ಹಲವು ಗೊಂದಲಗಳ ನಡುವೆ ಇಂದು ಬೆಳ್ತಂಗಡಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ನಡೆದ ಅಂಬೇಡ್ಕರ್ ಜಯಂತಿ ಸಾಂಗವಾಗಿ ನಡೆಯಿತು. ಆದರೂ ಶಾಸಕ ಹರೀಶ್ ಪೂಂಜಾ ಎಂದಿನಂತೆ ರಾಜಕೀಯ ಮಾತನಾಡುವ ಮೂಲಕ ಅಂಬೇಡ್ಕರ್ ಜಯಂತಿ ಕಾರ್ಯಕ್ರಮವನ್ನು ತನ್ನ ರಾಜಕೀಯ ಲಾಭಕ್ಕಾಗಿ ಬಳಸಿಕೊಂಡರು.
ಸಭೆಯ ಆರಂಭಕ್ಕೆ ಮೊದಲೇ ಸಭಾಂಗಣಕ್ಕೆ ಆಗಮಿಸಿದ್ದ ಮುಖ್ಯ ಭಾಷಣಕಾರ ಶಿವಪ್ರಸಾದ್ ಸುರ್ಯರನ್ನು ಸುತ್ತುವರಿದ ದಲಿತ ನಾಯಕರ ಗುಂಪು ನಾಲ್ಕೈದು ದಿನಗಳಿಂದ ನಡೆದ ಬೆಳವಣಿಗೆಯನ್ನು ವಿವರಿಸಿ, ಸಭೆಯಲ್ಲಿ ಅಂಬೇಡ್ಕರ್ ಚಿಂತನೆ, ಜೀವನ ಚರಿತ್ರೆ ಹೊರತುಪಡಿಸಿ ಬೇರೆ ಯಾವುದೇ ವಿಚಾರಗಳನ್ನು, ಸುಳ್ಳು ಮಾಹಿತಿ, ರಾಜಕೀಯ ವಿಚಾರಗಳ ಬಗ್ಗೆ ಮಾತನಾಡಿದರೆ ವೇದಿಕೆ ಮೇಲೆ ನುಗ್ಗಿ ಗಲಾಟೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು. ನಾನು ಸಂಘಪರಿವಾರದವನು, ಆದರೆ ಯಾವುದೇ ಕಾರಣಕ್ಕೂ ರಾಜಕೀಯ ಮಾತನಾಡುವುದಿಲ್ಲ ಎಂದು ಶಿವಪ್ರಸಾದ್ ಸುರ್ಯ ದಲಿತ ನಾಯಕರಿಗೆ ತಿಳಿಸಿದಂತೆ ಅವರು ತಮ್ಮ ಭಾಷಣವನ್ನು ಅಂಬೇಡ್ಕರ್ ವಿಚಾರಗಳಿಗೆ ಸೀಮಿತಗೊಳಿಸಿದರು.

ಭಾರತರತ್ನ ಪ್ರಶಸ್ತಿ ನೀಡಿದ್ದು ವಾಜಪೇಯಿ ಎಂದ ಶಾಸಕ
ಶಾಸಕ ಹರೀಶ್ ಪೂಂಜಾ ಎಂದಿನಂತೆ ಅಂಬೇಡ್ಕರ್ ಜಯಂತಿಯ ವೇದಿಕೆಯನ್ನು ತಮ್ಮ ರಾಜಕೀಯ ಲಾಭಕ್ಕಾಗಿ ಬಳಸಿಕೊಂಡು ಭಾಷಣ ಮಾಡಿದರು. ನೂರಾರು ವಿದ್ಯಾರ್ಥಿಗಳು, ಸರ್ಕಾರಿ ಅಧಿಕಾರಿಗಳು, ಸಿಬ್ಬಂದಿಗಳು ಸೇರಿದಂತೆ ಸಾರ್ವಜನಿಕರಿದ್ದ ಕಾರ್ಯಕ್ರಮದಲ್ಲಿ ತಮ್ಮ ಭಾಷಣದುದ್ದಕ್ಕೂ ಪ್ರತಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡರು. ಮಾತಿನ ಭರದಲ್ಲಿ ಸುಳ್ಳು ಹೇಳುವ ಮೂಲಕ ತಾನೊಬ್ಬ ಅಂಬೇಡ್ಕರ್ ವಿಚಾರದಲ್ಲಿ ಅಜ್ಞಾನಿ ಎಂಬುದನ್ನು ಬಹಿರಂಗ ಪಡಿಸಿದರು. ಅಂಬೇಡ್ಕರ್ ಅವರಿಗೆ ಮರಣೋತ್ತರ ಭಾರತರತ್ನ ಪ್ರಶಸ್ತಿಯನ್ನು ವಿ.ಪಿ ಸಿಂಗ್ ಸರ್ಕಾರ ನೀಡಿದ್ದು ನಿಜವಾದರೂ ಹರೀಶ್ ಪೂಂಜಾ ಮಾತ್ರ ಅಟಲ್ ಬಿಹಾರಿ ವಾಜಪೇಯಿ ಅವರು ನೀಡಿದ್ದು ಎಂದು ಹಸಿಹಸಿ ಸುಳ್ಳು ಹೇಳಿರುವುದು ಮಾತ್ರ ದುರಂತವೇ ಸರಿ. ಆ ಮೂಲಕ ತಾನೊಬ್ಬ ಅಜ್ಞಾನಿ ಎಂಬುದನ್ನು ತೋರಿಸಿಕೊಟ್ಟರು.

ದಲಿತ ಅಧಿಕಾರಿಗೆ ಶಾಸಕರಿಂದ ಅವಮಾನ
ಕೊಕ್ಕಡ ಹೋಬಳಿ ಕಂದಾಯ ನಿರೀಕ್ಷಕ ಪಾವಡೆಪ್ಪ ದೊಡಮನಿ ಓರ್ವ ದಲಿತ ಸಮುದಾಯದ ಅಧಿಕಾರಿ. ಉಪನ್ಯಾಸಕರಾಗಿದ್ದ ಅವರು ರಾಜಿನಾಮೆ ನೀಡಿ ಕಂದಾಯ ಇಲಾಖೆಗೆ ಸೇರ್ಪಡೆಗೊಂಡಿದ್ದರು. ನಿನ್ನೆ (ಎಪ್ರಿಲ್ 13) ಸಂಜೆಯವರೆಗೂ ಮುಖ್ಯ ಭಾಷಣಕಾರರಾಗಿ ಪಾವಡೆಪ್ಪ ದೊಡಮನಿ ಅವರ ಹೆಸರಿತ್ತು. ಆದರೆ ಕೊನೆಗಳಿಗೆಯಲ್ಲಿ ಶಾಸಕ ಹರೀಶ್ ಪೂಂಜಾ ತಾಲೂಕು ಆಡಳಿತಕ್ಕೆ ಒತ್ತಡ ಹಾಕಿ ದಲಿತ ಅಧಿಕಾರಿಯನ್ನು ಬಲಾತ್ಕಾರವಾಗಿ ಕೈ ಬಿಡಿಸಿ, RSS ನ ಪದಾಧಿಕಾರಿಯಾಗಿರುವ ಬರೋಡ ಬ್ಯಾಂಕ್ ನ ಪ್ರಬಂಧಕ ಶಿವಪ್ರಸಾದ್ ಸುರ್ಯನನ್ನು ಸೇರಿಸಿ, ಓರ್ವ ನಿಷ್ಠಾವಂತ ದಲಿತ ಅಧಿಕಾರಿಗೆ ಅವಮಾನ ಮಾಡಲಾಗಿದೆ. ಇದು ಅತ್ಯಂತ ಖಂಡನೀಯವಾಗಿರುವ ಘಟನೆ. ಅಂತು ಒಟ್ಟಾರೆಯಾಗಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾರ ರಾಜಕೀಯದ ನಡುವೆಯೂ ಕಾರ್ಯಕ್ರಮ ಸಾಂಗವಾಗಿ ನಡೆಯಿತು.
