ಪೊಲೀಸರ ಗೋಳು..ರಾಜಕಾರಣಿಗಳ ದಿವ್ಯ ನಿರ್ಲಕ್ಷ್ಯ
ಸರಕಾರದ ಕೋಟಿ ಕೋಟಿ ದುಡ್ಡು ಲಪಟಾಯಿಸುವುದೇ ರಾಜಕಾರಣಿಗಳ ಅಜೆಂಡಾ ಅಂದರೂ ತಪ್ಪಲ್ಲ. ಜನಸಾಮಾನ್ಯರ ಸಮಸ್ಯೆಗೆ ಸ್ಪಂದನೆ ಅನ್ನುವುದು ದಾಖಲೆಗಳಿಗೆ ಮಾತ್ರ ಸೀಮಿತ. ಅದರಲ್ಲೂ ಉತ್ತರ ಕನ್ನಡ ಜಿಲ್ಲೆಯ ರಾಜಕಾರಣಿಗಳು ಇಂತಹದರಲ್ಲಿ ಗಿನ್ನಿಸ್ ರೆಕಾರ್ಡ್ ಮಾಡಿದ್ದಾರೆ. ಕೆಲಸ ಮುಗಿಸಿ ವರ್ಷಗಳೇ ಕಳೆದರೂ ಇಲ್ಲಿ ಯೋಜನೆಗಳಿಗೆ ಉದ್ಘಾಟನಾ ಭಾಗ್ಯವಿಲ್ಲ. ಯಾರಿಗೆ ಹೇಳೋಣ ನಮ್ಮ ಪ್ರಾಬ್ಲಂ ಎಂದು ಉತ್ತರ ಕನ್ನಡ ಜನತೆ ಪರಿತಪಿಸುತ್ತಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಕಾರವಾರ, ಅಂಕೋಲಾ, ಹೊನ್ನಾವರ ಪೊಲೀಸ್ ಕ್ವಾರ್ಟರ್ಸ್ ಗಳು ಕೆಲಸ ಮುಗಿದು ವರ್ಷಗಳೇ ಸಂದಿದೆ. ಇನ್ನು ಕೂಡ ಉದ್ಘಾಟನೆಯಾಗಿಲ್ಲ ಅನ್ನುವುದೇ ದುರ್ದೈವದ ಸಂಗತಿ. ಇಲ್ಲಿನ ಪೊಲೀಸರು ಈಗಲೂ ತಂಗಲು ಬಾಡಿಗೆ ಕಟ್ಟಡವನ್ನೇ ಆಶ್ರಯಿಸುತ್ತಿದ್ದಾರೆ.

ಪೊಲೀಸರ ಗೋಳು ಹೇಳಿ ಪ್ರಯೋಜನವಿಲ್ಲ. ದಿನದ 24 ತಾಸು ದುಡಿಯುವುದೇ ಅವರ ಕಾಯಕ. ಏನಾದರೂ ಗಲಭೆ ನಡೆದರೆ ರಾತ್ರಿ ಹಗಲೆನ್ನದೆ ದುಡಿಯಬೇಕು. ಅವರಿಗೆ ಸಂಬಳ ಅನ್ನುವುದು ಸರಕಾರ ನೀಡುವುದು ಜುಜುಬಿಯೇ. ಅದರಲ್ಲೇ ತಮ್ಮ ಕುಟುಂಬವನ್ನು ಸರಿದೂಗಿಸಬೇಕು, ಜೊತೆಗೆ ಬಾಡಿಗೆ ನೀಡಬೇಕು. ಪೊಲೀಸರ ಕಷ್ಟ ಅರಿತು ಸರಕಾರ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಪೊಲೀಸ್ ಕ್ವಾರ್ಟರ್ಸ್ ಕಟ್ಟಡವೇನೂ ನಿರ್ಮಿಸಿದೆ. ಆದರೆ ಜಿಲ್ಲೆಯ ರಾಜಕಾರಣಿಗಳ ದಿವ್ಯ ನಿರ್ಲಕ್ಷ್ಯಕ್ಕೆ ಗುರಿಯಾಗಿ ಇನ್ನು ಕೂಡ ಉದ್ಘಾಟನಾ ಭಾಗ್ಯ ಕಂಡಿಲ್ಲ.
