ಕನ್ಯಾಡಿ ಕ್ಷೇತ್ರದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರಿಗೆ ಜುನಾ ಅಖಾಡ ಮೂಲಕ ಮಹಾ ಮಂಡಲೇಶ್ವರ ಪದವಿ, ಪಟ್ಟಾಭಿಷೇಕ

ರಾಷ್ಟ್ರೀಯ

ಭಾರತದ ನಾಗಾ ಸಾಧು ಸನ್ಯಾಸಿ ಪರಂಪರೆಯಲ್ಲಿ ಕರ್ನಾಟಕದ ಮೊದಲ ಮಹಾ ಮಂಡಲೇಶ್ವರರಾಗಿ ಕನ್ಯಾಡಿಯ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ಪಟ್ಟಾಭಿಶಿಕ್ತರಾಗಿದ್ದಾರೆ.

ಶ್ರೀ ಬ್ರಹ್ಮಾನಂದ ಸರಸ್ವತೀ ಸ್ವಾಮೀಜಿಯವರಿಗೆ ಪ್ರಯಾಗರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಜುನಾ ಅಖಾಡದ ಆಚಾರ್ಯರಾದ ಅವದೇಶಾನಂದ ಗಿರಿ ಮಹಾರಾಜರು ಕನ್ಯಾಡಿಯ ಸ್ವಾಮೀಜಿಯವರಿಗೆ ಪಟ್ಟಾಭಿಷೇಕ ನೆರವೇರಿಸಿದರು. ಕನ್ಯಾಡಿ ಶ್ರೀರಾಮಕ್ಷೇತ್ರದ ಶ್ರೀಗಳ ಮೂಲಕ ಕರ್ನಾಟಕಕ್ಕೆ ಬರುವ ಪ್ರಪ್ರಥಮ ಮಹಾಮಂಡಲೇಶ್ವರ ಪದವಿಯಾಗಿದೆ‌. ಈ ಪಟ್ಟಾಭಿಷೇಕರಾದವರಿಗೆ ಧಾರ್ಮಿಕ ಪುರುಷನಿಗೆ ರಾಷ್ಟ್ರಾದ್ಯಂತ ವಿಶೇಷ ಸೌಲಭ್ಯ ನೀಡಲಾಗುತ್ತದೆ. ಅಲ್ಲದೆ ಕನ್ಯಾಡಿ ಶ್ರೀಗಳು ಮುಂದೆ ರಾಷ್ಟ್ರಾದ್ಯಂತ ಧರ್ಮ ಪ್ರಚಾರದ ಜತೆಗೆ ಆಧ್ಯಾತ್ಮದ ಉನ್ನತ ಸಾಧನೆಗಾಗಿ ಧಾರ್ಮಿಕ ಮೌಲ್ಯಗಳನ್ನು ಮತ್ತಷ್ಟು ಬಲಿಷ್ಠಗೊಳಿಸಲು ಅರ್ಹತೆಯುಳ್ಳವರಾಗಿದ್ದಾರೆಂದು ಪರಿಗಣಿಸಿ ನಾಗಾ ಸಾದು ಸನ್ಯಾಸಿ ಪರಂಪರೆಯಲ್ಲಿ ಜುನಾ ಅಖಾಡ ಈ ಜವಾಬ್ದಾರಿಯನ್ನು ನೀಡಿದೆ.

ಧಾರ್ಮಿಕ ಕ್ಷೇತ್ರ, ಆಧ್ಯಾತ್ಮಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಉನ್ನತ ಸಾಧನೆ ಮಾಡಿದ ಮಹಾಪುರುಷರಿಗೆ ಈ ಪದವಿಯನ್ನು ಪ್ರದಾನ ಮಾಡುವುದು ಅಖಾಡದ ವಾಡಿಕೆಯಾಗಿದೆ. ಈ ಪದವಿಗೆ ಅರ್ಹರಾದವರು ಸ್ವತಂತ್ರ್ಯ ಪೀಠಾಧೀಶರಾಗಿರಬೇಕಾಗಿದೆ. ಪಟ್ಟಾಭಿಷೇಕಕ್ಕೂ ಮುನ್ನ ಅಖಾಡದಲ್ಲಿರುವ ಕ್ಯಾಬಿನೇಟ್ ಸದಸ್ಯರು ಸ್ವಾಮೀಜಿವರ ಆಧ್ಯಾತ್ಮಿಕ ಸತ್ಸಂಗವನ್ನು ಪರಿಶೀಲಿಸಿ ಬೈಟಕ್ ನಲ್ಲಿ ಚರ್ಚೆ ನಡೆಸಿ ಗೌರವ ಪ್ರದಾನ ಮಾಡುವುದಾಗಿದೆ. ಶ್ರೀಗಳು ಮುಂದೆ ರಾಷ್ಟ್ರಾದ್ಯಂತ ಧರ್ಮ ಪ್ರಚಾರದ ಜತೆಗೆ ಆಧ್ಯಾತ್ಮದ ಉನ್ನತ ಸಾಧನೆಗಾಗಿ ಧಾರ್ಮಿಕ ಮೌಲ್ಯಗಳನ್ನು ಮತ್ತಷ್ಟು ಬಲಿಷ್ಠಗೊಳಿಸಲು ಅರ್ಹತೆಯುಳ್ಳವರಾಗಿದ್ದಾರೆಂದು ಪರಿಗಣಿಸಿ ನಾಗಾ ಸಾದು ಸನ್ಯಾಸಿ ಪರಂಪರೆಯಲ್ಲಿ ಜುನಾ ಅಖಾಡ ಈ ಜವಾಬ್ದಾರಿಯನ್ನು ನೀಡಿದೆ.

ಧರ್ಮಸ್ಥಳ ಗ್ರಾಮದ ನಿತ್ಯಾನಂದ ನಗರದ ಕನ್ಯಾಡಿ ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದ ಶ್ರೀ ಆತ್ಮಾನಂದ ಸರಸ್ವತಿ ಸ್ವಾಮೀಜಿಯವರ ಬಳಿಕ ಪೀಠಾಧೀಶರಾದವರು ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತೀ ಸ್ವಾಮೀಜಿಯವರು. ಉಡುಪಿ, ಭಟ್ಕಳ ಅಶ್ರಕೇರಿ ನಿಶ್ಚಳ ಮಕ್ಕಿ, ಭಟ್ಕಳದ ಕರಿಕಲ್ ಸಮುದ್ರ ಕಿನಾರೆ ರಾಮಮಂದಿರ ಸಹಿತ ಹರಿದ್ವಾರ ಗಂಗಾ ಕಿನಾರೆಯಲ್ಲಿ ಶಾಖಾ ಮಠ ಸ್ಥಾಪಿಸಿದ್ದಾರೆ. ಪ್ರಸ್ತುತ ಅಯೋಧ್ಯೆಯಲ್ಲಿ ಶಾಖಾ ಮಠ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದು, ಕೇರಳ, ತಿರುಪತಿ, ಶಿವಮೊಗ್ಗದಲ್ಲಿ ಶಾಖಾ ಮಠ ನಿರ್ಮಿಸಲು ಜಾಗ ನಿಗದಿಯಾಗಿದೆ. ಈ ಮೂಲಕ ಭಾರತದಲ್ಲಿ ಒಟ್ಟು 9 ಕಡೆ ಶಾಖಾ ಮಠ ನಿರ್ಮಿಸಿ ಜನರಲ್ಲಿ ಧಾರ್ಮಿಕ ಪ್ರಜ್ಞೆ ಉತ್ತೇಜಿಸುತ್ತಿದ್ದಾರೆ. 2018 ರಲ್ಲಿ ದಕ್ಷಿಣ ಭಾರತದಲ್ಲಿ ಪ್ರಪ್ರಥಮ ಬಾರಿಗೆ ಕನ್ಯಾಡಿಗೆ ರಾಷ್ಟ್ರದಾದ್ಯಂತ ಸಾದುಸಂತರನ್ನು ಕರೆಸಿ ಧರ್ಮ ಸಂಸತ್ ನಡೆಸಿದ ಹೆಮ್ಮೆ ಕನ್ಯಾಡಿ ಕ್ಷೇತ್ರದ್ದು.

ಜ 31 ರಂದು ಪ್ರಯಾಗ್ ರಾಜ್ ಮಹಾಕುಂಭ ಮೇಳದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಅಂತರಾಷ್ಟ್ರೀಯ ಜುನಾ ಅಖಾಡದ ಅಧ್ಯಕ್ಷ ಹರಿಗಿರಿ ಮಹಾರಾಜ್, ಜುನಾ ಅಖಾಡದ ಉಪಾಧ್ಯಕ್ಷ ವಿದ್ಯಾನಂದ ಸರಸ್ವತಿ ಸ್ವಾಮೀಜಿ, ಅಖಾಡದ ಉತ್ತರಾಖಂಡ ಮಹಾಮಂತ್ರಿ ದೇವಾನಂದ ಮಹಾರಾಜ್, ಕನ್ಯಾಡಿ ರಾಮಕ್ಷ್ತೇತ್ರದ ಟ್ರಸ್ಟಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಬರುವ ಮಾರ್ಚ್ ತಿಂಗಳಲ್ಲಿ ಕನ್ಯಾಡಿ ಕ್ಷೇತ್ರದಲ್ಲಿ ಶ್ರೀಗಳಿಗೆ ಸಾರ್ವಜನಿಕರಿಂದ ಅಭಿನಂದನಾ ಸಮಾರಂಭ ನಡೆಯಲಿದೆ.