ರಾಜ್ಯದ ನೂತನ ಪೊಲೀಸ್ ಮಹಾ ನಿರ್ದೇಶಕರಾಗಿ ಸಿಐಡಿ ಡಿಜಿಪಿ ಎಂ.ಎ.ಸಲೀಂ ನೇಮಕಗೊಳ್ಳುವ ಸಾಧ್ಯತೆ ಇದೆ. ದಶಕಗಳ ಬಳಿಕ ಕನ್ನಡಿಗ ಐಪಿಎಸ್ ಅಧಿಕಾರಿಯೊಬ್ಬರು ಈ ಮಹತ್ವದ ಹುದ್ದೆಗೆ ಏರಿದಂತಾಗುತ್ತದೆ. ಹಾಲಿ ಪೊಲೀಸ್ ಮಹಾನಿರ್ದೇಶಕರಾದ ಅಲೋಕ್ ಮೋಹನ್ ರವರ ಸೇವಾವಧಿ ಎಪ್ರಿಲ್ 30ಕ್ಕೆ ಕೊನೆಗೊಳ್ಳಲಿದೆ. ಸಿಎಂ ಸಿದ್ದರಾಮಯ್ಯ ರವರು ಸಲೀಂ ಪರ ಒಲವು ತೋರಿದ್ದಾರೆ ಎನ್ನಲಾಗಿದೆ.
ಸೇವಾ ಜ್ಯೇಷ್ಠತೆಯಲ್ಲಿ ಅಗ್ನಿಶಾಮಕ ದಳ, ಪೌರ ರಕ್ಷಣೆ ಡಿಜಿಪಿಯಾಗಿರುವ ಪ್ರಶಾಂತ್ ಕುಮಾರ್ ಠಾಕೂರ್ ಹಾಗೂ ಎಂ.ಎ.ಸಲೀಂ ಈ ಹುದ್ದೆಯ ರೇಸ್‌ನಲ್ಲಿದ್ದಾರೆ. ನಿಯಮ ಪ್ರಕಾರ ಮೂವರು ಡಿಜಿಪಿ ದರ್ಜೆಯ ಅಧಿಕಾರಿಯನ್ನು ಸರಕಾರ ಪೊಲೀಸ್ ಮಹಾನಿರ್ದೇಶಕರ ಹುದ್ದೆಯ ಪ್ಯಾನಲ್‌ನಲ್ಲಿ ಸೇರಿಸಬೇಕಾಗುತ್ತದೆ. ಈ ಪೈಕಿ ಪೊಲೀಸ್ ಗೃಹಮಂಡಳಿ ಡಿಜಿಪಿಯಾಗಿದ್ದ ಡಾ| ಕೆ.ರಾಮಚಂದ್ರ ರಾವ್ ಪ್ರಕರಣವೊಂದರಲ್ಲಿ ಸಂಬಂಧಿಸಿದಂತೆ ಸರಕಾರ ಕಡ್ಡಾಯ ರಜೆ ನೀಡಿದೆ. ಹೀಗಾಗಿ ಅವರು ಈ ಸಂಭಾವ್ಯರ ಪಟ್ಟಿಯಲ್ಲಿ ಬರಲು ಸಾಧ್ಯವಿಲ್ಲ.
ಸಲೀಂ ಹಾಗೂ ರಾಮಚಂದ್ರ ರಾವ್ 1993ರ ಬ್ಯಾಚ್ ಐಪಿಎಸ್ ಅಧಿಕಾರಿಗಳಾಗಿದ್ದರೆ, ಪ್ರಶಾಂತ್ ಕುಮಾರ್ ಠಾಕೂರ್ 1992ನೇ ಬ್ಯಾಚ್. 1993ನೇ ಬ್ಯಾಚ್‌ನ ಇನ್ನೊಬ್ಬ ಮಹಿಳಾ ಅಧಿಕಾರಿ ಮಾಲಿನಿಕೃಷ್ಣ ಮೂರ್ತಿ ಜುಲೈಯಲ್ಲಿ ನಿವೃತ್ತಿಯಾಗುವುದರಿಂದ ಸರಕಾರ ಅವರನ್ನು ಪರಿಗಣಿಸುವ ಸಾಧ್ಯತೆ ಕಡಿಮೆ. ಸೇವಾ ಜ್ಯೇಷ್ಠತೆ ವಿಷಯವನ್ನೇ ಪ್ರಧಾನವಾಗಿ ಪರಿಗಣಿಸಿದರೆ ಪ್ರಶಾಂತ್ ಕುಮಾರ್ ಮುನ್ನೆಲೆಗೆ ಬರಲಿದ್ದಾರೆ.
ಶಂಕರ ಮಹದೇವ ಬಿದರಿ ಬಳಿಕ ಕನ್ನಡಿಗ ಐಪಿಎಸ್ ಅಧಿಕಾರಿಗಳ್ಯಾರು ಪೊಲೀಸ್ ಮಹಾನಿರ್ದೇಶಕ ಹುದ್ದೆಗೆ ಏರಿಲ್ಲ. ಇದೀಗ ಎಂ.ಎ ಸಲೀಂರವರಿಗೆ ಪೊಲೀಸ್ ಮಹಾ ನಿರ್ದೇಶಕರ ಹುದ್ದೆ ಅಲಂಕರಿಸುವ ಅವಕಾಶ ಸೃಷ್ಟಿಯಾಗಿದ್ದು, ಸರಕಾರ ಯಾವ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಕಾದು ನೋಡಬೇಕಾಗಿದೆ.
