ಮೇರಮಜಲು ಗುಂಡಿ ದಾಟಲು ಗುಂಡಿಗೆ ಬೇಕು.!

ಕರಾವಳಿ

ಜನಪ್ರತಿನಿಧಿಗಳ ನಿರ್ಲಕ್ಷ್ಯ ಕ್ಕೆ ತುತ್ತಾದ ಅರ್ಕುಳ ದ್ವಾರ -ಮೇರಮಜಲು ರಸ್ತೆ .. ಸಾರ್ವಜನಿಕರು, ರಿಕ್ಷಾ ಯೂನಿಯನ್ ವತಿಯಿಂದ ಪ್ರತಿಭಟನೆಗೆ ಸಿದ್ಧತೆ

ಬಂಟ್ವಾಳ ತಾಲೂಕಿನ ಅರ್ಕುಳ ದ್ವಾರ -ಮೇರಮಜಲು ಜಿಲ್ಲಾ ಪಂಚಾಯತ್ ಮುಖ್ಯ ರಸ್ತೆಯ ದಾರುಣ ಕಥೆಯಿದು. ಇಲ್ಲಿ ಗುಂಡಿಗೆ ಇದ್ದವರಷ್ಟೇ ಪ್ರಯಾಣ ನಡೆಸಬಹುದು. ಅಷ್ಟೊಂದು ಮಟ್ಟಿಗೆ ಈ ರಸ್ತೆ ಹದೆಗೆಟ್ಟಿದೆ. ಗುಂಡಿಗಳದ್ದೇ ಕಾರುಬಾರು. ವಾಹನ ಸವಾರರು ಗುಂಡಿಗಳ ಮಧ್ಯೆ ರಸ್ತೆಯನ್ನು ಹುಡುಕುವಂತಾಗಿದೆ.

ರಸ್ತೆಯನ್ನೇ ನುಂಗಿದ ಹೊಂಡ ಗುಂಡಿಗಳಲ್ಲಿ ವಾಹನ ಚಲಾಯಿಸುವ ಸಾಹಸವನ್ನು ಈಗ ಮಾಡಬೇಕಾಗಿದೆ. ಇಂತಹದ್ದೊಂದು ನರಕಯಾತನೆಗೆ ಕಾರಣವಾಗಿದೆ ಅರ್ಕುಳ ದ್ವಾರ -ಮೇರಮಜಲು ಸಂಪರ್ಕ ರಸ್ತೆ. ವಾಹನ ಸಂಚಾರಕ್ಕೆ ಮಾತ್ರವಲ್ಲ ಕಾಲ್ನಡಿಗೆಯಲ್ಲೂ ತೆರಳುವುದಕ್ಕೂ ಆಯೋಗ್ಯವಾಗಿದೆ.

ಒಂದು ಗುಂಡಿ ದಾಟಿ ಇನ್ನು ನಿರಾಳವಾದೆವು ಎಂದು ವಾಹನ ಸವಾರರು ಎಕ್ಸ್ ಲೇಟರ್ ಒತ್ತಿ ಸರಾಗವಾಗಿ ಸಾಗಬಹುದು ಎಂದು ಅಂದಾಜಿಸುವಷ್ಟರಲ್ಲಿ ಧುತ್ತನೆ ಎದುರಾಗುತ್ತದೆ ಭಯಾನಕ ಗುಂಡಿಗಳು. ಇಲ್ಲಿ ರಸ್ತೆ ಹಾದುಹೋದ ಪರಿಸರದಲ್ಲಿ ನೂರಾರು ಮನೆಗಳಿದ್ದು, ನಿತ್ಯ ಸಹಾಯ ಮಾತಾ ಹೈಸ್ಕೂಲ್, ಸಂತ ಜೋಸೆಫ್ ಹಿರಿಯ ಪ್ರಾಥಮಿಕ ಶಾಲೆ ತೆರಳುವ ವಿಧ್ಯಾರ್ಥಿಗಳು ಇದೇ ಮಾರ್ಗದಲ್ಲಿ ಸಂಚರಿಸಬೇಕಾಗಿದೆ. ಕೆಲವು ದಿನಗಳ ಹಿಂದೆಯಷ್ಟೇ ಮಕ್ಕಳನ್ನು ಕರೆದುಕೊಂಡು ಹೋಗಲು ಬಂದ ಕೆಲವು ಪೋಷಕರು ಗುಂಡಿ ತಪ್ಪಿಸಲು ಹೋಗಿ ಅಪಘಾತಗಳಿಗೆ ಒಳಗಾದ ನಿದರ್ಶನಗಳಿವೆ. ಬೆಳಿಗ್ಗೆ, ಸಂಜೆ ಕೆಎಸ್ಸಾರ್ಟಿಸಿ ಬಸ್ ವೊಂದು ಸಂಚರಿಸುತ್ತಿದ್ದು, ಅದೇ ರೀತಿ ಐದಾರು ಖಾಸಗಿ ಬಸ್ ಗಳು ಇದೇ ಮಾರ್ಗದಲ್ಲಿ ಸಂಚರಿಸುತ್ತಿದೆ. ರಸ್ತೆಯ ದುರವಸ್ಥೆಗೆ ಮರುಗಿದ ಬಸ್ ಮಾಲಕರು ಬಸ್ ಓಡಿಸಲು ಹಿಂದೇಟು ಹಾಕುತ್ತಿದ್ದಾರೆ. ಅದರ ಮೊದಲ ಪ್ರಯೋಗವಾಗಿ ದಿನದ ಕೆಲವೊಂದು ಟ್ರಿಪ್ ಗಳನ್ನು ಕಡಿತ ಮಾಡಿದ್ದಾರೆ. ಇದರಿಂದಾಗಿ ನಗರದ ವಿವಿಧ ಭಾಗಗಳಿಗೆ ತೆರಳುವವರಿಗೆ ತೊಂದರೆ ಉಂಟಾಗಿದೆ. ಇನ್ನು ನಗರಕ್ಕೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದವರು ರಸ್ತೆಯ ಹೊಂಡಗಳ ಸಾಮ್ರಾಜ್ಯಕ್ಕೆ ಬೆದರಿ ಅರ್ಧದಲ್ಲೇ ವಾಹನ ನಿಲ್ಲಿಸಿ ಬಸ್ಸಿನ ಮೂಲಕ ತೆರಳುವಂತಾಗಿದೆ.

ಈ ಭಾಗದಲ್ಲಿ ದಿನನಿತ್ಯ ಕನಿಷ್ಠ ಎಂದರೂ 75 ಕ್ಕೂ ಅಧಿಕ ರಿಕ್ಷಾಗಳು ಪ್ರಯಾಣಿಕರನ್ನು ಹೊತ್ತೊಯ್ಯುತ್ತದೆ. ಕೊಡ್ಮಾನ್ -ಅಬ್ಬೆಟ್ಟು-ಬದ್ರಿಯಾನಗರ ಮುಖ್ಯ ರಸ್ತೆಗೆ ಸಂಪರ್ಕ ಸೇತುವೆ ಈ ರಸ್ತೆಯ ಶೋಚನೀಯ ಸ್ಥಿತಿಗೆ ರಿಕ್ಷಾ ಚಾಲಕರು ಹಿಡಿಶಾಪ ಹಾಕುತ್ತಿದ್ದಾರೆ. ದಿನಕ್ಕೆ 500 ರೂಪಾಯಿ ಗಳಿಸಿ ಕುಟುಂಬ ನಿರ್ವಹಿಸುವ ಒತ್ತಡದ ಜೀವನದಲ್ಲಿರುವ ರಿಕ್ಷಾ ಚಾಲಕರು ತಮ್ಮ ದುಡಿಮೆಯ ಸಂಪಾದನೆಯ ಹಣವನ್ನು ಹದಗೆಟ್ಟ ರಸ್ತೆಯಿಂದಾಗಿ ರಿಕ್ಷಾ ಹಾಳಾಗಿ ಹೋಗುತ್ತಿದೆ. ಒಬ್ಬ ಪ್ರಯಾಣಿಕರನ್ನು ಕರೆದು ಕೊಂಡು ಹೋದರೆ ಸಿಗುವುದು ಬರೀ ಹತ್ತು ರುಪಾಯಿ. ಇದರ ದುಪ್ಪಟ್ಟು ದರವನ್ನು ರಿಕ್ಷಾದ ಕೆಲಸಕ್ಕೆ ವಿನಿಯೋಗಿಸಬೇಕಾಗಿದೆ. ಇವರ ಗೋಳು ಕೇಳುವವರಿಲ್ಲ?

ಈ ರಸ್ತೆಯು ಮಂಗಳೂರು, ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ನಡುವೆ ಹಂಚಿ ಹೋಗಿದ್ದು, ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕರು ಪ್ರಭಾವಿ, ಗೌರವಾನ್ವಿತ ಹುದ್ದೆಯಲ್ಲಿದ್ದರೂ ತಮ್ಮ ಕ್ಷೇತ್ರದ ರಸ್ತೆಯ ಸಮಸ್ಯೆ ಬಗೆಹರಿಸಲು ಮುಂದಾಗದಿರುವುದು ಖೇದಕರ. ಕಳೆದ ಒಂದು ವರ್ಷಗಳಿಂದ ಹೊಂಡ ಗುಂಡಿ ದಾಟಿ ಪ್ರಯಾಣಿಸಬೇಕಾದ ದರ್ದು ಕ್ಷೇತ್ರದ ಜನರದ್ದಾದರೂ ಇಲ್ಲಿನ ಜನಪ್ರತಿನಿಧಿಗಳು ಸ್ಪಂದಿಸುತ್ತಿಲ್ಲ. ಇನ್ನು ಸ್ಥಳೀಯ ಜನಪ್ರತಿನಿಧಿಗಳು ರಸ್ತೆ ನಿರ್ವಹಣೆಗೆ ಅನುದಾನ ಮೀಸಲಿಟ್ಟಿದೆ ಎಂದು ಕಳೆದ ಒಂದು ವರ್ಷಗಳಿಂದ ಹೇಳುತ್ತಾ ಬಂದರೂ ಈವರೆಗೂ ರಸ್ತೆಯ ಕಾಮಗಾರಿ ನಡೆಸಿರುವುದಿಲ್ಲ. ಅಂಗೈಯಲ್ಲೇ ಆಕಾಶ ತೋರಿಸುವ ಕೆಲಸ ಸ್ಥಳೀಯ ಜನಪ್ರತಿನಿಧಿಗಳು ತೋರಿಸುತ್ತಿದ್ದಾರೆ. ವೃದ್ಧರು, ಶಾಲಾ, ಮದರಸಕ್ಕೆ ತೆರಳುವ ವಿದ್ಯಾರ್ಥಿಗಳ ಪಾಡಂತೂ ಹೇಳಿ ಪ್ರಯೋಜನವಿಲ್ಲ.

ಇಲ್ಲಿಯ ರಸ್ತೆಯ ಬಗ್ಗೆ ಜನಪ್ರತಿನಿಧಿಗಳು ನಿರ್ಲಕ್ಷ್ಯ ವಹಿಸುತ್ತಿದ್ದು ಸ್ಥಳೀಯ ನಿವಾಸಿಗಳು, ರಿಕ್ಷಾ ಯೂನಿಯನ್ ರಸ್ತೆ ತಡೆ ನಡೆಸುವ ಯೋಜನೆ ರೂಪಿಸುತ್ತಿದ್ದಾರೆ. ಜನಪ್ರತಿನಿಧಿಗಳು ಭರವಸೆಯಷ್ಟೇ ನೀಡಿ ನುಣುಚಿಕೊಳ್ಳುತ್ತಿದ್ದಾರೆ. ಇದರ ವಿರುದ್ಧ ಪ್ರತಿಭಟನೆಗೆ ಸಜ್ಜಾಗಿದ್ದಾರೆ. ಈ ಹಿಂದೆ ಕಳಪೆ ಗುಣಮಟ್ಟದ ಡಾಮರೀಕರಣ ನಡೆಸಿದ ಪರಿಣಾಮ ರಸ್ತೆಯಲ್ಲೇ ಕೊಳ, ಕೆರೆ ನಿರ್ಮಾಣವಾಗಿದೆ.

ಸಾರ್ವಜನಿಕರು ಬೀದಿಗೆ ಇಳಿಯುವ ಮುನ್ನ ಎಚ್ಚೆತ್ತುಕೊಳ್ಳುವುದು ಒಳಿತು. ಇನ್ನಾದರೂ ಸಂಬಂಧಪಟ್ಟ ಇಲಾಖೆ, ಜನಪ್ರತಿನಿಧಿಗಳು ಈ ರಸ್ತೆಯ ಕಾಯಕಲ್ಪಕ್ಕೆ ಮುಂದಾಗಬೇಕಿದೆ. ಇಲ್ಲಿಯ ಸಮಸ್ಯೆಗೆ ಶಾಶ್ವತ ಪರಿಹಾರದ ಅಗತ್ಯವಿದೆ. ಇನ್ನಾದರೂ ಹೊಂಡ ಗುಂಡಿ ಮುಚ್ಚಿ ರಸ್ತೆಯ ಡಾಮರೀಕರಣ ನಡೆಸಿ, ಇಲ್ಲವಾದರೆ ಸಾರ್ವಜನಿಕರು ಪ್ರತಿಭಟನೆಗೆ ಇಳಿಯುವ ದಿನ ದೂರವಿಲ್ಲ.