ಆರೋಪಿಗಳಿಂದ 111.83 ಗ್ರಾಂ ಎಂಡಿಎಂಎ ಮತ್ತು 21.03 ಗ್ರಾಂ ಕೊಕೇನ್ ವಶಕ್ಕೆ
ಮಂಗಳೂರು ನಗರದ ಸಿಸಿಬಿ ಪೊಲೀಸರಿಗೆ ಬಂದ ಮಾಹಿತಿ ಮೇರೆಗೆ ಕಾವೂರಿನ ಗಾಂಧಿನಗರದ ಮಲ್ಲಿ ಲೇ ಔಟ್ ಎಂಬಲ್ಲಿ 21-09-2025 ರಂದು ಬೆಳಿಗ್ಗೆ ದಾಳಿ ನಡೆಸಿ, ದ್ವಿಚಕ್ರ ವಾಹನದೊಂದಿಗೆ ಇಬ್ಬರು ಯುವಕರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಾವೂರಿನ ಚಿರಾಗ್ ಸನಿಲ್ ಮತ್ತು ಆಲ್ವಿನ್ ಕ್ಲಿಂಟನ್ ಡಿ ಸೋಜಾ ಎಂದು ತಿಳಿದುಬಂದಿದ್ದು, ಅವರಿಂದ ರೂಪಾಯಿ 22 ಲಕ್ಷದ 30 ಸಾವಿರ ಮೌಲ್ಯದ 111.83 ಗ್ರಾಂ ಎಂಡಿಎಂಎ ವಶಪಡಿಸಲಾಗಿದೆ. ಕೇರಳದ ಅಬ್ದುಲ್ ಕರೀಂ ಎಂಬಾತನು ನೀಡಿದ ಹಣದಿಂದ ಮುಂಬೈಯಲ್ಲಿ ವಾಸವಿರುವ ಆಫ್ರಿಕನ್ ಪ್ರಜೆ ಬೆಂಜಮಿನ್ ಎಂಬಾತನಿಂದ ಆರೋಪಿ ಚಿರಾಗ್ ಸನಿಲ್ ಖರೀದಿ ಮಾಡಿ ತಂದಿರುವುದಾಗಿ ಆರೋಪಿಗಳು ಬಾಯಿ ಬಿಟ್ಟಿದ್ದಾರೆ. ಪ್ರಕರಣದ ಸಂಬಂಧ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಪ್ರಕರಣದಲ್ಲಿ ಮಾದಕ ವಸ್ತು ಖರೀದಿಸಲು ಹಣವನ್ನು ನೀಡಿದ ಅಬ್ದುಲ್ ಕರೀಂ ಇ.ಕೆ ಎಂಬಾತನನ್ನು ದಿನಾಂಕ: 22.09.2025 ರಂದು ಮಂಗಳೂರು ಕೇಂದ್ರ ರೇಲ್ವೆ ನಿಲ್ದಾಣದ ಬಳಿ ಬಂಧಿಸಲಾಗಿದೆ.
ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೆ ಗುರಿಪಡಿಸಿದಾಗ ತಮ್ಮ ಬಳಿ ಇದ್ದ ಕೊಕೇನ್ ಮಾದಕ ವಸ್ತುಗಳನ್ನು ಈಗಾಗಲೇ ಮೂರು ವ್ಯಕ್ತಿಗಳಿಗೆ ಮಾರಾಟ ಮಾಡಿರುವುದಾಗಿ ತಿಳಿಸಿದ್ದು, ಈ ಬಗ್ಗೆ ಸಿಸಿಬಿ ಘಟಕದ ಪೊಲೀಸ್ ಉಪನಿರೀಕ್ಷಕರು ಸದರಿ ವ್ಯಕ್ತಿಗಳ ಮಾಹಿತಿ ಪಡೆದು ದಿನಾಂಕ: 21-09-2025 ರಂದು ರಾತ್ರಿ 8.45 ಗಂಟೆಗೆ ಮಣ್ಣಗುಡ್ಡೆಯ ಸೆಂಟ್ರಲ್ ವೇರ್ ಹೌಸ್ ಬಳಿ ಮೂರು ದ್ವಿಚಕ್ರ ವಾಹನಗಳಲ್ಲಿ ನಿಂತುಕೊಂಡು ಗಿರಾಕಿಗಳಿಗಾಗಿ ಕಾಯುತ್ತಿದ್ದವರ ಮೇಲೆ ದಾಳಿ ಮಾಡಿದಾಗ ತಪ್ಪಿಸಿ ಪರಾರಿಯಾಗಲು ಪ್ರಯತ್ನಿಸಿದ್ದು, ಅವರಿಂದ ಸುಮಾರು 21.03 ಗ್ರಾಂ ಕೊಕೇನನ್ನು ಸ್ವಾದೀನಪಡಿಸಿಕೊಡಿರುತ್ತಾರೆ. ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಆರೋಪಿಗಳಾದ ಜನನ್ @ ಜನನ್ ಜಗನ್ನಾಥ, ರಾಜೇಶ್ ಬಂಗೇರ, ಮತ್ತು ವರುಣ್ ಗಾಣಿಗ ಎಂಬವರನ್ನು ವಶಕ್ಕೆ ಪಡೆದು ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ಈ ಎರಡೂ ಪ್ರಕರಣಗಳಲ್ಲಿ ದಸ್ತಗಿರಿಯಾದ ಆರೋಪಿಗಳನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಮಾನ್ಯ ನ್ಯಾಯಾಲಯ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿರುತ್ತದೆ. ಮಾದಕ ವಸ್ತು ಪ್ರಕರಣಗಳಲ್ಲಿ ಮಾದಕ ವಸ್ತುಗಳ ಮಾರಾಟ ಮಾಡಿದ ಜಾಲ, ಮಾದಕ ವಸ್ತುಗಳನ್ನು ಉಪಯೋಗಿಸುವ ವ್ಯಕ್ತಿಗಳ ಮತ್ತು ಪೆಡ್ಲರ್ ಗಳ ಬಗ್ಗೆ ತನಿಖೆಗೊಳಪಡಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪೊಲೀಸ್ ಕಮೀಷನರ್ ಮಾಹಿತಿ ನೀಡಿರುತ್ತಾರೆ.
ಕಾವೂರು ಠಾಣೆಯಲ್ಲಿ ದಾಖಲಾದ ಪ್ರಕರಣದ ಆರೋಪಿ ಅಬ್ದುಲ್ ಕರೀಂ ಇ.ಕೆ ಎಂಬಾತನು ವೆಲ್ಲಾಯುರ್ ನಿಲಾಂಬುರ್ ತಾಲೂಕು, ಮಲ್ಲಾಪ್ಪುರಂ ಜಿಲ್ಲೆ ಕೇರಳ ನಿವಾಸಿ. ಈತನನ್ನು ಎಂಬಾತನನ್ನು 22.09.2025 ರಂದು ಮಂಗಳೂರು ಕೇಂದ್ರ ರೇಲ್ವೆ ನಿಲ್ದಾಣದ ಬಳಿ ಕಾವೂರು ಪೊಲೀಸರು ವಶಕ್ಕೆ ಪಡೆದಿರುತ್ತಾರೆ.
