ಜಿಲ್ಲಾಡಳಿತ, ರಾಜಕೀಯ ನಾಯಕರ ಇಚ್ಛಾಶಕ್ತಿಯ ಕೊರತೆಯಿಂದ ಹೊರಜಗತ್ತಿಗೆ ಕಾಣದ ಅಸಾಧಾರಣ ಪ್ರತಿಭೆ ಕಾಪುಮಜಲು ಗೋಪಾಲ ಜೋಗಿ
ಹೌದು. ಬಂಟ್ವಾಳ ತಾಲೂಕು ವಿಟ್ಲ ಪಡ್ನೂರು ಗ್ರಾಮದ ಕಾಪುಮಜಲು ಎಂಬಲ್ಲಿ ಬಡಕುಟುಂಬದ ವೆಂಕಟಜೋಗಿ-ಲೀಲಾವತಿ ದಂಪತಿಗಳ ಇಬ್ಬರು ಪುತ್ರರು, ಓರ್ವ ಪುತ್ರಿಯ ಪೈಕಿ ಕಿರಿಯ ಪುತ್ರ ಗೋಪಾಲ ಜೋಗಿ(60). ಬಡತನದಿಂದಾಗಿ ಓದಿದ್ದು ಕೇವಲ ಐದನೇ ಕ್ಲಾಸು. ಬಳಿಕ ಹಿರಿಯ ನಾದಸ್ವರ ವಾದಕ ಸಜಿಪ ತನಿಯಪ್ಪ ಜೋಗಿ ಮತ್ತು ಅವರ ಪುತ್ರ ಚಂದ್ರನಾಥ ಜೋಗಿಯವರ ಗರಡಿಯಲ್ಲಿ ನಾದಸ್ವರ ಕಲಿತು ಪಳಗಿದ ಗೋಪಾಲ ಜೋಗಿ ಕಳೆದ ಸುಮಾರು ನಲುವತೈದು ವರ್ಷಗಳಿಂದ ಶ್ರೀ ಕಾಪುಮಜಲು ಮಲರಾಯಿ ದೈವಸ್ಥಾನ ಸಹಿತ ನೂರಕ್ಕೂ ಹೆಚ್ಚು ದೈವಸ್ಥಾನ, ದೇವಸ್ಥಾನಗಳಲ್ಲಿ ನಾದಸ್ವರ ನುಡಿಸುತ್ತಿದ್ದಾರೆ.

ಅದಲ್ಲದೇ ಜಿಲ್ಲೆಯ ಹಲವು ಕಡೆಗಳಲ್ಲಿ ದೈವ ನರ್ತನ, ಜಾತ್ರೆ, ಕೋಲ-ನೇಮಗಳಲ್ಲಿ ಗೋಪಾಲ ಜೋಗಿಯವರ ತಂಡದ್ಧೇ ನಾದಸ್ವರ. ಆದರೆ ಈವರೆಗೂ ಪ್ರಶಸ್ತಿ ನೀಡಿ ತನ್ನನ್ನು ಗುರುತಿಸುವಂತೆ ಗೋಪಾಲ ಜೋಗಿಯವರು ಯಾವುದೇ ರಾಜಕೀಯ ನಾಯಕರ ಮನೆಯ ಬಾಗಿಲು ಬಡಿದವರಲ್ಲ. ತೆರೆಮರೆಯಲ್ಲಿರುವ ತೀರಾ ಸರಳ ಸ್ವಭಾವದ ಹಿರಿಯ ನಾದಸ್ವರ ವಾದಕ ಗೋಪಾಲ ಜೋಗಿಯವರು ದ.ಕ. ಜಿಲ್ಲೆಯಾದ್ಯಂತ ತನ್ನದೇ ಆದ ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿದ್ದಾರೆ.
ಇನ್ನಾದರೂ ಇಚ್ಚಾಶಕ್ತಿಯ ಕೊರತೆಯನ್ನು ಬದಿಗಿಟ್ಟು ರಾಜಕೀಯ ನಾಯಕರು, ಜಿಲ್ಲಾಡಳಿತ ತೆರೆಮರೆಯಲ್ಲಿರುವ ಹಿರಿಯ ನಾದಸ್ವರ ವಾದಕ ಕಾಪು ಮಜಲು ಗೋಪಾಲ ಜೋಗಿಯವರನ್ನು ಹೊರಜಗತ್ತಿಗೆ ಗುರುತಿಸುವ ಮೂಲಕ ಅದ್ಭುತ ಕಲಾವಿದನಿಗೆ ಗೌರವ ನೀಡಿದರೆ ಮಾತ್ರ ಅದಕ್ಕೊಂದು ಅರ್ಥಪೂರ್ಣ ಬೆಲೆ ಸಿಗುವುದಲ್ಲವೇ.?
