ಸುಳ್ಯ ತಾಲೂಕು ಸಂಪಾಜೆ ಗ್ರಾಮದ ಕಲ್ಲುಗುಂಡಿ ಎಂಬಲ್ಲಿ ನಡೆದಿದ್ದ ದರೋಡೆ ಪ್ರಕರಣದ ಆರೋಪಿಯಾಗಿದ್ದ ಶ್ರೀನಿವಾಸ್ ಯಾನೆ ಶೀನಾ ಎಂಬಾತನನ್ನು ಪುತ್ತೂರು 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ನಿರಪರಾಧಿ ಎಂದು ಬಿಡುಗಡೆಗೊಳಿಸಿದೆ. ಘಟನೆ ನಡೆದ 13 ವರ್ಷಗಳ ನಂತರ ಆರೋಪಿ ಖುಲಾಸೆಗೊಂಡಿದ್ದಾನೆ.
2013 ಜನವರಿ 27ರಂದು ನಾಗರಾಜ್ ಎಂಬುವವರು ಬಾಡಿಗೆಯ ಟಾಟಾ ಇಂಡಿಕಾ ಕಾರ್ ನಲ್ಲಿ ಮೈಸೂರು ಕಡೆಗೆ ಸಂಚಾರಿಸುತ್ತಿರುವಾಗ ಸಂಪಾಜೆ ಗ್ರಾಮದ ಕಲ್ಲುಗುಂಡಿ ಎಂಬಲ್ಲಿ ವಾಹನವನ್ನು ತಡೆದು ನಿಲ್ಲಿಸಿ ನಾಗರಾಜ್ ರವರು ಇದ್ದ ಕಾರಿನ ಚಾಲಕನ ಬಳಿ ಇದ್ದ 20 ಗ್ರಾಂ ತೂಕದ ಚಿನ್ನದ ಸರ, ಮೊಬೈಲ್, ವಾಹನದ ದಾಖಲಾತಿ ಮತ್ತು ನಾಗರಾಜ್ ಎಂಬವರ ಕುತ್ತಿಗೆಯಲ್ಲಿದ್ದ 16 ಗ್ರಾಂ ತೂಕದ ಚಿನ್ನದ ಸರ, 13 ಗ್ರಾಂ ತೂಕದ ಬ್ರಾಸ್ ಲೇಟ್, 5 ಗ್ರಾಂ ತೂಕದ 2 ಉಂಗುರ ಹಾಗೂ 4500ರೂ. ಪಾನ್ ಕಾರ್ಡ್, ಎಟಿಎo ಕಾರ್ಡ್ ಇದ್ದ ಪರ್ಸ್ ಮತ್ತು ನಾಗರಾಜ್ ರವರ ಪತ್ನಿಯ ಬಳಿ ಇದ್ದ 2500 ರೂ. ಸುಲಿಗೆ ಮಾಡಲಾಗಿತ್ತು. ಕೃತ್ಯದಲ್ಲಿ ಭಾಗಿಯಾಗಿದ್ದ ನಾಲ್ವರು ಹಾಗೂ ಇತರರ ಮೇಲೆ ಪೊಲೀಸರು ಎಫ್ಐಆರ್ ದಾಖಲಿಸಿ ನ್ಯಾಯಾಲಯಕ್ಕೆ ದೋಷಾರೋಪನ ಪಟ್ಟಿ ಸಲ್ಲಿಸಿದ್ದರು.
ಘಟನೆ ನಡೆದ ಕೆಲವೇ ದಿನಗಳಲ್ಲಿ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಆದರೆ ಆರೋಪಿ ಶೀನಾ ಪೊಲೀಸರ ಕೈಗೆ ಸಿಗದೆ ತಲೆಮರಿಸಿಕೊಂಡಿದ್ದ. ಅವನ ಮೇಲೆ ವಾರಂಟ್ ಅನ್ನು ಜಾರಿಮಾಡಲಾಗಿತ್ತು. ಈ ಸಮಯದಲ್ಲಿ ಉಳಿದ ಆರೋಪಿಗಳ ಮೇಲೆ ಇದ್ದ ಪ್ರಕರಣವನ್ನು ಮುಂದುವರೆಸಿ ಅದರಲ್ಲಿ ಆರೋಪಿಗಳನ್ನು ಖುಲಾಸೆ ಮಾಡಿ ಪ್ರಕರಣವನ್ನು ಇತ್ಯರ್ಥಗೊಳಿಸಲಾಗಿತ್ತು. ಹೀಗಿರುವಾಗ ಆರೋಪಿ ಶ್ರೀನಿವಾಸ್ ನನ್ನು ಸುಳ್ಯ ಪೊಲೀಸರು ಬಂಧಿಸಿದರು. ತದನಂತರ ಜಾಮೀನು ಕೋರಿ ಅರ್ಜಿಯನ್ನು ಸಲ್ಲಿಸಿದರು, ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಾಲಯವು ಆರೋಪಿ ಶ್ರೀನಿವಾಸನಿಗೆ ಜಾಮೀನನ್ನು ಮಂಜೂರು ಮಾಡಿತು.
ನ್ಯಾಯಾಲಯವು ಈ ಪ್ರಕರಣವನ್ನು ತನಿಖೆಗೆ ಕೈಗೆತ್ತಿಕೊಂಡು ಸುಮಾರು 21 ಸಾಕ್ಷಿಗಳ ಪೈಕಿ 9 ಸಾಕ್ಷಿಗಳನ್ನು ತನಿಖೆ ನಡೆಸಿತು. ಘಟನೆ ನಡೆದಿದೆ ಎನ್ನಲಾದ ಸಮಯದಲ್ಲಿ ಆರೋಪಿ ಇದ್ದ ಬಗ್ಗೆ ದಾಖಲೆಗಳಿರುವುದಿಲ್ಲ, ಸಾಕ್ಷಿಗಳ ವತಿಯಿಂದ ಹೇಳಿಕೆಗಳು, ಆರೋಪಿಯು ಈ ಕೃತ್ಯ ನಡೆಸಿದ್ದಾನೆ ಎಂದು ಸಾಬೀತುಪಡಿಸುವಲ್ಲಿ ಪ್ರಾಸಿಕ್ಯೂಷನ್ ಈ ಪ್ರಕರಣವನ್ನು ಸಂಶಯಾತೀತವಾಗಿ ಸಾಬೀತುಪಡಿಸಲು ವಿಫಲಗೊಂಡಿದೆ ಎಂದು ತೀರ್ಮಾನಿಸಿತು. ವಾದ -ವಿವಾದಗಳನ್ನು ಆಲಿಸಿದ ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಸದಾನಂದ ನಾಗಪ್ಪ ನಾಯಕರವರು 2026 ಅಗಸ್ಟ್ 31 ರಂದು ನಿರ್ದೋಷಿ ಎಂದು ಆದೇಶಿಸಿರುತ್ತಾರೆ. ಆರೋಪಿ ಪರ ವಕೀಲರಾದ ಪುತ್ತೂರಿನ ಕಜೆ ಲಾ ಚೇಂಬರ್ಸ್ ನ ಶ್ರೀ ಮಹೇಶ್ ಕಜೆ ರವರು ವಾದಿಸಿದರು.
