ಅಯೋಧ್ಯೆಯಲ್ಲಿ ನಿರ್ಮಾಣವಾದ ಶ್ರೀರಾಮ ಮಂದಿರದಲ್ಲಿ ಕಾಣಿಕೆ ಹಣ ನಾಪತ್ತೆಯಾದ ಪ್ರಕರಣದ ಬೆನ್ನಲ್ಲೇ, ಲಖನೌ ಮೂಲದ ಆಭರಣ ವ್ಯಾಪಾರಿಯೊಬ್ಬರು ತಾವು ರಾಮ ಮಂದಿರಕ್ಕೆ ವೈಯಕ್ತಿಕ ದೇಣಿಗೆಯಾಗಿ ನೀಡಿದ್ದ 3 ಕೆ.ಜಿ ತೂಕದ ಬೆಳ್ಳಿಯ ದೀಪದ ಸದ್ಯದ ಸ್ಥಿತಿ ಈಗ ಏನಾಗಿದೆಯೋ ಎಂಬ ಸಂಶಯ ವ್ಯಕ್ತಪಡಿಸಿದ್ದಾರೆ. ಬೆಳ್ಳಿ ಗಟ್ಟಿ ಮತ್ತು ಆಭರಣ ವ್ಯಾಪಾರಿಗಳ ಸಂಘದ ಉತ್ತರ ಭಾರತ ಘಟಕದ ಅಧ್ಯಕ್ಷ ಅನುರಾಗ್ ರಸ್ತೋಗಿ ಈ ಆರೋಪ ಮಾಡಿದ್ದಾರೆ.
ಅಯೋಧ್ಯೆಯಲ್ಲಿ 2020ರಲ್ಲಿ ನಡೆದ ಭೂಮಿಪೂಜೆಗೆ ಮುಂಚಿತವಾಗಿ ಸಂಘದ ‘ಐಬಿಜೆಎ’ ವತಿಯಿಂದ ದಾನ ಮಾಡಲಾಗಿದ್ದ 39.26 ಕೆ.ಜಿ ತೂಕದ ಬೆಳ್ಳಿ ಎಲ್ಲಿದೆ ಎಂಬುದು ಸಹ ಗೊತ್ತಾಗಿಲ್ಲ ಎಂದು ಅವರು ದೂರಿಕೊಂಡಿದ್ದಾರೆ. ನನ್ನ ಕುಟುಂಬದ ವತಿಯಿಂದ ರಾಮ ಮಂದಿರಕ್ಕೆ ಅನಾಮಧೇಯ ಕಾಣಿಕೆಯಾಗಿ ಮೂರು ಕೆಜಿ ತೂಕದ ಬೆಳ್ಳಿ ದೀಪವನ್ನು ನೀಡಿದ್ದೇನೆ. ಇದರ ಹೊರತಾಗಿಯೂ ಐಬಿಜೆಎ ವತಿಯಿಂದ ಬೆಳ್ಳಿಯ ಉಪಕರಣಗಳನ್ನು ದೇಣಿಗೆ ನೀಡಲಾಗಿದ್ದು, ಇದರ ಈಗಿನ ಸ್ಥಿತಿಯ ಬಗ್ಗೆ ತಿಳಿದಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.
