ಸುಹಾಸ್ ಶೆಟ್ಟಿ ಮರ್ಡರ್: ರಿವೇಂಜ್ ಗೆ ನಡೆಯುತ್ತಿದೆಯಾ ಗೇಮ್ ಪ್ಲ್ಯಾನ್..? ಬಜಪೆ, ಜೋಕಟ್ಟೆ, ಸುರತ್ಕಲ್ ಪರಿಸರದಲ್ಲಿ ಆತಂಕ ಮೂಡಿಸುತ್ತಿದೆ ಮಾರಕಾಸ್ತ್ರ ಸದ್ದು.!

ಕರಾವಳಿ

ಕರಾವಳಿಯಾದ್ಯಂತ ತೀವ್ರ ಸಂಚಲನಕ್ಕೆ ಕಾರಣವಾಗಿದ್ದ ರೌಡಿಶೀಟರ್ ಸುಹಾಸ್ ಶೆಟ್ಟಿ ಮರ್ಡರ್ ಪ್ರಕರಣದ ಪ್ರಮುಖ ಆರೋಪಿಗಳನ್ನು ಪೊಲೀಸರು ಬಲೆಗೆ ಬೀಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈಗಾಗಲೇ ಎಂಟು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಕೃತ್ಯದಲ್ಲಿ ಭಾಗಿಯಾಗಿದ್ದ ಇನ್ನಿಬ್ಬರು ಆರೋಪಿಗಳ ಹೆಡೆಮುರಿ ಕಟ್ಟಲು ಪೊಲೀಸರು ತಯಾರಿಯಲ್ಲಿದ್ದಾರೆ. ಈ ನಡುವೆಯೇ ಸುಹಾಸ್ ಮರ್ಡರ್ ಗೆ ಗೇಮ್ ಪ್ಲ್ಯಾನ್ ನಡೆಯುತ್ತಿದೆಯಾ ಅನ್ನುವ ಸುದ್ದಿಗಳು ಹರಿದಾಡುತ್ತಿವೆ.

ರೌಡಿ ಶೀಟರ್ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ ಹಲವು ಆಯಾಮಗಳಲ್ಲಿ ಸುದ್ದಿಯಾಗಿತ್ತು. ಸುಹಾಸ್ ಶೆಟ್ಟಿ ಯದ್ದು ಧರ್ಮ ದ್ವೇಷಕ್ಕೆ ಬಲಿ ಎಂದು ಮೊದಲು ಪುಕಾರು ಹಬ್ಬಿ ಹಿಂದುತ್ವವಾದಿ ಸಂಘಟನೆಗಳು ದಕ್ಷಿಣ ಕನ್ನಡ ಜಿಲ್ಲೆ ಬಂದ್ ಗೆ ಕರೆಕೊಟ್ಟಿದ್ದರು. ತರುವಾಯ ಇದು ಗ್ಯಾಂಗ್ ವಾರ್ ಗೆ ಸಂಬಂಧಿಸಿದ ಕೊಲೆ ಎಂಬುದಾಗಿ ದೃಢಪಟ್ಟಿದೆ. ಇದರ ಜೊತೆಗೆ ಸುಹಾಸ್ ಶೆಟ್ಟಿಯಿಂದ ಹತ್ಯೆಯಾದ ಪಾಝಿಲ್ ಹತ್ಯೆಗೆ ಪ್ರತೀಕಾರದ ಕೊಲೆ ಎಂಬುದು ಥಳುಕು ಹಾಕಿಕೊಂಡಿದೆ. ಪಾಝಿಲ್ ಸಹೋದರ ಆದಿಲ್ ಮಹರೂಫ್ ಸಫ್ವಾನ್ ಗ್ಯಾಂಗ್ ಗೆ ಸುಪಾರಿ ನೀಡಿರುವುದು ಕೂಡ ಪೊಲೀಸ್ ತನಿಖೆಯಿಂದ ದೃಢಪಟ್ಟಿದೆ.

ಸಫ್ವಾನ್, ಪ್ರಶಾಂತ್ , ಧನರಾಜ್ ಬಜಪೆಯ ಶಾಂತಿಗುಡ್ಡೆಯಲ್ಲಿ ಒಟ್ಟೊಟ್ಟಾಗಿಯೇ ಬೆಳೆದವರು. ಆ ನಂತರ ಇವರು ಪ್ರತ್ಯೇಕ ಗ್ಯಾಂಗ್ ಕಟ್ಟಿಕೊಂಡು ವೈಯಕ್ತಿಕ ದ್ವೇಷಕ್ಕೆ ಇಳಿದರು. ಸಪ್ವಾನ್ ಹಾಗೂ ಪ್ರಶಾಂತ್, ಧನರಾಜ್ ಗುಂಪಿನ ಮಧ್ಯೆ ಬದ್ಧ ವೈರತ್ವವಿತ್ತು. 2023 ರಲ್ಲಿ ಪ್ರಶಾಂತ್ ಗುಂಪು ಸಫ್ವಾನ್ ಗೆ ಡ್ರ್ಯಾಗನ್ ಚುಚ್ಚಿ ಕೊಲ್ಲಲು ವಿಫಲ ಪ್ರಯತ್ನ ನಡೆಸಿದ್ದ. ತರುವಾಯ ಎರಡು ಗ್ಯಾಂಗಿನ ಮಧ್ಯೆ ‘ನಾನಾ ನೀನಾ’ ಅನ್ನುವ ರೀತಿಯ ವೈರತ್ವ ಮೂಡಿತ್ತು. ಈ ನಡುವೆ ಬಜಪೆ ಕಳವಾರಿನವನಾಗಿದ್ದ ಸುಹಾಸ್ ಪಾಝಿಲ್ ಹತ್ಯೆಯ ನಂತರ ಹವಾ ಮೆಂಟೈನ್ ಮಾಡಿಕೊಂಡಿದ್ದ. ಸಫ್ವಾನ್ ತಂಡಕ್ಕೆ ಎದುರಾಗಿ ಪ್ರಶಾಂತ್ ತಂಡಕ್ಕೆ ಬೆಂಬಲವಾಗಿ ನಿಂತಿದ್ದ. ಸಫ್ವಾನ್ ಮುಗಿಸಲು ಪ್ರಶಾಂತ್ ಟೀಮ್, ಪ್ರಶಾಂತ್ ಮುಗಿಸಲು ಸಫ್ವಾನ್ ಟೀಂ ರೆಡಿಯಾಗಿತ್ತು ಅನ್ನುವ ಗಾಸಿಪ್ ಹರಿದಾಡಿತ್ತು. ಆದರೆ ಪ್ರಶಾಂತ್ ಮುಗಿಸಲು ಸಫ್ವಾನ್ ಗೆ ದೊಡ್ಡ ಸವಾಲು ಆಗಿದ್ದೇ ಸುಹಾಸ್ ಶೆಟ್ಟಿ. ಪ್ರಶಾಂತ್ ಬದಲಿಗೆ ಸುಹಾಸ್ ಮುಗಿಸಿದರೆ ಧರ್ಮ ದ್ವೇಷಕ್ಕೆ ಬಲಿಯಾದ ಪಾಝಿಲ್ ಕಡೆಯಿಂದಲೂ ಬೆಂಬಲ ಸಿಗಬಹುದು ಅನ್ನುವ ಕಾರಣಕ್ಕೆ ಸಫ್ವಾನ್ ತಂಡ ತನ್ನ ಪ್ಲ್ಯಾನನ್ನೇ ಬದಲಾಯಿಸಿ ಸುಹಾಸ್ ನನ್ನು ಮುಗಿಸಿಬಿಟ್ಟರು.

ಸುಹಾಸ್ ಶೆಟ್ಟಿ ಹಿಂದೂ ಕಾರ್ಯಕರ್ತ ಮಾತ್ರವಲ್ಲ ಮಂಗಳೂರಿನ ನಟೋರಿಯಸ್ ಗ್ಯಾಂಗ್ ಗಳಲ್ಲಿ ಒಂದಾಗಿರುವ ಕೋಡಿಕೆರೆ ಗ್ಯಾಂಗ್ ನಲ್ಲಿ ಗುರುತಿಸಿಕೊಂಡಿದ್ದ. ಸುಹಾಸ್ ಶೆಟ್ಟಿ ಹತ್ಯೆಯಿಂದ ಆತನ ಕಡೆಯ ಹುಡುಗರು ಪ್ರತೀಕಾರಕ್ಕೆ ಇಳಿದಿರುವ ಸುದ್ದಿ ಇದೀಗ ಕೇಳಿ ಬರುತ್ತಿದೆ. ಇದು ಜಿಲ್ಲೆಯಲ್ಲಿ ಮತ್ತೊಂದು ಆತಂಕಕ್ಕೆ ಕಾರಣವಾಗಿದೆ. ಬಜಪೆ, ಜೋಕಟ್ಟೆ ಹಾಗೂ ಸುರತ್ಕಲ್ ಪರಿಸರದಲ್ಲಿ ಒಂದು ಗುಂಪು ರಿವೇಂಜ್ ತೆಗೆದುಕೊಳ್ಳಲು ಸನ್ನದ್ಧವಾಗಿದೆ ಅನ್ನುವ ಸುದ್ದಿ ಕೇಳಿ ಬರುತ್ತಿದೆ. ನಿನ್ನೆ ರಾತ್ರಿ ಬಜಪೆಯಲ್ಲಿ ಒಂದು ಗುಂಪು ಕಾರಿನಲ್ಲಿ ಮಾರಕಾಸ್ತ್ರ ಪ್ರದರ್ಶಿಸುವ ಮೂಲಕ ರಿವೇಂಜ್ ಗೇಮ್ ನ ಸುದ್ಧಿಗೆ ದೊಡ್ಡ ಪುಷ್ಠಿ ದೊರಕಿದೆ. ಸುಹಾಸ್ ಹಂತಕ ಸಫ್ವಾನ್ ಊರಾದ ಶಾಂತಿಗುಡ್ಡೆಯಲ್ಲೂ ಕೆಲವೊಂದು ಮನೆಯ ಸುತ್ತ ಗುಂಪೊಂದು ಹೊಂಚು ಹಾಕಿ ಕುಳಿತುಕೊಂಡಿರುವ ಸುದ್ದಿ ಹಬ್ಬಿತ್ತು . ಈ ಕೂಡಲೇ ಸ್ಥಳೀಯರು ಪೊಲೀಸ್ ಇಲಾಖೆಗೆ ಮಾಹಿತಿ ಕೊಟ್ಟರೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಅನ್ನುವ ಮಾತುಗಳು ಕೇಳಿ ಬರುತ್ತಿವೆ. ಪೊಲೀಸರು ಅಲ್ಲಲ್ಲಿ ನಾಕಾಬಂದಿ ಹಾಕಿ ತಪಾಸಣೆ ನಡೆಸುತ್ತಿದ್ದರೂ ಮಾರಕಾಸ್ತ್ರ ಗಳು ಎಗ್ಗಿಲ್ಲದೆ ಒಂದು ಕಡೆಯಿಂದ ಇನ್ನೊಂದು ಕಡೆಗೆ ವಾಹನದ ಮೂಲಕ ಸರಬರಾಜು ಆಗುತ್ತಿದ್ದರೂ ಪೊಲೀಸ್ ಇಲಾಖೆ ನಿಷ್ಕ್ರಿಯ ವಾಗಿ ಕೂತಿದೆ. ತಿಂಗಳ ಹಿಂದೆಯೇ ಸುಹಾಸ್ ಶೆಟ್ಟಿ ಹತ್ಯೆಯ ಬಗ್ಗೆ ಪೊಲೀಸರಿಗೆ ಕ್ಲೂ ಸಿಕ್ಕಿತ್ತಾದರೂ ಪೊಲೀಸ್ ಇಲಾಖೆಯ ಮೌನ ಸುಹಾಸ್ ಶೆಟ್ಟಿ ಹತ್ಯೆಗೆ ಕಾರಣವಾಗಿತ್ತು. ಇದೀಗ ರಿವೇಂಜ್ ಹೆಸರಿನಲ್ಲಿ ಜಿಲ್ಲೆಯ ಹಲವೆಡೆ ಮಾರಕಾಸ್ತ್ರ ಸದ್ದು ಕೇಳಿ ಬರುತ್ತಿದ್ದರೂ ಪೊಲೀಸರು ಮೌನಕ್ಕೆ ಶರಣಾಗಿರುವುದು ಇನ್ನೊಂದು ಹತ್ಯೆಗೆ ಮುಹೂರ್ತ ನಡೆಯುತ್ತಾ ಅನ್ನುವ ಆತಂಕದಲ್ಲಿ ಜನಸಾಮಾನ್ಯರಿದ್ದಾರೆ. ರಿವೇಂಜ್ ಹೆಸರಿನಲ್ಲಿ ಅಮಾಯಕರ ಬಲಿಯಾಗದಿರಲಿ. ಪೊಲೀಸ್ ಇಲಾಖೆ ಇನ್ನಾದರೂ ಅಲರ್ಟ್ ಆಗಲಿ.