ದೇಶದಲ್ಲಿ ಪತ್ರಕರ್ತರ ಸ್ವಾತಂತ್ರ್ಯ ರಕ್ಷಣೆ ಹಾಗೂ ಅವರಿಗೆ ಸರಾಗವಾಗಿ ಕಾರ್ಯನಿರ್ವಹಿಸುವ ವಾತಾವರಣವಿದ್ದರೆ ಮಾತ್ರವೇ ಪ್ರಜಾಪ್ರಭುತ್ವ ಸುಭದ್ರವಾಗಿರಲಿದೆ. ಒಂದು ವೇಳೆ ಪತ್ರಿಕೋದ್ಯಮ ಹಾಗೂ ಪತ್ರಕರ್ತರು ತತ್ತರಿಸುವ ಪರಿಸ್ಥಿತಿ ನಿರ್ಮಾಣ ಮಾಡಿದ್ದಲ್ಲಿ, ಪ್ರಜಾಪ್ರಭುತ್ವ ವ್ಯವಸ್ಥೆ ಖಂಡಿತ ಕುಸಿಯಲಿದೆ ಎಂದು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಬಿ.ಎನ್ ಶ್ರೀಕೃಷ್ಣ ಅವರು ಎಚ್ಚರಿಸಿದ್ದಾರೆ. ಮುಂಬಯಿ ಪ್ರೆಸ್ ಕ್ಲಬ್ ನಲ್ಲಿ ಮಾತನಾಡಿದ ಅವರು, “ದೇಶದಲ್ಲಿ ಮುಖ್ಯವಾಗಿ ಎರಡು ವೃತ್ತಿಗಳು ಪೂರ್ಣ ಸ್ವತಂತ್ರವಾಗಿ, ಪ್ರಭಾವ ಮುಕ್ತವಾಗಿ ಕಾರ್ಯನಿರ್ವಹಿಸಲೇಬೇಕು. ಒಂದು ಪತ್ರಿಕೋದ್ಯಮ/ಮಾಧ್ಯಮ ರಂಗ ಮತ್ತೊಂದು ನ್ಯಾಯಾಂಗ ವ್ಯವಸ್ಥೆ. ಅಂದರೆ, ಪತ್ರಕರ್ತ, ನ್ಯಾಯಾಧೀಶರು, ಆಮಿಷ, ಒತ್ತಡ, ಪ್ರಭಾವ ಮುಕ್ತ ವಾತಾವರಣದಲ್ಲಿ ಕೆಲಸ ಮಾಡಿದಾಗ ಮಾತ್ರ ಪ್ರಜಾಪ್ರಭುತ್ವ ಬಲಿಷ್ಠವಾಗಿರುತ್ತದೆ. ಪತ್ರಕರ್ತ ಸ್ವಾತಂತ್ರ್ಯ ಕಳೆದುಕೊಂಡರೆ ಎಷ್ಟು ಕೆಡುಕಾಗುತ್ತದೆಯೋ, ಅಷ್ಟೇ ಕೆಡಕು ನ್ಯಾಯಾಧೀಶ ಸ್ವಾತಂತ್ರ್ಯ ಕಳೆದುಕೊಂಡಾಗಲೂ ಆಗಲಿದೆ ಎನ್ನುವುದು ಬಹಳ ಮುಖ್ಯ” ಎಂದು ಅಭಿಪ್ರಾಯಪಟ್ಟಿದ್ದಾರೆ.
