ರಾಷ್ಟ್ರಮಟ್ಟದಲ್ಲಿ ಸುದ್ಧಿಯಾಗಿದ್ದ ಅಪಹರಣ, ಹತ್ಯೆ ಪ್ರಕರಣ ಮುಚ್ಚಿ ಹೋಗಿದ್ದು ಹೇಗೆ..?
ಎಪ್ಪತ್ತರ ದಶಕದಲ್ಲಿ ಕಾಂಗ್ರೆಸ್ ಜಿಲ್ಲಾ ರಾಜಕಾರಣದಲ್ಲಿ ಇಸ್ಮಾಯಿಲ್ ಅವರದ್ದು ದೊಡ್ಡ ಹೆಸರು. ಪ್ರಭಾವಶಾಲಿ ರಾಜಕಾರಣಿಯಾಗಿ ಬೆಳೆದಿದ್ದ ಇಸ್ಮಾಯಿಲ್ ಅವತ್ತಿನ ಮುಖ್ಯಮಂತ್ರಿ ಆದಿಯಾಗಿ ಪ್ರಮುಖ ನಾಯಕರೊಂದಿಗೆ ಅತ್ಯಂತ ನಿಕಟ ಸಂಬಂಧ ಹೊಂದಿದ್ದರು. ಉತ್ತಮ ಭಾಷಣಕಾರರಾಗಿ, ಸಂಘಟನಾ ಚತುರರಾಗಿ ಮಿಂಚುತ್ತಿದ್ದ ಕಲ್ಲಡ್ಕ ಇಸ್ಮಾಯಿಲ್ ದೊಡ್ಡ ನಾಯಕರಾಗಿ ಬೆಳೆದುಬರುತ್ತಿದ್ದರು. ಆ ಹೊತ್ತಿನಲ್ಲೇ ಅವರ ಹತ್ಯೆಯಾಗಿತ್ತು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಲ್ಲಡ್ಕ ಎಂದರೆ ಕೊತ ಕೊತ ಕುದಿಯುತ್ತಿದ್ದ ಊರು. ಅದು ತುರ್ತು ಪರಿಸ್ಥಿತಿಯ ಕಾಲ. ಅ ಕಾಲದಲ್ಲೇ ಆರ್ ಎಸ್ ಎಸ್ ನ ಬೆನ್ನೆಲುಬಾಗಿದ್ದರು ಕಲ್ಲಡ್ಕ ಭಟ್ರು. ಅದೊಂದು ದಿನ ಮಧ್ಯರಾತ್ರಿ, ಕಲ್ಲಡ್ಕ ಪೇಟೆ ನಿದ್ರೆಗೆ ಜಾರಿದಾಗ, ಇಸ್ಮಾಯಿಲ್ ಮನೆಯ ಮುಂದೆ ಪೊಲೀಸ್ ಜೀಪೊಂದು ಬಂದು ನಿಂತಿತ್ತು. ಬಂದವರೇ ರಾಂಪ ಪೂಜಾರಿಯವರ ಮನೆ ಎಲ್ಲಿ? ತೋರಿಸಿಕೊಡುವಿರಾ ಎಂದಾಗ ಇಸ್ಮಾಯಿಲ್ ಪೊಲೀಸ್ ಜೀಪ್ ಹತ್ತಿದರು. ಎಷ್ಟೇ ಹೊತ್ತಿಗೆ ಯಾರು ಬಂದು ಕರೆಯಲಿ ಎದ್ದು ಹೋಗುವುದು ಇಸ್ಮಾಯಿಲ್ ಜಾಯಮಾನ. ಆದರೆ ಈ ಬಾರಿ ಬಂದದ್ದು ನಕಲಿ ಪೊಲೀಸರು ಅನ್ನುವ ಅರಿವು ಇಸ್ಮಾಯಿಲ್ ಅವರಿಗೆ ಇರಲಿಲ್ಲ. ಪೊಲೀಸ್ ಜೀಪ್ ಯೆಳ್ತಿಮಾರ್ ಹತ್ತಿರದ ನಿರ್ಜನ ಪ್ರದೇಶಕ್ಕೆ ಬರುತ್ತಿದ್ದಂತೆ ಹಿಂದಿನ ಸೀಟಿನಲ್ಲಿದ್ದ ನಕಲಿ ಪೊಲೀಸ್ ವೇಷಧಾರಿ ದುಷ್ಕರ್ಮಿಗಳು ಇಸ್ಮಾಯಿಲ್ ಕುತ್ತಿಗೆಗೆ ಹಗ್ಗ ಬಿಗಿದು ಹತ್ಯೆ ಮಾಡಿದ್ದರು.

ನಂಬಿಸಿ ಕರೆದುಕೊಂಡು ಬಂದು ಇಸ್ಮಾಯಿಲ್ ಜೀವ ತೆಗೆದಿದ್ದರು. ಹಂತಕರು ಬೇರೆ ಯಾರೂ ಆಗಿರಲಿಲ್ಲ. ಕಲ್ಲಡ್ಕ ಟೀಮಿನಲ್ಲಿದ್ದವರೇ ಆಗಿದ್ದರು. ಮೃತದೇಹವನ್ನು ವಿರೂಪಗೊಳಿಸಿ ಉಪ್ಪಿನಂಗಡಿ ಸೇತುವೆಯಿಂದ ನದಿಗೆ ಎಸೆದಿದ್ದರು. ಸ್ನೇಹಿತರ ಸಹಾಯದಿಂದ ಹುಡುಕಾಟ ಆರಂಭಿಸಿದರು. ಪೊಲೀಸರನ್ನು ಸಂಪರ್ಕಿಸಿದಾಗ, ಅವರು “ನಾವು ಇಸ್ಮಾಯೀಲ್‌ರನ್ನು ಕರೆದುಕೊಂಡು ಹೋಗಿಲ್ಲ” ಎಂದು ನಿರಾಕರಿಸಿದರು. ಇಪ್ಪತ್ತು ದಿನಗಳ ನಂತರ ಇಸ್ಮಾಯಿಲ್ ಕಳೇಬರ ಸರಪಾಡಿಯಲ್ಲಿ ಪತ್ತೆಯಾಗಿತ್ತು. ಜಿಲ್ಲೆಯಾದ್ಯಂತ ಭಾರಿ ಸಂಚಲನ ಸೃಷ್ಟಿಸಿದ್ದ ಇಸ್ಮಾಯಿಲ್ ಮರ್ಡರ್ ಪ್ರಕರಣವನ್ನು ಸಿ.ಓ.ಡಿ ಗೆ ಹಸ್ತಾಂತರಿಸಲಾಗಿತ್ತು.
ಕಲ್ಲಡ್ಕ ಎಂ. ಇಸ್ಮಾಯೀಲ್, ಕೂಲಿ ರೈತನ ಮಗ. ಚುರುಕಾದ ಬುದ್ಧಿ, ಧೈರ್ಯಶಾಲಿ ಮಾತುಗಳಿಂದ ಗ್ರಾಮಸ್ಥರ ಮನಗೆದ್ದ ಅವರು, ಬೇಗನೆ ಜನಪ್ರಿಯ ಕಾಂಗ್ರೆಸ್ ಕಾರ್ಯಕರ್ತನಾದರು. ತಮ್ಮ ಸಣ್ಣ ಅಂಗಡಿಯನ್ನು ರಾಜಕೀಯ ಚರ್ಚೆಗಳ ವೇದಿಕೆಯನ್ನಾಗಿಸಿದ್ದರು. “24 ಗಂಟೆ ಸಹಾಯ ಮಾಡಲು ಸಿದ್ಧನಿದ್ದ” ವ್ಯಕ್ತಿಯಾಗಿ ಕಲ್ಲಡ್ಕ ಜನರ ಮನದಲ್ಲಿ ಗುರುತಿಸಿಕೊಂಡಿದ್ದರು ಎಂದು ಸ್ಥಳೀಯರು ಸ್ಮರಿಸುತ್ತಾರೆ.
ಅವು ಜನಸಂಘದ ಪ್ರಾರಂಭದ ದಿನಗಳು. ಒಂದು ಸಭೆಯ ವೇಳೆ, ಸಭಾಭವನದ ಹೊರಗಡೆ ನಿಂತು ಇಸ್ಮಾಯೀಲ್ ಜನಸಂಘದ ತತ್ವದ ವಿರುದ್ಧ ಪ್ರಭಾವಿ ಭಾಷಣ ಮಾಡಿದರು. ಅದನ್ನು ಕೇಳಲು ಭಾರೀ ಜನಸ್ತೋಮ ಸೇರಿತ್ತು. ಇದರಿಂದ ಜನಸಂಘ ನಾಯಕರು ಆಕ್ರೋಶಗೊಂಡರು. ಆ ಸಮಯದಲ್ಲಿ ಭಟ್ರು ಅಷ್ಟು ಜನಪ್ರಿಯರಿರಲಿಲ್ಲ. ಆದರೆ ಇಸ್ಮಾಯೀಲ್ ಜನಮನದ ನಾಯಕನಾಗಿದ್ದರು. “ಅವರು ಅದ್ಭುತ ವಕ್ತಾರರಾಗಿದ್ದರು. ಯುವಕರು, ಯಾವ ಧರ್ಮದವರಾದರೂ ಅವರ ಭಾಷಣವನ್ನು ಆಕರ್ಷಿತರಾಗಿ ಕೇಳುತ್ತಿದ್ದರು. ಆ ದಿನಗಳಲ್ಲಿ, ಕನಿಷ್ಠ ಇಸ್ಮಾಯೀಲ್ ವಿಚಾರದಲ್ಲಿ, ಯಾರೂ ಮುಸ್ಲಿಂ-ಹಿಂದೂ ಎಂದು ವಿಭಜನೆ ಮಾಡುತ್ತಿರಲಿಲ್ಲ. ಅವರು ಒಂದು ಸಮೂಹ ನಾಯಕರಾಗಿ ಹೊರಹೊಮ್ಮುತ್ತಿದ್ದರು.
ಇಸ್ಮಾಯೀಲ್‌ರ ಬಗ್ಗೆ ಜನಪ್ರಿಯ ಘಟನೆಯೆಂದರೆ, ಅವರು ತಾವುಳ್ಳ ಕಲ್ಲಡ್ಕದಲ್ಲಿ ಹಾದುಹೋಗುತ್ತಿದ್ದ ಇಂದಿರಾ ಗಾಂಧಿಯವರ ವಾಹನ ವನ್ನು ತಡೆದು ನಿಲ್ಲಿಸಿದುದು. ಆಗ ಗಾಂಧಿಯವರು ಕಾರಿನಿಂದ ಇಳಿದು 15 ನಿಮಿಷ ಜನರನ್ನುದ್ದೇಶಿಸಿ ಮಾತನಾಡಿದ್ದರು. ಕಲ್ಲಡ್ಕ ಇಸ್ಮಾಯೀಲ್ ಅವರನ್ನು ಕಾಂಗ್ರೆಸ್ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಅಭ್ಯರ್ಥಿಯಾಗಿ ನಿಲ್ಲಿಸುತ್ತಾರೆ ಎಂಬ ವದಂತಿ ಹರಡಿತ್ತು. ಆದರೆ ಅವರ 1976ರ ಹತ್ಯೆಯೊಂದಿಗೆ ಎಲ್ಲವೂ ಅಚಾನಕ್ಕಾಗಿ ಅಂತ್ಯಗೊಂಡಿತು. 1976ರಲ್ಲಿ ಇಸ್ಮಾಯೀಲ್ ಕೊಲೆ ನಡೆದ ನಂತರ, ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಗ್ರಾಮಸ್ಥರು ಆರ್‌ಎಸ್‌ಎಸ್ / ಜನಸಂಘದ ಕೈವಾಡವಿದೆ ಎಂದು ಆರೋಪಿಸಿದರು. ಈ ಪ್ರಕರಣ ಆ ಕಾಲದ ಇಂದಿರಾ ಗಾಂಧಿ ನೇತೃತ್ವದ ತುರ್ತು ಪರಿಸ್ಥಿತಿ (Emergency) ಯ ಸಮಯದಲ್ಲಿ ನಡೆದ ಕಾರಣ, ರಾಜಕೀಯ ಬಣ್ಣ ಹೆಚ್ಚಾಗಿ ಕಂಡಿತು.
ಪೊಲೀಸರು ನಡೆಸಿದ ತನಿಖೆಯ ನಂತರ, ಭಟ್ರು ಸೇರಿದಂತೆ ಹಲವಾರು ಜನರ ಮೇಲೆ ಆರೋಪ ದಾಖಲಾಗಿತ್ತು. ಭಟ್ ಅವರ ಹೆಸರೇ ಕೇಸ್‌ನ “ಮುಖ್ಯ ಆರೋಪಿ” ಎಂದು ಪ್ರಚಾರವಾಯಿತು. ಪ್ರಕರಣ ದಕ್ಷಿಣ ಕನ್ನಡ ಜಿಲ್ಲಾ ನ್ಯಾಯಾಲಯದಲ್ಲಿ ವಿಚಾರಣೆಗೆ ಬಂದಿತು. ಸಾಕ್ಷಿಗಳಲ್ಲಿ ಹಲವರು ಭಯದಿಂದ ಅಥವಾ ರಾಜಕೀಯ ಒತ್ತಡದಿಂದ ಹಿಂತೆಗೆದುಕೊಂಡರು. ಕೆಲವರು ಹೇಳಿಕೆ ಬದಲಾಯಿಸಿದರು,
ಸಾಕ್ಷಿಗಳ ಕೊರತೆ ಹಾಗೂ ದೃಢವಾದ ತಾಂತ್ರಿಕ ಸಾಕ್ಷಿಗಳಿಲ್ಲದ ಕಾರಣ, ಎಲ್ಲ ಆರೋಪಿಗಳಿಗೆ ವಿನಾಯಿತಿ ನೀಡಲಾಯಿತು. ಈ ತೀರ್ಪಿನ ನಂತರ, ಇಸ್ಮಾಯೀಲ್ ಕುಟುಂಬ ಮತ್ತು ಬೆಂಬಲಿಗರು ನ್ಯಾಯ ದೊರೆಯಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಹೀಗಾಗಿ, ಕಲ್ಲಡ್ಕ ಇಸ್ಮಾಯೀಲ್ ಹತ್ಯೆ ರಾಜಕೀಯ ಪ್ರಭಾವದಿಂದ ಮುಚ್ಚಿಹೋದ ಪ್ರಕರಣ ಎಂಬ ಹೆಸರಿನಲ್ಲಿ ಇತಿಹಾಸದಲ್ಲಿ ಉಳಿಯಿತು.
ಈ ಘಟನೆ ಬಳಿಕ, ಕಾಂಗ್ರೆಸ್ ಪಕ್ಷವು ಮುಸ್ಲಿಂ ಸಮುದಾಯದ ಒಳಗೆ ಹೆಚ್ಚು ಬೆಂಬಲ ಪಡೆಯಿತು. ಆದರೆ, ಇಸ್ಮಾಯೀಲ್ ಅವರ ಸಾವು ಸ್ಥಳೀಯ ಮುಸ್ಲಿಂ ಸಮಾಜಕ್ಕೆ ದೊಡ್ಡ ಆಘಾತವಾಯಿತು – ಅವರು ರಾಜಕೀಯವಾಗಿ ದೊಡ್ಡ ಮಟ್ಟಕ್ಕೆ ಏರಬೇಕಾಗಿದ್ದ ಸಮಯದಲ್ಲೇ ಕೊಲೆ ಮಾಡಲ್ಪಟ್ಟರು. ಇಂದಿಗೂ ದಕ್ಷಿಣ ಕನ್ನಡದಲ್ಲಿ, ಇಸ್ಮಾಯೀಲ್ ಹೆಸರು ಆರ್‌ಎಸ್‌ಎಸ್-ಕಾಂಗ್ರೆಸ್ ಸಂಘರ್ಷದ ಮೊದಲ ಬಲಿಯೆಂದು ಉಲ್ಲೇಖಿಸಲಾಗುತ್ತದೆ.
