ನಕಲಿ ಪಾಸ್‌ಪೋರ್ಟ್ ಸೃಷ್ಟಿಸಿ, ವಿದೇಶಕ್ಕೆ ಕಳುಹಿಸುವ ವಂಚನಾ ಜಾಲವೊಂದನ್ನು ಬೇಧಿಸಿದ ಮಂಗಳೂರು ನಗರದ ಸಿ.ಎಸ್.ಬಿ. ಪೊಲೀಸರು

ಕರಾವಳಿ

ಬೇರೊಬ್ಬರ ಗುರುತಿನ ದಾಖಲೆ ಪತ್ರ ಗಳನ್ನು ದುರುಪಯೋಗಪಡಿಸಿ, ನಕಲಿ ಪಾಸ್ ಪೋರ್ಟ್ ರಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಉಳ್ಳಾಲ ನಿವಾಸಿ ಪ್ರೀತಾ ಡಿ ಸೋಜಾ, ಪ್ರೇಮ್ ಡಿ ಸೋಜಾ ಹಾಗೂ ಯಶೋಧ ಕೇಶವ ಸೇರಿದಂತೆ ಹಲವರ ವಿರುದ್ಧ ಗಂಭೀರ ಆರೋಪಗಳಡಿ ಕ್ರಿಮಿನಲ್ ಪ್ರಕರಣ ದಾಖಲಿಸಿದ ಸಿಎಸ್ ಬಿ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.

ಉಳ್ಳಾಲ ನಿವಾಸಿ ಯಶೋಧ ಕೇಶವ ಎಂಬ ಮಹಿಳೆಯ ಹೆಸರಿನಲ್ಲಿ ಅನ್ಯ ಮಹಿಳೆಯೊಬ್ಬರು ಪಾಸ್‌ಪೋರ್ಟ್ ಪಡೆದು ವಿದೇಶಕ್ಕೆ ಪ್ರಯಾಣಿಸಿರುವ ಬಗ್ಗೆ ಪೊಲೀಸರಿಗೆ ಗೌಪ್ಯ ಮಾಹಿತಿ ಲಭಿಸಿತ್ತು. ಈ ಮಾಹಿತಿ ಆಧರಿಸಿ ಸಿ.ಎಸ್.ಬಿ. ಪೊಲೀಸರು ತನಿಖೆ ಆರಂಭಿಸಿದಾಗ ಅಚ್ಚರಿಯ ಸಂಗತಿಗಳು ಬೆಳಕಿಗೆ ಬಂದಿವೆ. ಪೊಲೀಸರ ಪರಿಶೀಲನೆಯ ವೇಳೆ NO: C 4042172 ಸಂಖ್ಯೆಯ ಪಾಸ್‌ಪೋರ್ಟ್ ನಲ್ಲಿ ಹೆಸರು ಹಾಗೂ ವಿಳಾಸ ಯಶೋಧ ಕೇಶವ ಅವರದ್ದಾಗಿದ್ದರೂ, ಅದರಲ್ಲಿ ಬಳಸಲಾಗಿದ್ದ ಭಾವಚಿತ್ರ ಮಾತ್ರ ಪ್ರೀತಾ ಡಿ ಸೋಜಾ ಎಂಬಾಕೆಯದ್ದು ಎಂಬುದು ದೃಢಪಟ್ಟಿದೆ.

ಪ್ರೀತಾ ಡಿ ಸೋಜಾ ಅವರನ್ನು ಅಕ್ರಮವಾಗಿ ಇಸ್ರೇಲ್‌ಗೆ ಕಳುಹಿಸುವ ಉದ್ದೇಶದಿಂದ ಈ ಸಂಪೂರ್ಣ ಸಂಚು ರೂಪಿಸಲಾಗಿತ್ತು ಎನ್ನಲಾಗಿದೆ. ಈ ಕೃತ್ಯದ ಪ್ರಮುಖ ಸೂತ್ರಧಾರ ಉಳ್ಳಾಲ ನಿವಾಸಿಯಾಗಿದ್ದು, ಈತ ನಕಲಿ ದಾಖಲೆಗಳನ್ನು ಸಿದ್ಧಪಡಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾನೆ. ಯಶೋಧರವರ ಶೈಕ್ಷಣಿಕ ದಾಖಲೆ, ವಿಳಾಸದ ಪುರಾವೆ ಹಾಗೂ ಇತರ ಅಧಿಕೃತ ದಾಖಲೆಗಳನ್ನು ಬಳಸಿಕೊಂಡು, ಪ್ರೀತಾ ಡಿ ಸೋಜಾ ಹೆಸರಲ್ಲಿ ಪಾಸ್‌ಪೋರ್ಟ್ ಮಾಡಿಸಿ ಅಧಿಕಾರಿಗಳನ್ನು ದಾರಿ ತಪ್ಪಿಸಲಾಗಿದೆ

ಈ ಅಕ್ರಮ ಪಾಸ್‌ಪೋರ್ಟ್ ಬಳಸಿ ಪ್ರೀತಾ ಡಿ ಸೋಜಾ ಅವರು 2025ರ ಮಾರ್ಚ್ 17ರಂದು ಮುಂಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ವಿದೇಶಕ್ಕೆ ಪ್ರಯಾಣಿಸಿರುವುದು ದಾಖಲೆಗಳಿಂದ ಬಹಿರಂಗವಾಗಿದೆ. ಈ ಅಕ್ರಮ ಜಾಲದಲ್ಲಿ ಇನ್ನೂ ಹಲವಾರು ಮಂದಿ ಭಾಗಿಯಾಗಿರುವ ಶಂಕೆ ಇದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಿ.ಎಸ್.ಬಿ. ಪೊಲೀಸ್ ಠಾಣೆಯಲ್ಲಿ ವಿವಿಧ ಕಲಂಗಳಡಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.