ಮಾಸ್ಟರ್ ಮೈಂಡ್ ಶ್ರೀನಾಥ್ ನಗರಗದ್ದೆ ಮಾಜಿ ಸಚಿವರೊಬ್ಬರ ಕಚೇರಿ ಮಾಜಿ ಸಹಾಯಕ
ನಕಲಿ ದಾಖಲೆ ಸೃಷ್ಟಿಸಿ ಪೊಲೀಸ್ ವಸತಿಗೃಹದ ಜಾಗವನ್ನು ಕಬಳಿಸಲು ಯತ್ನಿಸಿದ್ದ ಪ್ರಕರಣದಲ್ಲಿ ಶಿವಮೊಗ್ಗದ ಸಂಘ ಪರಿವಾರದ ಬಿಜೆಪಿ ಮುಖಂಡ ಸೇರಿದಂತೆ ಮೂವರನ್ನು ಮಲ್ಲೇಶ್ವರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಬಿಜೆಪಿ ಮುಖಂಡ ಶ್ರೀನಾಥ್ ನಗರಗದ್ದೆ, ತುಮಕೂರಿನ ಕೃಷ್ಣಮೂರ್ತಿ ಹಾಗೂ ಮೈಸೂರಿನ ಕಿಶನ್ ಬಂಧಿತರು. ಲೋಕಾಯುಕ್ತ ಇನ್‌ಸ್ಪೆಕ್ಟರ್ ಎಂ.ಕುಮಾರ್ ಎಂಬವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲು ಮಾಡಿಕೊಳ್ಳಲಾಗಿತ್ತು. ರಾಜ್ಯದ ವಿವಿಧೆಡೆ ಕಾರ್ಯಾಚರಣೆ ನಡೆಸಿ, ವಂಚಕ ಆರೋಪಿಗಳನ್ನು ಬಂಧಿಸಲಾಗಿದೆ. ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ಪಡೆಯಲಾಗಿದೆ.

ಶ್ರೀನಾಥ್ ನಗರಗದ್ದೆಯೇ ಈ ಪ್ರಕರಣದ ಸೂತ್ರಧಾರ ಎಂಬುದು ಕಂಡುಬಂದಿದೆ. ಮಾಜಿ ಸಚಿವರೊಬ್ಬರ ಶಿವಮೊಗ್ಗದ ಕಚೇರಿಯಲ್ಲೂ ಶ್ರೀನಾಥ್ ಕೆಲಸ ಮಾಡಿದ್ದ ಎನ್ನಲಾಗಿದೆ. 80 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಕಬಳಿಸಲು ಸಂಚು ರೂಪಿಸಲಾಗಿದೆ ಎಂದು ನೀಡಿದ ದೂರಿನ ಮೇರೆಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

ಪೊಲೀಸ್ ವಸತಿಗೃಹಗಳು ಹಳೆಯದಾಗಿದ್ದವು. ವಸತಿಗೃಹ ತೆರವು ಮಾಡಿ ಹೊಸ ಕಟ್ಟಡ ನಿರ್ಮಾಣಕ್ಕೆ ಉತ್ತರ ವಿಭಾಗದ ಡಿಸಿಪಿ ಅವರು ಪ್ರಸ್ತಾವ ಸಲ್ಲಿಸಿದ್ದರು. ಅದೇ ಜಾಗವನ್ನು ಕಬಳಿಸಲು ಈ ತಂಡವು ಮುಂದಾಗಿತ್ತು. ಇ-ಖಾತಾ ಮಾಡಿಕೊಟ್ಟ, ವಿದ್ಯುತ್ ಬಿಲ್ ವರ್ಗಾವಣೆ ಮಾಡಿಕೊಟ್ಟ ಜಿಬಿಎ ಮತ್ತು ಬೆಸ್ಕಾಂ ಅಕಾರಿಗಳಿಗೂ ನೋಟಿಸ್ ಜಾರಿ ಮಾಡಲಾಗಿದೆ. ಕೆಲವು ಅಧಿಕಾರಿಗಳ ಪಾತ್ರ ಈ ವಂಚನೆ ಪ್ರಕರಣದಲ್ಲಿರುವುದು ಕಂಡುಬಂದಿದೆ. ಪೊಲೀಸ್ ಇಲಾಖೆಗೆ ಸೇರಿದ ಜಾಗವನ್ನು 1913ರ ನಕ್ಷೆಯಲ್ಲಿಯೇ ಪೊಲೀಸ್ ವಸತಿಗೃಹವೆಂದು ಗುರುತಿಸಲಾಗಿತ್ತು. ಪ್ರಸ್ತುತ ಈ ಸ್ಥಳದಲ್ಲೀಗ ನಾಲ್ವರು ಇನ್‌ಸ್ಪೆಕ್ಟರ್ ಕುಟುಂಬ ಹಾಗೂ ಸಿಬ್ಬಂದಿ ವಾಸಿಸುತ್ತಿದ್ದಾರು. ಆದರೆ, ಇತ್ತೀಚೆಗೆ ಅಲ್ಲೇ ವಾಸವಿರುವ ಇನ್‌ಸ್ಪೆಕ್ಟರ್ ಕುಮಾರ್ ಮನೆಗೆ ವಿದ್ಯುತ್ ಬಿಲ್ ಬಂದಿದ್ದು, ಅದರಲ್ಲಿ ಮಹಾಲಕ್ಷ್ಮಿ ಎಂಬ ಖಾಸಗಿ ಹೆಸರಿತ್ತು. ಅನುಮಾನಗೊಂಡ ಕುಮಾರ್ ಬೆಸ್ಕಾಂ, ಜಿಬಿಎ, ಉಪ ನೋಂದಣಿ ಕಚೇರಿಗಳಿಗೆ ಭೇಟಿ ನೀಡಿ ವಿಚಾರಣೆ ಆರಂಭಿಸಿದಾಗ ಅಕ್ರಮವಾಗಿ ದಾಖಲೆಗಳನ್ನು ಸೃಷ್ಟಿಸಿ ಮಹಾಲಕ್ಷ್ಮಿ ಎಂಬ ಹೆಸರಿಗೆ ವರ್ಗಾವಣೆ ಮಾಡಲಾಗಿರುವುದು ಕಂಡುಬಂದಿತ್ತು. ಜೊತೆಗೆ, ಜಿಬಿಎ ಮೂಲಕ ಅಕ್ರಮವಾಗಿ ಇ-ಖಾತಾ ಮಾಡಿಸಿರುವುದು ಹಾಗೂ ಮಾರಾಟ ಮಾಡಲು ಒಪ್ಪಂದ ಪತ್ರ ಕೂಡ ಮಾಡಲಾಗಿತ್ತು. ಆಸ್ತಿ ವರ್ಗಾವಣೆಗೊಂಡಿರುವ ಮಹಾಲಕ್ಷ್ಮಿ ವಯೋವೃದ್ಧರಾಗಿದ್ದಾರೆ. ಆ ಆಸ್ತಿ ಕಬಳಿಕೆ ವಿಚಾರ ಈ ಮಹಾಲಕ್ಷ್ಮಿ ಅವರ ಗಮನದಲ್ಲೇ ಇರಲಿಲ್ಲ. ಆದರೆ, ಆರೋಪಿಗಳು ಅಕ್ರಮ ದಾಖಲೆ ಸೃಷ್ಟಿಸಿ ಅವರ ಹೆಸರಿಗೆ ಆಸ್ತಿ ವರ್ಗಾವಣೆ ಮಾಡಿದ್ದು ತನಿಖೆಯಲ್ಲಿ ಕಂಡುಬಂದಿದೆ.

ಸುಮಾರು 20 ವರ್ಷದ ಹಿಂದೆ ಶಿವಮೊಗ್ಗದಲ್ಲಿ ಕ್ರಾಂತಿದೀಪ ಎಂಬ ಪತ್ರಿಕೆಯ ಮೇಲೆ ಕೋಮುವಾದಿ ಭಯೋತ್ಪಾದಕರ ಗುಂಪೊಂದು ದಾಳಿ ಮಾಡಿ ಹಲ್ಲೆ ನಡೆಸಿತ್ತು. ಅದರ ನೇತೃತ್ವ ವಹಿಸಿದ್ದು ಕೂಡಾ ಇದೇ ಶ್ರೀನಾಥ್ ನಗರಗದ್ದೆ. ಆಗ ಶಿವಮೊಗ್ಗ ಬಂದ್ ಪ್ರತಿಭಟನೆ ನಡೆದಿತ್ತು. ಈ ಘಟನೆ ಮುಂದಿನ ಚುನಾವಣೆಯಲ್ಲಿ ಬಿಜೆಪಿಯ ಸೋಲಿಗೂ ಒಂದು ಕಾರಣವಾಗಿತ್ತು. ಶ್ರೀನಾಥ್ ನಗರಗದ್ದೆ ಎಂಬ ಸಂಘಿ ಪೊಲೀಸ್ ಕ್ವಾಟ್ರಸ್ಸನ್ನೇ ಲಪಟಾಯಿಸಲು ಸ್ಕೆಚ್ ಹಾಕಿದ್ದು, ಆರೆಸ್ಸೆಸ್ ಸ್ವಯಂಸೇವಕ. ಹೇಳೋದು ದೇಶಭಕ್ತಿ, ಧರ್ಮರಕ್ಷಣೆ ಮಾಡೋದು ಮಾತ್ರ ಅನಾಚಾರ.
