ಇನ್ನೇನೂ ಕೆಲವು ತಿಂಗಳು ಕಳೆದರೆ ರಾಜ್ಯದಲ್ಲಿ ಚುನಾವಣೆಯ ರಂಗು. ಇತ್ತ ಬಿಜೆಪಿ ಭದ್ರಕೋಟೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ನಿಂದ ಚುನಾವಣಾ ತಾಲೀಮು ಭಾರೀ ಜೋರಾಗಿ ಕೇಳಿ ಬರುತ್ತಿದೆ. ಜಿಲ್ಲೆಯ 8 ಕ್ಷೇತ್ರಗಳ ಪೈಕಿ ಪುತ್ತೂರು, ಮಂಗಳೂರು ಉತ್ತರದಲ್ಲಿ ಕಾಂಗ್ರೆಸ್ ಆಕಾಂಕ್ಷಿಗಳ ಪಟ್ಟಿ ಉದ್ದುದ್ದ ಬೆಳೆಯುತ್ತಿದೆ. ರಾಜ್ಯದಲ್ಲಿ ಮುಂದಿನ ಬಾರಿ ಕಾಂಗ್ರೆಸ್ ಸರ್ಕಾರ ಬರಲಿವೆ ಅನ್ನುವ ನಿರೀಕ್ಷೆ ಜೋರಾಗಿ ಇರುವುದರಿಂದ ಕಾಂಗ್ರೆಸ್ಸಿನಿಂದ ಟಿಕೆಟ್ ಗಿಟ್ಟಿಸಲು ಹಲವರು ನಾನಾ ಕಸರತ್ತಿಗೆ ಇಳಿದಿದ್ದಾರೆ. ಅವುಗಳ ಪೈಕಿ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ಕಸರತ್ತಿನಲ್ಲಿ ದೊಡ್ಡ ಸುದ್ದಿ ಮಾಡುತ್ತಿದೆ.
ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ಈ ಹಿಂದೆ ಕಾಂಗ್ರೆಸ್ ನ ಭದ್ರಕೋಟೆ. ಕಾಂಗ್ರೆಸ್ ಪಕ್ಷದಿಂದಲೇ ಹಲವು ಶಾಸಕರು ಆಯ್ಕೆ ಯಾಗಿ ಬಂದಿದ್ದಾರೆ. ಇಲ್ಲಿ ಒಮ್ಮೆ ಶಾಸಕರಾದವರು ಎರಡನೇ ಬಾರಿಗೆ ಶಾಸಕರಾದ ಇತಿಹಾಸ ಬಲು ಅಪರೂಪ. ಈ ದೃಷ್ಟಿಯಿಂದ ಕಾಂಗ್ರೆಸ್ ಈ ಬಾರಿ ಉತ್ತರದಲ್ಲಿ ದಿಗ್ವಿಜಯ ಸಾಧಿಸಬಹುದು ಅನ್ನುವ ದೃಷ್ಟಿಯಿಂದ ಹತ್ತಕ್ಕಿಂತ ಅಧಿಕ ಮಂದಿ ಟಿಕೆಟ್ ಗಾಗಿ ಕ್ಯೂನಲ್ಲಿ ನಿಂತಿದ್ದಾರೆ. ಆ ಪೈಕಿ ಇಬ್ಬರ ಹೆಸರು ಮುಂಚೂಣಿಯಲ್ಲಿ ಕೇಳಿ ಬರುತ್ತಿದೆ. ಮಾಜಿ ಶಾಸಕರಾದ ಮೊಹಿದ್ದೀನ್ ಬಾವಾ ಹಾಗೂ ಇನಾಯತ್ ಅಲಿ ಇಬ್ಬರಲ್ಲಿ ಒಬ್ಬರಿಗೆ ಟಿಕೆಟ್ ಫಿಕ್ಸ್. ಅದರಲ್ಲೂ ಇನಾಯತ್ ಅಲಿ ಹೆಸರು ಮುಂಚೂಣಿಯಲ್ಲಿದೆ.
ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಮೊಹಿದ್ದೀನ್ ಬಾವಾ ಶಾಸಕರಾಗಿದ್ದ ಸಮಯದಲ್ಲಿ ಮಾಡಿದ ಅಭಿವೃದ್ಧಿ ಕೆಲಸಗಳ ಬಗ್ಗೆ ಕ್ಷೇತ್ರಾದ್ಯಂತ ಈಗಲೂ ಉತ್ತಮ ಅಭಿಪ್ರಾಯವಿದೆ. ಕೊರೊನಾ ಸಮಯದಲ್ಲಿ ಹಾಲಿ ಶಾಸಕರು ಜನರ ಕೈ ಗೆ ಸಿಗದ ಸಮಯದಲ್ಲಿ ಬಾವಾ ರವರು ಕ್ಷೇತ್ರದಾದ್ಯಂತ ಸುತ್ತಿ ರೇಷನ್ ಕಿಟ್, ಕೊರೊನಾ ವಾರ್ ರೂಂ ತೆರೆದು ಜನರ ಮೆಚ್ಚುಗೆಗೆ ಪಾತ್ರರಾಗಿದ್ದರು. ಕ್ಷೇತ್ರದಲ್ಲಿ ಮೊಹಿದ್ದೀನ್ ಬಾವಾ ರವರ ಸೇವೆ ಬಗ್ಗೆ ಈಗಲೂ ನೆನಪಿಸಿಕೊಳ್ಳುವವರಿದ್ದಾರೆ.
ಇನ್ನು ಇನಾಯತ್ ಅಲಿ ಮಂಗಳೂರು ಉತ್ತರ ಕ್ಕೆ ಹೊಸ ಮುಖವಾದರೂ ವಿದ್ಯಾರ್ಥಿ ದೆಸೆಯಿಂದಲೇ ರಾಜಕಾರಣದಲ್ಲಿ ಬೆಳೆದು ಬಂದವರು. ಎನ್ ಎಸ್ ಯು ಐ ಜಿಲ್ಲಾ, ರಾಜ್ಯ, ರಾಷ್ಟ್ರಮಟ್ಟದ ಪದಾಧಿಕಾರಿಯಾಗಿ ಸೇವೆ ಸಲ್ಲಿಸಿ ಪಕ್ಷಕ್ಕಾಗಿ ಅಹರ್ನಿಶಿಯಾಗಿ ದುಡಿದವರು. ರಾಷ್ಟ್ರಮಟ್ಟದ ನಾಯಕರೊಂದಿಗೆ ಉತ್ತಮ ಸಂಪರ್ಕವಿದೆ. ಕೊಡುಗೈ ದಾನಿಯೂ ಆಗಿರುವ ಇನಾಯತ್ ಅಲಿ ಹಲವಾರು ವರ್ಷಗಳಿಂದ ಜನರ ಕಣ್ಣೀರು ಒರೆಸುವ ಮೂಲಕ ನಿಸ್ವಾರ್ಥ ಸೇವೆ ಮಾಡುತ್ತಿದ್ದಾರೆ. ಅಶಕ್ತರು, ರೋಗಿಗಳಿಗೆ, ವಿವಾಹಕ್ಕೆ ತಮ್ಮದೇ ಫೌಂಡೇಶನ್ ಮೂಲಕ ಧನ ಸಹಾಯ ನೀಡುವ ಮೂಲಕ ಹಲವಾರು ಕುಟುಂಬಕ್ಕೆ ಆಸರೆಯಾಗಿದ್ದಾರೆ.
ಇತ್ತೀಚಿನ ದಿನಗಳಲ್ಲಿ ತಳಮಟ್ಟದ ಕಾರ್ಯಕರ್ತರೊಂದಿಗೆ ಬೆರೆತು ಪಕ್ಷ ಸಂಘಟಿಸಲು ಅಹೋರಾತ್ರಿ ಕೆಲಸ ಮಾಡುತ್ತಿದ್ದಾರೆ. ಮತದಾನದಿಂದ ವಂಚಿತರಾದವರಿಗೆ, ಸರ್ಕಾರದಿಂದ ಸಿಗಬೇಕಾದ ಸವಲತ್ತಿನ ಬಗ್ಗೆ ಹಲವಾರು ಕ್ಯಾಂಪ್ ಗಳನ್ನು ಆಯೋಜಿಸುವ ಮೂಲಕ ದಣಿವರಿಯದ ಜನನಾಯಕರಾಗಿ ಮೂಡಿಬಂದಿದ್ದಾರೆ. ಕ್ಷೇತ್ರದಾದ್ಯಂತ ಯುವಕರ ದಂಡೇ ಅಲಿಯವರ ಬೆನ್ನಿಗೆ ನಿಂತಿದೆ.
ತಳಮಟ್ಟದಲ್ಲಿಯೇ ಕಾಂಗ್ರೆಸ್ ಪಕ್ಷವನ್ನು ಕಟ್ಟುವಲ್ಲಿ ಶ್ರಮಿಸುತ್ತಿದ್ದಾರೆ ಇನಾಯತ್ ಅಲಿ. ಕ್ಷೇತ್ರದಾದ್ಯಂತ ವಲಯ ಮಟ್ಟಗಳಲ್ಲಿ ಮರೀಚಿಕೆಯಾಗಿದ್ದ ಕಾಂಗ್ರೆಸ್ ಕಚೇರಿಗಳು ಇನಾಯತ್ ಅಲಿ ಬೆಂಬಲದಿಂದಾಗಿ ತೆರೆದುಕೊಳ್ಳುತ್ತಿದೆ. ಇದು ಪಕ್ಷ ಬಲವರ್ಧನೆಗೆ ಸಹಕಾರಿಯಾಗುತ್ತಿದೆ. ಹಲವಾರು ರಾಜ್ಯಗಳಲ್ಲಿ ಚುನಾವಣಾ ಉಸ್ತುವಾರಿ ವಹಿಸಿ ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ತುಂಬುವಲ್ಲಿ ಯಶಸ್ವಿಯಾಗಿದ್ದಾರೆ.
ಮೊಹಿದ್ದೀನ್ ಬಾವಾ-ಇನಾಯತ್ ಅಲಿ ಕ್ಷೇತ್ರದಲ್ಲಿ ಜೊತೆ ಜೊತೆಯಾಗಿ ಪಕ್ಷ ಬಲವರ್ಧನೆಗೆ ಶ್ರಮಿಸುತ್ತಿರುವುದು ಆಶಾದಾಯಕ ಬೆಳವಣಿಗೆ. ಹಲವಾರು ವೇದಿಕೆಗಳಲ್ಲಿ ಒಟ್ಟಾಗಿ ಕುಳಿತು ತಾವು ಜೊತೆಯಾಗಿದ್ದೇವೆ ಅನ್ನುವ ಸಂದೇಶ ರವಾನಿಸುತ್ತಿದ್ದಾರೆ. ಇಬ್ಬರು ನಾಯಕರ ಧ್ಯೇಯ ಒಳ್ಳೆಯದೇ ಇದೆ. ಪಕ್ಷ ಯಾರಿಗೆ ಬೇಕಾದರೂ ಟಿಕೆಟ್ ನೀಡಲಿ. ನಾವು ಪರಸ್ಪರ ಒಗ್ಗಟ್ಟಿನಿಂದ ಕೆಲಸ ಮಾಡುತ್ತೇವೆ, ಕಾಂಗ್ರೆಸ್ ಗೆಲುವಿಗೆ ಶ್ರಮಿಸುತ್ತೇವೆ. ನಾವು ಕಾಂಗ್ರೆಸ್ ಪಕ್ಷದ ಕಟ್ಟಾಳುಗಳು ಎಂದು ಸಾರುತ್ತಿದ್ದಾರೆ. ಮೊಹಿದ್ದೀನ್ ಬಾವಾ-ಇನಾಯತ್ ಅಲಿ ಇಬ್ಬರು ನಾಯಕರು ಉತ್ತರದ ಕಾಂಗ್ರೆಸ್ ಪಕ್ಷದ ಜೋಡೆತ್ತುಗಳು. ಪಕ್ಷ ಯಾರಿಗೆ ಟಿಕೆಟ್ ಕೊಟ್ಟರೂ ಇವರು ಇಬ್ಬರೂ ಒಗ್ಗಟ್ಟಿನಿಂದ ಕೆಲಸ ಮಾಡಿದರೆ, ಇಬ್ಬರ ವರ್ಚಸ್ಸಿನಿಂದ ಮಂಗಳೂರು ಉತ್ತರದಲ್ಲಿ ಈ ಬಾರಿ ಕಾಂಗ್ರೆಸ್ ಪಕ್ಷ ದಿಗ್ವಿಜಯ ಸಾಧಿಸುವುದು ನೂರಕ್ಕೆ ನೂರು ಸತ್ಯ.
