ಕಾನೂನು ಸುವ್ಯವಸ್ಥೆಗೆ ಮೊದಲ ಆದ್ಯತೆ ನೀಡಲು ಡಿಕೆ ಚಿಂತನೆ
ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಿದ್ದಂತೆಯೇ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಲು ಮುಂದಾಗಿರುವ ಸಿಎಂ ಡಿ.ಕೆ. ಶಿವಕುಮಾರ್ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಭಾರಿ ಮಟ್ಟದ ಬದಲಾವಣೆ ತರಲು ಸಜ್ಜಾಗಿದ್ದಾರೆ. ರಾಜ್ಯದ ಕಾನೂನು ಸುವ್ಯವಸ್ಥೆಯನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಪ್ರಮುಖವಾಗಿ ಗೃಹ ಇಲಾಖೆಗೆ ಮೇಜರ್ ಸರ್ಜರಿ ನಡೆಸಲು ಸಿಎಂ ತೀರ್ಮಾನಿಸಿದ್ದು, ಆಯಾಕಟ್ಟಿನ ಹುದ್ದೆಗಳಲ್ಲಿರುವ ಪ್ರಮುಖ ಐಪಿಎಸ್ ಅಧಿಕಾರಿಗಳ ವರ್ಗಾವಣೆಗೆ ಸಿದ್ಧತೆ ನಡೆದಿದೆ ಎಂದು ಗೃಹ ಇಲಾಖೆಯ ಉನ್ನತ ಮೂಲಗಳು ತಿಳಿಸಿವೆ. ಮುಖ್ಯವಾಗಿ ಪೊಲೀಸ್ ಕಮಿಷನರ್, ಗುಪ್ತಚರ ವಿಭಾಗ, ಕಾನೂನು ಮತ್ತು ಸುವ್ಯವಸ್ಥೆ, ಸಿಐಡಿ ಹಾಗೂ ಆಂತರಿಕ ಭದ್ರತಾ ವಿಭಾಗದ ಮುಖ್ಯಸ್ಥರ ಹುದ್ದೆಗಳಿಗೆ ಹೊಸ ಅಧಿಕಾರಿಗಳನ್ನು ತರಲು ಸಿಎಂ ಕಚೇರಿ ಲೆಕ್ಕಾಚಾರ ಆರಂಭಿಸಿದೆ.
ಬೆಂಗಳೂರು ನಗರ ಪೊಲೀಸ್ ಆಯುಕ್ತರನ್ನು ವರ್ಗಾವಣೆ ಮಾಡುವ ಸಾಧ್ಯತೆ ದಟ್ಟವಾಗಿದೆ. ಒಂದು ವೇಳೆ ಸೀಮಂತ್ ಕುಮಾರ್ ಸಿಂಗ್ ಅವರು ವರ್ಗಾವಣೆಯಾದರೆ, ಬೆಂಗಳೂರು ನಗರದ ನೂತನ ಪೊಲೀಸ್ ಕಮಿಷನರ್ ಆಗಿ ಹಿರಿಯ ಐಪಿಎಸ್ ಅಧಿಕಾರಿ ಶರತ್ ಚಂದ್ರ ಅವರು ನೇಮಕಗೊಳ್ಳುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಇಲಾಖೆಯಲ್ಲಿ ಯಾವುದೇ ವಿವಾದಗಳಿಲ್ಲದೆ ದಕ್ಷ ಅಧಿಕಾರಿಯಾಗಿ ಗುರುತಿಸಿಕೊಂಡಿರುವುದು ಹಾಗೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವುದು ಶರತ್ ಚಂದ್ರ ಅವರಿಗೆ ಪ್ಲಸ್ ಪಾಯಿಂಟ್ ಆಗಿದೆ.
ರಾಜ್ಯದ ಪ್ರತಿಯೊಂದು ರಾಜಕೀಯ, ಸಾಮಾಜಿಕ ಬೆಳವಣಿಗೆಗಳ ಮಾಹಿತಿ ಕಲೆಹಾಕಿ ಪ್ರತಿದಿನ ಮುಖ್ಯಮಂತ್ರಿಗಳಿಗೆ ನೇರ ವರದಿ ನೀಡುವ ಅತ್ಯಂತ ಪ್ರಮುಖ ಗುಪ್ತಚರ ವಿಭಾಗದ ಮುಖ್ಯಸ್ಥರ ಹುದ್ದೆ. ಸಾಮಾನ್ಯವಾಗಿ ಮುಖ್ಯಮಂತ್ರಿಗಳು ತಮ್ಮ ಅತ್ಯಂತ ನಿಕಟ ಹಾಗೂ ನಂಬಿಕಸ್ಥ ಅಧಿಕಾರಿಯನ್ನು ಮಾತ್ರ ಈ ಹುದ್ದೆಗೆ ಕೂರಿಸುವುದು ರಾಜಕೀಯದ ಅಲಿಖಿತ ಸಂಪ್ರದಾಯ. ಪ್ರಸ್ತುತ ಗುಪ್ತಚರ ವಿಭಾಗದ ಮುಖ್ಯಸ್ಥರಾಗಿರುವ ಲಾಬುರಾಮ್ ಅವರನ್ನು ವರ್ಗಾವಣೆ ಮಾಡಲು ಸಿಎಂ ಡಿ.ಕೆ.ಶಿವಕುಮಾರ್ ಚಿಂತನೆ ನಡೆಸಿದ್ದಾರೆ. ಇವರ ಸ್ಥಾನಕ್ಕೆ ಸದ್ಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಆಗಿ ಕಾರ್ಯನಿರ್ವಹಿಸುತ್ತಿರುವ ಹಿರಿಯ ಅಧಿಕಾರಿ ಹಿತೇಂದ್ರ ಅವರನ್ನು ನೇಮಕ ಮಾಡಲು ಮುಖ್ಯಮಂತ್ರಿಗಳು ತೀವ್ರ ಒಲವು ತೋರಿದ್ದಾರೆ ಎನ್ನಲಾಗಿದೆ. ಹಿತೇಂದ್ರ ಅವರು ಗುಪ್ತಚರ ವಿಭಾಗಕ್ಕೆ ಬಂದರೆ, ಕಾನೂನು ಮತ್ತು ಸುವ್ಯವಸ್ಥೆ ವಿಭಾಗಕ್ಕೂ ಹೊಸ ಅಧಿಕಾರಿಯ ಎಂಟ್ರಿಯಾಗಲಿದೆ.
ಇದರೊಂದಿಗೆ ಕೆಎಸ್ಆರ್ಪಿ, ಆಂತರಿಕ ಭದ್ರತೆ ಮತ್ತು ಸಿಐಡಿ ವಿಭಾಗಗಳಲ್ಲೂ ದೊಡ್ಡ ಮಟ್ಟದ ಅಧಿಕಾರಿಗಳ ಅದಲು-ಬದಲು ನಡೆಯಲಿದ್ದು, ಮುಂದಿನ ಒಂದೆರಡು ದಿನಗಳಲ್ಲಿ ಗೃಹ ಇಲಾಖೆಯಿಂದ ವರ್ಗಾವಣೆಯ ಅಧಿಕೃತ ಆದೇಶದ ಪಟ್ಟಿ ಹೊರಬೀಳುವ ನಿರೀಕ್ಷೆಯಿದೆ.
