ಬಂಟ್ವಾಳ ಪುರಸಭೆಯಲ್ಲಿ ದಿನಗೂಲಿ ನೌಕರರ ಕಾರುಬಾರು ಎಂಬ ಶೀರ್ಷಿಕೆಯಡಿಯಲ್ಲಿ ಸೃಷ್ಟಿ 238 ರಲ್ಲಿ ಸಮಗ್ರ ವರದಿಯನ್ನು ಪ್ರಕಟಿಸಿತ್ತು. ಬಂಟ್ವಾಳ ಪುರಸಭೆಯಲ್ಲಿ ಭ್ರಷ್ಟಾಚಾರ ತಾಂಡವವಾಡಲು ಮೂಲ ಕಾರಣವೇ ದಿನಗೂಲಿ ನೌಕರರು. ಇವರನ್ನು ಹದ್ದುಬಸ್ತಿನಲ್ಲಿಡಬೇಕಾದ ಅಧಿಕಾರಿ ವರ್ಗ ಇವರ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದು, ದಿನಗೂಲಿ ನೌಕರರ ಅಂಧಾ ದರ್ಬಾರ್ ಮೇಳೈಸುತ್ತಿದೆ. ಬಂಟ್ವಾಳ ಪುರಸಭೆ ಒಳಹೊಕ್ಕರೆ ಯಾವೊಂದು ಕೆಲಸವೂ ಸಲೀಸಾಗಿ ನಡೆಯುತ್ತಿಲ್ಲ. ಇಲ್ಲಿ ಖಾತಾ, ಜನನ ಪ್ರಮಾಣ ಪತ್ರ, ಮರಣ ಪ್ರಮಾಣ ಪತ್ರ, ಲೈಸೆನ್ಸ್ ಯಾವ ಕೆಲಸವೂ ಇಲ್ಲಿ ನಡೆಯುತ್ತಿಲ್ಲ. ಜನಸಾಮಾನ್ಯರ ಕೆಲಸ ಕಾರ್ಯಗಳಿಗೆ ಪುರಸಭೆ ಕಚೇರಿಯಲ್ಲಿ ನೇಮಿಸಲ್ಪಟ್ಟಿದ್ದ ದಿನಗೂಲಿ ನೌಕರರು ಕೈಗೆ ಸಿಗುವುದೇ ಇಲ್ಲ. ಅಧಿಕಾರಿಗಳು ಕಚೇರಿಯಲ್ಲಿದ್ದರೂ ಇವರು ಮಾತ್ರ ಜನರ ಕೈಗೆ ಸಿಗುತ್ತಿಲ್ಲ. ಅಧಿಕಾರಿಗಳು ಒಳ್ಳೆಯವರಿದ್ದರೂ ಈ ಸಿಬ್ಬಂದಿಗಳ ಕಾರುಬಾರೇ ಹೆಚ್ಚು. ಅಧಿಕಾರಿಗಳ ಮಾತಿಗೂ ಕ್ಯಾರೇ ಅನ್ನುತ್ತಿಲ್ಲ ಅನ್ನುವ ಆರೋಪಗಳು ಕೇಳಿ ಬರುತ್ತಿತ್ತು.
ದಿನಗೂಲಿ ನೌಕರರೆಂದರೆ ಸರಕಾರಿ ನೌಕರರಲ್ಲ. 11 ತಿಂಗಳ ಮಟ್ಟಿಗೆ ಅವರನ್ನು ನೇಮಿಸಲಾಗುತ್ತದೆ. ಆ ನಂತರ ಅವರನ್ನು ರಿಲೀವ್ ಮಾಡಬೇಕಾಗಿದೆ. ಆದರೆ ಬಂಟ್ವಾಳ ಪುರಸಭೆಯಲ್ಲಿ 10-15 ವರ್ಷಗಳಿಂದ ದಿನಗೂಲಿ ನೌಕರರು ಇಲ್ಲೇ ಝಂಡಾ ಹೂಡಿ ಕೂತಿದ್ದಾರೆ. ಒಬ್ಬೊಬ್ಬ ದಿನಗೂಲಿ ನೌಕರ ಅಧಿಕಾರಿಗಳನ್ನು ಮೀರಿಸುವಂತ ಭ್ರಷ್ಟಾಚಾರದ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಅಧಿಕಾರಿಗಳು ಮಾತ್ರ ನಿಸ್ಸಾಯಕರಾಗಿದ್ದಾರೆ.
ಬಂಟ್ವಾಳ ಪುರಸಭೆಯಲ್ಲಿ ಅಧಿಕಾರಿಗಳನ್ನು ಮೀರಿ ದಿನಗೂಲಿ ನೌಕರರು ಜನಸಾಮಾನ್ಯರನ್ನು ಸತಾಯಿಸುತ್ತಿರುವ ಬಗ್ಗೆ, ದುರಂಹಕಾರದ ವರ್ತನೆ ಬಗ್ಗೆ ಪತ್ರಿಕೆ ಸಮಗ್ರ ವರದಿಯನ್ನು ಬಿತ್ತರಿಸಿತ್ತು. ಆದರೆ ಇದೀಗ ಬಂಟ್ವಾಳ ಪುರಸಭೆಗೆ ಹೊಸ ಮುಖ್ಯಾಧಿಕಾರಿ ಬಂದಿದ್ದಾರೆ. ದಿನಗೂಲಿ ನೌಕರರನ್ನು ಹದ್ದುಬಸ್ತಿನಲ್ಲಿಡುವ ಮೂಲಕ ಪುರಸಭೆಯಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರಕ್ಕೆ ಅಂಕುಶ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ.

ಭ್ರಷ್ಟಾಚಾರಕ್ಕೆ ಇತಿಶ್ರೀ ಹಾಕಿದ ಖಡಕ್ ಮುಖ್ಯಾಧಿಕಾರಿ
ಬಂಟ್ವಾಳ ಪುರಸಭೆಗೆ ಮುಖ್ಯಾಧಿಕಾರಿಯಾಗಿ ತೀರ್ಥ ಪ್ರಸಾದ್ ಅಧಿಕಾರ ಸ್ವೀಕರಿಸುತ್ತಲೇ ಪುರಸಭೆಯಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರಕ್ಕೆ ಬ್ರೇಕ್ ಹಾಕುವಲ್ಲಿ ಸಫಲರಾಗಿದ್ದಾರೆ. ಟೆಂಡರ್ ನವೀಕರಣ ಇಲ್ಲದೆ ಪುರಸಭೆ ಕಚೇರಿಯೊಳಗೆ ಎಲ್ಲೆಂದರಲ್ಲಿ ಬೀಡುಬಿಟ್ಟಿದ್ದ ಅನಧಿಕೃತ ಹಾಗೂ ಹೆಚ್ಚುವರಿ ಸಿಬ್ಬಂದಿಗಳಿಗೆ ಗೇಟ್ ಪಾಸ್ ನೀಡಲಾಗಿದೆ. ಕಳೆದ 10-15 ವರ್ಷಗಳಿಂದ ಟೆಂಡರ್ ನವೀಕರಿಸದೆ ಇದ್ದು ಬೀಡುಬಿಟ್ಟಿದ್ದ ದಿನಗೂಲಿ ನೌಕರರನ್ನು ಕೂಡಾ ಎತ್ತಂಗಡಿ ಮಾಡಲಾಗಿದೆ.
ಪುರಸಭಾ ಕಚೇರಿಗೆ ಅಗತ್ಯವಿರುವಷ್ಟು ಸಿಬ್ಬಂದಿಗಳನ್ನು ಮಾತ್ರ ಕಚೇರಿಯೊಳಗೆ ಇರಿಸಿಕೊಳ್ಳಲಾಗಿದ್ದು, ಉಳಿದಂತೆ ಕಚೇರಿಯ ಹೊರಗಡೆ ಕಾರ್ಯನಿರ್ವಹಿಸಬೇಕಾದ ನೌಕರರನ್ನು ಆಯಾ ಸ್ಥಳಗಳಿಗೆ ನಿಯೋಜಿಸಲಾಗಿದೆ. ಅನಧಿಕೃತವಾಗಿ ಇದ್ದ ಎಲ್ಲಾ ಪೋಸ್ಟ್ ಗಳನ್ನು ರದ್ದುಪಡಿಸಿರುವ ಮುಖ್ಯಾಧಿಕಾರಿಗಳು ಡಬ್ಬಲ್ ವೇತನ ಪಡೆಯುತ್ತಿದ್ದ ಸಿಬ್ಬಂದಿಗಳಿಗೂ ಬ್ರೇಕ್ ಹಾಕಿದ್ದಾರೆ.
ಪುರಸಭಾ ಕಚೇರಿಯೊಳಗೆ ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ಯಾವುದೇ ವಿಳಂಬ, ಅಡಚಣೆ ಇಲ್ಲದಂತೆ ಮಾಡುವ ಪ್ರಯತ್ನವನ್ನೂ ಮಾಡಿದ್ದಾರೆ. ಈ ಹಿಂದೆ ಇಲ್ಲಿನ ಪುರಸಭೆಯಲ್ಲಿ ಹಲವು ವರ್ಷಗಳಿಂದ ಇದ್ದ ಅವ್ಯವಸ್ಥೆಗಳ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಾನೂನು ಪ್ರಕಾರ ಕ್ರಮ ಜರುಗಿಸುವಂತೆ ಮುಖ್ಯಾಧಿಕಾರಿ ಸಂಬಂಧಪಟ್ಟವರಿಗೆ ವರದಿಯನ್ನೂ ಸಲ್ಲಿಸಿದ್ದಾರೆ ಎನ್ನಲಾಗುತ್ತಿದೆ. ಮುಖ್ಯಾಧಿಕಾರಿಗಳ ಖಡಕ್ಕ್ ನಿರ್ಧಾರಗಳು ಬಂಟ್ವಾಳ ಪುರಸಭಾ ನಿವಾಸಿಗಳಲ್ಲಿ ಹೊಸದೊಂದು ಆಶಾಭಾವನೆ ಮೂಡುವಂತಾಗಿದೆ.
