ಮೂಡಬಿದ್ರೆ: ಆಳ್ವಾಸ್ ಕ್ಯಾಂಟೀನ್ ಸಿಬ್ಬಂದಿ ಕೊಲೆ ಪ್ರಕರಣ; ಆರೋಪಿ ಚಿದಾನಂದನಿಗೆ ಜೀವಾವಧಿ ಶಿಕ್ಷೆ

ಕರಾವಳಿ

ಅಂದಿನ ತನಿಖಾಧಿಕಾರಿ ದಿನೇಶ್ ಕುಮಾರ್ ರವರ ಕರ್ತವ್ಯ ನಿಷ್ಠೆಯಿಂದ ಆರೋಪಿಗೆ ಕಾನೂನಿನ ಕುಣಿಕೆ ಬಿಗಿ

ಮೂಡಬಿದ್ರೆ ಪೊಲೀಸ್ ಠಾಣಾ ವ್ಯಾಪ್ತಿಯ ಆಳ್ವಾಸ್ ಕಾಲೇಜಿನ ಕ್ಯಾಂಟೀನ್ ನಲ್ಲಿ ಕೆಲಸ ಮಾಡುತ್ತಿದ್ದ ಚೇತನ್ ಎಂಬವನ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಚಿದಾನಂದ ಪರಶುನಾಯ್ಕರ್ ಎಂಬುವನಿಗೆ ಎರಡನೇ ಹೆಚ್ಚುವರಿ ಹಾಗೂ ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ.

2020 ರಲ್ಲಿ ಆಳ್ವಾಸ್ ಕ್ಯಾಂಟೀನ್ ನಲ್ಲಿ ಚೇತನ್ ಹಾಗೂ ಚಿದಾನಂದ ಇಬ್ಬರು ಒಟ್ಟಿಗೆ ಕೆಲಸ ಮಾಡಿಕೊಂಡಿದ್ದರು. ಕ್ಯಾಂಟೀನ್ ವಿಚಾರದಲ್ಲಿ ಹಾಗೂ ವೈಯಕ್ತಿಕ ವಿಚಾರದಲ್ಲಿ ಇಬ್ಬರ ನಡುವೆ ವೈಷಮ್ಯ ಮೂಡಿತ್ತು. ಅದೇ ವೈಷಮ್ಯದಿಂದ ರಾತ್ರಿ ವಿದ್ಯಾಗಿರಿಯಲ್ಲಿರುವ ಆಳ್ವಾಸ್ ಸಿಬ್ಬಂದಿಗಳ ವಿಶ್ರಾಂತಿ ಕೊಠಡಿಗೆ ಅಕ್ರಮ ಪ್ರವೇಶ ಮಾಡಿ ರೂಮಿನಲ್ಲಿ ಮಲಗಿದ್ದ ಚೇತನ್ ಮೇಲೆ ಚಿದಾನಂದ್ ಕಬ್ಬಿಣದ ರಾಡ್ ನಿಂದ ತಲೆ ಮತ್ತು ಮುಖದ ಭಾಗಕ್ಕೆ ಹೊಡೆದಿದ್ದ. ಇತರರು ಬಿಡಿಸಲು ಯತ್ನಿಸಿದ್ದರೂ ಚೇತನ್ ಮೇಲೆ ಗಂಭೀರ ಹಲ್ಲೆ ನಡೆಸಿದ್ದ. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಚೇತನ್ ನನ್ನು ಕೂಡಲೇ ಆಳ್ವಾಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿದ್ದ. 2020 ರ ಅಕ್ಟೋಬರ್ 30 ರಂದು ಆಳ್ವಾಸ್ ಕ್ಯಾಂಟೀನ್ ನಲ್ಲಿ ಈ ಪ್ರಕರಣ ನಡೆದಿತ್ತು.

ಈ ಬಗ್ಗೆ ಕ್ಯಾಂಟೀನ್ ನಲ್ಲಿ ಕೆಲಸ ಮಾಡಿಕೊಂಡಿದ್ದ ರಾಜೇಶ್ ಪೂಜಾರಿ ಎಂಬವರು ಮೂಡುಬಿದಿರೆ ಠಾಣೆಗೆ ದೂರು ನೀಡಿದ್ದು, ಅಂದಿನ ಇನ್ಸ್ ಪೆಕ್ಟರ್ ದಿನೇಶ್ ಕುಮಾರ್ ಅ.ಕ್ರ 232/2020 ಕಲಂ 302, 307, 448, 504, 506, 201 ಭಾ.ಧಂ.ಸಂಹಿತೆಯಂತೆ ಪ್ರಕರಣ ದಾಖಲಿಸಿಕೊಂಡಿದ್ದರು.

ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿ ಆತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು.
ತನಿಖಾಧಿಕಾರಿಯಾಗಿದ್ದ ದಿನೇಶ್ ಕುಮಾರ್ ಹಾಗೂ ತನಿಖಾ ಸಹಾಯಕರಾದ ಕಾಂತಪ್ಪ ಅವರು ಸುಮಾರು 40 ಮಂದಿ ಸಾಕ್ಷಿದಾರರನ್ನು ವಿಚಾರಿಸಿ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಿದ್ದರು. ಎರಡನೇ ಹೆಚ್ಚುವರಿ ಹಾಗೂ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀ ಜಗದೀಶ್ ಅವರು ಎಲ್ಲಾ ಸಾಕ್ಷ್ಯ ಮತ್ತು ಸಾಕ್ಷಿದಾರರನ್ನು ವಿಚಾರಣೆ ನಡೆಸಿದ್ದು ಸರಕಾರಿ ವಕೀಲರಾದ ಶ್ರೀಮತಿ ಜ್ಯೋತಿ ನಾಯಕ್ ರವರು ಆರೋಪಿಯ ಕೃತ್ಯವನ್ನು ನ್ಯಾಯಾಲಯದಲ್ಲಿ ಬಲವಾಗಿ ವಾದ ಮಂಡಿಸಿರುವುದರಿಂದ ಆರೋಪಿತನು ಮಾಡಿರುವ ಕೃತ್ಯವು ಸಾಕ್ಷ್ಯಾಧಾರಗಳಿಂದ ಸಾಬೀತಾಗಿರುವುದರಿಂದ ಆರೋಪಿಗೆ ಎರಡನೇ ಹೆಚ್ಚುವರಿ ಹಾಗೂ ಸತ್ರ ನ್ಯಾಯಾಲಯದ ನ್ಯಾಯಾಧೀಶರು ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ.
ಸಾಕ್ಷಿದಾರರನ್ನು ನ್ಯಾಯಾಲಯಕ್ಕೆ ಸೂಕ್ತ ಸಮಯದಲ್ಲಿ ಹಾಜರಾಗುವಂತೆ ಮೂಡುಬಿದಿರೆ ಠಾಣಾ ಸಿಬ್ಬಂದಿ ಅಶೋಕ್ ರವರು ಮುರ್ತುವರ್ಜಿ ವಹಿಸಿದ್ದರು.