ನಕಲಿ ಇನ್ ವಾಯ್ಸ್ ಗಳನ್ನು ಸೃಷ್ಟಿಸಿ, 45 ಕೋಟಿ ರೂಪಾಯಿ ವಂಚನೆ; ಜಿ.ಎಸ್.ಟಿ. ಗುಪ್ತಚರ ನಿರ್ದೇಶನಾಲಯದಿಂದ ವ್ಯಕ್ತಿಯ ಬಂಧನ

ರಾಜ್ಯ

145 ಕೋಟಿ ರೂಪಾಯಿ ಮೌಲ್ಯದ ನಕಲಿ ಇನ್ ವಾಯ್ಸ್ ಗಳನ್ನು ಸೃಷ್ಟಿಸಿ ಅಂದಾಜು 45 ಕೋಟಿ ರೂಪಾಯಿ ವಂಚನೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬ ವ್ಯಕ್ತಿಯನ್ನು ಜಿ.ಎಸ್.ಟಿ. ಗುಪ್ತಚರ ನಿರ್ದೇಶನಾಲಯದ ಬೆಳಗಾವಿ ವಲಯ ಘಟಕದ ಅಧಿಕಾರಿಗಳು ಬಂಧಿಸಿದ್ದಾರೆ. ಪ್ರಾಥಮಿಕ ತನಿಖೆಗಳ ಪ್ರಕಾರ, ನಕಲಿ ದಾಖಲೆಗಳನ್ನು ಬಳಸಿಕೊಂಡು ಸುಸಜ್ಜಿತ ಗುಂಪೊಂದು ನಕಲಿ ಜಿ ಎಸ್ ಟಿ ನೋಂದಣಿಗಳನ್ನು ಸೃಷ್ಟಿಸಿ ನಕಲಿ ಐಟಿಸಿಯನ್ನು ಪಡೆದುಕೊಂಡು ರವಾನಿಸುವ ಚಟುವಟಿಕೆಯಲ್ಲಿ ನಿರತವಾಗಿತ್ತು. ಶೋಧದ ಸಮಯದಲ್ಲಿ ಆರೋಪಿಯಿಂದ ಅಧಿಕಾರಿಗಳು ಮೊಬೈಲ್ ಫೋನ್, ನಕಲಿ ದಾಖಲೆಗಳು, ನಕಲಿ ಆಧಾರ್ ಕಾರ್ಡುಗಳು ಮತ್ತು ನಕಲಿ ಸಂಸ್ಥೆಗಳ ಸೈನ್ ಬೋರ್ಡ್ ನ ಛಾಯಾಚಿತ್ರಗಳು ಸೇರಿದಂತೆ ಹಲವಾರು ದಾಖಲೆಗಳು ಮತ್ತು ಸಾಕ್ಷ್ಯಗಳನ್ನು ವಶಪಡಿಸಿಕೊಂಡಿದ್ದಾರೆ.

ನಕಲಿ ಇನ್ವಾಯ್ಸ್ ಗಳು ಮತ್ತು ಇ-ವೇ ಬಿಲ್ ಗಳನ್ನು ರಚಿಸಲು ನೈಜ ವ್ಯಾಪಾರ ಕಾರ್ಯಾಚರಣೆಗಳಿಲ್ಲದ ಶೆಲ್ ಕಂಪನಿಗಳನ್ನು ಬಳಕೆ ಮಾಡಿಕೊಂಡಿರುವುದು ಈ ವೇಳೆ ಬೆಳಕಿಗೆ ಬಂದಿದೆ. ಹಾಗೇಯೇ ಆರೋಪಿಯ 26 ನಕಲಿ ಜಿ.ಎಸ್.ಟಿ. ಪತ್ರಗಳನ್ನು ಸೃಷ್ಟಿಸಿರುವುದು ತಿಳಿದು ಬಂದಿದೆ. ಆರೋಪಿಯನ್ನು ಬೆಂಗಳೂರಿನಲ್ಲಿ, 2017ರ ಸಿ ಜಿ ಎಸ್ ಟಿ ಕಾಯ್ದೆಯ ಸೆಕ್ಷನ್ 69 ರ ಅಡಿಯಲ್ಲಿ ಬಂಧಿಸಿ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. ಆರೋಪಿಯನ್ನು ಬೆಳಗಾವಿಗೆ ವರ್ಗಾಯಿಸಲು ಟ್ರಾನ್ಸಿಟ್ ರಿಮಾಂಡ್ ಅನ್ನು ಪಡೆದು ಬೆಳಗಾವಿಯ ಗೌರವಾನ್ವಿತ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿ ಏಳು ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಜಿ.ಎಸ್.ಟಿ. ಗುಪ್ತಚರ ನಿರ್ದೇಶನಾಲಯದ ಬೆಳಗಾವಿ ವಲಯದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ‌.