ಡಿಕೆಶಿ ಆಪ್ತ ಇನಾಯತ್ ಅಲಿಯ ಕನಕಪುರ ಪ್ರಯೋಗಕ್ಕೆ ಬೆಚ್ಚಿಬಿದ್ದ ಬಿಜೆಪಿ..ಅಲ್ಲಿ ನಡೆದಿತ್ತು ರಣರೋಚಕ ಗೇಮ್ ಪ್ಲ್ಯಾನ್..!
ಗುರುಪುರ ಬ್ಲಾಕ್ ವ್ಯಾಪ್ತಿಯಲ್ಲಿ ಎರಡನೇ ಅವಧಿಯ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಶಾಕ್ ಮೇಲೆ ಶಾಕ್ ಆಗುತ್ತಿದ್ದಂತೆ ಫೀನಿಕ್ಸ್ ನಂತೆ ಕಾಂಗ್ರೆಸ್ ಪಕ್ಷವನ್ನು ಅಪ್ಪಿ ಹಿಡಿದಿದೆ ಗಂಜಿಮಠ ಗ್ರಾಮ ಪಂಚಾಯತ್. ಪಕ್ಷ ಅಧಿಕಾರದಲ್ಲಿರುವಾಗ ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಬಹುದು ಅನ್ನುವುದಕ್ಕೆ ಗಟ್ಟಿ ಸಾಕ್ಷಿ ಗಂಜಿಮಠ ಗ್ರಾಮ ಪಂಚಾಯತ್. ಪಟಾಕಿ ಖರೀದಿಸಿ ವಿಜಯೋತ್ಸವಕ್ಕೆ ಮುಂದಾಗಿದ್ದ ಬಿಜೆಪಿಗೆ ಕಾಂಗ್ರೆಸ್ ಪಕ್ಷದ ಗುಪ್ತ ರಣತಂತ್ರ ಮರ್ಮಾಘಾತ ನೀಡಿದೆ. ಕಾಂಗ್ರೆಸ್ ಗೆಲ್ಲುವ ಎಲ್ಲಾ ಚಾನ್ಸ್ ಇದ್ದ ಅಡ್ಯಾರ್, ಗುರುಪುರ, ಉಳಾಯಿಬೆಟ್ಟು ಪಂಚಾಯತ್ ಅನ್ನು ಕಳೆದುಕೊಂಡು ಮಂಕಾಗಿದ್ದ ಪಕ್ಷದ ಮುಖಂಡರಿಗೆ,ಕಾರ್ಯಕರ್ತರಿಗೆ ಕನಕಪುರ ಬಂಡೆಯ ಶಿಷ್ಯ ಶಾಕ್ ನೀಡಿದ್ದಾರೆ.ಇನಾಯತ್ ಅಲಿ ಯವರು ಪ್ರತಿಷ್ಠೆಗೆ ಬಿದ್ದು ಗೇಮ್ ಪ್ಲ್ಯಾನ್ ಬದಲಾಯಿಸಿ ನಡೆಸಿದ ಪ್ರಯೋಗ ಗಂಜಿಮಠದಲ್ಲಿ ಸಕ್ಸಸ್ ಆಗಿದೆ. ಬಿಜೆಪಿಗೆ ಕನಸು ಮನಸ್ಸಿನಲ್ಲೂ ನಿರೀಕ್ಷಿಸದ ರೀತಿಯ ಹೊಡೆತವನ್ನು ಕಾಂಗ್ರೆಸ್ ನೀಡುವ ಮೂಲಕ ತಮ್ಮ ಕೆಫಾಸಿಟಿಯನ್ನು ತೋರಿಸಿದೆ.

ಗುರುಪುರ ಭಾಗದ ಅತ್ಯಂತ ದೊಡ್ಡ ಪಂಚಾಯತ್ ಆಗಿರುವ ಗಂಜಿಮಠದಲ್ಲಿ 30 ಸದಸ್ಯ ಬಲವಿದ್ದು, ಅಲ್ಲಿ ಬಿಜೆಪಿ 18 ಸದಸ್ಯ ಬಲ ಹೊಂದುವ ಮೂಲಕ ಪೂರ್ಣ ಬಹುಮತ ಪಡೆದಿದೆ. ಕಾಂಗ್ರೆಸ್ ಗೆದ್ದಿದ್ದು ಬರೀ 9 ಸ್ಥಾನ. ಅದರಲ್ಲಿ ಇಬ್ಬರು ಸದಸ್ಯರ ಉಚ್ಛಾಟನೆಯಿಂದಾಗಿ 7 ಕ್ಕೆ ಕುಸಿದಿತ್ತು. ಮೂವರು ಪಕ್ಷೇತರರು ಇದ್ದರು. ಹೇಗೂ ನೋಡಿದರೂ ಅಲ್ಲಿ ಕಾಂಗ್ರೆಸ್ ಅಧಿಕಾರ ಪಡೆಯುವುದು ಕನಸೇ ಆಗಿತ್ತು.
ಆಗ ಅಲ್ಲಿ ನಡೆದಿತ್ತು ಬಲು ರಣರೋಚಕ ಗೇಮ್ ಪ್ಲ್ಯಾನ್. ಎರಡು-ಮೂರು ಪಂಚಾಯತ್ ಕಳೆದುಕೊಂಡಿದ್ದ ಕಾಂಗ್ರೆಸ್ ತಮ್ಮ ಗೇಮ್ ಪ್ಲ್ಯಾನ್ ಅನ್ನು ಬದಲಾಯಿಸಿಕೊಂಡಿತ್ತು. ಸೀಮಿತ ಕೆಲವೇ ಕೆಲವು ನಾಯಕರಿಗೆ ಮಾತ್ರ ಈ ಪ್ಲ್ಯಾನ್ ಅನುಷ್ಠಾನಕ್ಕೆ ತರಲು ಜವಾಬ್ದಾರಿ ನೀಡಲಾಗಿತ್ತು. ಯಾವುದೇ ಗುಟ್ಟು ಹೊರಗೆ ಬಾರದಂತೆ,ಗಫ್,ಚುಪ್ ಆಗಿ ಯಾವುದೇ ಕಾರ್ಯಕರ್ತ,ಬ್ಲಾಕ್ ಮಟ್ಟದ ನಾಯಕರಿಗೂ ವಿಷಯ ತಿಳಿಯದಂತೆ ಸಭೆ,ಮಿಟೀಂಗ್, ನಡೆಸದ ಜೋಪಾನವಾಗಿ’ಮಿಷನ್ ಗಂಜಿಮಠ’ ಜಾರಿಗೆ ತರಲಾಗಿತ್ತು. ಕಾಂಗ್ರೆಸ್ ನಾಯಕರು ತಮ್ಮ ಗುಪ್ತ ಅಜೆಂಡಾ ಮುಗಿಸಿ,ಗಂಜಿಮಠ ಗ್ರಾಮ ಪಂಚಾಯತ್ ಕಡೆ ತಿರುಗಿ ನೋಡದೆ ಸೈಲೆಂಟ್ ಇದ್ದ ಕಾರಣ ಬಿಜೆಪಿ ಕೂಡ ತಲೆಕೆಡಿಸಿಕೊಂಡಿರಲಿಲ್ಲ. ಈ ಎಲ್ಲಾ ಮಾಸ್ಟರ್ ಮೈಂಡ್ ಹಿಂದೆ ಸೈಲೆಂಟಾಗಿ ವರ್ಕ್ ಮಾಡಿದ್ದು ಕೆಲವೇ ಬೆರಳೆಣಿಕೆ ಮಂದಿ.ಅಧ್ಯಕ್ಷೆಯ ಆಕಾಂಕ್ಷಿಯಾಗಿದ್ದ ಮಾಲತಿ ಗೇಮ್ ಪ್ಲಾನ್ ನಲ್ಲಿ ಎಲ್ಲಾ ಕಡೆಯಲ್ಲೂ ಸಕ್ರಿಯರಾಗಿ,ಕಾಂಗ್ರೆಸ್ ನಾಯಕರ, ಪಕ್ಷೇತರರ,ಉಚ್ಚಾಟಿತರ ಸಂಪರ್ಕದಲ್ಲಿದ್ದು “ಮಿಷನ್ ಗಂಜಿಮಠ”ಕ್ಕೆ ಜೀವ ತುಂಬಿದರು. ರಣತಂತ್ರ ಪ್ರಯೋಗ ಮಾಡಿದ ನಾಯಕರು ಮೂರು ಮತಗಳನ್ನು ನೋಟಾಕ್ಕೆ ತಿರುಗಿಸುವಲ್ಲಿ ಯಶಸ್ವಿಯಾದರು. ಅಧ್ಯಕ್ಷೆ ಸ್ಥಾನದ ಆಕಾಂಕ್ಷಿ ಮಾಲತಿಯವರು ಇನಾಯತ್ ಅಲಿ,ಮೊಹೀದ್ದೀನ್ ಬಾವಾ,ಕಾಂಗ್ರೆಸಿನ ನಾಯಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಇವರೆಲ್ಲರ ಸಹಕಾರದೊಂದಿಗೆ ಬಿಜೆಪಿ ಬೆಂಬಲಿತ ಐವರು ಸದಸ್ಯರನ್ನು ಹೈಜಾಕ್ ಮಾಡಿಸುವಲ್ಲಿ ಯಶಸ್ವಿಯಾದರು.ಬಡಗುಳಿಪಾಡಿ 3ನೇ ವಾರ್ಡಿನ ಸದಸ್ಯ ಅನಿತಾ ನಾಯಕರಿಗೆ ಸಾಥ್ ನೀಡಿದರು.ಈ ಎಲ್ಲಾ ಗೇಮಿನ ಹಿಂದೆ ಓರ್ವ ಗೇಮ್ ಮಾಸ್ಟರ್ (ಹೆಸರು ಗುಪ್ತವಾಗಿಡಲಾಗಿದೆ) ಕಾರ್ಯಾಚರಣೆಗಿಳಿದು,ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡಿದ್ದರು.

ಇತ್ತ ಪಕ್ಷೇತರ ಮತ್ತು ಬಿಜೆಪಿಯ ಐವರು ಸದಸ್ಯರ ಬೆಂಬಲ ಖಾತ್ರಿಯಾಗುತ್ತಿದ್ದಂತೆ ಕಾಂಗ್ರೆಸ್ ಗೆಲ್ಲಲು ಇಬ್ಬರು ಸದಸ್ಯರ ಅವಶ್ಯಕತೆ ಇತ್ತು. ಕಾಂಗ್ರೆಸ್ ನಿಂದ ಉಚ್ಛಾಟಿತರಾಗಿದ್ದ ಇರ್ಫಾನ್ ಸೂರಲ್ಪಾಡಿ, ಝುಹೂರ್ ಗಂಜಿಮಠ ರವರ ಬೆಂಬಲವೂ ಕಾಂಗ್ರೆಸ್ ಪಕ್ಷಕ್ಕೆ ಅಗತ್ಯವಿತ್ತು. ಅವರಿಬ್ಬರೂ ಚುನಾವಣೆ ಬಹಿಷ್ಕರಿಸಿ ಬೆಂಗಳೂರು ಹೊರಡಲು ಅಣಿಯಾಗಿದ್ದರು. ಆಗ ಅಧ್ಯಕ್ಷೆ ಆಕಾಂಕ್ಷಿ ಮಾಲತಿ ತಮ್ಮ ಹಿಂದಿನ ಪ್ರಭಾವ ಬಳಸಿ ಮಾಜಿ ಶಾಸಕ ಮೊಹಿದ್ದೀನ್ ಬಾವಾರವರೊಂದಿಗೆ ನಿರಂತರ ಮಾತುಕತೆ ನಡೆಸಿ,ಇಬ್ಬರು ಉಚ್ಛಾಟಿತರು ಕಾಂಗ್ರೆಸ್ ಬೆಂಬಲಕ್ಕೆ ನಿಲ್ಲುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದರು.ಉಚ್ಛಾಟಿತ ಇಬ್ಬರು ಸದಸ್ಯರು ತಮ್ಮ ಮನಸ್ಸು ಬದಲಾಯಿಸಿ ಸೇಡು ತೀರಿಸದೆ ಜಾತ್ಯಾತೀತ ಪಕ್ಷ ಗೆಲ್ಲುವಲ್ಲಿ ತಮ್ಮ ಕಾಣಿಕೆ ನೀಡಿರುವ ಬಗ್ಗೆ ಸ್ಥಳೀಯವಾಗಿ ಉತ್ತಮ ಅಭಿಪ್ರಾಯ ಕೇಳಿ ಬರುತ್ತಿದೆ. ಇದರ ಜೊತೆಗೆ ಕೆಪಿಸಿಸಿ ಸದಸ್ಯ ಪೃಥ್ವಿರಾಜ್ ರವರು ತಮ್ಮದೇ ಆದ ಪ್ರಭಾವ ಬಳಸಿಕೊಂಡು ನಿರಂತರ ಶ್ರಮಿಸಿ ಒಂದು ಹಂತಕ್ಕೆ ತರುವಲ್ಲಿ ಯಶಸ್ವಿಯಾದರು.ಗುರುಪುರ ಪಂಚಾಯತ್ ಚುನಾವಣೆಯಲ್ಲಿ ಸೇಡು ತೀರಿಸಿ,ಕಾಂಗ್ರೆಸಿಗೆ ಸಡ್ಡು ಹೊಡೆದು ಉಪಾಧ್ಯಕ್ಷ ಸ್ಥಾನ ಅಲಂಕರಿಸಿ,ತನ್ನ ನೆರೆಯ ಗಂಜಿಮಠ ಗ್ರಾಮ ಪಂಚಾಯತ್ ಅಧ್ಯಕ್ಷರ ಚುನಾವಣೆಯಲ್ಲಿ ಉಚ್ಚಾಟಿತ ಸದಸ್ಯರನ್ನು ಮನವೊಲಿಸುವಲ್ಲಿ ಪಕ್ಷಾಂತರಗೊಂಡ ಮಾಜಿ ಶಾಸಕರ ಬಂಟನ ಕೈ ಚಳಕ ಕೆಲಸ ಮಾಡಿದೆ.
ಈ ಎಲ್ಲದರ ಹಿಂದೆ ಮಾಸ್ಟರ್ ಮೈಂಡ್ ಆಗಿ ಕೆಲಸ ಮಾಡಿದ್ದು ಬಂಡೆಯ ಪರಮ ಶಿಷ್ಯ,ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ. ಗುರುವಿಗೆ ತಕ್ಕ ಶಿಷ್ಯ ಎಂಬುದನ್ನು ತೋರಿಸಿ ಕೊಟ್ಟರು. ಬಿಜೆಪಿ ಐವರು ಸದಸ್ಯರ ಹೈಜಾಕ್, ಪಕ್ಷೇತರ ಮೂವರು ಸದಸ್ಯರ ಬೆಂಬಲದ ಹಿಂದೆ ಇನಾಯತ್ ಅಲಿ ಒಬ್ಬೊಬ್ಬ ನಾಯಕರಿಗೆ ಜವಾಬ್ದಾರಿ ನೀಡಿ ಡೈಲಿ ಅಪ್ಡೇಟ್ ಪಡೆಯುತ್ತಿದ್ದರು. ಡಿಕೆಶಿ ಆಪ್ತರಾಗಿರುವ ಇನಾಯತ್ ಅಲಿ ಕನಕಪುರದ ಪ್ರಯೋಗ ಮಾಡುವಲ್ಲಿ ಯಶಸ್ವಿಯಾಗಿದ್ದರೆ. ಈ ಎಲ್ಲದರ ಮಾಹಿತಿ ತಿಳಿಯದಿದ್ದ ಬಿಜೆಪಿ ಚುನಾವಣೆ ಸಂದರ್ಭದಲ್ಲಿ ಐವತ್ತಕ್ಕೂ ಹೆಚ್ಚು ಹಿರಿಯ-ಕಿರಿಯ ನಾಯಕರು ಪಂಚಾಯತ್ ಬಳಿ ಆಗಮಿಸಿದ್ದರು. ಪಟಾಕಿ ಖರೀದಿಸಿ ವಿಜಯೋತ್ಸವಕ್ಕೆ ಮುಂದಾಗಿದ್ದರು. ಕಾಂಗ್ರೆಸ್ ನ ಸೈಲೆಂಟ್ ಗೇಮ್ ಗೆ ನಾಯಕರು ಪೆಚ್ಚುಮೋರೆ ಹಾಕಿ ಹೊರ ನಡೆದರು.

ಬಿಜೆಪಿ ಬೆಂಬಲಿತ ನಿರ್ಗಮಿತ ಅಧ್ಯಕ್ಷ ನೋಣಯ್ಯ ಅವರ ಅವಧಿ ಮುಗಿದು, ಇದೀಗ ಮಾಲತಿ ಅವರು 14 ಮತ ಪಡೆಯುವ ಮೂಲಕ ಅಧ್ಯಕ್ಷರಾಗಿ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಸಾರಮ್ಮ ಆಯ್ಕೆಯಾಗಿದ್ದಾರೆ. ಬಿಜೆಪಿಯ ಐವರು ಬೆಂಬಲಿತರು ಕೇವಲ ತಮ್ಮ ಸಮುದಾಯದ ಅಧ್ಯಕ್ಷೆಗೆ ಮಾತ್ರ ಮತ ನೀಡದೆ ಮುಸ್ಲಿಂ ಉಪಾಧ್ಯಕ್ಷ ಗೂ ಮತ ನೀಡಿ ವಿಶೇಷತೆ ಮೆರೆದಿದ್ದಾರೆ. ನಿರ್ಗಮಿತ ಅಧ್ಯಕ್ಷ ನೋಣಯ್ಯ ಗಂಜಿಮಠ ಗ್ರಾಮ ಪಂಚಾಯತ್ ಅಭಿವೃದ್ಧಿಗಾಗಿ ಸಾಕಷ್ಟು ಶ್ರಮಿಸಿದ್ದಾರೆ. ಪಕ್ಷ ಸಿದ್ಧಾಂತ ಏನೇ ಇದ್ದರೂ ಯಾವುದೇ ತಾರತಮ್ಯ ಮಾಡದೆ ಅಧಿಕಾರ ನಡೆಸಿದ್ದರು. ಇನ್ನು ಮುಂದಿನ ಎರಡೂವರೆ ವರ್ಷ ಅಧಿಕಾರ ಕಾಂಗ್ರೆಸ್ ಪಾಲಾಗಿದೆ. ಊರಿನ ಅಭಿವೃದ್ಧಿಗಾಗಿ ಶ್ರಮಿಸಲಿ ಎಂಬುದೇ ಇಲ್ಲಿನ ನಾಗರೀಕರ ಹಾರೈಕೆ.