ಡ್ರಗ್ಸ್ ಪೂರೈಕೆ ಮಾಡುತ್ತಿದ್ದ ಜಾಲದ ಐದು ಮಂದಿ ಆರೋಪಿಗಳಿಗೆ ಮಂಗಳೂರಿನ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಕಠಿಣ ಸಜೆ ಹಾಗೂ ದಂಡ ವಿಧಿಸಿ ಆದೇಶ ನೀಡಿರುತ್ತದೆ. 2022ರಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಡ್ರಗ್ಸ್ ವಿರುದ್ಧ ಕಾರ್ಯಾಚರಣೆ ನಡೆಸಿ, ವಿದ್ಯಾರ್ಥಿಗಳನ್ನು ಗುರಿಯಾಗಿಸಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಪೆಡ್ಲರ್ ಗಳನ್ನು ಬಂಧಿಸಿ, ಅವರಿಂದ 125 ಗ್ರಾಂ ಎಂಡಿಎಂಎ ವಶಕ್ಕೆ ಪಡೆದು, ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಲಾಗಿತ್ತು.
ಆರೋಪಿಗಳಾದ ಕಾಸರಗೋಡು ಜಿಲ್ಲೆಯ ಉಪ್ಪಳದ ಮಹಮ್ಮದ್ ರಮೀಜ್ಗೆ 14 ವರ್ಷ ಕಠಿಣ ಸಜೆ, 1.45 ಲಕ್ಷ ರೂ. ದಂಡ, ದಂಡ ಪಾವತಿಸಲು ತಪ್ಪಿದ್ದಲ್ಲಿ ಆರು ತಿಂಗಳ ಕಠಿಣ ಸಜೆ, ಉಪ್ಪಳದ ಅಬ್ದುಲ್ ರವೂಫ್ ಅಲಿಯಾಸ್ ಟಫ್ ರವೂಫ್ಗೆ 13 ವರ್ಷ ಕಠಿಣ ಸಜೆ ಮತ್ತು ರೂ. 1.35 ಲಕ್ಷ ದಂಡ, ದಂಡ ಪಾವತಿಸಲು ತಪ್ಪಿದ್ದಲ್ಲಿ 5 ತಿಂಗಳ ಕಠಿಣ ಸಜೆ, ಹಾಗೂ ದಕ್ಷಿಣ ಸೂಡಾನ್ ದೇಶದ ಲೂಯಲ್ ಡೇನಿಯಲ್ ಜಸ್ಟಿಸ್ ಬೌಲೊ ಅಲಿಯಾಸ್ ಡ್ಯಾನಿ, ಉಪ್ಪಳದ ಮೊಹಿಯುದ್ದೀನ್ ರಶೀದ್ ಮತ್ತು ತಮಿಳುನಾಡಿನ ಊಟಿ ಕಟ್ಟೇರಿಯ ಸಬಿತಾ ಅಲಿಯಾಸ್ ಚಿಂಚು ಇವರಿಗೆ ತಲಾ 12 ವರ್ಷ ಕಠಿಣ ಸಜೆ ಮತ್ತು ತಲಾ 1.25 ಲಕ್ಷ ರೂ. ದಂಡ, ದಂಡ ಪಾವತಿಸಲು ತಪ್ಪಿದಲ್ಲಿ 4 ತಿಂಗಳ ಕಠಿಣ ಸಜೆಯನ್ನು ವಿಧಿಸಿ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಆದೇಶ ನೀಡಿರುತ್ತದೆ.
ಪ್ರಕರಣದ ವಿಚಾರಣೆ ನಡೆಸಿದ ಮಾನ್ಯ ನ್ಯಾಯಾಲಯವು ಐದು ಮಂದಿ ಆರೋಪಿಗಳ ಆರೋಪ ಸಾಬೀತಾದ ಕಾರಣ ಇದೀಗ ಆರೋಪಿಗಳಿಗೆ ಶಿಕ್ಷೆ ಪ್ರಮಾಣವನ್ನು ಘೋಷಿಸಿದೆ. ಪ್ರಾಸಿಕ್ಯೂಷನ್ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಜುಡಿತ್ ಮಸ್ಕರೇನಸ್ ವಾದಿಸಿದ್ದರು.
