ದ.ಕ ಲೋಕಸಭೆ: ಬಿಜೆಪಿಯಿಂದ ಬಿಲ್ಲವ ಕ್ಯಾಂಡಿಡೇಟ್..ನಳಿನ್ ಅತ್ಯಾಪ್ತನಿಗೆ ಸಿಗುತ್ತಾ ಸೀಟು.!

ಕರಾವಳಿ

ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯುವ ಮಾಸ್ಟರ್ ಪ್ಲ್ಯಾನ್.!

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿಯಿಂದ ಮುಂದಿನ ಅಭ್ಯರ್ಥಿ ಯಾರು ಅನ್ನುವ ಬಗ್ಗೆ ಗೊಂದಲಗಳು ಮುಂದುವರಿದಿರುವ ಬೆನ್ನಲ್ಲೇ ಇದೀಗ ಹೊಸತೊಂದು ಹೆಸರು ತೇಲಿ ಬಂದಿರುವ ಹಿನ್ನೆಲೆಯಲ್ಲಿ ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ.

ದ.ಕ ಲೋಕಸಭಾ ಕ್ಷೇತ್ರದಲ್ಲಿ ಹೇಳಿ ಕೇಳಿ ಬಿಜೆಪಿಯ ಅಲೆ ಹಿಂದಿನಂತಿಲ್ಲ. ಹಾಲಿ ಸಂಸದ ನಳಿನ್ ಕುಮಾರ್ ಕಟೀಲ್ ವಿರುದ್ಧವೇ ಬಿಜೆಪಿಯ ಒಂದು ತಂಡ ಬಂಡಾಯವೆದ್ದಿದ್ದು ಕಟೀಲಿಗೆ ಬಿ ಫಾರ್ಮ್ ಸಿಕ್ಕಿದರೆ ಪುತ್ತಿಲರನ್ನು ಪಕ್ಷೇತರ ಕ್ಯಾಂಡೀಡೇಟ್ ಮಾಡಿಕೊಂಡು ಕಟೀಲರಿಗೆ ಸಡ್ಡು ಹೊಡೆಯಲು ಹಿಂದೂ ಸಂಘಟನೆಗಳ ಕೆಲವು ಮುಖಂಡರು ತಯಾರಿ ನಡೆಸಿದ್ದಾರೆ. ಇದರ ಜೊತೆಗೆ ಮಂಗಳೂರು ಕಂಬಳದ ರೂವಾರಿ ಬ್ರಿಜೇಶ್ ಚೌಟ ಮುಂದಿನ ಅಭ್ಯರ್ಥಿ ಎಂದು ಹೆಸರು ಜೋರಾಗಿ ಕೇಳಿ ಬರುತ್ತಿದೆ. ಆದರೆ ಚೌಟರಿಗೆ ಟಿಕೆಟ್ ನೀಡಲು ಕಟೀಲು ಆದಿಯಾಗಿ ಕೆಲವು ಬಿಜೆಪಿ ಶಾಸಕರ ವಿರೋಧವಿದ್ದು, ಆರ್ ಎಸ್ ಎಸ್ ಸಂಘಟನೆಯಿಂದಲೂ ಸಕಾರಾತ್ಮಕ ಬೆಂಬಲ ಸಿಕ್ಕಿಲ್ಲ ಅನ್ನುವ ಮಾತು ಹರಿದಾಡುತ್ತಿದೆ. ನಳಿನ್ ಕುಮಾರ್ ಕಟೀಲ್ ಮುಂದಿನ ಬಿಜೆಪಿ ಅಭ್ಯರ್ಥಿ ಆಗಲು ಪ್ರಮುಖ ನಾಯಕರಿಂದ ಬೆಂಬಲ ದೊರೆತಿದ್ದರೂ, ಕಾರ್ಯಕರ್ತರೆಡೆಯಲ್ಲಿ ತೀವ್ರ ವಿರೋಧ ಇರುವುದರಿಂದ ಚುನಾವಣೆಯಲ್ಲಿ ಬಿಜೆಪಿಗೆ ಡ್ಯಾಮೇಜ್ ಆಗುವ ಸಾಧ್ಯತೆ ಇರುವುದರಿಂದ ಇದೀಗ ಕಟೀಲು ಬಣದಿಂದಲೇ ಬಿಲ್ಲವ ಟ್ರಂಪ್ ಕಾರ್ಡ್ ಪ್ರಯೋಗಿಸುವ ಮೂಲಕ ಚೌಟ ಮುಂದಿನ ಅಭ್ಯರ್ಥಿ ಆಗುವುದಕ್ಕೆ ತಡೆ ನೀಡಲಾಗುತ್ತಿದೆ ಅನ್ನುವ ಮಾತು ಹರಿದಾಡುತ್ತಿದೆ. ಇತ್ತೀಚೆಗಷ್ಟೇ ಬಿಜೆಪಿಯ ರಾಜ್ಯಾಧ್ಯಕ್ಷ ವಿಜಯೇಂದ್ರ ಯಡಿಯೂರಪ್ಪ ರವರನ್ನು ಭೇಟಿ ಮಾಡಿರುವ ತಂಡ ಚೌಟ ರನ್ನು ಮುಂದಿನ ಅಭ್ಯರ್ಥಿ ಎಂದು ಘೋಷಿಸದಂತೆ ಪ್ರಯತ್ನ ಮಾಡಿರುವುದಾಗಿ ತಿಳಿದು ಬಂದಿದೆ.

ಇತ್ತ ಕಾಂಗ್ರೆಸ್ ಪಕ್ಷದಿಂದ ಬಿಲ್ಲವ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಬಗ್ಗೆ ತಯಾರಿ ನಡೆಸುತ್ತಿದ್ದು ವಿನಯ್ ಕುಮಾರ್ ಸೊರಕೆ, ಪದ್ಮರಾಜ್ ರಾಮಯ್ಯ, ಪ್ರತಿಭಾ ಕುಳಾಯಿ ಹೆಸರು ಜೋರಾಗಿ ಸದ್ದು ಮಾಡುತ್ತಿದೆ. ಜನಾರ್ದನ ಪೂಜಾರಿ ಶಿಷ್ಯ ಪದ್ಮರಾಜ್ ರಾಮಯ್ಯ ಬಗ್ಗೆ ದೆಹಲಿ ಹೈಕಮಾಂಡ್ ಹೆಚ್ಚಿನ ಒಲವು ಹೊಂದಿದೆ ಎಂಬ ಮಾಹಿತಿ ಹೊರಬರುತ್ತಿದ್ದಂತೆ ಅಲರ್ಟ್ ಆಗಿರುವ ಬಿಜೆಪಿ ಬಿಲ್ಲವ ಅಭ್ಯರ್ಥಿಯನ್ನು ಬಿಜೆಪಿಯಿಂದ ಕಣಕ್ಕಿಳಿಸಿ ಟಾಂಗ್ ನೀಡಲು ಮುಂದಾಗಿದೆ ಎಂದು ತಿಳಿದುಬಂದಿದೆ. ಮಂಗಳೂರು ಗೋಕರ್ಣನಾಥ ಕಾಲೇಜಿನ ಕನ್ನಡ ಮೇಷ್ಟ್ರು, ವಿಶ್ವ ಹಿಂದೂ ಪರಿಷತ್ತಿನ ರಾಷ್ಟ್ರೀಯ ಉಪಾಧ್ಯಕ್ಷ, ಪ್ರಖಂಡ ವಾಗ್ಮಿ ಕೇಶವ ಬಂಗೇರ ಹೆಸರು ಇದೀಗ ಬಿಜೆಪಿ ಪಡಸಾಲೆಯಲ್ಲಿ ದೊಡ್ಡ ಸದ್ದು ಮಾಡುತ್ತಿದೆ.

ಬೆಳ್ತಂಗಡಿ ಮೂಲದವರಾಗಿರುವ ಕೇಶವ ಬಂಗೇರ ಅವರ ಹೆಸರು ಬೆಳ್ತಂಗಡಿ ವಿಧಾನಸಭಾ ಕ್ಷೇತ್ರಕ್ಕೆ ತೇಲಿ ಬಂದಿತ್ತು. ಆದರೆ ಹರೀಶ್ ಪೂಂಜಾ ಖಡರ್ ಎದುರು ಬಂಗೇರ ಹೆಸರು ಠುಸ್ಸಾಗಿತ್ತು. ವಿಧಾನಪರಿಷತ್ ಸ್ಥಾನ ಅರಸಿ ಬಂದಿದ್ದರೂ ಪ್ರತಾಪ ಸಿಂಹರಿಗೋಸ್ಕರ ತ್ಯಾಗ ಮಾಡಿದ್ದರು. ತಾಲೂಕು ಪಂಚಾಯತ್ ಸದಸ್ಯರಾಗಿ, ಪಕ್ಷಕ್ಕಿಂತ ಹೆಚ್ಚಾಗಿ ಸಂಘಟನೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಪ್ರಖಂಡ ಮಾತಿನ ಮೂಲಕ ಸಂಘಪರಿವಾರಕ್ಕೆ ಬಹಳ ಹತ್ತಿರವಾಗಿದ್ದರು. ಹಾಲಿ ಸಂಸದ ನಳಿನ್ ಕುಮಾರ್ ಕಟೀಲ್ ರ ಅತ್ಯಾಪ್ತರಲ್ಲಿ ಒಬ್ಬರಾಗಿರುವ ಬಂಗೇರ ರವರ ಹೆಸರನ್ನು ಲೋಕಸಭಾ ಸ್ಥಾನಕ್ಕೆ ತೇಲಿ ಬಿಡಲಾಗಿದೆ. ಇದರ ಹಿಂದೆ ಮಾಸ್ಟರ್ ಮೈಂಡ್ ಇದೆ ಅನ್ನುವ ಮಾತುಗಳು ಇದೀಗ ಕೇಳಿ ಬರುತ್ತಿದೆ. ಕ್ಯಾ| ಬ್ರಿಜೇಶ್ ಚೌಟ ಅವರಿಗೆ ಟಿಕೆಟ್ ಹಾಲಿ ಸಂಸದರಿಗೆ ಎಳ್ಳಷ್ಟೂ ಮನಸ್ಸು ಇಲ್ಲವಂತೆ. ತನಗೆ ಟಿಕೆಟ್ ದೊರೆಯದಿದ್ದರೂ ತನ್ನ ಬಣದವರಿಗೆ ಟಿಕೆಟ್ ದೊರೆಯಲಿ ಎಂಬ ಮುಂದಾಲೋಚನೆಯಿಂದ ಮೇಷ್ಟ್ರ ಬೆನ್ನಿಗೆ ನಿಂತಿದ್ದಾರೆ. ಚೌಟರ ಪರ ಕಲ್ಲಡ್ಕ ಹೈಕಮಾಂಡ್ ಪ್ರಬಲವಾಗಿ ನಿಂತಿರುವುದರಿಂದ, ಅವರ ವಿರೋಧಿ ಗುಂಪು ಇದೀಗ ಮೇಷ್ಟ್ರ ಬೆನ್ನಿಗೆ ನಿಂತಿದೆ. ದ.ಕ ಜಿಲ್ಲೆಯ ಟಿಕೆಟ್ ಹಂಚಿಕೆಯಲ್ಲಿ ಬಿ.ಎಲ್. ಸಂತೋಷ್ ತೀರ್ಮಾನ ಮಹತ್ವ ಪಡೆದಿರುವುದರಿಂದ ಬಿಜೆಪಿ ಟಿಕೆಟ್ ಅಭ್ಯರ್ಥಿ ಕುತೂಹಲ ಮತ್ತಷ್ಟು ರೋಚಕ ಪಡೆದಿದೆ. ಬಿಲ್ಲವ ಟ್ರಂಪ್ ಕಾರ್ಡ್ ಮೂಲಕ ಕಾಂಗ್ರೆಸ್ ಹಾಗೂ ಬಿಜೆಪಿಯಲ್ಲಿರುವ ಇನ್ನೊಂದು ಬಣಕ್ಕೆ ಟಕ್ಕರ್ ಕೊಡುವ ಪ್ಲ್ಯಾನ್ ಸಜ್ಜುಗೊಂಡಿದೆ. ಯಾರ ಕೈ ಮೇಲಾಗುತ್ತದೆ ಅನ್ನುವುದನ್ನು ಕಾದು ನೋಡಬೇಕಿದೆ.