ದೇಶದಲ್ಲಿ ಪ್ರತಿನಿತ್ಯ ಸಂಭವಿಸುವ ರಸ್ತೆ ಅಪಘಾತಗಳಲ್ಲಿ ಪ್ರತಿ ಗಂಟೆಗೆ ಸರಾಸರಿ 20 ಜನರು ಬಲಿಯಾಗುತ್ತಿದ್ದಾರೆ: ಸಚಿವ ನಿತಿನ್ ಗಡ್ಕರಿ ಆತಂಕ

ರಾಷ್ಟ್ರೀಯ

ಪ್ರತಿ ಗಂಟೆಗೆ ಸರಾಸರಿ 20 ಜನರು ರಸ್ತೆ ಅಪಘಾತಗಳಲ್ಲಿ ಬಲಿ. ವರ್ಷಕ್ಕೆ 5 ಲಕ್ಷ ರಸ್ತೆ ಅಪಘಾತಗಳು; ಅಂದಾಜು 1.8 ಲಕ್ಷ ಜನರ ಸಾವು, ಶೇಕಡಾ 66 ರಷ್ಟು ಯುವಕರು

ಭಾರತದ ರಸ್ತೆಗಳಲ್ಲಿ ಸುರಕ್ಷತೆಯ ಕೊರತೆ ಗಂಭೀರ ಸಮಸ್ಯೆಯಾಗಿ ಪರಿಣಮಿಸಿದ್ದು, ದೇಶದಲ್ಲಿ ಪ್ರತಿನಿತ್ಯ ಸಂಭವಿಸುತ್ತಿರುವ ರಸ್ತೆ ಅಪಘಾತಗಳು ಯಾವುದೇ ಯುದ್ಧ ಅಥವಾ ಸಾಂಕ್ರಾಮಿಕ ರೋಗಕ್ಕಿಂತಲೂ ಹೆಚ್ಚು ಜನರನ್ನು ಬಲಿ ಪಡೆಯುತ್ತಿವೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಆತಂಕ ವ್ಯಕ್ತಪಡಿಸಿದ್ದಾರೆ.

ನವದೆಹಲಿಯಲ್ಲಿ ಆಯೋಜಿಸಲಾಗಿದ್ದ ರಸ್ತೆ ಸುರಕ್ಷತಾ ಜಾಗೃತಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಚಿವರು, ದೇಶದ ರಸ್ತೆ ಜಾಲದ ಭೀಕರ ವಾಸ್ತವವನ್ನು ಬಿಚ್ಚಿಟ್ಟರು. ಪ್ರಸ್ತುತ ದೇಶದಲ್ಲಿ ಪ್ರತಿ ಗಂಟೆಗೆ ಸರಾಸರಿ 20 ಜನರು ರಸ್ತೆ ಅಪಘಾತಗಳಲ್ಲಿ ತಮ್ಮ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ವರ್ಷಕ್ಕೆ ಸುಮಾರು 5 ಲಕ್ಷ ರಸ್ತೆ ಅಪಘಾತಗಳು ವರದಿಯಾಗುತ್ತಿದ್ದು, ಇದರಿಂದಾಗಿ ಅಂದಾಜು 1.8 ಲಕ್ಷ ಜನರು ಸಾವನ್ನಪ್ಪುತ್ತಿದ್ದಾರೆ. ಇಂತಹ ಅಪಘಾತಗಳಲ್ಲಿ ಮೃತಪಡುತ್ತಿರುವವರ ಪೈಕಿ ಶೇಕಡಾ 66 ರಷ್ಟು ಜನರು ಯುವಕರಾಗಿದ್ದು, ಇದು ದೇಶಕ್ಕೆ ಸರಿಪಡಿಸಲಾಗದ ದೊಡ್ಡ ನಷ್ಟವಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ದ್ವಿಚಕ್ರ ವಾಹನ ಸವಾರರು ಸುರಕ್ಷತಾ ನಿಯಮಗಳನ್ನು ಸರಿಯಾಗಿ ಪಾಲಿಸದಿರುವುದು ಸಾವುಗಳ ಸಂಖ್ಯೆ ಹೆಚ್ಚಾಗಲು ಪ್ರಮುಖ ಕಾರಣವಾಗಿದೆ. ಕಳೆದ ವರ್ಷವೊಂದರಲ್ಲೇ ಹೆಲ್ಮೆಟ್ ಧರಿಸದ ಕಾರಣಕ್ಕೆ 54,132 ಜನರು ಜೀವ ಕಳೆದುಕೊಂಡಿದ್ದಾರೆ. ಒಟ್ಟು ರಸ್ತೆ ಅಪಘಾತಗಳ ಸಾವುಗಳಲ್ಲಿ ದ್ವಿಚಕ್ರ ವಾಹನ ಸವಾರರ ಪಾಲು ಶೇಕಡಾ 45 ರಷ್ಟಿದೆ ಎಂದು ಸಚಿವರು ಅಂಕಿಅಂಶ ಸಹಿತ ವಿವರಣೆ ನೀಡಿದರು. ಅಪಘಾತಗಳನ್ನು ತಡೆಯಲು ಸರ್ಕಾರ ಕೈಗೊಳ್ಳುತ್ತಿರುವ ಕ್ರಮಗಳ ಕುರಿತು ಮಾಹಿತಿ ನೀಡಿದ ಗಡ್ಕರಿ, ಕಳಪೆ ವಿನ್ಯಾಸ ಹಾಗೂ ಅಪಾಯಕಾರಿ ರಸ್ತೆ ತಿರುವುಗಳನ್ನು (‘ಬ್ಲಾಕ್ ಸ್ಪಾಟ್‌ಗಳು’) ಸರಿಪಡಿಸಲು 40,000 ಕೋಟಿ ರೂಪಾಯಿ ವೆಚ್ಚ ಮಾಡಲಾಗುತ್ತಿದೆ ಎಂದು ತಿಳಿಸಿದರು. ದೇಶದಾದ್ಯಂತ ಅತಿ ಹೆಚ್ಚು ಅಪಘಾತಗಳು ಸಂಭವಿಸುವ 100 ಜಿಲ್ಲೆಗಳನ್ನು ಗುರುತಿಸಲಾಗಿದ್ದು, ಅಲ್ಲಿ ವಿಶೇಷ ಸುಧಾರಣಾ ಯೋಜನೆಗಳನ್ನು ಜಾರಿಗೆ ತರಲಾಗುತ್ತಿದೆ.

ಭಾರತವು ಇಂದು ಜಪಾನ್ ದೇಶವನ್ನು ಹಿಂದಿಕ್ಕಿ ಅಮೆರಿಕ ಮತ್ತು ಚೀನಾ ನಂತರ ವಿಶ್ವದ ಮೂರನೇ ಅತಿದೊಡ್ಡ ರಸ್ತೆ ಜಾಲವನ್ನು ಹೊಂದಿದ ಸಾಧನೆ ಮಾಡಿದೆ. ಆದರೆ, ಇದೇ ವೇಳೆ ವಿಶ್ವದಲ್ಲೇ ಅತಿ ಹೆಚ್ಚು ರಸ್ತೆ ಅಪಘಾತ ಸಾವುಗಳು ಸಂಭವಿಸುವ ದೇಶ ಎಂಬ ಕೆಟ್ಟ ಹೆಸರು ಕೂಡ ನಮಗಿದೆ. ಶೂನ್ಯ ರಸ್ತೆ ಸಾವು ಸಾಧಿಸಿರುವ ಸ್ವೀಡನ್‌ನಂತಹ ದೇಶಗಳ ಶಿಸ್ತು ಮತ್ತು ನಿಯಮ ಪಾಲನೆಯನ್ನು ನಾವು ಮಾದರಿಯಾಗಿ ತೆಗೆದುಕೊಳ್ಳಬೇಕಿದೆ. ರಸ್ತೆ ಸುರಕ್ಷತೆಯಲ್ಲಿ ಮಾನವನ ನಡವಳಿಕೆ ಮತ್ತು ಅಜಾಗರೂಕತೆಯೇ ನಮಗೆ ದೊಡ್ಡ ಸವಾಲಾಗಿದ್ದು, ಮೂಲಸೌಕರ್ಯ ಹಾಗೂ ಕಟ್ಟುನಿಟ್ಟಿನ ಕಾನೂನು ಜಾರಿಯ ಜೊತೆಗೆ ಸಾರ್ವಜನಿಕರಲ್ಲಿ ಸ್ವಯಂ ಜಾಗೃತಿ ಮೂಡುವುದು ಅತ್ಯಗತ್ಯ ಎಂದು ಅವರು ಪ್ರತಿಪಾದಿಸಿದರು.