ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಆರೋಗ್ಯ ಇಲಾಖೆ ಎಂಬುವುದೊಂದು ಇದೆ. ಯಾವ ಕರ್ಮಕ್ಕೆ ಈ ಇಲಾಖೆ ಅನ್ನುವುದು ಗೊತ್ತಿಲ್ಲ. ಆರೋಗ್ಯ ಇಲಾಖೆಯ ಅಧಿಕಾರಿಗಳೇ ಅನಾರೋಗ್ಯ ಪೀಡಿತರಾದರೆ ಆ ಇಲಾಖೆಯ ಬಗ್ಗೆ ನಾಗರೀಕರಿಗೆ ಯಾವ ರೇಂಜಿನಲ್ಲಿ ಅಸಡ್ಡೆ ಇರಬಹುದು ಅಲ್ಲವೇ. ಆರೋಗ್ಯ ಇಲಾಖೆಗೊಬ್ಬರು ಮುಖ್ಯಾಧಿಕಾರಿ. ಹತ್ತು ಹದಿನೈದು ಇನ್ಸ್ ಪೆಕ್ಟರ್ ಗಳು. ಇಪ್ಪತ್ತೈದಕ್ಕೂ ಅಧಿಕ ಸಿಬ್ಬಂದಿಗಳು. ಮಾತ್ರವಲ್ಲ ವಾರ್ಡ್ ವಾರ್ಡ್ ಗಳಿಗೆ ಆರೋಗ್ಯ ನಿರೀಕ್ಷಕ ಕಚೇರಿಗಳು. ಸರಕಾರದ ದುಡ್ಡನ್ನು ಬಾಚಿ ತಿನ್ನುವ ಕಾರ್ಪೊರೇಷನ್ ಆರೋಗ್ಯ ಕುಳಗಳು ಸಾರ್ವಜನಿಕರಿಗೆ ಒಂದು ನಯಾಪೈಸೆಯ ಉಪಕಾರ ಮಾಡಿದೆಯಾ.. ಕಿಕ್ ಬ್ಯಾಕ್ ಗಾಗಿಯೇ ಇಲ್ಲಿನ ಆರೋಗ್ಯ ಕುಳಗಳು ಬಾಯ್ತೆರೆದು ಕೂತಿದೆ
ಅಬ್ಬಬ್ಬಾ.. ಇದು ದಕ್ಷಿಣ ಕನ್ನಡ ಜಿಲ್ಲೆ. ಇಲ್ಲಿ ವಿದ್ಯಾವಂತರದ್ದೇ ಸಂಖ್ಯೆ ಜಾಸ್ತಿ. ಘಟ್ಟದ ಮೇಲಿನವರನ್ನು ನಾವು ಅನಕ್ಷರಸ್ಥರು, ಅವಿದ್ಯಾವಂತರು ಎಂದು ಕುಚೋದ್ಯ ಮಾಡುವುದುಂಟು. ಅವರು ಅವಿದ್ಯಾವಂತರು ಆಗಿರಬಹುದು. ಹೆಬ್ಬೆಟ್ಟು ದಾಸರು ಆಗಿರಬಹುದು. ಆದರೆ ತಮಗೆ ಬೇಕಾದ ಮೂಲಸೌಕರ್ಯಗಳನ್ನು ಹಠ ಹಿಡಿದು ಪಡೆಯುತ್ತಾರೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಜನ ವಿದ್ಯಾವಂತರು ಮಾತ್ರ ಬುದ್ಧಿವಂತರಂತೂ ಖಂಡಿತ ಅಲ್ಲ. ಮೆಸ್ಕಾಂ ಇಲಾಖೆ ವಾರವಿಡೀ ವಿದ್ಯುತ್ ಕಡಿತಗೊಳಿಸಿದರೂ ನಾವು ಮಾತಾಡಲ್ಲ, ಬಂದಾಗ ಬರಬಹುದು ಎಂದು ಬೆಡ್ ಶೀಟ್ ಹೊದ್ದು ಮಲಗಿ ಬಿಡುತ್ತೇವೆ. ಮಹಾನಗರ ಪಾಲಿಕೆ ನೀರು ಪೂರೈಸದೆ ಸ್ಥಗಿತಗೊಳಿಸಿದರೂ ನಾವು ಪ್ರಶ್ನೆ ಮಾಡುವುದಿಲ್ಲ. ಬದಲಾಗಿ ಕುಟುಂಬ ಸಮೇತ ನೀರಿರುವ ಸಂಬಂಧಿಕರ ಮನೆಗೆ ಗುಳೇ ಹೋಗುತ್ತಾರೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಹೊಂಡ ಬಿದ್ದು ವಾಹನ ಸವಾರ ಮೃತರಾದರೆ ನಾವು ತುಟಿಕ್ ಪಿಟಿಕ್ ಅನ್ನುವುದಿಲ್ಲ. ವಿಡಿಯೋ ಮಾಡಿ ವೈರಲ್ ಮಾಡುತ್ತೇವೆ. ಮಹಾನಗರ ಪಾಲಿಕೆಯು ಕಲುಷಿತ ನೀರನ್ನು ಪೂರೈಕೆ ಮಾಡಿ ಆರೋಗ್ಯ ಹದೆಗೆಟ್ಟರೂ ನಾವು ಡೋಂಟ್ ಕೇರ್. ವ್ಯವಸ್ಥೆಯನ್ನು ಒಂದಿಂಚೂ ಪ್ರಶ್ನಿಸುವುದಿಲ್ಲ. ಈ ನೀರು ಬಂದಿದ್ದೆ ಪುಣ್ಯ ಅಂದುಕೊಂಡು ತೀರ್ಥ ರೂಪದ ರೀತಿ ಕುಡಿಯುತ್ತೇವೆ. ಆದರೆ ಘಟ್ಟದ ಮೇಲೆ ಇಂತಹದ್ದೊಂದು ಪರಿಸ್ಥಿತಿ ಬಂದರೆ ಅಲ್ಲಿನ ಊರವರು ಜಾಗೃತಗೊಳ್ಳುತ್ತಾರೆ. ಸಂಬಂಧಪಟ್ಟ ಇಲಾಖೆ, ಅಧಿಕಾರಿಗಳು, ಜನಪ್ರತಿನಿಧಿಗಳನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ. ಅವರು ಅವಿದ್ಯಾವಂತರಾದರೂ ಬುದ್ಧಿವಂತರು. ನಮ್ಮ ಜಿಲ್ಲೆಯಲ್ಲಿ ಲವ್ ಜಿಹಾದ್, ಗೋ ಸಾಗಾಟ, ಹಿಂದೂ -ಮುಸ್ಲಿಂ ಎಂದು ಇಲ್ಲಿನ ಜನ ಒಟ್ಟಾಗುತ್ತಾರೆ. ಭ್ರಷ್ಟ ವ್ಯವಸ್ಥೆಯ ವಿರುದ್ಧ ಒಂದೂ ಮಾತು ಆಡುತ್ತಿಲ್ಲ. ಜನ ಮಾತನಾಡದಿದ್ದರೆ ಇಲ್ಲಿನ ವ್ಯವಸ್ಥೆ ಹೇಗೆ ಸರಿ ಆಗಬೇಕು ಅಲ್ಲವೇ.?
ಮಹಾನಗರ ಪಾಲಿಕೆಯ ಆರೋಗ್ಯ ಇಲಾಖೆಯ ಎಡಬಿಡಂಗಿತನ ಒಂದೆರಡಲ್ಲ. ಮುಕ್ಕಲು ರೆಡಿಯಾಗಿ ಕುಂತ ಕೂಟ ಅದು. ಮಹಾನಗರ ಪಾಲಿಕೆಯಲ್ಲಿಯ ಕಳ್ಳ -ಕಾಕರುಗಳು ಅದ್ಯಾವ ಮಟ್ಟದಲ್ಲಿ ಇಲ್ಲಿ ಹಣ ಮಾಡುತ್ತಿದ್ದಾರೆ ನೋಡಿ. ಇಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಫೈಲುಗಳು ಮುಂದಡಿ ಇಡಬೇಕಾದರೆ ಭಕ್ಷೀಸು ಕೊಟ್ಟರಷ್ಟೇ ಫೈಲು ಕ್ಲಿಯರೆನ್ಸ್ ಆಗುವುದು. ಮನಪಾಗೆ ತೆರಿಗೆ ಕಟ್ಟಿದ ದುಡ್ಡನ್ನೇ ನುಂಗಿ ನೀರು ಕುಡಿದವರಿದ್ದಾರೆ. ಟಿಪಿಓ ಸೆಕ್ಷನ್ ನಲ್ಲಿ ಮೈಸೂರು ಮುಡಾ ಹಗರಣವನ್ನು ಮೀರಿಸುವಂತೆ ಲಂಚಾವತಾರ ಇಲ್ಲಿ ನಡೆಯುತ್ತಿದೆ. ಸ್ಮಾರ್ಟ್ ಸಿಟಿಯಂತೂ ಗುಂಡಿ ಅಗೆದು ಜೇಬು ತುಂಬಿಸಿಕೊಳ್ಳುವ ಕರೆಪ್ಟ್ ಇಲಾಖೆಯಾಗಿ ಮಾರ್ಪಟ್ಟಿದೆ. ಮಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿಗಳಿಗೆ ಮೃಷ್ಟಾನ್ನ ಭೋಜನ ನೀಡುವ ಇಲಾಖೆಯೆಂದರೆ ಅದು ಕಂದಾಯ ಇಲಾಖೆ. ಇಲ್ಲಿದ್ದು ಎತ್ತಂಗಡಿಯಾದ ಅನೇಕರು ಮತ್ತೆ ಮತ್ತೆ ಇಲ್ಲಿಯೇ ಬೀಡು ಬಿಟ್ಟಿರುತ್ತಾರೆ. ಕಂದಾಯ ಸೆಕ್ಷನ್ ಬಿಟ್ಟು ಹೋಗಲು ಇಲ್ಲಿನ ಯಾವುದೇ ಅಧಿಕಾರಿಗಳಿಗೂ ಮನಸ್ಸು ಒಪ್ಪುತ್ತಿಲ್ಲ. ವರ್ಗಾವಣೆಯಾದರೂ ರಾಜಕಾರಣಿಗಳೊಂದಿಗೆ ವಸೂಲಿ ಬಾಜಿ ನಡೆಸಿ ಇಲ್ಲಿಯೇ ಪರ್ಮನೆಂಟಾಗಿ ಗೂಟ ಹಾಕುತ್ತಾರೆ. ಇನ್ನು ಗೋಲ್ಮಾಲ್ ನಡೆಸುವುದರಲ್ಲಿ ಕಂದಾಯ ಇಲಾಖೆಯಷ್ಟು ಎಕ್ಸ್ ಫರ್ಟ್ ಇನ್ನೊಂದಿಲ್ಲ. ಹಿಂದೆಲ್ಲ ರಶೀದಿಯಲ್ಲಿ ತೆರಿಗೆ ಕಟ್ಟಿದ ಹಣ ಗುಳುಂ ಮಾಡುವುದು ಸುಲಭವಿತ್ತು. ಕಂಪ್ಯೂಟರ್ ಸಿಸ್ಟಮ್ ಬಂದ ಮೇಲೆ ಅದೆಲ್ಲಾ ಕಷ್ಟ ಅನ್ನುವುದು ಜನಸಾಮಾನ್ಯರ ಸರಳವಾದ. ಈ ಅಧಿಕಾರಿಗಳು ರಂಗೋಲಿ ಕೆಳಗೆ ನುಸುಳುವುದರಲ್ಲಿ ನಿಸ್ಸೀಮರು. ಕಂಪ್ಯೂಟರ್ ಸಿಸ್ಟಮ್ ನಲ್ಲಿ ನಾನ್ ಫೈಡ್ ಇದ್ದದ್ದನ್ನು ಫೈಡ್ ಆಗಿ ತೋರಿಸುವುದರಲ್ಲಿ ಚಾಕಚಕ್ಯರು.

ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಆರೋಗ್ಯ ಇಲಾಖೆಯೇ ಅನಾರೋಗ್ಯ ಪೀಡಿತವಾಗಿದೆ. ಗ್ರಹಣ ಹಿಡಿದಿದೆ. ಆರೋಗ್ಯ ಇಲಾಖೆಯ ಗೋಲ್ ಮಾಲ್ ಗಳು ಒಂದಾ..ಎರಡಾ.. ಕೇಳಿದರೆ ಬೆಚ್ಚಿ ಬೀಳಿಸುವಂತವುಗಳು. ಇಲ್ಲಿ ದುಡ್ಡು ಕೊಟ್ಟರೆ ಎಲ್ಲವೂ ಸಲೀಸಾಗಿ ಸಿಗುತ್ತದೆ. ಭಕ್ಷೀಸು ಕೊಟ್ಟರೆ ಚಂದ್ರನನ್ನೇ ಮನೆ ಬಾಗಿಲಿಗೆ ತರುತ್ತಾರೆ ಇಲ್ಲಿನ ಆರೋಗ್ಯ ಇಲಾಖೆಯ ಸಡೇಸಾತ್ ಗಳು. ಆರೋಗ್ಯ ಇಲಾಖೆಯ ಅಧಿಕಾರಿಗಳ ಟೇಬಲ್ಲಿನ ಮೇಲೆ ದುಡ್ಡಿನ ಕಟ್ಟು ಇಟ್ಟರೆ ನಿಮಗೆ ಜನನ ಪ್ರಮಾಣ ಪತ್ರ (Birth certificate) ಕ್ಷಣಾರ್ಧದಲ್ಲಿ ನಿಮ್ಮ ಎದುರು ರೆಡಿಯಾಗಿರುತ್ತದೆ. ಒಂದು ವೇಳೆ ದುಡ್ಡು ಕೊಡದಿದ್ದರೆ ಜನನ ಪ್ರಮಾಣ ಪತ್ರ ಕೊಡುವುದು ಬಿಡಿ, ಕೋರ್ಟಿಗೆ ಹೋಗಿ ಸರಿ ಮಾಡಿ ಎಂದು ಉಡಾಫೆ ರೀತಿಯ ಉತ್ತರ ಕೊಡುತ್ತಾರೆ. ಕೇವಲ ಜನನ ಪ್ರಮಾಣ ಪತ್ರವಲ್ಲ, ಮರಣ ಪ್ರಮಾಣ ಪತ್ರದ ಹೆಸರನ್ನು ಇಮ್ಮಿಡಿಯಟ್ಟಾಗಿ ಸರಿ ಮಾಡಿ ಕೊಡುತ್ತಾರೆ. ಅದಕ್ಕೆಲ್ಲ ಅಧಿಕಾರಿಗಳ ಕೈ ಬೆಚ್ಚ ಮಾಡಬೇಕು.
ಇನ್ನು ಮನಪಾ ಆರೋಗ್ಯ ಇಲಾಖೆ ಎಂಬುವುದು ಬ್ರೋಕರ್ ಗಳ ಅಡ್ಡೆಯಾಗಿಬಿಟ್ಟಿದೆ. ಬ್ರೋಕರ್ ಮುಖಾಂತರ ಹೋದರೆ ಎಲ್ಲ ಕೆಲಸಗಳು ನಡೆಯುತ್ತದೆ. ಟ್ರೇಡ್ ಲೈಸೆನ್ಸ್ ಗೆ ಅರ್ಜಿ ಕೊಟ್ಟು ಬಂದರೆ ಆ ದಾಖಲೆ ಬೇಕು, ಈ ದಾಖಲೆ ಬೇಕು ಎಂದು ಸತಾಯಿಸುವ ಆರೋಗ್ಯ ಅಧಿಕಾರಿಗಳು ಬ್ರೋಕರ್ ಮುಖಾಂತರ ಹೋದರೆ ಒಂದೇ ದಿನದಲ್ಲಿ ಟ್ರೇಡ್ ಲೈಸೆನ್ಸ್ ಲಭ್ಯ.
ಇನ್ನು ಮಹಾನಗರ ಪಾಲಿಕೆಯ ಮೊದಲನೇ ಮಹಡಿಯಲ್ಲಿರುವ ಆರೋಗ್ಯ ಇಲಾಖೆಯ ಕಚೇರಿಗೆ ಜನಸಾಮಾನ್ಯ ಭೇಟಿ ನೀಡಿದರೆ ಅವರ ಪೂರ್ತಿ ಬಂಡವಾಳ ಹೊರ ಬೀಳುತ್ತದೆ. ಕಚೇರಿಯಲ್ಲಿ ಯಾವಾಗಲೂ ನೋಡಿದರೂ ಅಧಿಕಾರಿಗಳು ಇರುವುದಿಲ್ಲ. ಸೈಟ್ ಇನ್ಸ್ ಪೆಕ್ಷನ್ ಎಂದು ಹೊರಗಡೆ ಸುತ್ತಾಡುವುದೇ ಜಾಸ್ತಿ. ಕಚೇರಿಯಲ್ಲಿ ಯಾವ ಕೆಲಸಕ್ಕೂ ಹೋದರೂ ಸರ್ವರ್ ಇಲ್ಲ ಅನ್ನುವ ರೆಡಿಮೇಡ್ ಉತ್ತರ. ಇನ್ನು ಇಲ್ಲಿನ ಅಧಿಕಾರಿಗಳನ್ನಾದರೂ ಜನಸಾಮಾನ್ಯರು ಸಂಭಾಳಿಸಬಹುದು. ಆದರೆ ಇಲ್ಲಿನ ಸಿಬ್ಬಂದಿಗಳ ಆಟಾಟೋಪಕ್ಕೆ ಕಡಿವಾಣವಿಲ್ಲ. ಕೆಲಸಕ್ಕಾಗಿ ಬರುವ ಸಾರ್ವಜನಿಕರೆದುರು ದುರಂಹಕಾರದ ರೀತಿಯಲ್ಲಿ ಮಾತನಾಡುತ್ತಾರೆ. ಸಾರ್ವಜನಿಕರು ತಾವು ದಾಖಲೆಗಳನ್ನು ಪಡೆಯಲು ಬಂದರೆ ಒರಿಜಿನಲ್ ರಶೀದಿ ತೆಗೆದುಕೊಂಡು ಬನ್ನಿ ಅಂತ ಹೇಳಿ ಹೊರಕ್ಕೆ ಕಳಿಸುತ್ತಾರೆ. ಆದರೆ ಬ್ರೋಕರ್ ಗಳು ಹೋದರೆ ಇವರ ಮುಖದಲ್ಲಿ ಮಂದಹಾಸ. ಯಾವುದೇ ದಾಖಲೆ ಬೇಡ. ಎಲ್ಲವೂ ರೆಡಿ. ಹಣ ಕಂಡರೆ ಹೆಣವೂ ಬಾಯಿಬಿಡುತ್ತದೆ. ಆದರೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಬ್ರೋಕರ್ ಗಳನ್ನು ಕಂಡರೆ ಸಾಕು ಕುರ್ಚಿ ಕೊಟ್ಟು ಸನ್ಮಾನಿಸುತ್ತಾರೆ. ಇಲ್ಲಿ ಜನಸಾಮಾನ್ಯರಿಗೊಂದು ನ್ಯಾಯ.. ಬ್ರೋಕರ್ ಗಳಿಗೊಂದು ನ್ಯಾಯವೇ.?

ಜನನ-ಮರಣ ವಿಭಾಗದಲ್ಲೂ ಭ್ರಷ್ಟಾಚಾರ
ಮಂಗಳೂರು ಮಹಾನಗರ ಪಾಲಿಕೆಯ ಜನನ-ಮರಣ ವಿಭಾಗದಲ್ಲೂ ಭಾರೀ ಭ್ರಷ್ಟಾಚಾರ ನಡೆದಿದೆ. ದುಡ್ಡು ಕೊಟ್ಟರೆ ಮೇಲಾಧಿಕಾರಿಗಳಿಗೆ ತಿಳಿಯದಂತೆ ಹೆಸರು ಬದಲಾವಣೆ, ಹುಟ್ಟಿದ ದಿನಾಂಕ ಬದಲಾವಣೆ ಸೇರಿದಂತೆ ಯಾವುದೇ ದಾಖಲೆ ತಿದ್ದುಪಡಿ ಮಾಡಿಕೊಡಲಾಗುತ್ತಿದೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ಇನ್ನೂ ಆತಂಕಕಾರಿ ವಿಷಯವೆಂದರೆ, ಮಕ್ಕಳಿಲ್ಲದವರಿಗೆ ಸಹ ಜನನ ಪ್ರಮಾಣ ಪತ್ರ ಸಿಗುವಷ್ಟು ಅವ್ಯವಹಾರ ನಡೆಯುತ್ತಿದೆ ಎನ್ನಲಾಗಿದೆ. ಈ ಎಲ್ಲ ಪ್ರಕ್ರಿಯೆಗಳು ಮೇಲಾಧಿಕಾರಿಗಳಿಗೆ ಯಾವುದೇ ಮಾಹಿತಿ ಹೋಗದಂತೆ ವಿಭಾಗದೊಳಗೆ ನಡೆಯುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ವರ್ಷಗಳ ಹಿಂದೆ ಇದೇ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶಶಿ ಎಂಬ ವ್ಯಕ್ತಿ ವಿರುದ್ಧವೂ ದೂರು ದಾಖಲಾಗಿದ್ದು, ಪಂಪ್ ಹೌಸ್‌ನಲ್ಲಿ ಪಂಪ್ ಕ್ಲೀನರ್ ಆಗಿ ಕರ್ತವ್ಯ ನಿರ್ವಹಿಸಬೇಕಾದ ವ್ಯಕ್ತಿ ಜನನ-ಮರಣ ವಿಭಾಗದಲ್ಲಿ ಕಾರ್ಯನಿರ್ವಹಿಸಬಾರದು, ಪಂಪ್ ಕ್ಲೀನರ್ ಆಗಿಯೇ ಮಾತ್ರ ಕರ್ತವ್ಯ ನಿರ್ವಹಿಸಬೇಕು ಎಂಬ ಸುತ್ತೋಲೆ ಇದ್ದರೂ ಪ್ರಭಾವ ಬಳಸಿ ಜನನ ಮರಣ ವಿಭಾಗದಲ್ಲಿ ಸೇರಿಕೊಂಡಿದ್ದ.
ಜನನ-ಮರಣ ಪ್ರಮಾಣ ಪತ್ರಗಳಂತಹ ಮಹತ್ವದ ದಾಖಲೆಗಳಲ್ಲೇ ಅವ್ಯವಹಾರ ನಡೆದರೆ ಸಾಮಾನ್ಯ ಜನರು ಯಾರನ್ನು ನಂಬಬೇಕು? ಆಯುಕ್ತರೇಕೆ ಸುಮ್ಮನೆ ಕೂತಿದ್ದಾರೆ ಎಂಬುದೇ ನಿಗೂಢ.
