ಜೂನ್ 16 ರಂದು ಸಂಜೆ 4.30 ಕ್ಕೆ ಸುರತ್ಕಲ್ ನಲ್ಲಿ ಸರಕಾರಿ ಆಸ್ಪತ್ರೆಗಳನ್ನು ಉಳಿಸಿ, ಬಲಗೊಳಿಸಲು ಒತ್ತಾಯಿಸಿ ಮಾನವ ಸರಪಳಿ

ಕರಾವಳಿ

ಸರಕಾರಿ ಆಸ್ಪತ್ರೆಗಳನ್ನು ಉಳಿಸುವುದು, ಬಲಗೊಳಿಸಲು ಒತ್ತಾಯಿಸುವುದು ಇಂದಿನ ತುರ್ತು. ಬನ್ನಿ ಸುರತ್ಕಲ್ ನಲ್ಲಿ ನಡೆಯುವ ಮಾನವ ಸರಪಳಿಗೆ ಕೊಂಡಿಯಾಗಿ, ಹೋರಾಟಕ್ಕೆ ಬಲ ತುಂಬಿ. ಸರಕಾರಿ ಆಸ್ಪತ್ರೆಗಳನ್ನು ಖಾಸಗಿ ಮೆಡಿಕಲ್ ಕಾಲೇಜುಗಳಿಗೆ ಹಸ್ತಾಂತರಿಸುವುವ ಆರೋಗ್ಯ ಇಲಾಖೆಯ ಆದೇಶ ಅತ್ಯಂತ ಆಘಾತಕಾರಿ. ಖಾಸಗಿ ವೈದ್ಯಕೀಯ ಸೇವೆಯು ವ್ಯಾಪಾರವನ್ನು ದಾಟಿ ದಂಧೆಯಾಗಿರುವ ಈ ಕಾಲದಲ್ಲಿ ಸರಕಾರಿ ಆಸ್ಪತ್ರೆಗಳ ಬಲವರ್ಧನೆಯೆ ಜನಸಾಮಾನ್ಯರ ಪಾಲಿಗೆ ಆಶಾಕಿರಣ.
ಸರಕಾರಿ ಆರೋಗ್ಯ ಸೇವೆಯ ಖಾಸಗೀಕರಣದ ವಿರುದ್ಧ ದೊಡ್ಡ ಪ್ರತಿರೋಧವನ್ನು ನಾವು ತೋರಬೇಕಿದೆ.

ಜೊತೆಗೆ ಸುರತ್ಕಲ್ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆಸ್ಪತ್ರೆಯಾಗಿ ಮೇಲ್ದರ್ಜೆಗೆ ಏರಿಸಲು, ಮಂಗಳೂರಿನಲ್ಲಿ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ, ಜಯದೇವ ಹೃದಯದ ಆಸ್ಪತ್ರೆ ಸ್ಥಾಪಿಸಬೇಕು, ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಯ ತೀರ್ಮಾನ ಶೀಘ್ರ ಕಾರ್ಯಗತಗೊಳಿಸಬೇಕು, ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ತಾಲೂಕು ಆಸ್ಪತ್ರೆಗಳನ್ನು ಸ್ಥಾಪಿಸಬೇಕು ಎಂದು ಒತ್ತಾಯಿಸಿ ಸುರತ್ಕಲ್ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂಭಾಗ ಬೃಹತ್ ಮಾನವ ಸರಪಳಿ ಕಾರ್ಯಕ್ರಮ. ಮಂಗಳವಾರ (16.06.2026) ಸಂಜೆ 4.30 ಕ್ಕೆ ಮಾನವ ಸರಪಳಿ ನಡೆಯಲಿದೆ.

ಮುಂದಿನ ದಿನಗಳಲ್ಲಿ ಜಿಲ್ಲೆಯಾದ್ಯಂತ ಹೋರಾಟ ವಿಸ್ತರಣೆಯಾಗಲಿದೆ. ಜನ ಹೋರಾಟಗಳು ಮಾತ್ರ ನಮ್ಮ ಬದುಕಿನ ಹಕ್ಕುಗಳನ್ನು ಉಳಿಸಲಿದೆ.
ಎಂದು ಸರಕಾರಿ ಆಸ್ಪತ್ರೆ ಉಳಿಸಿ ಹೋರಾಟ ಸಮಿತಿ, ಸುರತ್ಕಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.