ಗುರುವಾಯನಕೆರೆ: ಕಾಂಗ್ರೆಸ್ ಪಕ್ಷದ ಶಕ್ತಿ ಪ್ರದರ್ಶನ ಸಮಾವೇಶಕ್ಕೆ ಹಾಕಲಾಗಿದ್ದ ಹತ್ತಾರು ಬ್ಯಾನರ್ ಗಳನ್ನು ಹರಿದು ಹಾಕಿದ ಕಿಡಿಗೇಡಿಗಳು

ಕರಾವಳಿ

ಇಂದು ಗುರುವಾಯನಕೆರೆಯ ಶಕ್ತಿನಗರದಲ್ಲಿ ನಡೆಯಲಿರುವ ಸರ್ಕಾರದ ನಡೆ ಕಾರ್ಯಕರ್ತರ ಕಡೆ ಎಂಬ ಕಾಂಗ್ರೆಸ್ ಪಕ್ಷದ ಶಕ್ತಿ ಪ್ರದರ್ಶನ ಸಮಾವೇಶಕ್ಕೆ ಹಾಕಲಾಗಿದ್ದ ಹತ್ತಾರು ಬ್ಯಾನರ್ ಗಳನ್ನು ಕಿಡಿಗೇಡಿಗಳು ಹರಿದ ಘಟನೆ ಗುರುವಾಯನಕೆರೆಯಲ್ಲಿ ನಡೆದಿದೆ.

ಸಮಾವೇಶದಲ್ಲಿ ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ , ಸಚಿವರಾದ ಚೆಲುವರಾಯ ಸ್ವಾಮಿ , ದಿನೇಶ್ ಗುಂಡೂರಾವ್ ಸೇರಿದಂತೆ ರಾಜ್ಯ ಮಟ್ಟದ ಹಲವಾರು ನಾಯಕರು ಭಾಗವಹಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಕಳೆದ ಹತ್ತಾರು ದಿನಗಳಿಂದ ತಾಲುಕಿನಾದ್ಯಂತ ವ್ಯಾಪಕ ಪ್ರಮಾಣದ ಪ್ರಚಾರ ಬ್ಯಾನರ್, ಪಕ್ಷದ ಧ್ವಜಗಳು ಸೇರಿದಂತೆ ಬಂಟಿಂಕ್ಸ್ ಗಳನ್ನು ಅಳವಡಿಸಲಾಗಿತ್ತು.

ಕಳೆದ ರಾತ್ರಿ ಗುರುವಾಯನಕೆರೆ ಎಂಬಲ್ಲಿ ಅಳವಡಿಸಲಾಗಿದ್ದ ಹತ್ತಾರು ಬ್ಯಾನರ್ ಗಳನ್ನು ಕಿಡಿಗೇಡಿಗಳು ಹರಿದು ಹಾಕಿದ್ದಾರೆ. ಘಟನೆಯನ್ನು ಖಂಡಿಸಿರುವ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ, ಪಕ್ಷದ ಬೆಳವಣಿಗೆಯನ್ನು ಸಹಿಸದೆ ಬಿಜೆಪಿ ಕಾರ್ಯಕರ್ತರು ಹತಾಶೆಯಿಂದ ಈ ವಿಕೃತ ಕಾರ್ಯ ನಡೆಸಿದ್ದಾರೆ. ಇಂತಹ ಕಾರ್ಯದಿಂದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರನ್ನು ಮತ್ತು ಪಕ್ಷವನ್ನು ಬೆದರಿಸಲು ಸಾಧ್ಯವಿಲ್ಲ. ನೀವು ಚಿವುಟಿದಷ್ಟು ನಾವು ಚಿಗುರುತ್ತೇವೆ ಎಚ್ಚರಿಕೆ ನೀಡಿದ ಅವರು ಇಂದಿನ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆಯುತ್ತದೆ ಎಂದಿದ್ದಾರೆ.