ಕಾವೂರು: ವಿದೇಶದಲ್ಲಿ ಉದ್ಯೋಗ ಮಾಡಲು ವೀಸಾ ಕೊಡಿಸುವುದಾಗಿ ನಂಬಿಸಿ ಹಲವಾರು ಮಂದಿಯಿಂದ ಹಣ ಪಡೆದುಕೊಂಡು ಬಳಿಕ ಉದ್ಯೋಗ ಕೊಡಿಸದೆ ವಂಚಿಸುತ್ತಿದ್ದ ಆರೋಪದಲ್ಲಿ ಇಬ್ಬರನ್ನು ಕಾವೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಬೆಂಗಳೂರಿನ ಆನೆಕಲ್ ತಾಲೂಕಿನ ಪ್ರ್ರಕೃತಿ ಯು ಮತ್ತು ಕುಂದಾಪುರ ತಾಲೂಕಿನ ಗಂಗೊಳ್ಳಿಯ ಆಲ್ಡನ್ ರೆಬೇರೋ ಎಂದು ಗುರುತಿಸಲಾಗಿದೆ.
ಕಾವೂರು ಠಾಣಾ ವ್ಯಾಪ್ತಿಯ ಹಲವಾರು ಮಂದಿಗೆ ವಿದೇಶದಲ್ಲಿ ಉದ್ಯೋಗ ಮಾಡಲು ವೀಸಾ ಕೊಡಿಸುವುದಾಗಿ ಹೇಳಿ 1 ಕೋಟಿ ರೂಪಾಯಿಗೂ ಅಧಿಕ ಹಣವನ್ನು ಪಡೆದುಕೊಂಡು ವಂಚಿಸಿತಿರುವ ಬಗ್ಗೆ ಪ್ರಕರಣ ದಾಖಲಾಗಿತ್ತು. ಆರೋಪಿಗಳು ಜನರಿಂದ ಪಾಸ್ಪೋರ್ಟ್ಗಳನ್ನು ಪಡೆದುಕೊಂಡು ಮನೆಯಲ್ಲಿ ಅಕ್ರಮವಾಗಿ ಇರಿಸುತ್ತಿದ್ದರು ಎನ್ನಲಾಗಿದೆ. ಅದರಂತೆ ಕಾರ್ಯಾಚರಣೆ ನಡೆಸಿದ ಕಾವೂರು ಪೊಲೀಸರು ಆರೋಪಿಗಳಿಂದ 24 ಪಾಸ್ಪೋರ್ಟ್, 43 ಗ್ರಾಂ ಚಿನ್ನ ಮತ್ತು 2 ಮೊಬೈಲ್ ಪೋನ್ ಗಳನ್ನು ಬೆಂಗಳೂರಿನಲ್ಲಿ ಸ್ವಾಧೀನಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಮಂಗಳೂರು ಉತ್ತರ ಉಪ-ವಿಭಾಗದ ಎ.ಸಿ.ಪಿ. ಶ್ರೀಕಾಂತ್ ಕೆ. ರವರ ಮಾರ್ಗದರ್ಶನದಲ್ಲಿ ಕಾವೂರು ಠಾಣೆಯ ಇನ್ಸ್ಪೆಕ್ಟರ್ ರಾಘವೇಂದ್ರ ಎಂ.ಬೈಂದೂರು, ಎಸ್ ಐ ಮಲ್ಲಿಕಾರ್ಜುನ ಬಿರಾದಾರ, ಸಿಬ್ಬಂದಿಗಳಾದ ನಾಗರತ್ನ, ರಾಘವೇಂದ್ರ, ಪ್ರವೀಣ್, ರಿಯಾಝ್ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.
