ಹಿಂದೂಯೇತರರಿಗೆ ಮಂದಿರ ಪ್ರವೇಶಿಸದಂತೆ ನಿರ್ಬಂಧ; ಮದ್ರಾಸ್ ಹೈಕೋರ್ಟ್ ಮಹತ್ವದ ಆದೇಶ

ರಾಷ್ಟ್ರೀಯ

ದೇವಾಲಯಗಳಿಗೆ ಹಿಂದೂಯೇತರರು ಪ್ರವೇಶಿಸದಂತೆ ನಿರ್ಬಂಧ ವಿಧಿಸುವಂತೆ ಮದ್ರಾಸ್ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ಎಲ್ಲಾ ದೇವಸ್ಥಾನಗಳ ಗರುಢಗಂಭದ (ಧ್ವಜಸ್ತಂಭ) ನಂತರ ಹಿಂದೂಯೇತರರಿಗೆ ಒಳಗೆ ಪ್ರವೇಶವಿಲ್ಲ ಎಂಬ ನಾಮಫಲಕಗಳನ್ನು ಪ್ರವೇಶ ದ್ವಾರಗಳಲ್ಲಿ ಅಳವಡಿಸಿ ಎಂದು ಮದ್ರಾಸ್ ಹೈಕೋರ್ಟ್ ರಾಜ್ಯದ ಮುಜುರಾಯಿ ಇಲಾಖೆಗೆ ಆದೇಶಿಸಿದೆ. ಹಿಂದೂಗಳು ತಮ್ಮ ಧರ್ಮವನ್ನು ಪಾಲಿಸುವ ಮೂಲಭೂತ ಹಕ್ಕನ್ನು ಹೊಂದಿದ್ದಾರೆ ಎಂಬ ಅಂಶವನ್ನು ಕೋರ್ಟ್ ಉಲ್ಲೇಖಿಸಿದೆ.

ದಿಂಡಿಗಲ್ ಜಿಲ್ಲೆಯ ಪಳನಿಯಲ್ಲಿರುವ ಅರುಳ್ಮಿಗು ಪಳನಿ ದಂಡಾಯುಧಪಾಣಿ ಸ್ವಾಮಿ ದೇವಸ್ಥಾನ ಮತ್ತು ಅದರ ಉಪಮಂದಿರಗಳ ಪ್ರವೇಶಕ್ಕೆ ಹಿಂದೂಗಳಿಗೆ ಮಾತ್ರ ಅನುಮತಿ ನೀಡಬೇಕು ಎಂದು ಕೋರಿ ಡಿ. ಸೆಂಥಿಲ್ ಕುಮಾರ್ ಎಂಬವರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ವೇಳೆ ಮದ್ರಾಸ್ ಹೈಕೋರ್ಟ್ ನ ಮದುರೈ ಪೀಠದ ನ್ಯಾಯಮೂರ್ತಿ ಎಸ್. ಶ್ರೀಮತಿ ಅವರು ಈ ಆದೇಶ ನೀಡಿದರು. ಒಂದೊಮ್ಮೆ ಹಿಂದೂಯೇತರರು ದೇವಾಲಯ ಪ್ರವೇಶಿಸಬೇಕೆಂದರೆ “ಹಿಂದೂ ಧರ್ಮದ ಬಗ್ಗೆ ಗೌರವವಿದೆ. ಮಂದಿರದಲ್ಲಿರುವ ದೈವದ ಬಗ್ಗೆ ನಂಬಿಕೆ ಹೊಂದಿದ್ದೇನೆ. ದೇವಸ್ಥಾನದ ನಿಯಮಗಳನ್ನೂ ಪಾಲಿಸುತ್ತೇನೆ.” ಎಂದು ಸಂಬಂಧಿತರಿಗೆ ಒಪ್ಪಿಗೆ ಪತ್ರ ಬರೆದುಕೊಡಬೇಕು. ನಂತರ, ಅವರನ್ನು ಒಳಬಿಡಬಹುದು ಎಂದು ಕೋರ್ಟ್ ಹೇಳಿದೆ.