ಜನನಾಯಕ ಯು.ಪಿ ಇಬ್ರಾಹಿಂ ಅಡ್ಡೂರು ರವರಿಗೆ ಎಂಎಲ್ಸಿ ಸ್ಥಾನ ದೊರಕಲಿ: ಕಾಂಗ್ರೆಸ್ ಕಾರ್ಯಕರ್ತರ ಒಕ್ಕೊರಲ ಆಗ್ರಹ
ಬಿಜೆಪಿಯಿಂದ ಚುನಾವಣಾ ಸಂದರ್ಭದಲ್ಲಿ ಹೈ ಜಂಪ್ ಮಾಡಿ ಕಾಂಗ್ರೆಸ್ ಸೇರಿದ ಜಗದೀಶ್ ಶೆಟ್ಟರ್ ಗೆ ವಿಧಾನಸಭಾ ಕ್ಷೇತ್ರವನ್ನು ಧಾರೆ ಎಳೆಯಲಾಯಿತು. ತನ್ನ ಆಪ್ತನಿಂದಲೇ ಸೋಲು ಕಂಡ ಶೆಟ್ಟರ್ ಗೆ ಕಾಂಗ್ರೆಸ್ ಹೈಕಮಾಂಡ್ ಎಂಎಲ್ಸಿ ಸ್ಥಾನ ನೀಡಿ ಗೌರವ ನೀಡಿತು. ಆದರೆ ಶೆಟ್ಟರ್ ಮಾಡಿದ್ದೇನು? ಕಾಂಗ್ರೆಸ್ ನಿಂದ ಬಿಜೆಪಿಗೆ ಹಾರಿ ಅರ್ಧದಲ್ಲೇ ಕೈ ಕೊಟ್ಟರು.
ಜಗದೀಶ್ ಶೆಟ್ಟರ್ ಪಕ್ಷಾಂತರ ಕಾಂಗ್ರೆಸ್ ಪಕ್ಷಕ್ಕೆ ಆತ್ಮವಿಮರ್ಶಗೆ ಕಾರಣವಾಗಬೇಕು. ಕಾಂಗ್ರೆಸ್ ಪಕ್ಷ ದಶಕಗಳಿಂದ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವ ಸಾಮಾನ್ಯ ಕಾರ್ಯಕರ್ತರಿಗೆ ಏಕೆ ಮಣೆ ಹಾಕುತ್ತಿಲ್ಲ.. ಇಂದು ನಿನ್ನೆ ಬಂದವರಿಗೆ ರತ್ನಗಂಬಳಿ ಹಾಸಿ ದೊಡ್ಡ ದೊಡ್ಡ ಹುದ್ದೆ ನೀಡುವುದಾದರೆ ಪ್ರಾಮಾಣಿಕ ಕಾರ್ಯಕರ್ತರಿಗೆ ಕನಿಷ್ಠ ಒಂದೋ ಅಥವಾ ಎರಡೋ ದೊಡ್ಡ ಹುದ್ದೆಯನ್ನು ನೀಡುತ್ತಿದ್ದರೆ ಸ್ಥಳೀಯವಾಗಿ ಕಾಂಗ್ರೆಸ್ ಪಕ್ಷಕ್ಕೆ ಕಾರ್ಯಕರ್ತರ ಅಭಾವ ಆಗುತ್ತಿರಲಿಲ್ಲ. ವಿಧಾನಸಭಾ ಚುನಾವಣೆಯ ಟಿಕೆಟ್ ಕೋಟಿಗಟ್ಟಲೆ ದುಡ್ಡಿದ್ದವರಿಗೆ, ಐದಾರು ಬಾರಿ ಗೆದ್ದು ಎಲ್ಲಾ ಅಧಿಕಾರ ಅನುಭವಿಸಿದವರಿಗೆ ಪಕ್ಷ ಮತ್ತೆ ಮತ್ತೆ ಮಣೆ ಹಾಕುವುದಾದರೆ ಕಾಂಗ್ರೆಸ್ ನಲ್ಲಿ ಬದಲಾವಣೆ ಹೇಗೆ ಸಾಧ್ಯ.. ಸಾಮಾನ್ಯ ಕಾರ್ಯಕರ್ತನೊಬ್ಬ ಅಧಿಕಾರ ಪಡೆಯುವುದು ಯಾವಾಗ..? ಕಾಂಗ್ರೆಸ್ ಪಕ್ಷದ ಮೇಧಾವಿಗಳು ಈ ಬಗ್ಗೆ ಗಮನ ಹರಿಸುವುದು ಒಳಿತು.

ಜಗದೀಶ್ ಶೆಟ್ಟರ್ ರಾಜೀನಾಮೆಯಿಂದ ತೆರವಾದ ಎಂಎಲ್ಸಿ ಸ್ಥಾನಕ್ಕೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಹಲವರ ಹೆಸರುಗಳು ಕೇಳಿ ಬರುತ್ತಿದ್ದು, ಈ ಬಾರಿ ಜಿಲ್ಲೆಗೆ ಪ್ರಾಶಸ್ತ್ಯ ನೀಡಬೇಕೆನ್ನುವ ಕೂಗು ಕಾಂಗ್ರೆಸ್ ಕಾರ್ಯಕರ್ತರು, ಸಾಮಾಜಿಕ ಜಾಲತಾಣಗಳಲ್ಲಿ ಕೇಳಿ ಬರುತ್ತಿದೆ. ಕೆಲವರು ಜಿಲ್ಲೆಯ ಮಂತ್ರಿಯಾಗಿ ಎಲ್ಲಾ ರೀತಿಯ ಅಧಿಕಾರ ಪಡೆದವರಿಗೆ ಎಂಎಲ್ಸಿ ಸ್ಥಾನ ನೀಡುವಂತೆ ಕೂಗು ಹಬ್ಬಿಸಲಾಗುತ್ತಿದೆ. ಅಧಿಕಾರ ಪಡೆದವರಿಗೆ ಮತ್ತೆ ಮತ್ತೆ ಅಧಿಕಾರ ನೀಡುವುದಾದರೆ ಅದರಿಂದ ಪಕ್ಷಕ್ಕೇನೂ ಲಾಭವಿಲ್ಲ. ವಿಧಾನಸಭಾ ಟಿಕೆಟ್ ದುಡ್ಡಿದ್ದವರಿಗೆ ಸಿಗುವುದಾದರೆ ಎಂಎಲ್ಸಿ ಅಂತಹ ಸ್ಥಾನ ಸಾಮಾನ್ಯ ಕಾರ್ಯಕರ್ತರೊಬ್ಬರಿಗೆ ಸಿಗುವಂತಾದರೆ ಕಾಂಗ್ರೆಸ್ ಪಕ್ಷಕ್ಕೆ ಅದರಿಂದ ಲಾಭವೇ ಹೊರತು ನಷ್ಟವಿಲ್ಲ. ಇನ್ನಷ್ಟು ಕಾರ್ಯಕರ್ತರು ಪಕ್ಷಕ್ಕೆ ಪ್ರಾಮಾಣಿಕರಾಗಿ ದುಡಿಯುವ ಪ್ರಯತ್ನ ಮಾಡುತ್ತಾರೆ. ಬಿಜೆಪಿ ಮಾಡುವ ಹೊಸ ಪ್ರಯತ್ನವನ್ನು ಕಾಂಗ್ರೆಸ್ ಏಕೆ ಮಾಡಬಾರದು.
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಗುರುಪುರ ಬ್ಲಾಕ್ ಕಾಂಗ್ರೇಸ್ ಪಕ್ಷದ ಅತ್ಯಂತ ನೆಚ್ಚಿನ ಭದ್ರಕೋಟೆ. ಅಲ್ಪಸಂಖ್ಯಾತರೇ ಹೆಚ್ಚಿರುವ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಪ್ರಾಮಾಣಿಕರಾಗಿ ದುಡಿಯುವ ನೂರಾರು ಕಾರ್ಯಕರ್ತರಿದ್ದಾರೆ. 1992 ರ ಬಾಬರಿ ಮಸೀದಿ ಧ್ವಂಸದ ನಂತರ ನಡೆದ ಚುನಾವಣೆಯಲ್ಲಿ ಎಲ್ಲಾ ಕಡೆ ಅಲ್ಪಸಂಖ್ಯಾತರೂ ಕಾಂಗ್ರೆಸ್ ಪಕ್ಷಕ್ಕೆ ಕೈ ಕೊಟ್ಟರೂ ಗುರುಪುರ ಬ್ಲಾಕ್ ಕಾಂಗ್ರೆಸ್ ಪಕ್ಷವನ್ನು ಗಟ್ಟಿಯಾಗಿ ಹಿಡಿದ ಇತಿಹಾಸವೇ ಇದೆ. ಇದು ಈ ಭಾಗದ ಕಾರ್ಯಕರ್ತರ ಪ್ರಾಮಾಣಿಕ, ದಕ್ಷತೆಯ, ಪಕ್ಷದ ಮೇಲಿನ ನಂಬಿಕೆಗೆ ಹಿಡಿದ ಕೈಗನ್ನಡಿ. ಆದರೆ ಈವರೆಗೂ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಹಲವು ಬಾರಿ ಅಧಿಕಾರ ವಹಿಸಿದರೂ ಈ ಭಾಗದ ನಾಯಕರಿಗೆ ಯಾವುದೇ ದೊಡ್ಡ ಹುದ್ದೆ ನೀಡಿಯೇ ಇಲ್ಲ. ನಿಗಮ ಮಂಡಳಿಯಲ್ಲೂ ಸಮಾನ ಪಾಲು ಸಿಕ್ಕಿಲ್ಲ. ಜಿಲ್ಲೆಯಲ್ಲಿ ನಿನ್ನೆ ಮೊನ್ನೆ ಕಾಂಗ್ರೆಸ್ ಗೆ ಬಂದವರೆಲ್ಲ ನಾಯಕರ ಹಿಂದೆ ಸುತ್ತಾಡುತ್ತಾ, ಲಾಬಿ ನಡೆಸಿ ನಿಗಮ ಮಂಡಳಿಗಳಲ್ಲೂ ಹುದ್ದೆ ದಕ್ಕಿಸಿಕೊಳ್ಳುತ್ತಾರೆ. ಪಕ್ಷಕ್ಕೆ ಅವರಿಂದ ಯಾವುದೇ ರೀತಿಯ ಲಾಭ ಕೂಡ ಇಲ್ಲ. ಆದರೆ ಗುರುಪುರ ಭಾಗದ ನಾಯಕರು ಯಾವುದೇ ಲಾಬಿ ನಡೆಸದ ಪರಿಣಾಮ ಗ್ರಾಮ, ತಾಲೂಕು ಪಂಚಾಯತ್ ಗಳಲ್ಲೇ ಬಾಕಿ ಉಳಿಯುವಂತಹ ಸ್ಥಿತಿ ನಿರ್ಮಾಣವಾಗಿದೆ.

ಜಿಲ್ಲೆಯಲ್ಲಿ ಬಿಲ್ಲವ, ಬಂಟರಿಗೆ ಈಗಾಗಲೇ ಎಂಎಲ್ಸಿ ಸ್ಥಾನ ನೀಡಲಾಗಿದೆ. ಪಕ್ಷದ ಅಧ್ಯಕ್ಷಗಿರಿ ನೀಡಲಾಗಿದೆ. ಆದರೆ ಈ ಬಾರಿ ಅಲ್ಪಸಂಖ್ಯಾತರಿಗೆ ಎಂಎಲ್ಸಿ ಸ್ಥಾನ ದೊರಕಿದರೆ ಅಲ್ಪಸಂಖ್ಯಾತರೂ ಮತ್ತಷ್ಟು ಕಾಂಗ್ರೆಸ್ ಪರ ಗುರುತಿಸಿಕೊಳ್ಳಲು ಮುಂದಾಗುತ್ತಾರೆ. ಅದರಲ್ಲೂ ಸಾಮಾನ್ಯ ನಾಯಕರಿಗೆ ಮಣೆ ಹಾಕಿದರೆ ಕಾಂಗ್ರೆಸ್ ಪಕ್ಷಕ್ಕೆ ಇನ್ನಷ್ಟು ಜೀವ ಕಳೆ ದೊರಕುವುದರಲ್ಲಿ ಸಂಶಯ ಇಲ್ಲ.
ಕಳೆದ ಎರಡು-ಮೂರು ದಶಕಗಳಿಂದ ಕಾಂಗ್ರೆಸ್ ಪಕ್ಷಕ್ಕೆ ನಿಯತ್ತಾಗಿ ದುಡಿದ, ಸ್ಥಳೀಯ ಮಟ್ಟದಲ್ಲಿ ಜಾತಿ-ಮತ-ಭೇದ ಎನ್ನದೇ ಸರ್ವಧರ್ಮೀಯರಿಂದಲೂ ಪ್ರೀತಿಗೆ ಪಾತ್ರರಾಗಿರುವ ಯು.ಪಿ. ಇಬ್ರಾಹಿಂ ಅಡ್ಡೂರು ರಂತಹ ಸ್ಥಳೀಯ ನಾಯಕರುಗಳಿಗೆ ಎಂಎಲ್ಸಿ ಸ್ಥಾನ ನೀಡುವಂತೆ ಬೇಡಿಕೆ ಹೆಚ್ಚಾಗುತ್ತಿದೆ. ಕಾಂಗ್ರೆಸ್ ಪಕ್ಷ ಬದಲಾವಣೆಗೆ ಸ್ಪಂದಿಸಲು ಇಂತಹ ಅಗತ್ಯ ತೀರ್ಮಾನಗಳನ್ನು ತೆಗೆದುಕೊಳ್ಳುವ ಪ್ರಾಮಾಣಿಕ ಪ್ರಯತ್ನ ಮಾಡಬೇಕಿದೆ. ಗುರುಪುರ ಗ್ರಾಮ ಪಂಚಾಯತ್ ಸದಸ್ಯರಾಗಿ, ಉಪಾಧ್ಯಕ್ಷರಾಗಿ, ಅಧ್ಯಕ್ಷರಾಗಿ ಬೆಳೆದು ಬಂದ ಯು.ಪಿ ಇಬ್ರಾಹಿಂ ಸ್ಥಳೀಯವಾಗಿ ‘ಮೋನಾಕ’ ಎಂದೇ ಜನಜನಿತ. ಗುರುಪುರ ಜಿಲ್ಲಾ ಪಂಚಾಯತ್ ಸದಸ್ಯರಾಗಿ, ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಯಶಸ್ವಿ ರೀತಿಯಲ್ಲಿ ಆಡಳಿತ ನಡೆಸಿರುವ ಯು.ಪಿ ಮೊನು ದೊಡ್ಡದಾದ ಅಭಿಮಾನಿ ವರ್ಗವನ್ನು ಸೃಷ್ಟಿಸಿರುವುದು ಅವರ ಹಿರಿಮೆಗೆ ಸಿಕ್ಕ ಗೌರವ. ಸ್ಥಳೀಯ ಜನರ ಕೈಗೆ ಸುಲಭವಾಗಿ ಸಿಗುತ್ತಾರೆ. ಅವರ ಸಮಸ್ಯೆಗೆ ಶ್ರೀಘ್ರ ಸ್ಪಂದಿಸುತ್ತಾರೆ. ದಿನದ 24 ತಾಸು ಅವರ ಮೊಬೈಲು ಬಡವರ, ಕಾರ್ಯಕರ್ತರ ಸಮಸ್ಯೆಗೆ ಸ್ಪಂದಿಸುತ್ತಲೇ ಇದೆ. ಗುರುಪುರ ಭಾಗದಲ್ಲಿ ದೊಡ್ಡದಾದ ಕಾರ್ಯಕರ್ತರ ದಂಡನ್ನೇ ಹೊಂದಿರುವ ಯು.ಪಿ ಎಂಎಲ್ಸಿ ಸ್ಥಾನ ನಿಭಾಯಿಸಲು ಅತ್ಯಂತ ಅರ್ಹರು. ಪ್ರಾಮಾಣಿಕವಾಗಿ ಪಕ್ಷಕ್ಕೆ ದುಡಿಯುವ ಯು.ಪಿ ಮೋನುರವರಂತಹ ಎರಡನೇ ಸಾಲಿನ ನಾಯಕರನ್ನು ಕಾಂಗ್ರೆಸ್ ಪಕ್ಷ ಬೆಳೆಸುವ ಅಗತ್ಯವಿದೆ. ಅದು ಪಕ್ಷಕ್ಕೂ ಒಳ್ಳೆಯದು. ಎಲ್ಲಾ ರೀತಿಯ ಅಧಿಕಾರ ಅನುಭವಿಸಿದವರಿಗೆ ಕಾಂಗ್ರೆಸ್ ಮತ್ತೆ ಮತ್ತೆ ಅಧಿಕಾರ ನೀಡುತ್ತಾ ಹೋದರೆ ಮುಂದಿನ ದಿನಗಳಲ್ಲಿ ಕಾರ್ಯಕರ್ತರೆ ಸಿಗದೇ ಇರುವ ಪರಿಸ್ಥಿತಿ ನಿರ್ಮಾಣವಾಗಬಹುದು. ಕರಾವಳಿ ಜಿಲ್ಲೆಗಳಲ್ಲಿ ಕಾಂಗ್ರೆಸ್ ಫೀನಿಕ್ಸ್ ನಂತೆ ಎದ್ದು ಬರಬೇಕಾದರೆ ಎರಡನೇ ಸಾಲಿನ ಯುವ ನಾಯಕರ ಕೈಗೆ ಅಧಿಕಾರ ನೀಡುವ ಅತ್ಯಂತ ಜರೂರತ್ತು ಕೆಲಸ ಮಾಡಬೇಕಿದೆ.