ನ್ಯಾಯಕ್ಕಾಗಿ ತಹಶೀಲ್ದಾರ್, ಪೊಲೀಸ್ ಮೊರೆ ಹೋದ ಬೂತ್ ಮಟ್ಟದ ಅಧಿಕಾರಿ
ಚುನಾವಣಾ ಆಯೋಗದ ಆದೇಶದಂತೆ ಸರಕಾರದ ಸೂಚನೆಯಂತೆ ಮತದಾರರ ಪಟ್ಟಿ ಪರಿಷ್ಕರಿಸುವ ಕ್ಷೇತ್ರ ಕಾರ್ಯದಲ್ಲಿದ್ದ ಕರ್ತವ್ಯ ನಿರತ ದಲಿತ ಬಿ.ಎಲ್.ಒ ಒಬ್ಬರಿಗೆ ಜಾತಿವಾದಿ ಮಹಿಳೆಯೊಬ್ಬರು ಜಾತಿಯ ಕಾರಣಕ್ಕಾಗಿಯೇ ಅವಮಾನಿಸಿ ಅಂಗಳದಲ್ಲೇ ನಿಲ್ಲಿಸಿದ ಅಮಾನವೀಯ ಘಟನೆ ಶಿರ್ಲಾಲು ಗ್ರಾಮದಲ್ಲಿ ಜುಲೈ 6 ರಂದು ನಡೆದಿದೆ.
ಬೆಳ್ತಂಗಡಿ ತಾಲೂಕಿನ ಶಿರ್ಲಾಲು ಗ್ರಾಮದ ಬಿ.ಎಲ್.ಒ ಪರಿಶಿಷ್ಟ ಜಾತಿಗೆ ಸೇರಿದ ಮಹಿಳೆ ಅವಮಾನಗೊಂಡ ಅಂಗನವಾಡಿ ಕಾರ್ಯಕರ್ತೆಯಾಗಿದ್ದಾರೆ.
2025 ರಲ್ಲಿ ಶಿರ್ಲಾಲು ಗ್ರಾಮದ ಅಂಗನವಾಡಿ ಕಾರ್ಯಕರ್ತೆಯಾಗಿ ನೇಮಕಗೊಂಡಿದ್ದು, ಎಸ್ ಐ ಆರ್ ಪ್ರಕ್ರಿಯೆ ಭಾಗವಾಗಿ ಮನೆ ಮನೆಗೆ ಭೇಟಿ ನೀಡಲು ತೆರಳಿದ್ದ ವೇಳೆ ಸ್ಥಳೀಯ ಪಲ್ಲದೋಡಿ ಎಂಬಲ್ಲಿನ ಮಹಿಳೆ ಬಿ.ಎಲ್.ಒ ಅವರನ್ನು ಮನೆಗೆ ಬರದಂತೆ ತಡೆದು, ಜಾತಿಯ ಕಾರಣಕ್ಕಾಗಿ ಏಕವಚನದಲ್ಲಿ ಬೈದು ಅಂಗಳದಲ್ಲೇ ನಿಲ್ಲಿಸಿ ಅವಮಾನಿಸಿದ ಘಟನೆ ನಡೆದಿದೆ.
ಈ ಘಟನೆಯಿಂದ ತೀವ್ರವಾಗಿ ನೊಂದಿರುವ ಅಂಗನವಾಡಿ ಕಾರ್ಯಕರ್ತೆ ತನಗೆ ಜವಾಬ್ದಾರಿ ಕೊಟ್ಟಿದ್ದ ಬಿ.ಎಲ್.ಒ ಕರ್ತವ್ಯಕ್ಕೆ ರಾಜೀನಾಮೆ ನೀಡಿದ್ದು, ರಾಜೀನಾಮೆ ಪತ್ರವನ್ನು ಬೆಳ್ತಂಗಡಿ ತಹಶೀಲ್ದಾರ್ ಅವರಿಗೆ ಸಲ್ಲಿಸಿದ್ದಾರೆ. ಈ ಬಗ್ಗೆ ತನಗೆ ನ್ಯಾಯ ಒದಗಿಸಿಕೊಡುವಂತೆ ತಾಲೂಕು ದಂಡಾಧಿಕಾರಿ ಹಾಗೂ ವೇಣೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
