ಸುರತ್ಕಲ್’ನ ಅಮಾಯಕ ಜಲೀಲ್ ಹತ್ಯೆ ಪ್ರಕರಣ; ಆರೋಪಿಗಳ ವಿರುದ್ಧ ಕಠಿಣ UAPA ಪ್ರಕರಣ ದಾಖಲಿಸಲು ಇನಾಯತ್ ಅಲಿ ಒತ್ತಾಯ

ಕರಾವಳಿ

ಕಾಟಿಪಳ್ಳದ ಅಮಾಯಕ ಜಲೀಲ್ ಹತ್ಯೆ ಪ್ರಕರಣದ ಆರೋಪಿಗಳ ವಿರುದ್ಧ ಕಠಿಣ UAPA ಪ್ರಕರಣ ದಾಖಲಿಸಬೇಕು,ಸಂತ್ರಸ್ತ ಕುಟುಂಬಕ್ಕೆ ಗರಿಷ್ಠ ಮೊತ್ತದ ಪರಿಹಾರಕ್ಕೆ ನೀಡಲು ಆಗ್ರಹ.
ಕೃಷ್ಣಾಪುರದ 9ನೇ ಬ್ಲಾಕ್ ನ ದಿನಸಿ ಅಂಗಡಿ ವ್ಯಾಪಾರಿ ಜಲೀಲ್ ಅವರನ್ನು ದುಷ್ಕರ್ಮಿಗಳು ಹತ್ಯೆಗೈದ ಪ್ರಕರಣದ ನೈಜ ಆರೋಪಗಳನ್ನು ಶೀಘ್ರ ಬಂಧಿಸಿ, ಆರೋಪಿಗಳ ವಿರುದ್ಧ UAPA ಅಡಿ ಪ್ರಕರಣ ದಾಖಲಿಸುವಂತೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ರಾಜ್ಯ ಗೃಹ ಇಲಾಖೆಯನ್ನು ಆಗ್ರಹಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಾರಗಳಿಂದ ನಿರಂತರವಾಗಿ ಅನೈತಿಕ ಪೋಲಿಸ್ ಗಿರಿ ಪ್ರಕರಣಗಳು ನಡೆಯುತ್ತಿದ್ದು, ಆರೋಪಿಗಳ ವಿರುದ್ಧ ಪೋಲಿಸ್ ಇಲಾಖೆ ಯಾವುದೇ ರೀತಿಯ ಕಠಿಣ ಕ್ರಮ ಕೈಗೊಳ್ಳದೆ ಮೃದು ದೋರಣೆ ಅನುಸರಿಸಿರುವುದರಿಂದಲೇ ದುಷ್ಕರ್ಮಿಗಳಿಗೆ ಇಂತಹ ದುಷ್ಕೃತ್ಯ ನಡೆಸಲು ಪ್ರೇರಣೆ ನೀಡಿದಂತಾಗಿದೆ.ಇಂತಹ ದುಷ್ಕೃತ್ಯಗಳನ್ನು ಎಸಗಿ ಸಮಾಜದ ಸಾಮರಸ್ಯಕ್ಕೆ ಧಕ್ಕೆ ತರುವ ಸಮಾಜಘಾತುಕರು ಶಕ್ತಿಗಳು ಯಾರೇ ಆದರೂ ಅಂತಹವರು ಇಡೀ‌ ನಾಗರಿಕ ಸಮಾಜಕ್ಕೆ ಅಪಮಾನ ಹಾಗೂ ಅಂತಹ ಅಮಾನವೀಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವವರನ್ನು ಇಡೀ ಸಮಾಜ ಪಕ್ಷಾತೀತವಾಗಿ ಒಕ್ಕೊರಲಿನಿಂದ ಬಹಿಷ್ಕರಿಸಬೇಕಾಗಿದೆ ಎಂದು ಇನಾಯತ್ ಅಲಿ ಕರೆ ನೀಡಿದ್ದಾರೆ.

ಸರಕಾರ ಈ ವಿಷಯದಲ್ಲಿ ರಾಜಕೀಯ ಹಸ್ತಕ್ಷೇಪ ಮಾಡದೆ ಜಾತಿ ತಾರತಮ್ಯ ತೋರದೆ ಶೀಘ್ರವೇ ಈ ಹಿಂದೆ ಹತ್ಯೆಯಾದ ಕುಟುಂಬಕ್ಕೆ ಗರಿಷ್ಠ ಮೊತ್ತದ ಪರಿಹಾರವನ್ನು ನೀಡುವ ಮೂಲಕ ನೈತಿಕತೆ ತೋರಿಸಬೇಕಾಗಿದೆ ಎಂದು ಒತ್ತಾಯಿಸಿರುವ ಇನಾಯತ್ ಅಲಿ, ಈ ಬಗ್ಗೆ ಅಧಿವೇಶನದಲ್ಲಿ ಸರಕಾರವನ್ನು ಆಗ್ರಹಿಸುವಂತೆ ಪಕ್ಷದ ಉನ್ನತ ಮಟ್ಟದ ನಾಯಕರಲ್ಲಿ ಕೋರಿಕೆ ಸಲ್ಲಿಸಿದ್ದೇನೆ ಎಂದಿದ್ದಾರೆ.