಾಯಿ ಖರ್ಚಾಗಿದೆ. ಇದನ್ನು ಕರ್ನಾಟಕದ ಮಾರ್ಕೆಟಿಂಗ್ , ಕಮ್ಮ್ಯೂನಿಕೇಷನ್ ಮತ್ತು ಜಾಹೀರಾತು ಸಂಸ್ಥೆಗೆ ನೀಡಲಾಗಿದೆ. ಅದೂ ಕೂಡಾ ಸರ್ಕಾರದಿಂದ ಸ್ಥಾಪಿತ ಸ್ವತಂತ್ರ ಸಂಸ್ಥೆ. ಅವರು ನಂತರ ಖಾಸಗಿ ಗುತ್ತಿಗೆದಾರರ ಮೂಲಕ ಕೆಲಸ ಮಾಡಿಸಿರುತ್ತಾರೆ.
ಯೋಜನೆ ಪೂರ್ಣಗೊಳ್ಳದ ಕಾರ್ಯಕ್ರಮ ಉದ್ಘಾಟನೆಗೆ ಎರಡೂವರೆ ಕೋಟಿ ಹಣ ಮಂಜೂರು ಮಾಡುವುದು ಮತ್ತು ಬಿಡುಗಡೆ ಮಾಡುವುದೇ ಅಪರಾಧ. ಆದರೂ ಅದು ಆಗಿದೆ. ಯಾಕೆಂದರೆ ಸುನಿಲ್ ಕುಮಾರ್ ಮಂತ್ರಿ . ಅವರ ಆದೇಶ ಪಾಲನೆ!!!
ಉದ್ಘಾಟನೆಯಾಗುತ್ತಿರುವುದು ಲೋಹದ ಮೂರ್ತಿಯಲ್ಲ ಅನ್ನುವುದು ಸುನಿಲ್ ಕುಮಾರ ರಿಗೆ, ಅಧಿಕಾರಿಗಳಿಗೆ, ಶಿಲ್ಪಿಗೆ ಗೊತ್ತಿತ್ತು. ಈ ಸತ್ಯವನ್ನು ಮುಚ್ಚಿಟ್ಟ ಅಪರಾಧದಲ್ಲಿ ಎಲ್ಲರದೂ ಸಮಪಾಲು.
ಈ ಸತ್ಯವನ್ನು ಜನರೆದುರು ಶಿಲ್ಪಿ ಮತ್ತು ಅಧಿಕಾರಿಗಳು ಹೇಳಲು ಯಾವ ಭಯ ಮತ್ತು ಒತ್ತಡವಿತ್ತು ಅನ್ನುವುದೂ ಬಹಿರಂಗವಾಗಬೇಕಿದೆ.
ಆದರೆ, ಇಂತಹ ಸುಳ್ಳು ಹೇಳಿ ಕಾರ್ಯಕ್ರಮ ರೂಪಿಸಲು ಮುಖ್ಯ ಕಾರಣ ಸುನಿಲ್ ಕುಮಾರ್ ಅವರು.

ಯಾಕೆಂದರೆ ಜಸ್ಟೀಸ್ ಜಗಮೋಹನ್ ಅವರ ತನಿಖೆ, ಪೋಲಿಸ್ ತನಿಖೆಯಲ್ಲಿ ನಿರ್ಮಿತ ಕೇಂದ್ರದವರು ಕೆಲಸ ಪೂರ್ತಿಯಾಗಿದೆ ಎಂದು ತಾವು ವರದಿಯನ್ನೇ ಕೊಟ್ಟಿಲ್ಲ. ಸರ್ಕಾರದ ಮತ್ತು ಶಾಸಕರ ಒತ್ತಡದಿಂದಾಗಿ ಉದ್ಘಾಟನೆಯಾದದ್ದು ಎಂಬ ಹೇಳಿಕೆ ದಾಖಲಾಗಿದೆ ಮತ್ತು ಅಲ್ಲಿಯವರೆಗೆ ಇರದ ಕನ್ನಡ ಸಂಸ್ಕೃತಿ ಇಲಾಖೆ ಉದ್ಘಾಟನೆ ಮಾಡಿದೆ. ಇಲ್ಲಿ ಉದ್ಘಾಟನೆ ಕಾರ್ಯಕ್ರಮಕ್ಕೆ ಖರ್ಚು ಮಾಡಿದ ಹಣ ಮತ್ತು ಪೈಬರ್ ಮೂರ್ತಿಗೆ ಖರ್ಚು ಮಾಡಿದ ಹಣದ ತನಿಖೆಯಾಗಬೇಕು.
ಉಳಿದಂತೆ ಬೇರೆ ಕಾಮಗಾರಿ ವಿಷಯದಲ್ಲಿ ಭ್ರಷ್ಟಾಚಾರ ಆಗಿರುವ ಬಗ್ಗೆ ನನ್ನಲ್ಲಿ ಮಾಹಿತಿ ಇಲ್ಲ. ಅದರ ಬಗ್ಗೆ ಸಧ್ಯ ನನ್ನ ಅಭಿಪ್ರಾಯವೂ ಇಲ್ಲ.

ಅಂದರೆ ಈಡೀ ಪ್ರಕರಣದುದ್ದಕ್ಕೂ ಸುನಿಲ್ ಕುಮಾರ್ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು, ಸುಂದರವಾಗಿ ಮೂಡಬೇಕಿದ್ದ ಸಾಂಸ್ಕೃತಿಕ ಯೋಜನೆಯೊಂದನ್ನು, ತನ್ನ ಅಧಿಕಾರದ ಹಪಾಹಪಿಗಾಗಿ ಬಲಿ ಪಡೆದು ಬಿಟ್ಟರು.
ಈಗ ನಿರ್ಮಿತಿ ಕೇಂದ್ರದವರ ಹೇಳಿಕೆಯ ಬೆನ್ನು ಹತ್ತಿ ತನಿಖೆಯಾಗಬೇಕು. ಸುನಿಲ್ ಕುಮಾರ್ ರವರು ಈಗಲಾದರೂ ಕರ್ನಾಟಕದ ಜನರ ಕ್ಷಮೆ ಕೇಳಬೇಕು.