ಬಾಲಕಿಯನ್ನು ಮದುವೆಯಾಗುವುದಾಗಿ ನಂಬಿಸಿ ಹೈದರಾಬಾದ್ಗೆ ಕರೆದೊಯ್ದು ಹಲವಾರು ದಿನಗಳ ಕಾಲ ಇಚ್ಛೆಗೆ ವಿರುದ್ಧವಾಗಿ ಅತ್ಯಾಚಾರ ಎಸಗಿದ ಆರೋಪ ಸಾಬೀತಾಗಿದ್ದರಿಂದ ಸೇಡಂ ತಾಲ್ಲೂಕಿನ ನಿವಾಸಿ ನವೀನ್ ಕುಮಾರ್ ದಸ್ತಪ್ಪ ದುದ್ಯಾಲ ಎಂಬಾತನಿಗೆ ಇಲ್ಲಿನ ಪೋಕ್ಸೊ ನ್ಯಾಯಾಲಯ 20 ವರ್ಷ ಜೈಲು ಶಿಕ್ಷೆ ಹಾಗೂ 55 ಸಾವಿರ ರೂ. ದಂಡ ವಿಧಿಸಿದೆ.
2025ರ ಮಾರ್ಚ್ 30ರಂದು ಬಾಲಕಿಗೆ ಕರೆ ಮಾಡಿ ಮಾತನಾಡುವುದಿದೆ ಎಂದು ಕರೆಸಿಕೊಂಡು ಪ್ರೀತಿಸುವುದಾಗಿ ಹೇಳಿ ಪಾಳು ಬಿದ್ದ ಮನೆಯೊಂದಕ್ಕೆ ಕರೆದೊಯ್ದು ಅಲ್ಲಿ ಅತ್ಯಾಚಾರ ಎಸಗಿದ್ದ. ನಂತರ ಜುಲೈ 12ರಂದು ಬೆಳಿಗ್ಗೆ ಬಾಲಕಿಗೆ ಕರೆ ಮಾಡಿ ಓಡಿ ಹೋಗಿ ಮದುವೆಯಾಗೋಣ ಎಂದು ಪುಸಲಾಯಿಸಿ ಕರೆಸಿಕೊಂಡು ಬಸ್ನಲ್ಲಿ ಸೇಡಂ ಪಟ್ಟಣಕ್ಕೆ ಬಂದು ಅಲ್ಲಿಂದ ಹೈದರಾಬಾದ್ಗೆ ಕರೆದೊಯ್ದ. ಅಲ್ಲಿ ಹೋಟೆಲೊಂದರಲ್ಲಿ ಕೆಲಸ ಹುಡುಕಿಕೊಂಡು ಒಂದು ವಾರ ಮನೆಯೊಂದನ್ನು ಬಾಡಿಗೆಗೆ ಪಡೆದು ಅತ್ಯಾಚಾರ ಎಸಗಿದ್ದ. ಬಾಲಕಿ ಹೇಳಿಕೆ ಆಧರಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಸೇಡಂ ಠಾಣೆಯ ಪೊಲೀಸರು ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ಹೆಚ್ಚುವರಿ ಮತ್ತು ಸೆಷನ್ಸ್ (ವಿಶೇಷ ಪೋಕ್ಸೊ) ನ್ಯಾಯಾಲಯದ ನ್ಯಾಯಾಧೀಶರು ಪೋಕ್ಸೊ ಕಾಯ್ದೆಯ ವಿವಿಧ ಕಲಂ ಹಾಗೂ ಬಿಎನ್ಎಸ್ ಕಾಯ್ದೆಯಡಿ ಅಪರಾಧಿ ನವೀನ್ಕುಮಾರ್ಗೆ 20 ವರ್ಷ ಜೈಲು ಶಿಕ್ಷೆ ಹಾಗೂ 55 ಸಾವಿರ ರೂ. ದಂಡ ವಿಧಿಸಿ ಆದೇಶ ಹೊರಡಿಸಿದರು. ನೊಂದ ಬಾಲಕಿಗೆ ಕಾನೂನು ಸೇವಾ ಪ್ರಾಧಿಕಾರದಿಂದ 5 ಲಕ್ಷ ರೂ. ಪರಿಹಾರವನ್ನು ತೀರ್ಪು ಪ್ರಕಟವಾದ ಒಂದು ತಿಂಗಳೊಳಗಾಗಿ ನೀಡುವಂತೆ ಆದೇಶದಲ್ಲಿ ತಿಳಿಸಿದ್ದಾರೆ.
