ರಣ ಹಸಿವಿನ ಅಧಿಕಾರಿಗಳ ಅಡ್ಡೆಯಾಗಿ ಮಾರ್ಪಟ್ಟಿದೆ ಕುಂದಾಪುರ ಪುರಸಭೆ. ಇಲ್ಲಿ ಹೇಳೋರಿಲ್ಲ. ಕೇಳೋರಿಲ್ಲ.. ಚೀಫ್ ಆಫೀಸರ್ಸ್ ನದ್ದೇ ಅಂಧಾ ದರ್ಬಾರ್.
ಉಡುಪಿ ಜಿಲ್ಲೆಯಲ್ಲಿ ಕುಂದಾಪುರಕ್ಕೊಂದು ಮಹತ್ವದ ಸ್ಥಾನವಿದೆ. ಬ್ರಹ್ಮಾವರ, ಕಾರ್ಕಳ, ಹೆಬ್ರಿ, ಬೈಂದೂರು, ಕಾಪು ತಾಲೂಕಿಗಿಂತ ಕುಂದಾಪುರ ತಾಲೂಕೇ ಹೆಚ್ಚು ಸಮೃದ್ಧಿಯಾದ ತಾಲೂಕು. ಕೆಲವು ಆಫೀಸರ್ಸ್ ಗಳಂತೂ ಕುಂದಾಪುರಕ್ಕೆ ಲಾಬಿ ಮಾಡಿಕೊಂಡೇ ಬರುವವರು ಹೆಚ್ಚು. ಮೇಯಲು ಸಮೃದ್ಧಭರಿತ ತಾಲೂಕು ಅನ್ನುವ ಅನ್ವರ್ಥನಾಮವಿದೆ. ಕುಂದಾಪುರ ಶಾಸ್ತ್ರೀ ಸರ್ಕಲ್ ರಾಜ್ಯದಲ್ಲೇ ಹೆಸರುವಾಸಿ. ಹಲವಾರು ಉದ್ದಿಮೆಗಳು, ಪ್ರವಾಸೋದ್ಯಮ ತಾಣಗಳು, ತಲೆ ಎತ್ತುತ್ತಿರುವ ಅಪಾರ್ಟ್ ಮೆಂಟ್ ಗಳು ಒಳ್ಳೆಯ ಆದಾಯವನ್ನು ತಂದಿಡುತ್ತಿದೆ. ರಕ್ಷಕರೇ ಭಕ್ಷಕರಾದರೆ ಏನಾಗಬಹುದು? ಅದೆಲ್ಲವೂ ಇಲ್ಲಿ ಮಾಮೂಲಿ ಯಾಗಿಬಿಟ್ಟಿದೆ.

ಇಲ್ಲಿ ಜನಪ್ರತಿನಿಧಿಗಳಾಗಲಿ, ಶಾಸಕರ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ಇಲ್ಲವಂತೆ.. ಆನೆ ನಡೆದಿಡ್ಡೇ ದಾರಿ ಅನ್ನುವಂತೆ ಇಲ್ಲಿ ಅಧಿಕಾರಿಗಳದ್ದೇ ಕಾರುಬಾರು ಅಂತೆ. ಅಧಿಕಾರಿಗಳೇ ಬೇಕಾಬಿಟ್ಟಿಯಾಗಿ ಕಾಮಗಾರಿಗಳಿಗೆ ಗುತ್ತಿಗೆದಾರರನ್ನು ನೇಮಿಸಿಕೊಂಡು ಭರ್ಜರಿ ಸ್ವಾಹಾ ಮಾಡುತ್ತಿದ್ದಾರೆ ಅನ್ನುವ ಆರೋಪಗಳಿವೆ.
ಪುರಸಭೆಯಿಂದ ಆಗುವ ಎಲ್ಲಾ ಕಾಮಗಾರಿಗಳು, ಕಟ್ಟಡಗಳ ಪರವಾನಿಗೆ, ಟೆಂಡರ್ ಪ್ರಕ್ರಿಯೆಗಳು, ಎನ್ ಓಸಿಗಳು, ಕುಡಿಯುವ ನೀರಿನ ಯೋಜನೆ ಕಾಮಗಾರಿಗಳು, ಯುಜಿಡಿ ಕಾಮಗಾರಿಗಳು ಹೀಗೆ ಪ್ರತಿಯೊಂದು ವಿಚಾರಗಳು ಚೀಫ್ ಆಫೀಸರ್ಸ್ ನ ಮೂಗಿನ ನೇರದಲ್ಲಿ ನಡೆಯುತ್ತಿದೆ.
ಕುಂದಾಪುರ ಪುರಸಭೆಯಲ್ಲಿ ಪಾರದರ್ಶಕ ಆಡಳಿತ ನಡೆಯುತ್ತಿಲ್ಲ ಅನ್ನುವ ದೊಡ್ಡ ಕೂಗು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಪುರಸಭೆಯಲ್ಲಿ ಟೆಂಡರ್ ಗೋಲ್ ಮಾಲ್ ಸದ್ದು ಕೇಳಿ ಬಂದಿತ್ತು. ಪರಿಶಿಷ್ಟ ಜಾತಿಗೆಂದೇ ಮೀಸಲಾದ ಕಾಮಗಾರಿಗಳನ್ನು ಇನ್ಯಾರಿಗೋ ಹಂಚಿ ದಲಿತ ಗುತ್ತಿಗೆದಾರರನ್ನು ನಿರ್ಲಕ್ಷ್ಯಿಸಲಾಗುತ್ತದೆ ಎಂದು ದಲಿತ ಸಂಘರ್ಷ ಸಮಿತಿ ಈ ಹಿಂದೆ ಲೋಕಾಯುಕ್ತ ದೂರನ್ನು ದಾಖಲಿಸಿತ್ತು. ಮಾತ್ರವಲ್ಲ ಪುರಸಭೆಯಲ್ಲಿ ನಡೆದ ಕಾಮಗಾರಿಗಳ ಗುಣಮಟ್ಟವು ಕಳಪೆಯಾಗಿದೆ. ನಗರೋತ್ಥಾನದ ನಿಧಿಯಲ್ಲಿ ಮಾಡಿದ ಕಾಮಗಾರಿಗಳಾದ ಕೆರೆ, ರಸ್ತೆ, ಚರಂಡಿ ಮಾಯವಾಗಿದೆ. ಈ ಬಗ್ಗೆಯೂ ತನಿಖೆ ನಡೆಸುವಂತೆ ಸ್ಥಳೀಯರು ಸಂಬಂಧಪಟ್ಟ ಇಲಾಖೆಗೂ ದೂರು ಸಲ್ಲಿಸಿದ್ದಾರೆ. ಒಟ್ಟಾರೆಯಾಗಿ ಪುರಸಭೆಯನ್ನು ಯಾರೂ ಕೇಳುವವರೇ ಇಲ್ಲವಾಗಿದೆ.

ಕುಂದಾಪುರ ಪುರಸಭೆ ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆಯಂತಾಗಿದೆ. ಮುಖ್ಯಾಧಿಕಾರಿ ಆನಂದ ಕುಂದಾಪುರದ ಜನತೆಗೆ ಪರಮಾನಂದವೇನೂ ಕೊಟ್ಟಿಲ್ಲ. ಬರೀ ಗೋಲ್ಮಾಲ್ ಗಳದ್ದೇ ಕಥೆ. ಕುಂದಾಪುರದಲ್ಲಿ ನಾಯಿ ಕೊಡೆಗಳಂತೆ ಬಿಲ್ಡಿಂಗ್ ಗಳು, ಅಪಾರ್ಟ್ ಮೆಂಟ್ ಗಳು ತಲೆ ಎತ್ತುತ್ತಲೇ ಇದೆ. ತಮ್ಮಲ್ಲಿರುವ ಕಪ್ಪು ಹಣದ ಮೂಲಕ ಇಂತಹ ಬಿಲ್ಡಿಂಗ್ ಗಳನ್ನು ಮಾಡುವ ಅನೇಕರು ಕುಂದಾಪುರದಲ್ಲಿ ಸದಾ ಕಾಣಸಿಗುತ್ತಲೇ ಇರುತ್ತಾರೆ. ಇವರಿಗೆ ಯಾವುದೇ ಕಾನೂನು ಕಟ್ಟಲೆಗಳು, ಕಟ್ಟಡ ಕಟ್ಟುವಾಗ ಅನ್ವಯಿಸುವುದಿಲ್ಲ. ಏಕೆಂದರೆ ಯಾವ ಯಾವ ಅಧಿಕಾರಿಗೆ ಏನೇನು ಒದಗಿಸಬೇಕು, ತಿನ್ನಿಸಬೇಕೆಂಬ ಕಲೆಯನ್ನು ಚೆನ್ನಾಗಿ ಕಲಿತಿರುತ್ತಾರೆ. ಕುಂದಾಪುರದಲ್ಲಿ ಅಕ್ರಮ ಕಟ್ಟಡಗಳು ಆನಂದನ ಕೃಪೆಯಿಂದ ಸಕ್ರಮಗೊಳ್ಳುತ್ತಿದೆ ಅನ್ನುವ ವಿಚಾರ ಹೊರ ಬರುತ್ತಲೇ ಇದೆ. ರಸ್ತೆ ಮಾರ್ಜಿನ್ ಬಿಡದೆ ಕಟ್ಟಿದ ಕಟ್ಟಡಗಳು, ಸೆಟ್ ಬ್ಯಾಕ್ಸ್ ಇಲ್ಲದ ಕಟ್ಟಡಗಳು, ಇನ್ನು ಜಾಸ್ತಿ ಮಹಡಿಗಳ ಕಟ್ಟಿರುವ ಕಟ್ಟಡಗಳು ಡೀಲ್ ಕುದುರಿಸಿ ಮುಖ್ಯಾಧಿಕಾರಿಗಳು ಸಕ್ರಮಗೊಳಿಸುತ್ತಿದ್ದಾರಂತೆ! ಎಲ್ಲವೂ ಕಪ್ಪದ ಮಹಿಮೆ.
ಮೇಯುವುದನ್ನೇ ವೃತ್ತಿ ಮಾಡಿಕೊಂಡಿರುವ ಪುರಸಭೆ ಅಧಿಕಾರಿಗಳು ಬೇಕಾಬಿಟ್ಟಿಯಾಗಿ ಇಲ್ಲೀಗಲ್ ಮೂಲಕ ಕಟ್ಟಡಕ್ಕೆ ಅನುಮತಿ ನೀಡಿದ್ದೂ ಇದೆ. ಬಿಲ್ಡಿಂಗ್ ಗೆ ಅನುಮತಿ ನೀಡುವಾಗ ಅಗ್ನಿಶಾಮಕ ಇಲಾಖೆಯ ಯಾವುದೇ ನಿರ್ದೇಶನವನ್ನು ಪಾಲಿಸಿಲ್ಲ. ಕಟ್ಟಡಕ್ಕೆ ಬೆಂಕಿ ಬಿದ್ದರೆ ಆ ದೇವನೇ ಬಂದರೂ ರಕ್ಷಿಸಲು ಸಾಧ್ಯವಿಲ್ಲ. ಇತ್ತೀಚೆಗೆ ಕುಂದಾಪುರ ನಗರದ ಪೇಟೆ ವೆಂಕಟರಮಣ ದೇವಸ್ಥಾನದ ರಥಬೀದಿಯ ಕಟ್ಟಡದಲ್ಲಿ ನಡೆದ ಅಗ್ನಿ ಅನಾಹುತಕ್ಕೆ ಅಂಗಡಿಯೊಂದರಲ್ಲಿ ಸಂಗ್ರಹಿಸಿದ ಪಟಾಕಿಗಳು ಹೊತ್ತಿ ಉರಿದಿತ್ತು. ಜನನಿಬಿಡ ಪ್ರದೇಶದಲ್ಲಿ ಪಟಾಕಿ ದಾಸ್ತಾನಿಗೆ ಪುರಸಭೆಯ ರಣ ಹಸಿವಿನ ಅಧಿಕಾರಿಗಳು ಅವಕಾಶ ಕಲ್ಪಿಸಿದ್ದರಿಂದ ದೊಡ್ಡ ಅನಾಹುತ ನಡೆದಿತ್ತು.
ಇನ್ನು ಪುರಸಭೆಯ ಅಧಿಕಾರಿಗಳು ಲಂಚ ತಿಂದು ದುಂಡಗಾಗಿದ್ದಾರೆ. ಸಾರ್ವಜನಿಕರು ದೂರು ಕೊಟ್ಟರೂ ಬಿಲ್ಡರ್ ಮಾಫಿಯಾಗಳೊಂದಿಗೆ ಸೇರಿ ಡೀಲ್ ಕುದುರಿಸುತ್ತಾರೆ ಅನ್ನುವ ಮಾತುಗಳಿವೆ. ಇಲ್ಲಿಯ ಮುಖ್ಯಾಧಿಕಾರಿ, ಇಂಜಿನಿಯರ್ ಗಳು, ಪರಿಸರ ಅಭಿಯಂತರರು ಎಲ್ಲರೂ ಗಾಂಧಿ ತಾತನ ನೋಟಿನ ಹಿಂದೆ ಬಿದ್ದು ಪುರಸಭೆಯ ಮಾನ ಮರ್ಯಾದೆ ತೆಗೆಯುತ್ತಿದ್ದಾರೆ ಅನ್ನುವ ಆರೋಪಗಳು ಕೇಳಿ ಬರುತ್ತಿದೆ.
ಶಾಸಕರಿಗೆ ಗಟ್ಸ್ ಇಲ್ಲವಂತೆ!
ಕುಂದಾಪುರದ ಶಾಸಕ ಕಿರಣ್ ಕುಮಾರ್ ಕೊಡ್ಗಿ ಸಾಧು ಸ್ವಭಾವದ ವ್ಯಕ್ತಿ. ಅಧಿಕಾರಿಗಳನ್ನು ಹದ್ದುಬಸ್ತಿನಲ್ಲಿಡುವ ಕಲೆ ಇವರಿಗೆ ಕರಗತವಾಗಿಲ್ಲ ಅನ್ನುವ ಮಾತುಗಳು ಕುಂದಾಪುರದಾದ್ಯಂತ ಕೇಳಿ ಬರುತ್ತಿದೆ. ಯಾವ ಅಧಿಕಾರಿಗಳು ಶಾಸಕರ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲವಂತೆ. ಕುಂದಾಪುರದ ವಾಜಪೇಯಿ ಎಂದು ಕರೆಯಿಸಿಕೊಂಡಿದ್ದ ಹಾಲಾಡಿ ಶ್ರೀನಿವಾಸ ಶೆಟ್ಟಿ ಶಾಸಕರಾಗಿದ್ದ ಸಮಯದಲ್ಲಿ ಅಧಿಕಾರಿ ವರ್ಗವನ್ನು ಹತೋಟಿಯಲ್ಲಿ ಇಟ್ಟಿದ್ದರು. ಆದರೆ ಕೂಡ್ಗಿಗೆ ಅದು ತಿಳಿದಿಲ್ಲ. ಅಂತಹ ಗಟ್ಸ್ ಇಲ್ಲ ಅನ್ನುವ ಮಾತುಗಳು ಹರಿದಾಡುತ್ತಿದೆ.
