ಅಕ್ರಮ ಜಾನುವಾರು ಸಾಗಾಟ ಪ್ರಕರಣ: ವಾಹನ ಚಾಲಕ ಚಂದ್ರು, ಕ್ಲೀನರ್ ಮೋಹನ ಇಬ್ಬರ ಬಂಧನ; ಜಾನುವಾರು ವಶ

ಕರಾವಳಿ

ಕಡಬ: ಸುಬ್ರಹ್ಮಣ್ಯ ಗ್ರಾಮದ ಕುಲ್ಕುಂದ-ಬಿಸ್ಲೆ ರಸ್ತೆಯ ಡಿಪ್ಪೋ ಎಂಬಲ್ಲಿ, ದಿನಾಂಕ:13.06.2026 ರಂದು ಬೆಳಗ್ಗಿನ ಜಾವ ಪಿಕಪ್ ವಾಹನವೊಂದು ಆಯತಪ್ಪಿ ಬಿದ್ದಿರುವ ವಾಹನದಲ್ಲಿ ಅಕ್ರಮ ಜಾನುವಾರು ಸಾಗಿಸುತ್ತಿದ್ದ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್ ಠಾಣಾ ಉಪ-ನಿರೀಕ್ಷಕರಿಗೆ ಬಂದ ಮಾಹಿತಿ ಆಧರಿಸಿ, ಪಿಕಪ್ ವಾಹನದ ಚಾಲಕ ಹಾಸನ ಅರಕಲಗೂಡು ನಿವಾಸಿಗಳಾದ ಚಂದ್ರು @ ಚಂದ್ರಶೇಖರ ಮತ್ತು ಕ್ಲೀನರ್ ಮೋಹನ ಎಂಬವರುಗಳನ್ನು ಪೊಲೀಸರು ವಿಚಾರಣೆಗಾಗಿ ಠಾಣೆಗೆ ಕರೆತಂದು ಕೂಲಂಕುಷವಾಗಿ ವಿಚಾರಣೆಗೊಳಪಡಿಸಿದಾಗ ಸದ್ರಿ ಪಿಕಪ್ ವಾಹನದಲ್ಲಿ ಅಕ್ರಮವಾಗಿ ಜಾನುವಾರು ಸಾಗಿಸುತ್ತಿದ್ದ ಬಗ್ಗೆ ಚಾಲಕ ಹಾಗೂ ಕ್ಲೀನರ್ ಒಪ್ಪಿಕೊಂಡಿರುತ್ತಾರೆ.

ಆರೋಪಿಗಳು ಯಾವುದೇ ಪರವಾನಗಿ ಇಲ್ಲದೇ ಎರಡು ಜಾನುವಾರುಗಳನ್ನು ಮಾಂಸ ಮಾಡಿ ಮಾರಾಟ ಮಾಡುವ ಉದ್ದೇಶದಿಂದ ಹಿಂಸಾತ್ಮಕವಾಗಿ ಪಿಕಪ್ ವಾಹನದಲ್ಲಿ ಸಾಗಾಟ ಮಾಡುತ್ತಿದ್ದು, ವಾಹನ ಆಯತಪ್ಪಿ ಬಿದ್ದಾಗ ಸದ್ರಿ ಜಾನುವಾರುಗಳನ್ನು ವಾಹನದಿಂದ ಇಳಿಸಿ ಓಡಿಸಿರುವುದು ಪೊಲೀಸ್ ತನಿಖೆಯಿಂದ ತಿಳಿದುಬಂದಿರುತ್ತದೆ.

ಘಟನಾ ಸ್ಥಳದ ಸ್ವಲ್ಪ ದೂರದಲ್ಲಿ ಹಗ್ಗ ಬಿಚ್ಚಿ ಓಡಿಸಿದ ಎರಡು ಜಾನುವಾರುಗಳನ್ನು ಪೊಲೀಸರು ಪತ್ತೆಮಾಡಿ, ಕೃತ್ಯಕ್ಕೆ ಬಳಸಿದ ವಾಹನ ಹಾಗೂ ಎರಡು ಜಾನುವಾರುಗಳನ್ನು ಸ್ವಾಧೀನಪಡಿಸಿಕೊಂಡು, ಆರೋಪಿಗಳ ವಿರುದ್ದ ಸುಬ್ರಮಣ್ಯ ಪೊಲೀಸ್ ಠಾಣೆಯಲ್ಲಿ ಅ.ಕ್ರ.ಸಂ: 21/2025 ರಂತೆ ಕರ್ನಾಟಕ ಗೋವುಗಳ ಸಂರಕ್ಷಣಾ & ಜಾನುವಾರು ಪ್ರತಿಬಂಧಕ ಕಾಯ್ದೆ ಮತ್ತು ಪ್ರಾಣಿ ಸಂರಕ್ಷಣಾ ಕಾಯ್ದೆ, ಭಾರತೀಯ ಮೋಟಾರು ವಾಹನ ಕಾಯ್ದೆಯಂತೆ ಪ್ರಕರಣ ದಾಖಲಿಸಿಕೊಂಡ ಸುಬ್ರಹ್ಮಣ್ಯ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.